ಸುಪ್ರೀಂಕೋರ್ಟ್ ಆದೇಶ : ಕೆ.ಆರ್.ಎಸ್‌ನಲ್ಲಿ ಎಷ್ಟು ನೀರಿದೆ?
ಮಂಡ್ಯ, ಮೇ 03 : ಮೊದಲೇ ರಾಜ್ಯದಲ್ಲಿ ಮಳೆಯಿಲ್ಲ, ಕಳೆದ ವರುಷ ಸುರಿದ ಅಲ್ಪ-ಸ್ವಲ್ಪ ಮಳೆಯಿಂದ ಜಲಾಶಯಗಳು ತುಂಬಿಲ್ಲ. ಕಾವೇರಿ ವಿವಾದದ ಕುರಿತು ಸುಪ್ರೀಂಕೋರ್ಟ್ ನೀಡಿದ ತೀರ್ಪಿನಿಂದಾಗಿ ನಿರಾಳರಾಗಿದ್ದ ರೈತರಿಗೆ ಈಗ ಆತಂಕ ಎದುರಾಗಿದೆ.
ತಮಿಳುನಾಡಿಗೆ 4 ಟಿಎಂಸಿ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಗುರುವಾರ ಕರ್ನಾಟಕ ಸರ್ಕಾರಕ್ಕೆ ಆದೇಶ ನೀಡಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ನೇತೃತ್ವದ ಪೀಠದ ನೀಡಿದ ಆದೇಶದಿಂದ ಮಂಡ್ಯ, ಮೈಸೂರು, ಬೆಂಗಳೂರು ಭಾಗದಲ್ಲಿ ಆತಂಕ ಸೃಷ್ಟಿಯಾಗಿದೆ.
ಮೈಸೂರು ಮತ್ತು ಬೆಂಗಳೂರಿಗೆ ಕುಡಿಯುವ ನೀರಿನ ಕಣಜವಾಗಿರುವ ಕೆಆರ್‌ಎಸ್ ಈ ವರ್ಷವೂ ಬತ್ತಿದೆ. ನೀರಿನ ಮಟ್ಟ ಕಳೆದ ವರ್ಷಕ್ಕಿಂತಲೂ ಕಡಿಮೆಯಾಗಿದೆ. ಮೇ ಮತ್ತು ಜೂನ್‌ನಲ್ಲಿ ತಮಿಳುನಾಡಿನ ಹಕ್ಕಿನ ನೀರನ್ನು ಬಿಡುವುದು ಅನಿವಾರ್ಯವಾದರೆ ಮಹಾನಗರಗಳಿಗೆ ಕುಡಿಯುವ ನೀರಿಗೆ ಕಂಟಕ ಎದುರಾಗಲಿದೆ.
ಕಾವೇರಿ ಕಣಿವೆಯ 4 ಜಲಾಶಯಗಳ ಒಟ್ಟು ನೀರಿನ ಸಂಗ್ರಹ 10.39 ಟಿಎಂಸಿ ಅಡಿಗಳಷ್ಟು ಮಾತ್ರ. ಕಬಿನಿ ಹಾಗೂ ಕೆಆರ್ಎಸ್ ಜಲಾಶಯಗಳಲ್ಲಿ ಪ್ರಸ್ತುತ 5.68 ಟಿಎಂಸಿ ಅಡಿಗಳಷ್ಟು ಮಾತ್ರ ನೀರಿದೆ. ಇದನ್ನು ಮುಂದಿನ ಮುಳೆಗಾಲದ ತನಕ ಬಳಸಬೇಕಾಗಿದೆ.

ಕೆ.ಆರ್.ಎಸ್ ನಿಂದ ಎಲ್ಲಿಗೆ ನೀರು ಪೂರೈಕೆ?
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟದಲ್ಲಿರುವ ಕೆಆರ್‌ಎಸ್‌ನಿಂದ ಬೆಂಗಳೂರು, ಮೈಸೂರು, ಇಲವಾಲ, ಮಂಡ್ಯ, ಪಾಂಡವಪುರ, ಶ್ರೀರಂಗಪಟ್ಟಣ, ಮದ್ದೂರು, ಮಳವಳ್ಳಿ, ರಾಮನಗರ, ಚನ್ನಪಟ್ಟಣ, ಕನಕಪುರಕ್ಕೆ ನೀರು ಪೂರೈಸಲಾಗುತ್ತದೆ.
ಬೆಂಗಳೂರಿಗೆ ಪ್ರಮುಖವಾಗಿ ಕುಡಿಯುವ ನೀರು ಪೂರೈಕೆಯಾಗುವ ಮಳವಳ್ಳಿ ತಾಲೂಕು ಬ್ಲಫ್‌ನಲ್ಲಿನ ಶಿವ ಜಲಾಶಯದಲ್ಲೂ ನೀರಿನ ಪ್ರಮಾಣ ಕಡಿಮೆಯಾಗಿದೆ. ಇದರಿಂದಾಗಿ ಕೆಆರ್‌ಎಸ್‌ನಿಂದ ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆ ಮಾಡಬೇಕಾಗಿದೆ.

ಕೆ.ಆರ್.ಎಸ್ ವಸ್ತು ಸ್ಥಿತಿ ಹೀಗಿದೆ?
ಕಾವೇರಿ ಕಣಿವೆಯ 4 ಜಲಾಶಯಗಳ ಒಟ್ಟು ನೀರಿನ ಸಂಗ್ರಹ 10.39 ಟಿಎಂಸಿ ಅಡಿಗಳಷ್ಟು ಮಾತ್ರ. ಕಬಿನಿ ಹಾಗೂ ಕೆಆರ್ಎಸ್ ಜಲಾಶಯಗಳಲ್ಲಿ ಪ್ರಸ್ತುತ 5.68 ಟಿಎಂಸಿ ಅಡಿಗಳಷ್ಟು ಮಾತ್ರ ನೀರಿದೆ.
ಈ ನೀರನ್ನು ಮಿತವಾಗಿ ಬಳಸಿದರೆ ಮಾತ್ರ ಬೆಂಗಳೂರು ಸೇರಿದಂತೆ ಕಾವೇರಿ ಜಲಾನಯನ ಭಾಗದ ನಗರ, ಪಟ್ಟಣಗಳಿಗೆ ಕುಡಿಯಲು ಸಾಕಾಗಲಿದೆ. ಇದೇ ನೀರನ್ನು ಇನ್ನೆರಡು ತಿಂಗಳ ಕಾಲ ಬಳಸಬಹುದು. ಇಲ್ಲದಿದ್ದರೆ ನೀರಿನ ಸಮಸ್ಯೆ ಎದುರಿಸಬೇಕಾಗುತ್ತದೆ.
ಗರಿಷ್ಠ 124.80 ಅಡಿಯ ಜಲಾಶಯದಲ್ಲಿ ಪ್ರಸ್ತುತ ನೀರಿನ ಮಟ್ಟ 73.87 ಅಡಿಗಳಿಗೆ ಕುಸಿದಿದೆ. ಒಟ್ಟು 49.452 ಟಿಎಂಸಿ ನೀರನ್ನು ಜಲಾಶಯದಲ್ಲಿ ಸಂಗ್ರಹಿಸಬಹುದು. 4.401 ಟಿಎಂಸಿ ಅಡಿ ನೀರು ಬಳಕೆಗೆ ಬಾರದ ಡೆಡ್ ಸ್ಟೋರೇಜ್ ಹಂತದಲ್ಲಿದೆ.

ಎಲ್ಲಿ ನೀರು ಎಷ್ಟಿದೆ ?
ಬೆಂಗಳೂರಿಗೆ ನಿತ್ಯವೂ ಕುಡಿಯುವ ನೀರು ಪೂರೈಕೆ ಮಾಡಲು 900 ಎಂಎಲ್‌ಡಿ ನೀರು ಬೇಕು. ಬೆಂಗಳೂರು ಒಳಗೊಂಡಂತೆ ಮಂಡ್ಯ, ಮೈಸೂರು, ಚಾಮರಾಜನಗರ, ರಾಮನಗರಕ್ಕೆ ಜೂನ್ ಕೊನೆಯವರೆಗೆ 4.500ರಿಂದ 5.000 ಟಿಎಂಸಿ ನೀರು ಅವಶ್ಯಕತೆ ಇದೆ.
ಜಲಾಶಯದ ಮಟ್ಟ 68 ಅಡಿಗೆ ಕುಸಿದಾಗ ಸಿಗುವ ನೀರು ಕುಡಿಯಲು ಹಾಗೂ ಬಳಕೆಗೂ ಯೋಗ್ಯವಾಗಿರುವುದಿಲ್ಲ. ಜತೆಗೆ, ಇದರಲ್ಲೂ ಜಲಾಶಯದಲ್ಲಿ ನಿತ್ಯ 60 ರಿಂದ 70 ಕ್ಯೂಸೆಕ್ ನೀರು ಆವಿಯಾಗುತ್ತದೆ.
ಈ ಹಿನ್ನೆಲೆ 3.9 ಟಿಎಂಸಿಯಲ್ಲಿ 2.500ರಿಂದ 3.000 ಟಿಎಂಸಿ ನೀರು ಮಾತ್ರ ಕುಡಿಯಲು ಸಿಗಬಹುದು. ಇವೆಲ್ಲವನ್ನೂ ಗಮನಿಸಿದರೆ ಜೂನ್ ಅಂತ್ಯದವರೆಗೆ ಇನ್ನೂ ಅಂದಾಜು 2 ಟಿಎಂಸಿ ನೀರು ಕುಡಿಯುವ ಸಲುವಾಗಿಯೇ ಹೆಚ್ಚುವರಿಯಾಗಿ ಬೇಕಾಗುತ್ತದೆ.

ಡೆಡ್ ಸ್ಟೋರೇಜ್ ತಲುಪಿದರೇ ನೀರು ಬಿಡಲಾಗದು !
ನೀರಿನ ಮಟ್ಟ 60 ಅಡಿಗೆ ಕುಸಿದಾಗ ಅಂತಿಮ ಹಂತದ ಡೆಡ್‌ಸ್ಟೋರೇಜ್ ತಲುಪುತ್ತದೆ. ಆಗ ಜಲಾಶಯದಲ್ಲಿ 4.401 ಟಿಎಂಸಿ ಅಡಿ ನೀರು ಇರುತ್ತದೆ. ನೀರಿನ ಮಟ್ಟ 74 ಅಡಿಗೆ ಬಂದರೆ ಸಾಮಾನ್ಯ ಡೆಡ್‌ಸ್ಟೋರೇಜ್ ಹಂತ ತಲುಪಿದಂತೆ.
ಆಗ ವಿಶ್ವೇಶ್ವರಯ್ಯ ನಾಲೆ ಸೇರಿದಂತೆ ಯಾವುದೇ ನಾಲೆಗಳಿಗೆ ನೀರು ಹರಿಸಲಾಗದು. ನದಿಗಷ್ಟೇ ನೀರು ಬಿಡಲು ಸಾಧ್ಯ. ನದಿಗೆ ನೀರು ಬಿಟ್ಟರೆ ಅದನ್ನು ಕುಡಿಯುವ ನೀರಿಗೆ ಬಳಸಿಕೊಳ್ಳಬೇಕು. ಹೆಚ್ಚುವರಿ ನೀರು ತಮಿಳುನಾಡಿಗೆ ಹೋಗುತ್ತದೆ.
ಈಗ ಲಭ್ಯವಿರುವ ಹಾಗೂ ಜಲಾಶಯದಲ್ಲಿ ಸಂಗ್ರಹವಾಗಿರುವ ನೀರನ್ನು ಸಂಪೂಣವಾಗಿ ಬಳಸಿಕೊಂಡರೂ ಅಂದಾಜಿನ ಪ್ರಕಾರ ಒಂದೂವರೆ ತಿಂಗಳು ಸಿಗಬಹುದು ಅಷ್ಟೇ. ಇದರ ಪರಿಣಾಮ ಜೂನ್ 2 ಅಥವಾ 3ನೇ ವಾರದಲ್ಲಿ ಜಲಕ್ಷಾಮ ಆರಂಭವಾಗುವ ಸಾಧ್ಯತೆ ಇದೆ.












Click it and Unblock the Notifications