ಮಂಡ್ಯ: ವಿಶ್ವೇಶ್ವರಯ್ಯ ನಾಲೆಗೆ ಬಿದ್ದ ಕಾರು, ನೀರುಪಾಲಾದ ಚಾಲಕ
ಮಂಡ್ಯ, ಜುಲೈ, 27: ಚಾಲಕನ ನಿಯಂತ್ರಣ ತಪ್ಪಿದ ಕಾರು ವಿಶ್ವೇಶ್ವರಯ್ಯ ನಾಲೆಗೆ ಬಿದ್ದು ಚಾಲಕ ಮೃತಪಟ್ಟಿರುವ ಘಟನೆ ಮಂಡ್ಯ ತಾಲೂಕಿನ ತಿಬ್ಬನಹಳ್ಳಿ ಸಮೀಪ ನಡೆದಿದೆ.
ಶಿವಳ್ಳಿ ಗ್ರಾಮದ ಲೋಕೇಶ್ (44) ಮೃತ ವ್ಯಕ್ತಿಯಾಗಿದ್ದಾನೆ. ಬೆಳೆದು ನಿಂತಿರುವ ಬೆಳೆ ರಕ್ಷಣೆಗಾಗಿ ಕೆ.ಆರ್.ಎಸ್.ನಿಂದ ವಿಶ್ವೇಶ್ವರಯ್ಯ ನಾಲೆಗೆ ನೀರು ಬಿಟ್ಟಿದ್ದರಿಂದ, ನಾಲೆಯಲ್ಲಿ ಹೆಚ್ಚಿನ ಪ್ರಮಾಣದ ನೀರು ಹರಿಯುತ್ತಿದೆ. ಅಲ್ಲದೆ ನಾಲೆಯ ಆಳ 18 ಅಡಿ ಇರುವುದರಿಂದ ಕಾರು ನೀರಿನಲ್ಲಿ ಮುಳುಗಿದ್ದು, ಇದರಿಂದ ಪಾರಾಗಲು ಸಾಧ್ಯವಾಗಿಲ್ಲ. ಹಾಗಾಗಿ ಅಗ್ನಿಶಾಮಕ ದಳ ಸಿಬ್ಬಂದಿ ಕಾರನ್ನು ಮೇಲೆತ್ತಿದ್ದಾರೆ.

ಶಿವಳ್ಳಿಯಲ್ಲಿ ಮೆಡಿಕಲ್ ಶಾಪ್ ಇಟ್ಟುಕೊಂಡು ಜೊತೆಗೆ ವ್ಯವಸಾಯ ಮಾಡಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿದ್ದ ಲೋಕೇಶ್ ತನ್ನ ಸ್ನೇಹಿತನ ಜೊತೆಗೂಡಿ ಕಾರಿನಲ್ಲಿ ಕಾರ್ಯನಿಮಿತ್ತ ಪಾಂಡವಪುರಕ್ಕೆ ತೆರಳುತ್ತಿದ್ದರು. ತಿಬ್ಬನಹಳ್ಳಿ ಮೂಲಕ ಹಾದು ಹೋಗುವಾಗ ವಿಶ್ವೇಶ್ವರಯ್ಯ ನಾಲೆ ಬಳಿ ಕಾರು ನಿಯಂತ್ರಣ ತಪ್ಪಿ ನಾಲೆಯೊಳಗೆ ಬಿದ್ದಿದೆ. ಕಾರಿನಲ್ಲಿದ್ದ ಲೋಕೇಶ್ ಸ್ನೇಹಿತ ಕಾರು ನಾಲೆಗೆ ಬೀಳುತ್ತಿದ್ದಂತೆ ಕಾರಿನ ಕಿಟಕಿಯ ಗಾಜು ಒಡೆದುಕೊಂಡು ಹರಿಯುತ್ತಿದ್ದ ನೀರಿನಲ್ಲಿ ಈಜಿಕೊಂಡು ಬಂದು ಪ್ರಾಣ ಉಳಿಸಿಕೊಂಡಿದ್ದಾನೆ.
ನೀರಿನಲ್ಲಿ ಮುಳುಗಿದ ಕಾರು
ಆದರೆ ಕಾರು ಬಿದ್ದಾಕ್ಷಣ ಗಾಬರಿಗೊಂಡಿದ್ದ ಲೋಕೇಶ್ ಎಚ್ಚೆತ್ತುಕೊಂಡು ಹೊರಗೆ ಬರುವಷ್ಟರಲ್ಲಿಯೇ ಕಾರು ನೀರಿನಲ್ಲಿ ಮುಳುಗಿದೆ. ನೀರು ರಭಸವಾಗಿ ಹರಿಯುತ್ತಿದ್ದರಿಂದ ದಡ ಸೇರಲಾಗದೇ ಲೋಕೇಶ್ ಕೊಚ್ಚಿಕೊಂಡು ಹೋಗಿದ್ದಾನೆ ಎನ್ನಲಾಗುತ್ತಿದ್ದು, ಇದೀಗ ಲೋಕೇಶ್‌ಗಾಗಿ ತೀವ್ರ ಶೋಧ ಕಾರ್ಯ ನಡೆಯುತ್ತಿದೆ. ಇನ್ನು ಕಾರು ಮತ್ತು ಲೋಕೇಶ್ ಅವರ ಮೃತದೇಹವನ್ನು ಮೇಲೆತ್ತಲು ಕಾಲುವೆಯ ನೀರನ್ನು ಕಡಿಮೆ ಮಾಡಲು ನೀರಾವರಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇನ್ನು ಈ ಸಂಬಂಧ ಶಿವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತಗಳಿಗೆ ಪ್ರಮುಖ ಕಾರಣ ಏನು?
ಈ ಘಟನೆ ನಡೆಯಲು ಕಾಲುವೆಗೆ ತಡೆಗೋಡೆ ಇಲ್ಲದಿರುವುದೇ ಕಾರಣವಾಗಿದೆ. ಇನ್ನು 2018ರ ನವೆಂಬರ್ 24ರಲ್ಲಿ ತಡೆಗೋಡೆ ಇಲ್ಲದೇ ಪಾಂಡವಪುರ ತಾಲೂಕಿನ ಕನಗನಮರಡಿ ಬಳಿ ಬಸ್ ದುರಂತ ಸಂಭವಿಸಿ 34 ಮಂದಿ ಮೃತಪಟ್ಟಿದ್ದರು. ಈ ಘಟನೆಯ ಬಳಿಕ ವಿ.ನಾಲೆ ಎಲ್ಲೆಲ್ಲಿ ಹರಿಯುತ್ತದೆಯೋ ಅಲ್ಲೆಲ್ಲ ತಡೆಗೋಡೆ ನಿರ್ಮಿಸುವುದಾಗಿ ಅಂದಿನ ಸರ್ಕಾರ ಹೇಳಿತ್ತು. ಇಷ್ಟಾದರೂ ಸರ್ಕಾರ ತಡೆಗೋಡೆ ನಿರ್ಮಾಣ ಮಾಡದ ಕಾರಣ ದಿನೇ ದಿನೇ ಅಪಘಾತ ಪ್ರಕರಣಗಳು ಹೆಚ್ಚುತ್ತಿವೆ.












Click it and Unblock the Notifications