ಕಾವೇರಿ ವಿವಾದ: ರಾಜ್ಯ ಸರ್ಕಾರಕ್ಕೆ ಮಾಜಿ ಸಿಎಂ ಬೊಮ್ಮಾಯಿ ನೀಡಿದ ಸಲಹೆಗಳಿವು

ಮಂಡ್ಯ, ಅಕ್ಟೋಬರ್‌, 02: ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಸಂಕಷ್ಟ ಸೂತ್ರ ಕುರಿತಂತೆ ನ್ಯಾಯಾಧೀಕರಣದ ಬಳಿ ನಿಖರ ಅಂಕಿ-ಅಂಶಗಳಿಲ್ಲ. ಈ ಕುರಿತಂತೆ ರಾಜ್ಯ ಸರ್ಕಾರ ಕಾನೂನು ತಜ್ಞರೊಟ್ಟಿಗೆ ಕುಳಿತು ಸಂಕಷ್ಟ ಸೂತ್ರ ಸಿದ್ಧಪಡಿಸಿಕೊಂಡು ಮುನ್ನಡೆಯಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ನಗರದ ಸರ್‌.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ವತಿಯಿಂದ ನಡೆಯುತ್ತಿರುವ ಧರಣಿ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿ ಮಾತನಾಡಿದ ಅವರು, ಸಂಕಷ್ಟ ಸೂತ್ರ ಸಿದ್ಧಪಡಿಸಿಕೊಂಡು ಕಾನೂನು ಹೋರಾಟ ನಡೆಸುವುದರಿಂದ ಮಾತ್ರ ಕಾವೇರಿ ವಿಚಾರದಲ್ಲಿ ನ್ಯಾಯ ಪಡೆಯಲು ಸಾಧ್ಯ. ಈ ಸೂತ್ರವನ್ನು ಮುಂದಿಟ್ಟುಕೊಂಡು ಕಾವೇರಿ ನೀರು ನಿಯಂತ್ರಣ ಸಮಿತಿ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಸುಪ್ರೀಂಕೋರ್ಟ್‌ನಲ್ಲಿ ಸಮರ್ಥವಾದ ಮಂಡಿಸುವಂತೆ ಸಲಹೆ ನೀಡಿದರು.

cauvery-dispute

ಸುಪ್ರೀಂಕೋರ್ಟ್ ಈ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದರೆ ಕೇಂದ್ರದ ಮೇಲೆ ನಾವೆಲ್ಲರೂ ಸೇರಿ ಒತ್ತಡ ಹಾಕುವುದಕ್ಕೆ ಸಿದ್ಧರಿದ್ದೇವೆ. ಕಾವೇರಿ ನದಿ ನೀರಿನ ವಿಚಾರದಲ್ಲಿ ಈ ಹಿಂದೆ ಪ್ರಧಾನ ಮಂತ್ರಿಗಳಿಗೆ ಎಲ್ಲ ರೀತಿಯ ಅಧಿಕಾರವಿತ್ತು. ಆದರೆ, ಪ್ರಾಧಿಕಾರ ರಚನೆಯಾದ ನಂತರದಲ್ಲಿ ಪ್ರಧಾನಿಯವರ ಅಧಿಕಾರ ಮೊಟಕುಗೊಂಡಿದೆ. ಪ್ರಾಧಿಕಾರ ಮತ್ತು ಸುಪ್ರೀಂಕೋರ್ಟ್‌ನಲ್ಲಿ ನೀರು ಸಂಗ್ರಹದ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಡಬಹುದಾಗಿದೆ ಎಂದು ಹೇಳಿದರು.

ತಮಿಳುನಾಡು ಎಷ್ಟು ಹೆಕ್ಟೇರ್‌ ಪ್ರದೇಶದಲ್ಲಿ ಕುರುವೈ ಬೆಳೆ ಬೆಳೆಯಬೇಕು, ಕರ್ನಾಟಕ ಎಷ್ಟು ಹೆಕ್ಟೇರ್‌ ಪ್ರದೇಶದಲ್ಲಿ ಮುಂಗಾರು ಬೆಳೆ ಬೆಳೆಯಬೇಕು ಎಂಬ ಅಂಶ ನ್ಯಾಯಮಂಡಳಿ ಆದೇಶದಲ್ಲಿ ನಿಗದಿಯಾಗಿದೆ. ಜಲಾಶಯಗಳಲ್ಲಿರುವ ನೀರಿನ ಮಟ್ಟವನ್ನು ಆಧರಿಸಿ ನೀರು ಹರಿಸುವಂತೆ ಎಲ್ಲಿಯೂ ಹೇಳಿಲ್ಲ. ಇಂತಹ ಅನೇಕ ಅಂಶಗಳನ್ನು ಮುಂದಿಟ್ಟುಕೊಂಡು ಸಮರ್ಥ ವಾದ ಮಂಡಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ದೂರಿದರು.

ತಮಿಳುನಾಡು ನಿಗದಿಗಿಂತ ಹೆಚ್ಚಿನ ಪ್ರದೇಶದಲ್ಲಿ ಬೆಳೆಯನ್ನು ಬೆಳೆಯುತ್ತಿದೆ. ಅಕ್ರಮವಾಗಿ ನೀರಾವರಿ ಪ್ರದೇಶವನ್ನು ವಿಸ್ತರಣೆ ಮಾಡಿಕೊಂಡಿದೆ. ನ್ಯಾಯಮಂಡಳಿ ನಿಗದಿಪಡಿಸಿರುವ ಬೆಳೆಗಿಂತ ಹೆಚ್ಚು ನೀರನ್ನು ಬಳಸುತ್ತಿದೆ. ಯಾವ ರಾಜ್ಯ ಎಷ್ಟು ನೀರು ಬಳಕೆ ಮಾಡಿದೆ ಎಂಬೆಲ್ಲಾ ಮಾಹಿತಿಗಳು ಪ್ರತಿನಿತ್ಯ ಲಭ್ಯವಿದ್ದರೂ ಈ ಅಂಶಗಳನ್ನೆಲ್ಲಾ ಗಮನಕ್ಕೆ ತರುವುದಕ್ಕೆ ಕರ್ನಾಟಕ ಮುಂದಾಗಿಲ್ಲ ಎಂದು ನುಡಿದರು.

2012ರಲ್ಲಿ ಬರ ಪರಿಸ್ಥಿತಿ ಎದುರಾಗಿದ್ದ ಸಮಯದಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಆ ಸಮಯದಲ್ಲಿ ತಮಿಳುನಾಡಿಗೆ ನಾಲ್ಕು ವಾರದಲ್ಲಿ 12 ಟಿಎಂಸಿ ನೀರು ಹರಿಸುವಂತೆ ಸರ್ವೋಚ್ಛ ನ್ಯಾಯಾಲಯ ಆದೇಶಿಸಿತ್ತು. ನಾವು ಅಂದು ನೀರು ಬಿಡುಗಡೆಗೆ ಆತುರದ ನಿರ್ಧಾರ ಮಾಡಲಿಲ್ಲ. ನೀರು ಬಿಡದೆ ಮೇಲ್ಮನವಿ ಹೋಗಿ ವಾಸ್ತವ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟ ಬಳಿಕ ನೀರಿನ ಪ್ರಮಾಣವನ್ನು ಕಡಿಮೆ ಮಾಡಿ ಎರಡು ತಿಂಗಳ ಕಾಲಾವಕಾಶ ನೀಡಿದ್ದನ್ನು ಸ್ಮರಿಸಿದರು.

ಹತ್ತು ವರ್ಷಗಳ ಹಿಂದೆ ನಾವು ತೆಗೆದುಕೊಂಡ ನಿರ್ಧಾರವನ್ನು ಈಗಿನ ಕಾಂಗ್ರೆಸ್ ಸರ್ಕಾರ ತೆಗೆದುಕೊಂಡಿದ್ದರೆ ಇಂತಹ ಪರಿಸ್ಥಿತಿ ಸೃಷ್ಟಿಯಾಗುತ್ತಿರಲಿಲ್ಲ. ಆದರೆ, ಕಾಂಗ್ರೆಸ್ ಸರ್ಕಾರ ದುಡುಕಿನ ನಿರ್ಧಾರ ಕೈಗೊಂಡು ತಮಿಳುನಾಡಿಗೆ ನೀರು ಹರಿಸಿತು. ಜೂನ್-ಜುಲೈ ತಿಂಗಳಲ್ಲೇ ನೀರಾವರಿ ಸಲಹಾ ಸಮಿತಿ ಸಭೆ ನಡೆಸದೆ ಆಗಸ್ಟ್‌ನಲ್ಲಿ ನಡೆಸಿ ಜಲಾಶಯಗಳಲ್ಲಿ ನೀರು ಶೇಖರಣೆಗೆ ಕಾರಣವಾಯಿತು ಎಂದರು.

ಕೆರೆ-ಕಟ್ಟೆ, ನಾಲೆಗಳಿಗೆ ಮೊದಲೇ ನೀರು ಹರಿಸಿ ಬಳಕೆ ಮಾಡಿದ್ದರೆ ನಮ್ಮ ನೆಲದಲ್ಲಾದರೂ ನೀರು ಉಳಿಯುತ್ತಿತ್ತು. ಪ್ರತಿ ಹಂತದಲ್ಲೂ ಸರ್ಕಾರ ತೋರಿದ ನಿರ್ಲಕ್ಷ್ಯತನ ರೈತರನ್ನು ಸಂಕಷ್ಟಕ್ಕೆ ದೂಡುವಂತೆ ಮಾಡಿತು. ಈಗ ಜಲಸಂಕಷ್ಟ ವರ್ಷ ನಮ್ಮದಾಗಿದೆ. ಇಂತಹ ಸಮಯದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಮನಸ್ಥಿತಿ ನಮ್ಮದಲ್ಲ. ಸರ್ಕಾರದ ಮೇಲೆ ನಿರಂತರ ಒತ್ತಡವಿರಲಿ ಎಂಬ ಕಾರಣಕ್ಕೆ ಹೋರಾಟ ಮಾಡುತ್ತಿದ್ದೇವೆ ಎಂದರು.

ಸರ್ಕಾರ ಮಾಡಿರುವ ತಪ್ಪುಗಳನ್ನು ನಾವು ಬೆಂಬಲಿಸುವುದಿಲ್ಲ. ರೈತರನ್ನು, ಸಾಮಾನ್ಯ ಜನರನ್ನು ಕಾಪಾಡುವ ಸರ್ಕಾರದ ದೃಢ ನಿಲುವಿಗೆ ಸದಾ ನಮ್ಮ ಬೆಂಬಲವಿರುತ್ತದೆ. ಕೆಆರ್‌ಎಸ್ ಜಲಾಶಯದಿಂದ ನೀರು ಬಿಟ್ಟಿಲ್ಲ. ಸೋರಿಕೆ ನೀರು ಹರಿದುಹೋಗುತ್ತಿರುವುದಾಗಿ ಜಲಸಂಪನ್ಮೂಲ ಸಚಿವರು ಸುಳ್ಳು ಹೇಳುತ್ತಿದ್ದಾರೆ. ಮುಂದಿನ 50 ವರ್ಷಗಳ ಕಾಲ ನೀರು ಸೋರಿಕೆಯಾಗದಂತೆ ಗೇಟ್‌ಗಳನ್ನು ಬದಲಾಯಿಸಿ ದುರಸ್ತಿಪಡಿಸಲಾಗಿದೆ. ವಿನಾಕಾರಣ ಏನನ್ನೋ ಹೇಳಿ ಸಮರ್ಥನೆಗೆ ಮುಂದಾಗದೆ ಪರಿಹಾರ ಹುಡುಕುವಂತೆ ಸಲಹೆ ನೀಡಿದರು.

ಈ ವೇಳೆ ಮಾಜಿ ಸಚಿವ ಆರ್.ಅಶೋಕ್, ಶಾಸಕ ರವಿಸುಬ್ರಹ್ಮಣ್ಯ, ಅಶ್ವತ್ಥ್‌ನಾರಾಯಣ, ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್, ಅಶೋಕ್ ಜಯರಾಂ, ಕೆ.ಬೋರಯ್ಯ, ಸುನಂದಾ ಜಯರಾಂ, ಇಂಡುವಾಳು ಚಂದ್ರಶೇಖರ್, ಅಂಬುಜಮ್ಮ, ಸಿ.ಟಿ.ಮಂಜುನಾಥ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+