ಮಂಡ್ಯ: ಕೆಲವೇ ಕ್ಷಣಗಳಲ್ಲಿ ಚುನಾವಣಾ ಅಶ್ವಮೇಧಕ್ಕೆ ಚಾಲನೆ ನೀಡಲಿರುವ ಅಮಿತ್ ಶಾ
ಮಂಡ್ಯ, ಡಿಸೆಂಬರ್, 30: ಮುಂಬರುವ ಚುನಾವಣೆಯಲ್ಲಿ ಹಳೇ ಮೈಸೂರು ಭಾಗವನ್ನು ಗುರಿಯಾಗಿಸಿಕೊಂಡು ಆಗಮಿಸುತ್ತಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ (ಡಿಸೆಂಬರ್ 30) ಸಕ್ಕರೆ ನಾಡಿನಲ್ಲಿ ಚುನಾವಣಾ ಅಶ್ವಮೇಧ ಯಾಗಕ್ಕೆ ಚಾಲನೆ ನೀಡಲಿದ್ದಾರೆ.
ಹಳೇ ಮೈಸೂರು ಭಾಗದಲ್ಲಿ ಕನಿಷ್ಠ 20 ಸ್ಥಾನಗಳಲ್ಲಿ ಗೆಲ್ಲುವ ಗುರಿಯೊಂದಿಗೆ ಜನಸಂಕಲ್ಪ ಯಾತ್ರೆ ಕೈಗೊಂಡಿರುವ ಅಮಿತ್ ಶಾ ಚುನಾವಣಾ ಪ್ರಚಾರಕ್ಕೆ ಮಂಡ್ಯದಲ್ಲೇ ರಣಕಹಳೆ ಮೊಳಗಿಸಲಿದ್ದು, ಜಿಲ್ಲಾ ರಾಜಕೀಯದಲ್ಲಿ ಭಾರಿ ಸಂಚಲನ ಸೃಷ್ಟಿಸುವ ನಿರೀಕ್ಷೆ ಇದೆ. ಅಮಿತ್ ಶಾ ಆಗಮನ ಕಾಂಗ್ರೆಸ್-ಜೆಡಿಎಸ್ ನಾಯಕರಲ್ಲಿ ನಡುಕ ಹುಟ್ಟಿಸುವಂತೆ ಮಾಡಿದೆ. 2023ರ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಬಲವರ್ಧನೆಗೊಳಿಸುವಂತೆ ರಾಜ್ಯ ನಾಯಕರಿಗೆ ಅಮಿತ್ ಶಾ ತಾಕೀತು ಮಾಡಿದ್ದಾರೆ. ಇದುವರೆಗೂ ಬಿಜೆಪಿ ರಾಜ್ಯ ನಾಯಕರಿಂದ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಹಳೇ ಮೈಸೂರು ಭಾಗವನ್ನು ಕೇಂದ್ರ ನಾಯಕರೇ ವಿಶೇಷ ಆಸಕ್ತಿ ತೆಗೆದುಕೊಂಡು ನೆಲೆ ದೊರಕಿಸುವುದಕ್ಕೆ ಪ್ರವೇಶಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಅತಿ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲು ರಣತಂತ್ರ
ಕಾಂಗ್ರೆಸ್-ಜೆಡಿಎಸ್‌ಗೆ ಸೀಮಿತವಾಗಿದ್ದ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ಸ್ಪಷ್ಟ ರಣತಂತ್ರದೊಂದಿಗೆ ಅಮಿತ್ ಶಾ ಆಗಮಿಸುತ್ತಿದ್ದಾರೆ. ಬಿಜೆಪಿ ಗೆಲ್ಲುವುದಕ್ಕೆ ಏನೆಲ್ಲಾ ತಂತ್ರಗಳನ್ನು ರೂಪಿಸಬಹುದೋ ಅವೆಲ್ಲವನ್ನು ರಾಜ್ಯ ನಾಯಕರ ಮೂಲಕ ಜಾರಿಗೆ ತರಲು ಸಜ್ಜಾಗಿದ್ದಾರೆ. 2023ಕ್ಕೆ ಕನಿಷ್ಠ 20 ಸ್ಥಾನಗಳಲ್ಲಿ ಪಕ್ಷವನ್ನು ಗೆಲ್ಲಿಸುವಂತೆ ನಾಯಕರಿಗೆ ಟಾಸ್ಕ್ ನೀಡಿದ್ದಾರೆ. ಅದರಂತೆಯೇ ಬಿಜೆಪಿ ನಾಯಕರು ಪಕ್ಷದ ಬಲವರ್ಧನೆಗೆ ಶಕ್ತಿ ಮೀರಿ ಶ್ರಮಿಸುತ್ತಿದ್ದಾರೆ.

ವಿಜಯಯಾತ್ರೆಗೆ ಸಂಕಲ್ಪ ಮಾಡಿದ ಬಿಜೆಪಿ
2019ರ ಕೆ.ಆರ್.ಪೇಟೆ ಉಪ ಚುನಾವಣೆಯಲ್ಲಿ ಬಿಜೆಪಿಗೆ ಸಿಕ್ಕ ಗೆಲುವಿನಿಂದ ಗಟ್ಟಿ ನೆಲೆ ದೊರಕಿದಂತಾಗಿದೆ. ಇದೇ ನೆಲದಿಂದಲೇ ಜನಸಂಕಲ್ಪ ರಥಯಾತ್ರೆ ನಡೆಸುವುದರೊಂದಿಗೆ ಬಿಜೆಪಿ ವಿಜಯಯಾತ್ರೆಯನ್ನು ಇನ್ನಷ್ಟು ವೇಗವಾಗಿ ಮುನ್ನಡೆಸಲು ಸಂಕಲ್ಪ ಮಾಡಿದೆ ಎನ್ನಲಾಗಿದೆ. ಇದಕ್ಕಾಗಿ ಬಿಜೆಪಿಯ ಅತಿರಥ-ಮಹಾರಥರೆಲ್ಲರೂ ಮಂಡ್ಯಕ್ಕೆ ಆಗಮಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಚುನಾವಣೆಗೆ ಇನ್ನು 4 ತಿಂಗಳು ಮಾತ್ರ ಬಾಕಿ ಉಳಿದಿದೆ. ಎಲ್ಲ ರಾಜಕೀಯ ಪಕ್ಷಗಳು ಚುನಾವಣೆಯತ್ತ ಮುಖ ಮಾಡಿವೆ. ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆಯೊಂದಿಗೆ ಪಕ್ಷದ ಬಲವರ್ಧನೆಯಲ್ಲಿ ತೊಡಗಿದ್ದರೆ, ಜೆಡಿಎಸ್ ಪಂಚರತ್ನ ರಥಯಾತ್ರೆಯೊಂದಿಗೆ ಜನರ ವಿಶ್ವಾಸ ಗಳಿಸಲು ಹೊರಟಿದೆ. ಬಿಜೆಪಿ ಕೂಡ ಜನಸಂಕಲ್ಪ ಯಾತ್ರೆಯೊಂದಿಗೆ ಜನರಿಗೆ ಹತ್ತಿರವಾಗಲು ಮುಂದಾಗಿದೆ.

ಮುಖಂಡರು, ಕಾರ್ಯಕರ್ತರಲ್ಲಿ ಉತ್ಸಾಹ
ಅಮಿತ್ ಶಾ ಸಕ್ಕರೆ ನಾಡಿಗೆ ಆಗಮಿಸುತ್ತಿರುವುದು ಪಕ್ಷದ ಮುಖಂಡರು, ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು, ಉತ್ಸಾಹ ಮೂಡಿಸಿದೆ. ಯಾತ್ರೆಯನ್ನು ಯಶಸ್ವಿಗೊಳಿಸುವುದಕ್ಕೆ ಎಲ್ಲರೂ ಟೊಂಕಕಟ್ಟಿ ನಿಂತಿದ್ದಾರೆ. ಪಕ್ಷದ ನಾಯಕರು ವಹಿಸಿರುವ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುವುದರೊಂದಿಗೆ ತಮ್ಮ ರಾಜಕೀಯ ಭವಿಷ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳುವ ಪ್ರಯತ್ನದಲ್ಲಿ ಎಲ್ಲರೂ ನಿರತರಾಗಿದ್ದಾರೆ.












Click it and Unblock the Notifications