Deepika Murder Case: ಮೇಲುಕೋಟೆ ಶಿಕ್ಷಕಿ ದೀಪಿಕಾ ಕೊಲೆ ಆರೋಪಿ ಬಂಧನ
ಮಂಡ್ಯ: ಮೇಲುಕೋಟೆಯಲ್ಲಿ ಅತಿಥಿ ಶಿಕ್ಷಕಿ ದೀಪಿಕಾ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ಮಾಣಿಕ್ಯನಹಳ್ಳಿ ಗ್ರಾಮದ ನಿತೇಶ್ ಕುಮಾರ್ (21) ಬಂಧಿತ ಆರೋಪಿಯಾಗಿದ್ದಾರೆ. ಡಿವೈಎಸ್‌ಪಿ ಮುರಳಿ ನೇತೃತ್ವದ ಪೊಲೀಸರ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಮಾಣಿಕ್ಯನಹಳ್ಳಿಯ ದೀಪಿಕಾರನ್ನು ಅದೇ ಗ್ರಾಮದ ಪರಿಚಿತ ಯುವಕ ನಿತೇಶ್‌ಕುಮಾರ್ ಕೊಲೆ ಮಾಡಿರುವ ಬಗ್ಗೆ ದೀಪಿಕಾ ಕುಟುಂಬದವರು ಅನುಮಾನ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.

ದೀಪಿಕಾ ಕೊಲೆಗೆ ಪೂರ್ವಯೋಜಿತ ಸಂಚು ರೂಪಿಸಿದ್ದ ನಿತೇಶ್ ಅದಕ್ಕಾಗಿ ಮೊದಲೇ ತಯಾರಿ ಮಾಡಿಕೊಂಡಿದ್ದ ಎನ್ನಲಾಗಿದೆ. ಒಂದು ದಿನ ಮೊದಲೇ ಗುಂಡಿಯನ್ನು ತೆಗೆದಿದ್ದು, ಅದೇ ಸ್ಥಳದಲ್ಲಿ ಕೊಲೆ ಮಾಡಬೇಕೆಂದು ನಿರ್ಧಾರ ಮಾಡಿಕೊಂಡಿದ್ದ. ಅದರಂತೆ ಶಿಕ್ಷಕಿಯನ್ನು ಅಡ್ಡಗಟ್ಟಿ ಆಕೆಯ ವೇಲ್‌ನಿಂದಲೇ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಅಕ್ಕಾ ಎನ್ನುತ್ತಿದ್ದವನೇ ಕೊಲೆ ಮಾಡಿದ
ಮಾಣಿಕ್ಯನಹಳ್ಳಿ ಗ್ರಾಮದ ವೆಂಕಟೇಶ್ ಪುತ್ರಿ ದೀಪಿಕಾ ಅದೇ ಗ್ರಾಮದ ಲೋಕೇಶ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಇವರಿಗೆ ಮಗು ಸಹ ಇದೆ. ಈಕೆ ಮೇಲುಕೋಟೆಯ ಎಸ್.ಇ.ಟಿ. ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡುವ ಮೂಲಕವೂ ಜನತೆಗೆ ಪರಿಚಿತರಾಗಿದ್ದರು.
ಜ.20 ರಂದು ಬೆಳಿಗ್ಗೆ ಸ್ಕೂಟರ್‌ನಲ್ಲಿ ಶಾಲೆಗೆ ತೆರಳಿದ್ದ ದೀಪಿಕಾ ಮರಳಿ ಮನೆಗೆ ಬಂದಿರಲಿಲ್ಲ. ದೀಪಿಳಿಗಾಗಿ ಹುಡುಕಾಟ ನಡೆಸಿದ್ದ ಕುಟುಂಬದವರು ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.
ಮೇಲುಕೋಟೆ ಯೋಗನರಸಿಂಹಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಮಹಿಳೆ ಮೇಲೆ ಹಲ್ಲೆ ಮಾಡುತ್ತಿರುವ ದೃಶ್ಯವನ್ನು ಪ್ರವಾಸಿಗರೊಬ್ಬರೂ ಮೊಬೈಲ್‌ನಲ್ಲಿ ಚಿತ್ರೀಕರಿಸಿ ಪೊಲೀಸರಿಗೆ ಕಳುಹಿಸಿಕೊಟ್ಟಿದ್ದರು. ಇದೇ ಆಧಾರದ ಮೇಲೆ ಸುತ್ತಮುತ್ತಲ ಪ್ರದೇಶದಲ್ಲಿ ಹುಡುಕಾಟ ನಡೆಸಿದ್ದಾಗ ಶಿಕ್ಷಕಿಯ ಸ್ಕೂಟರ್ ಪತ್ತೆಯಾಗಿತ್ತು.
ಮತ್ತಷ್ಟು ಹುಡುಕಾಟ ನಡೆಸಿದಾಗ ಜ. 22 ರಂದು ಯೋಗ ನರಸಿಂಹಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಮಣ್ಣುಗುಡ್ಡೆಯ ಬಳಿ ನೊಣಗಳು ಮುತ್ತಿಕೊಂಡು ದುರ್ವಾಸನೆ ಬರುತ್ತಿರುವುದನ್ನು ಗಮನಿಸಿ ಸ್ಥಳದಲ್ಲಿ ಮಣ್ಣು ತೆಗೆದಾಗ ಶಿಕ್ಷಕಿ ದೀಪಿಕಾರ ಮೃತದೇಹ ಪತ್ತೆಯಾಗಿತ್ತು.
ಮೇಲುಕೋಟೆ ಠಾಣೆಯ ಪೊಲೀಸರು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ನಾಪತ್ತೆ ದೂರನ್ನು ಕೊಲೆ ಪ್ರಕರಣವಾಗಿ ಪರಿವರ್ತಿಸಿಕೊಂಡು ತನಿಖೆ ಕೈಗೊಂಡಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಕೊಲೆ ಪ್ರಕರಣ ಭೇದಿಸಲು ವಿಶೇಷ ತನಿಖಾ ತಂಡವನ್ನು ರಚಿಸಿದ್ದರು.
ಕೊಲೆಯಾದ ದೀಪಿಕಾರ ಪತಿ ಲೋಕೇಶ್ ಅದೇ ಗ್ರಾಮದ ಪರಿಚಿತ ಯುವಕ ನಿತೇಶ್ ಕುಮಾರ್ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ನನ್ನ ಪತ್ನಿಗೆ ಪರಿಚಿತನಾಗಿದ್ದ ನಿತೇಶ್ ಅಕ್ಕ ಎಂದು ಕರೆಯುತ್ತಿದ್ದ. ಆತನೇ ಕೊಲೆ ಮಾಡಿರಬಹುದು ಎಂದು ತಿಳಿಸಿದ್ದರು. ಇದಕ್ಕೆ ಪೂರಕ ಎಂಬಂತೆ ಕೊಲೆ ನಡೆದ ದಿನದಿಂದ ನಿತೇಶ್ ಕುಮಾರ್ ನಾಪತ್ತೆಯಾಗಿದ್ದ. ಇದಕ್ಕೂ ಮುನ್ನ ನನ್ನನ್ನು ಹುಡುಕಬೇಡಿ, ನನ್ನಿಂದ ತಪ್ಪಾಗಿದೆ. ಅಕ್ಕನಿಗೆ ಮದುವೆ ಮಾಡಿ ಎಂದು ತಂದೆಗೆ ಸಂದೇಶ ಕಳುಹಿಸಿದ್ದ. ಶಿಕ್ಷಕಿ ದೀಪಿಕಾಗೆ ಕೊನೆಯದಾಗಿ ಕರೆ ಮಾಡಿದ್ದವನು ಈತನೇ ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಪೂರ್ವ ಯೋಜಿತ ಸಂಚಿನಂತೆ ಮೊಬೈಲ್ ಕರೆ ಮಾಡಿ ಕರೆಸಿಕೊಂಡಿದ್ದು, ಈ ವೇಳೆ ಆಕೆಯ ಜೊತೆ ಜಗಳವಾಡಿ ಕುತ್ತಿಗೆಗೆ ವೇಲ್‌ನಿಂದ ಬಿಗಿದು ಉಸಿರುಗಟ್ಟಿಸಿ ಕೊಲೆಗೈದು ನಂತರ ಗೋಣಿಚೀಲದಲ್ಲಿ ಹಾಕಿ ಗುಂಡಿಯಲ್ಲಿ ಹೂತಿಟ್ಟಿದ್ದ ಎಂಬ ವಿಚಾರ ಗೊತ್ತಾಗಿದ್ದು, ಕೊಲೆ ಯಾವ ಕಾರಣಕ್ಕಾಗಿ ನಡೆದಿದೆ ಎಂಬ ಬಗ್ಗೆ ಪೊಲೀಸರ ವಿಚಾರಣೆ ಪೂರ್ಣಗೊಂಡ ನಂತರ ತಿಳಿದು ಬರಲಿದೆ.












Click it and Unblock the Notifications