ಸಿಎಂ ಇಬ್ರಾಹಿಂಗೆ ಆಸೆಗಿಂತ ದುರಾಸೆ ಜಾಸ್ತಿ, ಅದಕ್ಕೆ ಪಕ್ಷ ಬಿಟ್ಟ: ಸಿದ್ದರಾಮಯ್ಯ
ಬೆಂಗಳೂರು, ಮಾ.13: ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಅವರು ಸಿದ್ದರಾಮಯ್ಯ ಸಹಿತ ಎಲ್ಲ ಕಾಂಗ್ರೆಸ್ ನಾಯಕರ ಮೇಲೆ ಮುನಿಸಿಕೊಂಡು ಪಕ್ಷ ತೊರೆಯುವುದಾಗಿ ಅಧಿಕೃತವಾಗಿ ಪ್ರಕಟಿಸಿದ್ದಾರೆ. ಅಲ್ಲದೆ, ತಡರಾತ್ರಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರನ್ನೂ ಔಪಚಾರಿಕವಾಗಿ ಭೇಟಿ ಮಾಡುವ ಮೂಲಕ ಜೆಡಿಎಸ್ ಸೇರುವುದು ಖಚಿತ ಎಂಬುದನ್ನು ದೃಢಪಡಿಸಿದ್ದಾರೆ. ಈ ಮಧ್ಯೆ ಸಿದ್ದರಾಮಯ್ಯ ಅವರು ಇಬ್ರಾಹಿಂ ಅವರನ್ನು ಹೀಗಳೆಯುವ ಮೂಲಕ ಇಬ್ರಾಹಿಂ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವ ಯಾವ ಪ್ರಯತ್ನವನ್ನೂ ಮಾಡುತ್ತಿಲ್ಲ ಎಂಬುದನ್ನು ಖಾತ್ರಿಪಡಿಸಿದ್ದಾರೆ.
ಸಿ.ಎಂ. ಇಬ್ರಾಹಿಂ ಪಕ್ಷ ತೊರೆದಿರುವ ಕುರಿತು ಮಂಡದಲ್ಲಿ ಭಾನುವಾರ ಮಾತನಾಡಿರುವ ಸಿದ್ದರಾಮಯ್ಯ, 'ಸಿ.ಎಂ. ಇಬ್ರಾಹಿಂಗೆ ಆಸೆ ಇರಬೇಕಿತ್ತು. ಆದರೆ, ದುರಾಸೆ ಹೆಚ್ಚಾಗಿ ಪಕ್ಷ ಬಿಟ್ಟು ಹೋಗಿದ್ದಾನೆ' ಎಂದು ಹೇಳಿದ್ದಾರೆ.
'ಕಾಂಗ್ರೆಸ್ ಪಕ್ಷ ಇಬ್ರಾಹಿಂ ಅವರಿಗೆ ಎಲ್ಲವನ್ನೂ ಕೊಟ್ಟಿದೆ. ಭದ್ರಾವತಿಯಲ್ಲಿ ಹಾಲಿ ಶಾಸಕ ಸಂಗಮೇಶ್‌ಗೆ ಟಿಕೆಟ್ ತಪ್ಪಿಸಿ ಇಬ್ರಾಹಿಂಗೆ ಕೊಡಲಾಗಿತ್ತು. ಆದರೆ, ಅಲ್ಲಿ ಸೋತ. ಬಳಿಕ ಆತನ್ನು ವಿಧಾನ ಪರಿಷತ್ ಸದಸ್ಯನನ್ನಾಗಿ ಮಾಡಲಾಯಿತು, ಯೋಜನಾ ಆಯೋಗದ ಉಪಾಧ್ಯಕ್ಷನ್ನಾಗಿ ಮಾಡಲಾಗಿತ್ತು. ಆದರೂ ಸಹ ಪಕ್ಷ ಬಿಟ್ಟು ಹೋಗಿದ್ದಾನೆ' ಎಂದು ಹೇಳಿದರು.

ಇನ್ನು ಶಾಸಕ ಜಿ.ಟಿ. ದೇವೇಗೌಡ ಅವರು ತನ್ನ ಮಗನಿಗೆ ಕಾಂಗ್ರೆಸ್ ಟಿಕೆಟ್ ಖಾತ್ರಿ ಮಾಡುವುದಾದರೆ ಪಕ್ಷಕ್ಕೆ ಸೇರುವುದಾಗಿ ಹೇಳಿದ್ದಾರೆ. ಈ ಬಗ್ಗೆ ನನ್ನ ಜೊತೆಯೂ ಅವರು ಮಾತನಾಡಿದ್ದಾರೆ. ಆದರೆ, ಈ ಬಗ್ಗೆ ಹೈಕಮಾಂಡ್ ಜೊತೆ ಇನ್ನೂ ಮಾತನಾಡಿಲ್ಲ. ಕೆಲವು ದಿನಗಳಲ್ಲಿಯೇ ತೀರ್ಮಾನಿಸಲಾಗುವುದು ಎಂದು ಹೇಳಿದರು.
ಚಾಮುಂಡೇಶ್ವರಿಯಿಂದ ಸ್ಪರ್ಧಿಸುವುದಿಲ್ಲ:
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾನು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ. ಈಗಾಗಲೇ ನಾಲ್ಕೈದು ಬೇರೆ ಕ್ಷೇತ್ರಗಳಲ್ಲಿ ಸ್ಪರ್ಧಿಸುವಂತೆ ಕೇಳುತ್ತಿದ್ದಾರೆ. ಆದರೆ, ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಎಂಬುದನ್ನು ಇನ್ನೂ ತೀರ್ಮಾನಿಸಿಲ್ಲ. ಎಲ್ಲರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆ ಮೂಲಕ ಚುನಾವಣೆ ಎದುರಿಸವ ಬಗ್ಗೆಯೂ ಆಗುತ್ತಿರುವ ಚರ್ಚೆಯ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಜೆಡಿಎಸ್ ಮತ್ತು ಬಿಜೆಪಿ ಹೊಂದಾಣಿಕೆಯಾದರೂ ಮಾಡಿಕೊಳ್ಳಲಿ ಅಥವಾ ಮ್ಯಾಚ್ ಫಿಕ್ಸ್ಂಗ್ ಆದರೂ ಮಾಡಿಕೊಳ್ಳಲಿ. ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ತರುವುದಷ್ಟೇ ನಮ್ಮ ಗುರಿ, ಖಂಡಿತವಾಗಿಯೂ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರು.
ನನ್ನ ಪ್ರಕಾರ ರಾಜ್ಯದಲ್ಲಿ ಅವಧಿಗೆ ಮುನ್ನವೇ ಚುನಾವಣೆ ಬರುವ ಸಾಧ್ಯತೆ ಇಲ್ಲ. ಈ ಬಗ್ಗೆ ಬಿ.ಎಸ್. ಯಡಿಯೂರಪ್ಪ, ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಹೇಳಿದ್ದಾರೆ. ಒಂದು ವೇಳೆ ಚುನಾವಣೆ ಎದುರಾದರೆ ಕಾಂಗ್ರೆಸ್ ಸಿದ್ಧವಾಗಿದೆ ಎಂದರು.
ಜೆಡಿಎಸ್ ಮತ್ತು ಕಾಂಗ್ರೆಸ್‌ನಿಂದ ಕೆಲವು ಶಾಸಕರು ಬಿಜೆಪಿಗೆ ಬರುತ್ತಿದ್ದಾರೆ ಎಂಬ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ಕಾಂಗ್ರೆಸ್‌ನಿಂದ ಯಾವುದೇ ಶಾಸಕರು ಬೇರೆ ಪಕ್ಷಗಳಿಗೆ ಹೋಗುವುದಿಲ್ಲ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಬೇರೆ ಪಕ್ಷಗಳ ಶಾಸಕರು ಕಾಂಗ್ರೆಸ್‌ಗೆ ಬರಲಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.












Click it and Unblock the Notifications