ಜೆಡಿಎಸ್ ಭದ್ರಕೋಟೆಯಲ್ಲಿ ಕಮಲ ಅರಳಿಸೋದು ಸುಲಭನಾ?: ಬಿಜೆಪಿ ಮುಖಂಡರಿಗೆ ಅಗ್ನಿಪರೀಕ್ಷೆ
ಮಂಡ್ಯ, ಜನವರಿ 4: ಮಂಡ್ಯದ ರಾಜಕೀಯ ವೇಗ ಪಡೆದುಕೊಂಡಿದೆ. ಸದ್ಯ ಜೆಡಿಎಸ್ ಭದ್ರಕೋಟೆ ಎಂದೇ ಕರೆಯಲ್ಪಡುತ್ತಿರುವ ಮಂಡ್ಯದಲ್ಲಿ ಪ್ರಾಬಲ್ಯ ಸಾಧಿಸಲು ಬಿಜೆಪಿ ನಾಯಕರು ಕಸರತ್ತು ಆರಂಭಿಸಿದ್ದಾರೆ. ಕಳೆದ ವಿಧಾನಸಭೆಯ ಉಪಚುನಾವಣೆಯಲ್ಲಿ ಖಾತೆ ತೆರೆದಿರುವ ಬಿಜೆಪಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಐದು ಸ್ಥಾನವನ್ನು ಗೆಲ್ಲಲೇ ಬೇಕೆಂಬ ಹಠಕ್ಕೆ ಬಿದ್ದಿದೆ.
ಈಗಾಗಲೇ ಬಿಜೆಪಿಯ ಚುನಾವಣಾ ಚಾಣಕ್ಯ ಅಮಿತ್ ಶಾ ಮಂಡ್ಯಕ್ಕೆ ಬಂದು ಹೋಗಿದ್ದಾರೆ. ಜೊತೆಗೆ ಬಿಜೆಪಿ ನಾಯಕರ ದಂಡೇ ಮಂಡ್ಯದತ್ತ ಮುಗಿ ಬೀಳಲು ಸಿದ್ಧತೆ ಮಾಡಿಕೊಂಡಿದೆ. ಜಿಲ್ಲೆಯಲ್ಲಿ ಒಕ್ಕಲಿಗರು ಪ್ರಾಬಲ್ಯ ಹೊಂದಿರುವ ಕಾರಣದಿಂದ ಬಿಜೆಪಿಯು ಒಕ್ಕಲಿಗ ನಾಯಕರನ್ನು ಮಂಡ್ಯದಲ್ಲಿ ಚುನಾವಣಾ ಪ್ರಚಾರಕ್ಕೆ ಹೆಚ್ಚು ಹೆಚ್ಚಾಗಿ ಬಳಸಿಕೊಳ್ಳಲು ಸಿದ್ಧತೆ ಮಾಡಿಕೊಂಡಿದೆ.
ಬಿಜೆಪಿ ನಾಯಕರಿಗೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಹಳೇ ಮೈಸೂರು ಭಾಗವೇ ಟಾರ್ಗೆಟ್ ಆಗಿದೆ. ಅದರಲ್ಲೂ ಮಂಡ್ಯ, ರಾಮನಗರದಲ್ಲಿ ಜೆಡಿಎಸ್ ಪ್ರಾಬಲ್ಯವಿದ್ದು, ಅಲ್ಲಿ ಜೆಡಿಎಸ್ ಅನ್ನು ಕುಗ್ಗಿಸಿ, ಬಿಜೆಪಿಯನ್ನು ಪ್ರಬಲಗೊಳಿಸಬೇಕೆಂಬ ತೀರ್ಮಾನಕ್ಕೆ ಪಕ್ಷದ ನಾಯಕರು ಬಂದಿದ್ದಾರೆ. ಇದೆಲ್ಲದರ ನಡುವೆ ಮಂಡ್ಯದಲ್ಲಿ ಈಗಾಗಲೇ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಕಾಣುವ ಮೂಲಕ ಬಿಜೆಪಿ ಖಾತೆ ತೆರೆದಿರುವ ಸಚಿವ ಡಾ. ನಾರಾಯಣಗೌಡರಿಗೆ ಇದೀಗ ಅಗ್ನಿ ಪರೀಕ್ಷೆ ಆರಂಭವಾಗಿದೆ. ಕ್ಷೇತ್ರದಲ್ಲಿ ತಾವು ಗೆಲ್ಲುವುದರೊಂದಿಗೆ ಮಂಡ್ಯ ಜಿಲ್ಲೆಯ ಇತರೆ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಪಕ್ಷ ಸಂಘಟನೆಗೆ ಒತ್ತು ನೀಡಬೇಕಾದ ಅನಿವಾರ್ಯತೆ ಎದುರಾಗಿದೆ.

ಬಿಜೆಪಿಯನ್ನು ಸೋಲಿಸಲು ಜೆಡಿಎಸ್ ರಣತಂತ್ರ
ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿ ಉಪಚುನಾವಣೆಯಲ್ಲಿ ಗೆದ್ದು ಸಚಿವರಾಗಿರುವ ಡಾ.ನಾರಾಯಣಗೌಡರು ಮುಂದಿನ ಚುನಾವಣೆಯಲ್ಲಿ ಗೆಲ್ಲಲೇ ಬೇಕೆಂಬ ಹಠತೊಟ್ಟಿದ್ದಾರೆ. ಆದರೆ ಅವರನ್ನು ಸೋಲಿಸಿಯೇ ತೀರಬೇಕೆಂದು ಜೆಡಿಎಸ್ ಪಣತೊಟ್ಟಿದೆ. ಈ ಸಂಬಂಧ ಜೆಡಿಎಸ್ ನಾಯಕರು ಅದನ್ನು ಹಲವು ಬಾರಿ ಬಹಿರಂಗವಾಗಿಯೇ ಹೇಳಿದ್ದಾರೆ. ಹೀಗಾಗಿ ಅಗ್ನಿಪರೀಕ್ಷೆ ಎದುರಿಸಲು ಸಜ್ಜಾಗಬೇಕಾದ ಅನಿವಾರ್ಯತೆ ಡಾ.ನಾರಾಯಣ ಗೌಡರದ್ದಾಗಿದೆ.
ಈಗಾಗಲೇ ನಾರಾಯಣಗೌಡರ ವಿರುದ್ಧ ಜೆಡಿಎಸ್ ಹೆಚ್.ಟಿ.ಮಂಜುನಾಥ್ ಅವರನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವ ಕಾರಣದಿಂದ ಮುಂದಿನ ದಿನಗಳಲ್ಲಿ ಯಾರೆಂಬುದು ಗೊತ್ತಾಗಬೇಕಿದೆ. ಸದ್ಯ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿ ಯಾರೆಂಬುದು ಕ್ಷೇತ್ರದ ಜನರಿಗೆ ಗೊತ್ತಾಗಿದೆ. ಹೀಗಾಗಿ ಎರಡು ಪಕ್ಷಗಳು ಅದಾಗಲೇ ಚುನಾವಣೆಗೆ ಸಂಬಂಧಿಸಿದ ಚಟುವಟಿಕೆಯನ್ನು ಆರಂಭಿಸಿವೆ.

ಜೆಡಿಎಸ್ ಭದ್ರಕೋಟೆ ಒಡೆಯಲು ಬಿಜೆಪಿ ಸಿದ್ಧತೆ
ಬಿಜೆಪಿಯಿಂದ ಗೆದ್ದು ಸಚಿವರೂ ಆಗಿರುವ ಡಾ.ನಾರಾಯಣ ಗೌಡರು ಈ ಹಿಂದಿನಿಂದಲೂ ಕ್ಷೇತ್ರದಲ್ಲಿ ಪಕ್ಷಸಂಘಟನೆಗೆ ಒತ್ತು ನೀಡುವುದರೊಂದಿಗೆ ತಮ್ಮ ಮತ ಬ್ಯಾಂಕ್ ಗಟ್ಟಿ ಮಾಡಿಕೊಳ್ಳಲು ಬೇಕಾದ ತಂತ್ರಗಳನ್ನು ಆರಂಭಿಸಿ ತುಂಬಾ ಸಮಯವೇ ಆಗಿ ಹೋಗಿದೆ. ಕಳೆದ ಉಪಚುನಾವಣೆಯಲ್ಲಿ ಗೆದ್ದ ಬಳಿಕ ಮೈಮರೆಯದೆ ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಿದಲ್ಲದೆ, ಗ್ರಾಮಪಂಚಾಯಿತಿ ಮಟ್ಟದಿಂದ ಪಕ್ಷವನ್ನು ಗಟ್ಟಿಗೊಳಿಸುವ ಕೆಲಸ ಮಾಡಿದ್ದಾರೆ.
ಈಗಿನ ಬೆಳವಣಿಗೆಯಲ್ಲಿ ಡಾ.ನಾರಾಯಣ ಗೌಡರು ಕೇವಲ ತಮ್ಮ ಕ್ಷೇತ್ರವನ್ನು ಗಟ್ಟಿ ಮಾಡಿಕೊಂಡು ಕೂರುವ ಪರಿಸ್ಥಿತಿಯಲ್ಲಿ ಇಲ್ಲ. ಜೊತೆಗೆ ಅವರಿಗೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ನೀಡಿರುವುದರಿಂದ ಅಲ್ಲಿ ಹೆಚ್ಚಿನ ಗಮನಹರಿಸಬೇಕಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಸಮಯ ನೀಡಲು ಸಾಧ್ಯವಾಗುತ್ತಿಲ್ಲ. ಆದರೂ ಜೆಡಿಎಸ್ ಮತ್ತು ಕಾಂಗ್ರೆಸ್ ಭದ್ರಕೋಟೆಯನ್ನು ಒಡೆದು ನುಚ್ಚು ನೂರು ಮಾಡಿ ಕನಿಷ್ಟ 5 ಸ್ಥಾನಗಳಲ್ಲಾದರೂ ಬಿಜೆಪಿಯನ್ನು ಗೆಲ್ಲಿಸಲೇಬೇಕೆಂಬ ತೀರ್ಮಾನ ಮಾಡಿದ್ದಾರೆ.

ಭಾರೀ ಸದ್ದು ಮಾಡುತ್ತಿದೆ ಕೆಎಂಎಫ್,ಅಮುಲ್ ವಿಲೀನ ವಿಚಾರ
ಅಮಿತ್ ಶಾ ಜಿಲ್ಲೆಗೆ ಆಗಮಿಸುವ ವೇಳೆ ಜನ ಜಮಾಯಿಸಿದ್ದು, ಬಿಜೆಪಿ ನಾಯಕರಲ್ಲಿ ಹುರುಪು ನೀಡಿರಬಹುದು. ಆದರೆ ಅಮಿತಾ ಶಾ ಪ್ರಸ್ತಾಪಿಸಿದ ಕೆಎಂಎಫ್ ಮತ್ತು ಅಮುಲ್ ವಿಲೀನ ವಿಚಾರ ಈಗ ಭಾರೀ ಸದ್ದು ಮಾಡುತ್ತಿದೆ. ಈ ವಿಚಾರವನ್ನು ಅಮಿತ್ ಶಾ ಯಾವ ಉದ್ದೇಶದಿಂದ ಹೇಳಿದರೋ ಗೊತ್ತಿಲ್ಲ. ಆದರೆ ರಾಜಕೀಯವಾಗಿ ಅದು ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ಚುನಾವಣಾ ಸಮಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಬಿಜೆಪಿ ವಿರುದ್ಧ ಅಸ್ತ್ರವಾಗಿ ಬಳಸಿಕೊಂಡರೆ ಅಚ್ಚರಿ ಪಡಬೇಕಾಗಿಲ್ಲ.
ಇನ್ನು ಬಿಜೆಪಿ ನಾಯಕರು ಜೆಡಿಎಸ್‌ನ ಪ್ರಾಬಲ್ಯ ಕುಗ್ಗಿಸುವ ಸಲುವಾಗಿ ಆ ಪಕ್ಷದ ಸಣ್ಣ, ಪುಟ್ಟ ನಾಯಕರು ಮತ್ತು ಕಾರ್ಯಕರ್ತರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿರುವುದಲ್ಲದೆ, ಅವರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿರುವುದು ಮೂಲ ಬಿಜೆಪಿಗರಲ್ಲಿ ಅಸಮಾಧಾನವನ್ನುಂಟು ಮಾಡಿದೆ. ಅದು ಪಕ್ಷದೊಳಗೆ ಭಿನ್ನಾಭಿಪ್ರಾಯದ ಹುಟ್ಟಿಗೆ ಕಾರಣವಾಗುತ್ತಿದೆ.

ಸಾಮೂಹಿಕ ರಾಜೀನಾಮೆಗೆ ನಿರ್ಧರಿಸಿದ್ದ ಬಿಜೆಪಿ ಮುಖಂಡರು
ಈ ನಡುವೆ ಪಕ್ಷದೊಳಗೆ ಭಿನ್ನಾಭಿಪ್ರಾಯವುಂಟಾಗಿ ಕೆಲವರು ಸಾಮೂಹಿಕ ರಾಜೀನಾಮೆ ನೀಡುವ ನಿರ್ಧಾರಕ್ಕೆ ಬಂದ ಬೆಳವಣಿಗೆಗಳು ನಡೆದಿದ್ದು, ಸಚಿವ ಡಾ.ನಾರಾಯಣಗೌಡರು ಮನವೊಲಿಸಿ ರಾಜೀನಾಮೆ ಹಿಂತೆಗೆದುಕೊಳ್ಳುವಂತೆ ಮಾಡಿದ್ದಾರೆ. ಆದರೆ ಇಂತಹ ಘಟನೆಗೆಳು ಅಲ್ಲಲ್ಲಿ ನಡೆಯಲು ಆರಂಭವಾದರೆ ನಾಯಕರು ಅದನ್ನು ಹೇಗೆ ನಿಭಾಯಿಸುತ್ತಾರೋ ಗೊತ್ತಿಲ್ಲ. ಸದ್ಯ ಮಂಡ್ಯದಲ್ಲಿ ಕಮಲ ಅರಳಿಸಿಯೇ ತೀರುತ್ತೇವೆ ಎಂದು ಹೊರಟಿರುವ ಬಿಜೆಪಿ ನಾಯಕರನ್ನು ಕಟ್ಟಿಹಾಕಲು ಜೆಡಿಎಸ್ ಮತ್ತು ಕಾಂಗ್ರೆಸ್ ಕೂಡ ತಂತ್ರ ಆರಂಭಿಸಿವೆ.

ಯಾರತ್ತ ಮತದಾರರ ಒಲವು..?
ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಗೆಲುವಿಗಾಗಿ ಎಂತಹದ್ದೇ ತಂತ್ರ, ಪ್ರತಿತಂತ್ರ ಮಾಡಿದರೂ ಕೊನೆಗೆ ಯಾರಿಗೆ ಮತಹಾಕಬೇಕೆಂದು ತೀರ್ಮಾನ ಮಾಡುವವರು ಮತದಾರರೇ ಆಗಿರುವುದರಿಂದ ಅವರ ನಿರ್ಧಾರಗಳಷ್ಟೇ ಅಂತಿಮವಾಗಿದೆ. ಅಲ್ಲಿ ತನಕ ರಾಜಕೀಯ ಪಕ್ಷಗಳ ನಾಯಕರ ತಂತ್ರ, ಪ್ರತಿತಂತ್ರ, ಆರೋಪ, ಪ್ರತ್ಯಾರೋಪ ಎಲ್ಲವನ್ನು ಮತದಾರರು ಸಹಿಸಿಕೊಳ್ಳಲೇ ಬೇಕಾಗಿದೆ. ಕ್ಷೇತ್ರಕ್ಕೆ ಯಾವ ನಾಯಕರ ಆಡಳಿತ ಬೇಕು ಎನ್ನುವುದು ಮತದಾರರು ನಿರ್ಧರಿಸಬೇಕಿದೆ.












Click it and Unblock the Notifications