ಉರುಳು ಹಾಕಿದ್ದು ಕಾಡುಹಂದಿಗೆ, ಆದರೆ ಸಿಕ್ಕಿಬಿದ್ದದ್ದು ಚಿರತೆ
ಮಂಡ್ಯ, ಏಪ್ರಿಲ್ 29:ಕಾಡುಹಂದಿ ಹಿಡಿಯಲು ಹಾಕಿದ್ದ ಉರುಳಿಗೆ ಚಿರತೆ ಸಿಕ್ಕಿಬಿದ್ದ ಘಟನೆ ತಾಲೂಕಿನ ಹಂಪಾಪುರ ಗ್ರಾಮದಲ್ಲಿ ಸೋಮವಾರ ನಡೆದಿದ್ದು, ಸೆರೆ ಸಿಕ್ಕ ಚಿರತೆಯನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದಿದ್ದಾರೆ. ಸೆರೆ ಸಿಕ್ಕಿರುವ ಚಿರತೆ ಕಳೆದ ಕೆಲವು ಸಮಯಗಳಿಂದ ಉಪಟಳ ಮಾಡುತ್ತಿತ್ತು.
ಇದರ ಹಾವಳಿಯಿಂದ ತಾಲೂಕಿನ ಗುನ್ನನಾಯಕನಹಳ್ಳಿ, ಕರಡಿ ಕೊಪ್ಪಲು, ಹಂಪಾಪುರ, ಬಿಳಿದೇಗಲು ಗ್ರಾಮಗಳ ಜನ ಬೇಸತ್ತು ಹೋಗಿದ್ದರು. ಇಲ್ಲಿನ ನಡುವಿನ ಅರಣ್ಯ ಪ್ರದೇಶದಲ್ಲಿ ವಾಸ್ತವ್ಯ ಹೂಡಿದ್ದ ಚಿರತೆ ಕೆಲವು ಸಮಯ ರೈತರ ಮೇಲೆ ದಾಳಿ ಮಾಡಿ ಆತಂಕ ಸೃಷ್ಟಿಸಿತ್ತು. ಈ ಚಿರತೆಯ ಸೆರೆಗೆ ಬೋನನ್ನು ಇರಿಸಿದ್ದರೂ ಅದು ಸೆರೆ ಸಿಕ್ಕದೆ ತಪ್ಪಿಸಿಕೊಳ್ಳುತ್ತಿತ್ತು.
ಈ ನಡುವೆ ಕಬ್ಬು ಬೆಳೆದಿದ್ದ ಗ್ರಾಮದ ಜೈ ಸ್ವಾಮಿ ಎಂಬುವರ ಕಬ್ಬಿನ ಗದ್ದೆಯಲ್ಲಿ ಕಾಡುಹಂದಿಗಳು ದಾಳಿ ಮಾಡಿ ಬೆಳೆಯನ್ನು ಹಾಳು ಮಾಡುತ್ತಿದ್ದರಿಂದ ಅವುಗಳನ್ನು ಹಿಡಿಯುವ ಸಲುವಾಗಿ ಉರುಳು ಹಾಕಿದ್ದರು. ಆದರೆ ಇದೀಗ ಆ ಉರುಳಿಗೆ ಚಿರತೆ ಸೆರೆ ಸಿಕ್ಕಿದೆ.

ಈ ವಿಚಾರ ತಿಳಿಯುತ್ತಿದ್ದಂತೆ ಸುತ್ತಮುತ್ತಲ ಗ್ರಾಮಸ್ಥರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಉರುಳಿಗೆ ಬಿದ್ದಿದ್ದ ಚಿರತೆಯನ್ನು ವೀಕ್ಷಿಸಿದರು. ಜನರನ್ನು ನಿಯಂತ್ರಿಸಲು ಪೊಲೀಸ್, ಅರಣ್ಯ ಇಲಾಖೆಯ ಸಿಬ್ಬಂದಿ ಹರ ಸಾಹಸ ಪಡಬೇಕಾಯಿತು. ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರೂ ಅವರು ಮೂರು ಗಂಟೆ ತಡವಾಗಿ ಬಂದಿದ್ದಲ್ಲದೆ, ಡೆಪ್ಯುಟಿ ರೇಂಜ್ ಆಫೀಸರ್ ಸುರೇಶ್ ಅವರು, ಚಿರತೆ ಸೆರೆ ಹಿಡಿಯಲು ಮೇಲಾಧಿಕಾರಿಗಳ ಅನುಮತಿ ಬೇಕೆಂದರು. ಇದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಯಿತು. ಆ ನಂತರ ಸುಮಾರು 8 ಗಂಟೆ ತಡವಾಗಿ ಆಗಮಿಸಿದ ಅರವಳಿಕೆ ತಜ್ಞರು ಚಿರತೆಗೆ ಅರವಳಿಕೆ ನೀಡಿದ್ದು, ಬಳಿಕ ಬೋನಿನಲ್ಲಿಟ್ಟು ಕೊಂಡೊಯ್ದಿದ್ದಾರೆ.












Click it and Unblock the Notifications