Darshan: ಜನವರಿ 26 ಮಂಡ್ಯಕ್ಕೆ ಬನ್ನಿ, ವಿಡಿಯೋ ಮಾಡಿ ಆಹ್ವಾನಿಸಿದ ನಟ ದರ್ಶನ್
ಮಂಡ್ಯ, ಜನವರಿ 25: ನಟಿ ಪವಿತ್ರ ಗೌಡ ಹಾಗೂ ವಿಜಯ ಲಕ್ಷ್ಮೀ ಫೋಟೋ ವಿಡಿಯೋ ವೈರಲ್ ವಿವಾದದಿಂದ ನಟ ದರ್ಶನ್ ಇಂದು(ಜನವರಿ 25) ಸುದ್ದಿಯಲ್ಲಿದ್ದಾರೆ. ಈ ಎಲ್ಲಾ ವಿವಾದದ ನಡುವೆ ನಾಳೆ ( ಜನವರಿ 26 )ರಂದು ಮಂಡ್ಯಗೆ ಬರುವಂತೆ ನಟ ದರ್ಶನ್ ಆಹ್ವಾನಿಸಿರುವ ವಿಡಿಯೋ ವೈರಲ್ ಆಗಿದೆ.
ನಟಿ ಪವಿತ್ರ ಗೌಡ ನಟ ದರ್ಶನ್ ಜೊತೆಗಿನ ವಿಡಿಯೋ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನಟ ದರ್ಶನ್ ಪತ್ನಿ ವಿಜಯ ಲಕ್ಷ್ಮೀ ಸಾರ್ವಜನಿಕವಾಗಿ ಅಸಮಾಧಾನ ಹೊರ ಹಾಕಿದ್ದು, ಪವಿತ್ರ ಗೌಡ ವಿರುದ್ಧ ಕಾನೂನು ಹೋರಾಟದ ಎಚ್ಚರಿಕೆಯನ್ನು ನೀಡಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳ ನಡುವೆ ನಟ ದರ್ಶನ್ ಅಭಿಮಾನಿಗಳನ್ನು ಮಂಡ್ಯಕ್ಕೆ ಬರುವಂತೆ ಆಹ್ವಾನಿಸಿದ ವಿಡಿಯೋ ವೈರಲ್ ಆಗಿದೆ. ಜನವರಿ 26ರಂದು ಕೆ.ಎಸ್ ಪುಟ್ಟಣ್ಣಯ್ಯನವರ 75ನೇ ವರ್ಷದ ಜನ್ಮದಿನೋತ್ಸವ ಮಂಡ್ಯದಲ್ಲಿ ಅದ್ಧೂರಿಯಾಗಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ನೇತೃತ್ವದಲ್ಲಿ ಕೆ.ಎಸ್ ಪುಟ್ಟಣ್ಣಯ್ಯನವರ 75ನೇ ವರ್ಷದ ಜನ್ಮದಿನೋತ್ಸವ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪಾಂಡವಪುರದಲ್ಲಿ ಅದ್ಧೂರಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ನಟ ದರ್ಶನ್ ಅಭಿನಯದ ಕಾಟೇರ ಚಿತ್ರತಂಡವನ್ನು ಆಹ್ವಾನಿಸಲಾಗಿದೆ. ಹಾಗೂ ದರ್ಶನ್ ತೂಗುದೀಪ್‌ಗೆ ರೈತರ ಪರವಾಗಿ ಗೌರವ ಸಮರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕಾಟೇರ ಚಿತ್ರತಂಡಕ್ಕೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಆಹ್ವಾನ
ಕೆ.ಎಸ್ ಪುಟ್ಟಣ್ಣಯ್ಯನವರ 75ನೇ ಜನ್ಮದಿನೋತ್ಸವದ ಪ್ರಯುಕ್ತ ಜನವರಿ 26 ಶುಕ್ರವಾರ ಪಾಂಡವಪುರಕ್ಕೆ ಆಗಮಿಸುತ್ತಿರುವ ಖ್ಯಾತ ನಟ ಅಭಿಮಾನಿಗಳ ಪ್ರೀತಿಯ ಡಿ ಬಾಸ್ ದರ್ಶನ್ ತೂಗುದೀಪ್ ರವರಿಗೆ ಮತ್ತು ಕಾಟೇರ ಚಿತ್ರ ತಂಡಕ್ಕೆ ಸಮಸ್ತ ರೈತ ಸಂಘದ ಪರವಾಗಿ ಸ್ವಾಗತ ಕೋರುತ್ತೇನೆ ಎಂದು ದರ್ಶನ್ ಪುಟ್ಟಣ್ಣಯ್ಯ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಅಭಿಮಾನಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ ದರ್ಶನ್
ಕೆ.ಎಸ್ ಪುಟ್ಟಣ್ಣಯ್ಯನವರ 75ನೇ ಜನ್ಮದಿನೋತ್ಸವದಲ್ಲಿ ಭಾಗಿಯಾಗುವಂತೆ ಅಭಿಮಾನಿಗಳನ್ನು ಆಹ್ವಾನಿಸಿ ನಟ ದರ್ಶನ್ ವಿಡಿಯೋ ಮಾಡಿದ್ದಾರೆ. "ಎಲ್ಲರಿಗೂ ನಮಸ್ಕಾರ ಇದೇ 26ನೇ ತಾರೀಕು ರೈತರ ಸಂಘದ ದೇವರು ಕೆ.ಎಸ್ ಪುಟ್ಟಣ್ಣಯ್ಯನವರ ಜನ್ಮದಿನ. ಅದರ ಜೊತೆಗೆ ನಮ್ಮ ದರ್ಶನ್ ಪುಟ್ಟಣ್ಣಯ್ಯ, ನಮ್ಮ ಶಾಸಕರು ಕಾಟೇರ ಸಿನಿಮಾ ನೋಡಿ ಇಷ್ಟಪಟ್ಟು ಇಡೀ ಕಾಟೇರ ಚಿತ್ರತಂಡವನ್ನು ಕರೆಸುತ್ತಿದ್ದಾರೆ. ನಾನು ಬರುತ್ತಿದ್ದೇನೆ, ನೀವೆಲ್ಲಾ ಬನ್ನಿ, ಬಂದು ಹಾರೈಸಿ, ಯಾಕೆಂದರೆ ಇದು ರೈತರಿಗೆ ರೈತ ಸಂಘಕ್ಕೆ ನಮ್ಮ ಪ್ರೋತ್ಸಾಹ ಹಾಗೂ ನಮ್ಮ ಬೆಂಬಲ. ಈ ಒಂದು ಒಳ್ಳೆ ಕಾರ್ಯಕ್ರಮಕ್ಕೆ ಬನ್ನಿ ಎಂದು" ದರ್ಶನ್ ಆಹ್ವಾನಿಸಿದ್ದಾರೆ.
ವಿವಾದದ ನಡುವೆ ಕಾರ್ಯಕ್ರಮಕ್ಕೆ ಬರ್ತಾರಾ ದರ್ಶನ್?
ದರ್ಶನ್ ಪತ್ನಿ ವಿಜಯ ಲಕ್ಷ್ಮೀ ಹಾಗೂ ಪವಿತ್ರ ಗೌಡ ಅವರ ನಡುವಿನ ಅಸಮಾಧಾನ ಸಾರ್ವಜನಿಕವಾಗಿ ಬಹಿರಂಗವಾದ ಕಾರಣ ಇಂದು ಹಮ್ಮಿಕೊಂಡಿದ್ದ ಕಾಟೇರಾ ಚಿತ್ರದ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ ಎನ್ನಲಾಗಿದೆ. ಹೀಗಾಗಿ ನಾಳೆ ಮಂಡ್ಯದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ನಟ ದರ್ಶನ್ ಬರುತ್ತಾರಾ ಎನ್ನುವ ಅನುಮಾನ ಆರಂಭವಾಗಿದೆ. ಕೆ.ಎಸ್ ಪುಟ್ಟಣ್ಣಯ್ಯನವರ 75ನೇ ಜನ್ಮದಿನೋತ್ಸವದ ಕಾರ್ಯಕ್ರಮದ ಸಿದ್ಧತೆಗಳು ಅಂತಿಮಗೊಳ್ಳುತ್ತಿದ್ದು, ಈ ಹೊತ್ತಿನಲ್ಲಿ ದರ್ಶನ್ ಆಗಮನ ಅನುಮಾನವಾಗಿದೆ. ನಾಳೆ ಸಾವಿರಾರು ಅಭಿಮಾನಿಗಳು ಸೇರುವ ನಿರೀಕ್ಷೆಯಿದ್ದು, ನಟ ದರ್ಶನ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರಾ ಕಾದು ನೋಡಬೇಕಿದೆ.












Click it and Unblock the Notifications