ನರೇಂದ್ರ ಮೋದಿಗಾಗಿ ಬಿಜೆಪಿ ಜೊತೆ ಹೊಂದಾಣಿಕೆ: ಶಾಸಕ ಜನಾರ್ದನ ರೆಡ್ಡಿ ಸ್ಪಷ್ಟನೆ
ಮಂಡ್ಯ, ಜನವರಿ 29: ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ತನ್ನ ಅಸ್ಥಿತ್ವವನ್ನು ಉಳಿಸಿಕೊಂಡು ಭಾರತೀಯ ಜನತಾ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸಂಸ್ಥಾಪಕ ಹಾಗೂ ಹಾಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗುವ ವಿಚಾರವಾಗಿ ನಮ್ಮ ಪಕ್ಷ ಭಾರತೀಯ ಜನತಾ ಪಕ್ಷಕ್ಕೆ ಬೆಂಬಲವಾಗಿ ನಿಲ್ಲುತ್ತೇನೆ ಎನ್ನುವ ಮಾತನ್ನು ಎಲ್ಲರ ಬಳಿ ಹೇಳಿದ್ದೇನೆ ಎಂದು ಗಾಲಿ ಜನಾರ್ದನ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನೆಲೆಗೆ ಸೀಮಿತವಾಗಿ ಬಿಜೆಪಿಗೆ ಬೆಂಬಲ ಸೂಚಿಸುತ್ತೇವೆ. ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗ ಬೇಕು ಎನ್ನುವ ನಿಟ್ಟಿನಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಜೊತೆಗೆ ಒಂದಿಷ್ಟು ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕು ಎನ್ನುವುದು ನನ್ನ ಉದ್ದೇಶ. ನಾನು ಬಹಳ ಸ್ಪಷ್ಟವಾಗಿ ಹೇಳುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅವರಿಗಾಗಿ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದೇವೆ. ಆದರೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಸ್ಥಿತ್ವ ಮುಖ್ಯ ಎಂದಿದ್ದಾರೆ.
ಮಂಡ್ಯ ಜಿಲ್ಲೆ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವು ವಿರೋಧಿಸಿ ಗ್ರಾಮಸ್ಥರ ಬೃಹತ್ ಪಾದಯಾತ್ರೆ ನಡೆಸಿದ್ದಾರೆ. ಈ ಪ್ರತಿಭಟನೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಭಾಗಿಯಾಗಿದ್ದಾರೆ. ವಿಶೇಷ ಅಂದರೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಶಾಸಕ ಜನಾರ್ದನ ರೆಡ್ಡಿ ಕೂಡ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದಾರೆ.

ಈ ಬಗ್ಗೆ ಮಾತನಾಡಿದ ಶಾಸಕ ಜನಾರ್ದನ ರೆಡ್ಡಿ, ಇಂದು ಇಡೀ ರಾಜ್ಯವೇ ಕೆರಗೋಡು ಗ್ರಾಮದ ಕಡೆ ನೋಡುತ್ತಿದೆ. ಇಂದು ಕಾಂಗ್ರೆಸ್ ಪಕ್ಷ ಅನಾವಶ್ಯಕವಾಗಿ ರಾಜಕೀಯ ವಿಚಾರಕ್ಕೆ, ಅವರ ರಾಜಕೀಯ ಸ್ವಾರ್ಥದಿಂದ ಇವತ್ತು ಯಾವುದೋ ಒಂದು ಪಕ್ಷ ಬೆಳೆಯುತ್ತದೆ ಎನ್ನುವ ಕಾರಣಕ್ಕೆ ಧರ್ಮವನ್ನು ಉಪಯೋಗಿಸಿಕೊಂಡು ಹನುಮ ಧ್ವಜಕ್ಕೆ ಅಪಮಾನವನ್ನು ಎಸಗಿದ್ದಾರೆ ಎಂದು ಆರೋಪಿಸಿದರು.
ಕಳೆದ ನೆಲವತ್ತು ವರ್ಷಗಳಿಂದ ಕೆರಗೋಡು ಗ್ರಾಮದ ಜನರು ಭಕ್ತಿಯಿಂದ ಹನುಮ ಧ್ವಜವನ್ನು ಪೂಜೆ ಮಾಡಿಕೊಂಡು ಬಂದಿದ್ದಾರೆ. ರಾತ್ರೋರಾತ್ರಿ ಇದನ್ನು ರಾಜಕೀಯ ಮಾಡಿದ್ದು, ಕಾಂಗ್ರೆಸ್ ಪಕ್ಷ. ಹಾಗಾಗಿ ಹನುಮಂತನ ಜನ್ಮಸ್ಥಳದ ನಾನೊಬ್ಬ ಗಂಗಾವತಿ ಭಾಗದ ಶಾಸಕನಾಗಿ, ಈ ಗ್ರಾಮದ ಜನರೊಂದಿಗೆ ನಾನಿದ್ದೇನೆ ಎಂದು ಬೆಂಬೆಲ ಕೊಡಲು ಬಂದಿದ್ದೇನೆ ಎಂದರು.












Click it and Unblock the Notifications