ಕೃತಕ ಹೊಂಡದ ಮೀನಿನಲ್ಲಿ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡುವ ಈ ರೈತ ಯಾರು ಗೊತ್ತಾ?
ಮಂಡ್ಯ, ಜನವರಿ 09: ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ಕೋಮನಹಳ್ಳಿ ಗ್ರಾಮದ ಪ್ರಗತಿಪರ ರೈತ, ಸಂಶೋಧಕ, ರೈತ ವಿಜ್ಞಾನಿಯಾಗಿರುವ ರೋಬೋ ಮಂಜೇಗೌಡ ಅವರ ಬಗ್ಗೆ ಗೊತ್ತಿಲ್ಲದವರೇ ಇಲ್ಲ ಎನ್ನಬೇಕು. ಹಳ್ಳಿಯಲ್ಲಿ ಕೃಷಿ ಮಾಡಿಕೊಂಡೇ ಹತ್ತು ಹಲವು ವೈಜ್ಞಾನಿಕ ಅನ್ವೇಷಣೆಗಳನ್ನು ಮಾಡಿರುವುದು ಅವರ ಸಾಧನೆಗೆ ಹಿಡಿದ ಕೈಕನ್ನಡಿಯಾಗಿದೆ.
ಈಗಾಗಲೇ ಮಂಜೇಗೌಡರು ಸಮಾಜಕ್ಕೆ ಹಲವಾರು ಕೊಡುಗೆಗಳನ್ನು ನೀಡಿದ್ದು, ಕೊಳವೆ ಬಾವಿಯೊಳಗೆ ಬಿದ್ದಿರುವ ಮಕ್ಕಳನ್ನು ರಕ್ಷಿಸಲು ಕೃತಕ ರೋಬೋಟ್ ತಯಾರಿಸಿ ರೋಬೋ ಮಂಜೇಗೌಡರಾಗಿ ಖ್ಯಾತಿ ಹೊಂದಿದ್ದಾರೆ. ಅವರ ಸಾಧನೆಗಳನ್ನು ನೋಡುವುದಾದರೆ, ನೀರಿನಲ್ಲಿ ಮುಳುಗಿರುವ ವಸ್ತುಗಳನ್ನು ಪತ್ತೆಹಚ್ಚಲು ಅನ್ವೇಷಕವನ್ನು ಕಂಡುಹಿಡಿದಿದ್ದಾರೆ, ಜತೆಗೆ ನೀರಿನಿಂದ ವಿದ್ಯುತ್ ಉತ್ಪಾದನೆ ಮಾಡಿದ್ದಲ್ಲದೆ, ಹಳ್ಳದಿಂದ ನೀರನ್ನು ಮೇಲೆತ್ತಿ, ಜಮೀನುಗಳಿಗೆ ಹಾಯಿಸಿ ಬೇಸಾಯ ಮಾಡಿದ್ದಾರೆ.

ವ್ಯರ್ಥವಾಗಿ ಹರಿದುಹೋಗುತ್ತಿರುವ ನೀರಿನಿಂದ ವಿದ್ಯುತ್ ಉತ್ಪಾದನೆ ಮಾಡಿದ್ದಲ್ಲದೆ, ಸ್ವಯಂಚಾಲಿತ ಗೇಟ್ ನಿರ್ಮಾಣ, ಮೋಟಾರ್ ಬೈಕ್ ಹಾಗೂ ಇತರ ವಾಹನಗಳಿಂದ ಕೃತಕವಾಗಿ ವಿದ್ಯುತ್ ಉತ್ಪಾದನೆ ಮಾಡುವುದು, ಆಧುನಿಕ ಪದ್ಧತಿಯಲ್ಲಿ ಬಿತ್ತನೆ ಮಾಡುವುದು, ಸೈನ್ಯದಲ್ಲಿ ಶತ್ರುಗಳನ್ನು ಸಂಹರಿಸಲು ರೋಬೋ ಸೈನಿಕನ ನಿರ್ಮಾಣ ಸೇರಿದಂತೆ ಹತ್ತು ಹಲವು ಸಂಶೋಧನೆಗಳನ್ನು ಮಾಡಿದ್ದಾರೆ.
ಕೃತಕ ಹೊಂಡದಲ್ಲಿಯೇ ಮೀನು ಸಾಕಣೆ
ಇನ್ನು ಕೃಷಿಯತ್ತ ಹೆಚ್ಚಿನ ಆಸಕ್ತಿ ವಹಿಸಿರುವ ಮಂಜೇಗೌಡರು ಈಗಾಗಲೇ ಸಾವಯವ ಕೃಷಿ ಪದ್ಧತಿಯಲ್ಲಿ ಬೇಸಾಯ ಮಾಡಿ ಅಲ್ಲಿಯೂ ಸಾಧನೆಗೈದಿದ್ದಾರೆ. ಇದರ ಜತೆಗೆ ಕೃತಕ ಹೊಂಡ ನಿರ್ಮಿಸಿ ಅದರಲ್ಲಿ ಮೀನು ಸಾಕಣೆ ಮಾಡಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದು ವಿಶೇಷವಾಗಿದೆ. ಮೀನು ಸಾಕಾಣಿಕೆ ಮಾಡಲು ಕೆರೆಗಳಿಲ್ಲ ಎನ್ನುವವರಿಗೆ ಅರ್ಧ ಎಕರೆ ಕೃಷಿ ಜಮೀನಿನಲ್ಲಿ ಪಾಲಿಹೌಸ್‌ನೊಳಗೆ ಕೃತಕ ಹೊಂಡ ನಿರ್ಮಿಸಿ ಮೀನು ಸಾಕಣೆ ಮಾಡಿ ಲಕ್ಷಾಂತರ ರೂ.ಗಳನ್ನು ಹೇಗೆ ಸಂಪಾದಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಲ್ಲಿರುವ ಸಿಲಾಪಿಯಾ, ಮೊರೆಲ್, ರೂಪ್‌ಚಂದ್ ಹಾಗೂ ಕಾಟ್ಲಾ ಸೇರಿದಂತೆ ಹಲವು ಬಗೆಯ ಮೀನುಗಳನ್ನು ಸಾಕಣೆ ಮಾಡಿದ್ದಾರೆ. ಮೀನು ಪ್ರಿಯರು ಮುಳ್ಳುಗಳಿಲ್ಲದ ಮೀನನ್ನು ಸೇವಿಸಲು ಇಷ್ಟಪಡುವುದರಿಂದ ಅಂತಹ ಮೀನುಗಳ ಸಾಕಾಣೆಗೆ ಆದ್ಯತೆ ನೀಡಿದ್ದಾರೆ. ಮೀನು ಸಾಕಣೆಗಾಗಿ ತಮ್ಮ ಜಮೀನಿನಲ್ಲಿ ಮೀನು ಸಾಕಾಣಿಕಾ ತೊಟ್ಟಿಗಳನ್ನು ನಿರ್ಮಿಸಿ, ತೊಟ್ಟಿಗಳಲ್ಲಿ ಮೀನು ಬೆಳೆದು, ಪ್ರೌಢಾವಸ್ಥೆಗೆ ತಲುಪಿದ ನಂತರ ಅರ್ಧ ಎಕರೆ ಜಮೀನಿನಲ್ಲಿ ನಿರ್ಮಿಸಿರುವ ಮೀನು ಸಾಕಾಣಿಕಾ ಹೊಂಡಕ್ಕೆ ಮೀನು ಮರಿಗಳನ್ನು ಬಿಡುತ್ತಾರೆ.

ಕೃಷಿ ಜೊತೆಗೆ ಮೀನುಸಾಕಣೆ ಮಾಡಬಹುದು
ಇಲ್ಲಿ ಕೃತಕವಾಗಿ ಆಮ್ಲಜನಕ ಸೇರಿದಂತೆ, ರೋಗ ನಿರೋಧಕ ಔಷಧಿಗಳು ಹಾಗೂ ಪೌಷ್ಟಿಕ ಆಹಾರವನ್ನು ಮೀನು ಸಾಕಾಣಿಕೆಗೆ ಬಳಸಿ, ಕನಿಷ್ಟ ಒಂದೂವೆರೆ ಕೆಜಿ ಯಿಂದ ಎರಡು ಕೆಜಿ ವರೆಗೆ ಮೀನನ್ನು ಬೆಳೆಸಿ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ 150 ರೂ.ಗಳಿಂದ 300 ರೂ.ಗಳ ವರೆಗೆ ಮಾರಾಟ ಮಾಡಿ ಯಶಸ್ಸು ಕಂಡಿದ್ದಾರೆ.
ಮೀನುಸಾಕಣೆಗಾಗಿ ಮೀನುಗಾರಿಕಾ ಇಲಾಖೆಯಿಂದ ಬಯೋಪ್ಲಾಕ್ ನಿರ್ಮಾಣಕ್ಕೆ ಸಹಾಯಧನವನ್ನು ಪಡೆದುಕೊಂಡಿದ್ದು, ಇಲಾಖೆಯ ಮಾರ್ಗದರ್ಶನ ಹಾಗೂ ತರಬೇತಿಯಿಂದ ಅರ್ಧ ಎಕರೆ ಜಮೀನಿನಲ್ಲಿ ವಾರ್ಷಿಕ ಮೂರು ಲಕ್ಷ ರೂ.ಗಳನ್ನು ಆದಾಯ ಮಾಡುತ್ತಿದ್ದಾರಂತೆ. ಇತ್ತೀಚಿನ ಪರಿಸ್ಥಿತಿಯಲ್ಲಿ ಅರ್ಧ ಎಕರೆ ಜಮೀನಿನಲ್ಲಿ ಕಬ್ಬು ಬೆಳೆದರೆ ವಾರ್ಷಿಕ ಐವತ್ತು ಸಾವಿರ ರೂ.ಗಳ ಲಾಭಾಂಶ ಪಡೆಯಲು ಆಗಲ್ಲ. ಹೀಗಾಗಿ ಮೀನು ಸಾಕಾಣಿಕೆಯಲ್ಲಿ ಲಾಭ ಪಡೆಯಬಹುದು ಎಂಬುದು ಅವರ ಅಭಿಪ್ರಾಯವಾಗಿದೆ.
ರೈತರು ವ್ಯವಸಾಯವನ್ನೇ ನಂಬಿಕೊಂಡು ಜೀವನ ನಿರ್ವಹಿಸುತ್ತಿದ್ದು ಇದರಿಂದ ಹಲವು ಬಾರಿ ನಷ್ಟವನ್ನೇ ಅನುಭವಿಸಿದ್ದಾರೆ. ಹೀಗಾಗಿ ಕೃಷಿ ಜತೆಗೆ ಹೈನುಗಾರಿಕೆ, ಕೋಳಿ, ಕುರಿಸಾಕಣೆ ಹಾಗೂ ನೀರಿನ ವ್ಯವಸ್ಥೆಯಿದ್ದರೆ ಮೀನು ಸಾಕಣೆ ಮಾಡಿ ಅದರಿಂದ ಲಾಭಪಡೆಯಲು ಸಾಧ್ಯವಿದೆ ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಮೀನು ಸಾಕಣೆ ಬಗ್ಗೆ ಆಸಕ್ತಿ ಹೊಂದಿರುವ ರೈತರಿಗೂ ಮಂಜೇಗೌಡರು ಮಾಹಿತಿ ನೀಡುತ್ತಿದ್ದಾರೆ.

ರೈತರಿಗೆ ಮಾದರಿಯಾದ ಮಂಜೇಗೌಡರು
ಒಟ್ಟಾರೆಯಾಗಿ ಹೇಳಬೇಕೆಂದರೆ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದು ಕೃಷಿ ಜತೆಗೆ ವಿವಿಧ ಸಂಶೋಧನೆಗಳನ್ನು ಮಾಡುತ್ತಾ ಜನಮನ ಸೆಳೆದ ಮಂಜೇಗೌಡರು ಮೀನನ್ನು ಕೆರೆಯಲ್ಲಿ ಮಾತ್ರವಲ್ಲದೆ ಕೃತಕ ನೀರಿನ ಹೊಂಡದಲ್ಲಿಯೂ ಮೀನು ಸಾಕಿ ಹಣ ಸಂಪಾದಿಸಬಹುದು ಎಂಬುದನ್ನು ತೋರಿಸಿಕೊಟ್ಟು ಇತರೆ ರೈತರಿಗೆ ಮಾದರಿಯಾಗಿದ್ದಾರೆ.












Click it and Unblock the Notifications