ತಮಿಳುನಾಡಿಗೆ ನೀರು ಹರಿಬಿಟ್ಟಿದ್ದಕ್ಕೆ ಬೃಹತ್ ಪ್ರತಿಭಟನೆ: ಕಿವಿ ಮೇಲೆ ಹೂವಿಟ್ಟು ಬಿಜೆಪಿ ಆಕ್ರೋಶ
ಮಂಡ್ಯ, ಆಗಸ್ಟ್ 21: ಕೃಷ್ಣರಾಜಸಾಗರದಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಬಿಜೆಪಿ ಪಕ್ಷದ ಕಾರ್ಯಕರ್ತರು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು.
ಮಂಡ್ಯ ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಪಕ್ಷದ ಕಾರ್ಯಕರ್ತರು ಕಿವಿ ಮೇಲೆ ಹೂವು ಇಟ್ಟುಕೊಂಡು, ಹುರುಳಿ ಕಾಳು ಪ್ರದರ್ಶಿಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ವಾಹನ ಸಂಚಾರಕ್ಕೆ ಅಡ್ಡಿಪಡಿಸಿ ವೃತ್ತದಲ್ಲಿ ಬೆಂಕಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಬೆಂಕಿ ನಂದಿಸಲು ಮುಂದಾದ ಪೊಲೀಸರ ಜೊತೆ ನೂಕಾಟ ನಡೆಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದ ಪ್ರತಿಭಟನಕಾರರು, ಸರ್ಕಾರ ಕಾವೇರಿ ಕೊಳ್ಳದ ಪ್ರದೇಶದ ರೈತರಿಗೆ ನೀರು ಕೊಡದೆ ಜಮೀನು ಒಣಗಿಸಿ ಹುರುಳಿ ಚೆಲ್ಲಿಸಲು ಮುಂದಾಗಿದೆ ಎಂದು ಕಿಡಿಕಾರಿದರು.
ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ತಕ್ಷಣ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅಣತಿಯಂತೆ ಸುಪ್ರೀಂ ಕೋರ್ಟ್ ಮತ್ತು ಕಾವೇರಿ ನದಿ ಪ್ರಾಧಿಕಾರ ಮೆಚ್ಚಿಸಲು ಕಾವೇರಿ ಕೊಳ್ಳದ ಜಲಾಶಯಗಳಿಂದ ನೀರು ಬಿಡುಗಡೆ ಮಾಡಿ ರಾಜ್ಯದ ರೈತರಿಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.
ಕೆಆರ್‌ಎಸ್‌ನಲ್ಲಿ 113 ಅಡಿ ಇದ್ದ ನೀರು ಇದೀಗ 105 ಅಡಿಗೆ ಕುಸಿದಿದೆ. ಇದುವರೆಗೆ ಒಂದು ವಾರದಲ್ಲಿ 10 ಟಿಎಂಸಿ ನೀರು ಹರಿದು ಹೋಗಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಅಭಾವ ಎದುರಾಗಲಿದೆ. ಕರ್ನಾಟಕ ರಾಜ್ಯದ ರೈತರಿಗೆ ದ್ರೋಹ ಮಾಡಲಾಗಿದೆ ಎಂದು ಕಿಡಿಕಾರಿದರು.

ಮಂಡ್ಯ ಜಿಲ್ಲೆಯ ಶಾಸಕರು ಡಬಲ್ ಆಕ್ಟಿಂಗ್ ಬಿಡಬೇಕು. ರೈತರ ಎದುರು ನೀರು ಬಿಡಬೇಡಿ ಎಂದು ನಾಟಕವಾಡಿ ಅಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಎದುರು ತಲೆಕೆರೆದು ನಿಂತುಕೊಳ್ಳುತ್ತಾರೆ. ಏಕೆ ನೀರು ಬಿಟ್ಟಿದ್ದೀರಿ, ನಿಲ್ಲಿಸಿ ಎಂದು ಹೇಳುವ ತಾಕತ್ತು ಇವರಿಗಿಲ್ಲ ಎಂದರು.
ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ದುರಂಕಾರದ ಪರಮಾವಧಿಯಾಗಿದ್ದಾರೆ. ರೈತರೇ ಸುಪ್ರೀಂ ಕೋರ್ಟ್‌ಗೆ ಹೋಗುವುದಾದರೆ ನೀವು ಏಕೆ ಇದ್ದೀರಿ..? ಕಾವೇರಿ ಕಣಿವೆ ರೈತರಿಗೆ ದ್ರೋಹ ಮಾಡಿರುವ ನಿಮಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಂಸದೆ ಸುಮಲತಾ ಅಂಬರೀಶ್, ಅಶ್ವತ್ಥ್ ನಾರಾಯಣ, ಪಿ.ಸಿ ಮೋಹನ್, ಕೆ.ಸಿ.ನಂಜುಂಡೇಗೌಡ, ಕೆ ಎಸ್ ಸಚ್ಚಿದಾನಂದ, ಅಶೋಕ್ ಜಯರಾಮ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.












Click it and Unblock the Notifications