ತೊಣ್ಣೂರಿನಲ್ಲಿದೆಯಾ ಚಿನ್ನದ ನಿಕ್ಷೇಪ? ಕೆರೆಯ ಆಳದಿಂದ ವಿಶೇಷ ಕಲ್ಲುಗಳನ್ನು ಆರಿಸಿ ತಂದ ಯುವಕ!
ಮಂಡ್ಯ, ಏಪ್ರಿಲ್ 6: ಮಂಡ್ಯ ಜಿಲ್ಲೆಯ ಐತಿಹಾಸಿಕ ಕೆರೆಗಳಲ್ಲಿ ಒಂದಾಗಿರುವ ಪಾಂಡವಪುರ ತಾಲೂಕಿನ ತೊಣ್ಣೂರಿನ ಕೆರೆಯಲ್ಲಿ ಚಿನ್ನದ ನಿಕ್ಷೇಪ ಇರುವ ಬಗ್ಗೆ ಸಾಕಷ್ಟು ವದಂತಿ ಮತ್ತು ಊಹಾಪೋಹಗಳು ಇದ್ದವು. ಈ ವದಂತಿಯ ಬೆನ್ನು ಬಿದ್ದ ಕೆ.ಆರ್.ಪೇಟೆಯ ಹೊನ್ನೇನ ಗ್ರಾಮದ ಯುವಕನೋರ್ವ ಇದೀಗ ಆ ಕೆರೆಯ ಆಳಕ್ಕೆ ಹೋಗಿ ಕೆಲವು ಚಿನ್ನದ ಲೇಪಿತ ಇರುವ ಕಲ್ಲುಗಳನ್ನು ಆರಿಸಿ ತಂದಿದ್ದಾನೆ.
ಪಾಂಡವಪುರ ತಾಲೂಕಿನ ತೊಣ್ಣೂರು ಗ್ರಾಮದಲ್ಲಿರುವ ಪುರಾತನ ಕಾಲದ ಬೃಹತ್ ಕೆರೆಯಲ್ಲಿ ಚಿನ್ನದ ದೇಗುಲವಿದೆ. ಆ ದೇಗುಲ ಚಿನ್ನದ ರಥ ಕೂಡ ಇದೆ ಎಂಬ ವದಂತಿ ಇಂದಿಗೂ ಇಲ್ಲಿನ ಜನರ ಬಾಯಲ್ಲಿ ಕೇಳಿ ಬರುತ್ತದೆ. ಜನರ ಈ ಬಾಯಿ ಮಾತಿನ ವದಂತಿ ನಂಬಿ ಕೆ.ಆರ್.ಪೇಟೆ ತಾಲೂಕಿನ ಹೊನ್ನೇನಹಳ್ಳಿ ಗ್ರಾಮದ ಮನೋಜ್ ಎನ್ನುವ ಸಾಹಸಿ ಯುವಕ ಇದೀಗ ಈ ಕೆರೆಯ ಆಳಕ್ಕೆ ಸುರಕ್ಷಿತ ಸಾಧನಗಳ ಸಹಾಯದೊಂದಿಗೆ ಏಕಾಂಗಿಯಾಗಿ ಹೋಗಿ ಬಂದಿದ್ದಾನೆ.

ಮನೋಜ್ ತೊಣ್ಣೂರು ಗ್ರಾಮದಲ್ಲಿರುವ ಕೆರೆಯ ಆಳದಲ್ಲಿದ್ದ ಚಿನ್ನದ ಬಣ್ಣವಿರುವ ಕೆಲ ಕಲ್ಲುಗಳ ಮಾದರಿಯನ್ನು ಆರಿಸಿ ತಂದಿದ್ದಾನೆ. ಜೊತೆಗೆ ಕೆರೆಗೆ ಆಳದಲ್ಲಿನ ಚಿತ್ರಗಳನ್ನು ಕ್ಯಾಮರದಲ್ಲಿ ಸೆರೆ ಹಿಡಿದು ತಂದಿದ್ದು ಈ ಜನರ ವದಂತಿಗೆ ಪುಷ್ಟಿ ತುಂಬಿದ್ದಾನೆ.
ಇನ್ನು ಈ ಸಾಹಸಿ ಯುವಕ ಮನೋಜ್ ತನ್ನ ಕೆಲವು ಸ್ನೇಹಿತರ ಸಹಕಾರದಿಂದ ಈ ಸಾಹಸ ಮಾಡಿದ್ದು ಕೆಲವು ಉಪಕರಣಗಳು ಮತ್ತು ಸುರಕ್ಷತ ಸಾಧನಗಳ ಸಹಾಯದಿಂದ ಈ ಕೆರೆಯ ಆಳಕ್ಕೆ ಹೋಗಿ ಬಂದಿರುವುದಾಗಿ ತಿಳಿಸಿದ್ದು, ಜೊತೆಗೆ ಅಲ್ಲಿ ಚಿನ್ನದ ದೇಗುಲ ಇರಬಹುದು ನೀರಿನ ಆಳದಲ್ಲಿ ಹೊಳೆ ಯುವ ಬಂಡೆಗಳಿವೆ. ಎಲ್ಲವು ಪಾಚಿಯಿಂದ ಮುಚ್ಚಿದೆ. ಅಲ್ಲಿದ್ದ ಕೆಲ ಚಿನ್ನದ ಮಾದರಿಯ ಕಲ್ಲುಗಳ ತಂದಿರುವುದಾಗಿ ತಿಳಿಸಿದ್ದು, ಇದು ಚಿನ್ನವೋ ಅಲ್ಲವೋ ಎನ್ನುವುದು ನನಗೆ ಗೊತ್ತಿಲ್ಲ. ಇದನ್ನು ಪರೀಕ್ಷೆ ಮಾಡಿಸಬೇಕಿದೆ ಎಂದಿದ್ದಾರೆ.
ಇಲ್ಲಿನ ಜನರ ಈ ಕುತೂಹಲ ಕಥೆ ಕೇಳಿ ನನ್ನಿಂದ ಸರ್ಕಾರಕ್ಕೇ ಏನಾದರೂ ಉಪಯೋಗವಾಗಲಿ ಎಂದು ನಾನು ಈ ಸಾಹಸ ಮಾಡಿದ್ದೇನೆ. ಇದರ ಬಗ್ಗೆ ಹೆಚ್ಚಿನ ಸಂಶೋಧನ ಆಗಬೇಕಿದೆ. ಇದು ನಿಜವಾದ ಚಿನ್ನದ ಕಲ್ಲು ಆದರೆ ಸರ್ಕಾರ ತನಗೆ ಮತ್ತಷ್ಟು ಸೌಲಭ್ಯ ನೀಡಿದರೆ ಇಲ್ಲಿರುವ ನಿಕ್ಷೇಪದ ಬಗ್ಗೆ ಮತ್ತೆ ಸಂಶೋಧನೆ ಮಾಡಿ ಮೇಲೆ ತರಲು ಸಹಕಾರಿಯಾಗುತ್ತದೆ ಎಂದು ಮನೋಜ್ ತಿಳಿಸಿದ್ದಾರೆ.

ಇನ್ನು ಜೀವದ ಮೇಲಿನ ಹಂಗು ತೊರೆದು ಈ ಯುವಕ ಮಾಡಿರುವ ಈ ಸಾಹಸಕ್ಕೆ ಊರಿನ ಗ್ರಾಮಸ್ಥರು ಅಭಿನಂದಿಸಿದ್ದಾರೆ. ಅಲ್ಲದೇ ದೈವದ ಶಕ್ತಿ ಇರುವ ಈ ಕೆರೆಯಿಂದ ಚಿನ್ನ ತೆಗೆಯುವುದು ಅಷ್ಟು ಸುಲಭವಲ್ಲ ಎನ್ನುತ್ತಿದ್ದಾರೆ.
ಇದೊಂದು ಪುರಾತನ ಕಾಲದ ಐತಿಹಾಸಿಕ ಹಿನ್ನಲೆಯುಳ್ಳ ಕೆರೆಯಾಗಿದೆ. ಇಲ್ಲಿನ ಕೆರೆಯ ಆಳ ಕೂಡ ಇಂದಿಗೂ ಯಾರು ಕೂಡ ಕಂಡು ಹಿಡಿದಿಲ್ಲ. ಇದರ ಆಳವನ್ನು ತಿಳಿಯಲು ಬಂದವರು ಹಲವು ಪ್ರಯತ್ನ ಮಾಡಿದ್ದರು ಇಂದಿಗೂ ಈ ಕೆರೆಯ ನಿಖಿರ ಆಳ ಯಾರಿಗೂ ತಿಳಿಯಲು ಆಗಿಲ್ಲ. ಕೆಲವರು ಈ ಕೆರೆಯಲ್ಲಿ ಚಿನ್ನದ ದೇಗುಲವಿರುವ ಮಾಹಿತಿ ತಿಳಿದು ಅದನ್ನು ತೆಗೆದು ಲಪಾಟಾಯಿಸುವ ಪ್ರಯತ್ನ ಮಾಡಿದರು ಆದರೆ ಅವರೆಲ್ಲ ಈ ದೇವರ ಶಾಪದಿಂದ ನಾಶವಾಗಿ ಹೋಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಒಟ್ಟಾರೆ ಐತಿಹಾಸಿಕ ಪುರಾಣ ಪ್ರಸಿದ್ದ ಈ ತೊಣ್ಣೂರು ಕೆರೆಯಲ್ಲಿ ಚಿನ್ನದ ನಿಕ್ಷೇಪ ಇರುವ ವದಂತಿಗೆ ಇದೀಗ ಈ ಯುವಕ ಆರಿಸಿ ತಂದಿರುವ ಈ ಚಿನ್ನದ ಲೇಪಿತ ಕಲ್ಲುಗಳು ಮತ್ತು ಕೆರೆಯ ಆಳದಲ್ಲಿನ ಕೆಲ ಚಿತ್ರ ನಿಜಕ್ಕೂ ಅಲ್ಲಿ ಚಿನ್ನದ ದೇಗುಲ ಚಿನ್ನದ ರಥ ಇರಬಹುದು ಎಂಬ ಮಾತಿಗೆ ಪುಷ್ಟಿ ನೀಡುತ್ತವೆ. ಆದರೆ ಈ ಆ ಯುವಕ ತಂದಿರುವ ಕಲ್ಲು ನಿಜಕ್ಕೂ ಚಿನ್ನದ್ದೆ ಎಂದಾದರೆ ಅಲ್ಲಿ ಚಿನ್ನದ ನಿಕ್ಷೇಪ ಇರುವುದು ಖಚಿತವಾಗಲಿದೆ.

ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಹೆಚ್ಚಿನ ಸಂಶೋಧನೆಗೆ ಒಲವು ತೋರಬೇಕಿದೆ. ಅಲ್ಲದೇ ತನ್ನ ಸಾಹಸದ ಮೂಲಕ ಈ ಕೆರೆಯ ಆಳಕ್ಕೆ ಹೋಗಿ ಬಂದ ಈ ಯುವಕನ ಕಾರ್ಯಕ್ಕೆ ಮತ್ತಷ್ಟು ಪ್ರೋತ್ಸಾಹ ನೀಡಿ ಈತನ ಮತ್ತಷ್ಟು ಅನ್ವೇಷಣೆ ಕಾರ್ಯಕ್ಕೆ ಪ್ರೇರೇಪಣೆ ನೀಡಬೇಕಿದೆ.












Click it and Unblock the Notifications