ಬ್ರಹ್ಮಚಾರಿಗಳ ನಡೆ ಮಾದಪ್ಪನ ಕಡೆ ಪಾದಯಾತ್ರೆಗೆ ನಟ ಡಾಲಿ ಧನಂಜಯ್ ಚಾಲನೆ
ಮಂಡ್ಯದ ಕೆಎಂ ದೊಡ್ಡಿ ಗ್ರಾಮದ ಅವಿವಾಹಿತ ಯುವಕರ ಗುಂಪೊಂದು ಮಾದಪ್ಪನ ಬೆಟ್ಟಕ್ಕೆ ಪಾದಯಾತ್ರೆ ಹೊರಟಿದೆ. ಇದಕ್ಕೆ ಡಾಲಿ ಚಾಲನೆ ನೀಡಿದ್ದಾರೆ.
ಮಂಡ್ಯ, ಫೆಬ್ರವರಿ 23: 30 ವರ್ಷ ತುಂಬಿದರೂ ಮದುವೆಯಾಗದೆ ಉಳಿದ ಹುಡುಗರ ಗುಂಪೊಂದು ಮಲೆ ಮಹದೇಶ್ವರನ ಮೊರೆ ಹೋಗಿ ದೇವರ ಸನ್ನಿಧಿಗೆ ಪಾದಯಾತ್ರೆ ಹೊರಟಿದ್ದು, ಈ ಯಾತ್ರೆಗೆ ಕನ್ನಡದ ಖ್ಯಾತ ನಟ ಡಾಲಿ ಧನಂಜಯ್ ಚಾಲನೆ ನೀಡಿದ್ದಾರೆ.
ಮಂಡ್ಯದ ಕೆಎಂ ದೊಡ್ಡಿ ಗ್ರಾಮದ ಅವಿವಾಹಿತ ಯುವಕರ ಗುಂಪೊಂದು ಮಾದಪ್ಪನ ಬೆಟ್ಟಕ್ಕೆ ಪಾದಯಾತ್ರೆ ಹೊರಟಿದೆ. ಇದಕ್ಕೆ ಡಾಲಿ ಚಾಲನೆ ನೀಡಿದ್ದಾರೆ. ಈಗಿನ ಕಾಲದಲ್ಲಿ ಯುವಕರಿಗೆ ಮದುವೆಯಾಗಲು ಸರಿಯಾದ ವಧು ಸಿಗುತ್ತಿಲ್ಲ ಎಂದು ಅದರಲ್ಲೂ ರೈತರ ಮಕ್ಕಳಿಗಂತೂ ಮನೆಗೆ ಕರೆಯುವುದೇ ಇಲ್ಲ ಎಂದು ನೊಂದ ಯುವಕರ ಗುಂಪು ವಧು ಸಿಗಲಿ ಎಂದು ಹರಕೆ ಕಟ್ಟಿಕೊಂಡಿದ್ದಾರೆ ಎನ್ನಲಾಗಿದೆ.

ಹೀಗಾಗಿ ಕೆಎಂ ದೊಡ್ಡಿಯ ಶ್ರೀ ವೆಂಕಟೇಶ್ವರನ ದೇವಾಲಯದಿಂದ ಮಹದೇಶ್ವರನ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡಿದ್ದಾರೆ. ಈ ಗುಂಪು ಬ್ರಹ್ಮಚಾರಿಗಳ ನಡೆ ಮಾದಪ್ಪನ ಕಡೆ ಎಂಬ ಘೋಷವಾಕ್ಯದೊಂದಿಗೆ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ. ಈ ಪಾದಯಾತ್ರೆಗೆ ನಟ ಡಾಲಿ ಧನಂಜಯ್ ಚಾಲನೆ ನೀಡಿ ಸ್ವಲ್ಪ ದೂರ ಹೆಜ್ಜೆ ಹಾಕಿದ್ದಾರೆ. ನಟ ಡಾಲಿ ಧನಂಜಯ್ ಅವರಿಗೂ ಮದುವೆಯಾಗಿಲ್ಲ ಎಂಬುದು ಇಲ್ಲಿ ವಿಶೇಷ. ಆದರೆ ಅಭಿಮಾನಿಗಳ ಒತ್ತಾಯದ ಮೇಲೆ ಅವರು ಇಲ್ಲಿ ಪಾಲ್ಗೊಂಡಿದ್ದಾರೆ. ಜೊತೆಗೆ ಕೆಎಂ ದೊಡ್ಡಿ ಯುವಕರಿಗೆ ಬೇಗ ಹೆಣ್ಣು ದೊರಕಲಿ ಎಂದು ಹಾರೈಸಿದ್ದಾರೆ.
30 ವರ್ಷ ದಾಟಿದ ಯುವಕರಿಗೆ ಮದುವೆ ಆಗಿಲ್ಲ ಎಂದು ಪಾದಯಾತ್ರೆ ಮಾಡುತ್ತಿರುವ ಸಂಗತಿ ಇದೇ ಮೊದಲು ಕೇಳುತ್ತಿದ್ದೇನೆ. ನಮ್ಮ ಫ್ರೆಂಡ್ಸ್ ವಾಟ್ಸಪ್ ಗ್ರೂಪ್‌ನಲ್ಲಿ ಪಾದಯಾತ್ರೆ ವಿಚಾರ ನೋಡಿದಾಗ ತಮಾಷೆ ಅನ್ನಿಸಿತು. ಇಲ್ಲಿ ಬಂದಾಗಲೂ ತಮಾಷೆ ಅನ್ನಿಸಿತು ಎಂದು ಅವಿವಾಹಿತರ ಪಾದಯಾತ್ರೆಗೆ ಚಾಲನೆ ನೀಡಿದ ಬಳಿಕ ಮಂಡ್ಯದ ಕೆ.ಎಂ.ದೊಡ್ಡಿಯಲ್ಲಿ ನಟ ಡಾಲಿ ಧನಂಜಯ್ ತಿಳಿಸಿದ್ದಾರೆ. ಯುವಕರನ್ನು ಪಾದಯಾತ್ರೆ ಯಾಕೆ ಹೊಟಿದ್ದೀರಿ ಎಂದು ಕೇಳಿದಾಗ ರೈತರ ಮಕ್ಕಳಿಗೆ ಹೆಣ್ಣು ಕೊಡ್ತಿಲ್ಲ ಎಂದರು. ಇದು ನಿಜಕ್ಕೂ ಗಂಭೀರವಾದ ವಿಚಾರ. ನಾನು ಹಳ್ಳಿಯಿಂದಲೇ ಬಂದಿದ್ದೀನಿ. ಹಳ್ಳಿಗಳಿಗೆ ಹೋದಾಗಲೆಲ್ಲ ಯುವಕರನ್ನು ಮಾತನಾಡಿಸಿದಾಗ ಹೆಣ್ಣು ಸಿಕ್ತಿಲ್ಲ ಅಂತ ಹೇಳುತ್ತಾರೆ ಎಂದರು.

ಡಾಲಿ ಅಲ್ಲದೆ ಯುವಕರಿಗೆ ಟಗರು ಪಲ್ಯ ಚಿತ್ರದ ನಟ ನಾಗಭೂಷಣ ಕೂಡ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದು, ಮಧ್ಯಾಹ್ನದವರೆಗೂ ಭಾಗವಹಿಸಿ ಯುವಕರಿಗೆ ಹಾರೈಸಿದ್ದಾರೆ. ಗುರುವಾರದಿಂದ ಮೂರು ದಿನಗಳವರೆಗೆ ಪಾದಯಾತ್ರೆಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಪಾದಯಾತ್ರೆ ಹಮ್ಮಿಕೊಂಡು ಭಾಗವಹಿಸಿದವರು ಬಹುತೇಕ ಯುವ ರೈತರಾಗಿದ್ದು, ರೈತರಾದ ತಮಗೆ ಹೆಣ್ಣು ಸಿಗುತ್ತಿಲ್ಲ ಎಂಬ ಕೊರಗಿನಲ್ಲೇ ಭಾಗವಹಿಸಿದ್ದಾರೆ ಎಂದು ಬೇಸರದಲ್ಲೆ ಮಾದಪ್ಪನ ಮೊರೆ ಹೋಗಿದ್ದಾರೆ ಎನ್ನಲಾಗಿದೆ.
ರೈತರ ಮಕ್ಕಳಿಗೂ ಹೆಣ್ಣು ಕೊಡುವಂತಾಗಲಿ ಎಂದು ಪ್ರಾರ್ಥನೆ ಮಾಡಿರುವ ಯುವಕರು ಪಾದಯಾತ್ರೆಯಲ್ಲಿ ಭಾಗಿಯಾಗುವವರಿಗೆ ಮೂರು ಷರತ್ತುಗಳನ್ನು ಹಾಕಿದ್ದಾರೆ. 1. ಕಡ್ಡಾಯವಾಗಿ 30 ವರ್ಷ ದಾಟಿರಬೇಕು. 2. ಮದುವೆಯಾದವರಿಗೆ ಇಲ್ಲಿ ಅವಕಾಶವಿಲ್ಲ. 3. ನಿಶ್ಚಿತಾರ್ಥ ಆದವರೂ ಇಲ್ಲಿ ಭಾಗವಹಿಸುವಂತಿಲ್ಲ. ಅವಿವಾಹಿತರನ್ನು ಸಂಘಟಿಸಿ ಆತ್ಮಸ್ಥೈರ್ಯ ತುಂಬುವ ಉದ್ದೇಶದಿಂದ ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಮೂರು ದಿನದ ಪಾದಯಾತ್ರೆಯಲ್ಲಿ ಭಾಗವಹಿಸುವವರಿಗೆ ಊಟ, ಪಾನೀಯ, ರಾತ್ರಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಕೆಎಂ ದೊಡ್ಡಿಯಿಂದ ಪಾದಯಾತ್ರೆ ಹೊರಟು ಮಳವಳ್ಳಿ, ಕೊಳ್ಳೇಗಾಲ, ಹನೂರು ಮಾರ್ಗವಾಗಿ ಯುವಕರು ಮಹದೇಶ್ವರ ಬೆಟ್ಟವನ್ನು ತಲುಪಲಿದ್ದಾರೆ.












Click it and Unblock the Notifications