ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ತೀರ್ಮಾನ ಏನಿರಬಹುದು?

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ಆಗಸ್ಟ್ 14; ಸಕ್ಕರೆ ನಾಡು ಮಂಡ್ಯದ ಸಂಸದೆ ಸುಮಲತಾ ಅಂಬರೀಶ್ ಮುಂದಿನ 2024ರ ಲೋಕಸಭಾ ಚುನಾವಣೆಯಲ್ಲಿ ಮರು ಆಯ್ಕೆ ಬಯಸಿ ಸ್ಪರ್ಧಿಸುತ್ತಾರಾ?. ಒಂದು ವೇಳೆ ಸ್ಪರ್ಧಿಸಿದರೂ ಈಗಿನಂತೆ ಪಕ್ಷೇತರರಾಗಿ ಸ್ಪರ್ಧಿಸುತ್ತಾರಾ?. ಈ ಬಗ್ಗೆ ಚರ್ಚೆಗಳು ಆರಂಭವಾಗಿವೆ.

ಒಂದು ವೇಳೆ ಅವರು ಮುಂದಿನ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ರಾಜಕೀಯ ಜೀವನಕ್ಕೆ ಸವಾಲು ಎದುರಾಗಲಿದೆಯೇ?. ಅವರ ನಿರ್ಧಾರಗಳು ಏನಿರಬಹುದು? ಹೀಗೆ ಹತ್ತಾರು ಪ್ರಶ್ನೆಗಳು ರಾಜಕೀಯ ಪಡಸಾಲೆಯಲ್ಲಿ ಹುಟ್ಟಿಕೊಂಡಿವೆ. 2019ರ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದ ಸುಮಲತಾ ಅಂಬರೀಶ್‌ಗೆ ಬಿಜೆಪಿ ಬೆಂಬಲ ಘೋಷಣೆ ಮಾಡಿತು. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿತ್ತು. ಎಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು.

ಅಭಿಷೇಕ್ ಅಂಬರೀಷ್‌ಗೆ ರಾಜಕೀಯ ಆಫರ್ ನಿಜ: ಸುಮಲತಾ ಸ್ಪಷ್ಟನೆ ಅಭಿಷೇಕ್ ಅಂಬರೀಷ್‌ಗೆ ರಾಜಕೀಯ ಆಫರ್ ನಿಜ: ಸುಮಲತಾ ಸ್ಪಷ್ಟನೆ

ಮಂಡ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಜಂಟಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿದರು. ಅವರೆದ್ದೇ ಸರ್ಕಾರವಿದ್ದರೂ ಜಂಟಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರಲು ಎಚ್. ಡಿ. ಕುಮಾರಸ್ವಾಮಿಗೆ ಸಾಧ್ಯವಾಗಲಿಲ್ಲ. ಆದರೆ ಈಗ ಮಂಡ್ಯ ರಾಜಕೀಯದ ಚಿತ್ರಣ ಸಂಪೂರ್ಣ ಬದಲಾಗಿದೆ ಎನ್ನುವುದು ಸುದ್ದಿ.

ನಾನು ಮಂಡ್ಯ ಬಿಡಲ್ಲ, ಮಂಡ್ಯ ಸಹ ನನ್ನನ್ನು ಬಿಡಲ್ಲ: ಸುಮಲತಾ ನಾನು ಮಂಡ್ಯ ಬಿಡಲ್ಲ, ಮಂಡ್ಯ ಸಹ ನನ್ನನ್ನು ಬಿಡಲ್ಲ: ಸುಮಲತಾ

ಮುಂದಿನ ಲೋಕಸಭಾ ಚುನಾವಣೆಗೆ ಸುಮಾರು 20 ತಿಂಗಳಷ್ಟು ಬಾಕಿಯಿದೆ. ಅದರ ನಡುವೆ ರಾಜ್ಯ ವಿಧಾನಸಭಾ ಚುನಾವಣೆಯೂ ನಡೆಯಲಿದೆ. ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ? ಏನೆಲ್ಲ ಬೆಳವಣಿಗೆಗಳು ಆಗುತ್ತವೆ ಎಂಬುದು ಕೂಡ ಮುಖ್ಯವಾಗುತ್ತದೆ.

ಪಕ್ಷ ಸೇರ್ಪಡೆಗೆ ಕ್ಷೇತ್ರದ ಜನರ ಅಭಿಪ್ರಾಯ ಸಂಗ್ರಹಿಸುತ್ತೇನೆ; ಸುಮಲತಾ ಅಂಬರೀಶ್ಪಕ್ಷ ಸೇರ್ಪಡೆಗೆ ಕ್ಷೇತ್ರದ ಜನರ ಅಭಿಪ್ರಾಯ ಸಂಗ್ರಹಿಸುತ್ತೇನೆ; ಸುಮಲತಾ ಅಂಬರೀಶ್

ಹಾಗಾಗಿಯೇ ಮುಂದಿನ ವಿಧಾನಸಭಾ ಚುನಾವಣೆಯನ್ನು ಎದುರು ನೋಡುತ್ತಿರುವ ಸುಮಲತಾ ಆಗಿನ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು 2024ರ ಲೋಕಸಭಾ ಚುನಾವಣೆಗೆ ತಯಾರಿ ನಡೆಸುವ ಎಲ್ಲ ಸಾಧ್ಯತೆಗಳಿವೆ. ಏನೆಲ್ಲ ಬೆಳವಣಿಗೆಗಳು ಆಗಬಹುದು? ಎಂಬುದನ್ನು ಕಾದು ನೋಡಬೇಕಿದೆ.

ಅಂತರ ಕಾದುಕೊಂಡಿರುವ ಸುಮಲತಾ ಅಂಬರೀಶ್

ಅಂತರ ಕಾದುಕೊಂಡಿರುವ ಸುಮಲತಾ ಅಂಬರೀಶ್

ಕಳೆದ ಲೋಕ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಪಡೆದು ಸಂಸದರಾದ ಬಳಿಕ ಕಾಂಗ್ರೆಸ್ ಮತ್ತು ಬಿಜೆಪಿಯೊಂದಿಗೆ ಅಂತರ ಕಾಪಾಡಿಕೊಂಡು ಬಂದಿರುವ ಸುಮಲತಾ ಯಾವುದೇ ಪಕ್ಷದ ಕಾರ್ಯಕ್ರಮಗಳ ವೇದಿಕೆಗಳಲ್ಲಿ ಕಾಣಿಸಿಕೊಂಡಿಲ್ಲ.

ಆದರೂ ರಾಜಕೀಯ ಮತ್ತು ಕ್ಷೇತ್ರದ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರದ ನಾಯಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಅವರು ಆ ಮೂಲಕ ಕ್ಷೇತ್ರದ ಕೆಲಸದ ಕಡೆಗೆ ಗಮನಹರಿಸಿದ್ದಾರೆ. ಇದು ಅನಿವಾರ್ಯವೂ ಹೌದು. ಆದರೆ ಮುಂದಿನ ಲೋಕಸಭಾ ಚುನಾವಣೆ ಅವರಿಗೆ ಹಿಂದಿನ 2019ರ ಲೋಕಸಭಾ ಚುನಾವಣೆಯಂತೆ ಸುಲಭವಾಗಿ ಇರಲಾರದು ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.

ರಾಜಕಾರಣಿ ಎಂದು ನೋಡಿಲ್ಲ

ರಾಜಕಾರಣಿ ಎಂದು ನೋಡಿಲ್ಲ

ಕಳೆದ ಚುನಾವಣೆಯಲ್ಲಿ ಅನುಕಂಪದ ಅಲೆ, ಕುಟುಂಬ ರಾಜಕಾರಣದ ಆಕ್ರೋಶ, ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರ ಸಹಕಾರದಿಂದ ಗೆಲುವು ಪಡೆದ ಸುಮಲತಾ ಅಂಬರೀಶ್‌ರನ್ನು ಮಂಡ್ಯದ ಮತದಾರರು ಕೂಡ ಒಬ್ಬ ರಾಜಕಾರಣಿಯಂತೆ ನೋಡಿರಲಿಲ್ಲ. ಬದಲಾಗಿ ನಮ್ಮೂರಿನ ಹೆಣ್ಣುಮಗಳಂತೆ ನೋಡಿದರು. ಹೀಗಾಗಿ ಇಡೀ ಸರ್ಕಾರವೇ ಅವರ ವಿರುದ್ಧ ಕ್ಷೇತ್ರಕ್ಕೆ ಬಂದು ಕೆಲಸ ಮಾಡಿದರೂ, ಆರೋಪ, ನಿಂದನೆ, ಹಣ, ಹೆಂಡ ಹಂಚಿದರೂ ಕೂಡ ಮತದಾರರು ಸುಮಲತಾ ಅಂಬರೀಶ್ ಜತೆಯಲ್ಲಿಯೇ ನಿಂತಿದ್ದರು. ಹೀಗಾಗಿ ಅವರಿಗೆ ಗೆಲುವು ಪಡೆಯಲು ಸಾಧ್ಯವಾಯಿತು.

ಕುಟುಂಬ ರಾಜಕಾರಣ ವಿರೋಧಿಸಿದ ಜನ

ಕುಟುಂಬ ರಾಜಕಾರಣ ವಿರೋಧಿಸಿದ ಜನ

ಅವತ್ತಿನ ಚುನಾವಣೆ ಸಂದರ್ಭ ಅಂಬರೀಶ್ ನಿಧನರಾಗಿ ಕೇವಲ ಆರು ತಿಂಗಳಾಗಿತ್ತು. ಜನಕ್ಕೆ ಸುಮಲತಾ ಅಂಬರೀಶ್ ಮೇಲೆ ಅನುಕಂಪವಿತ್ತು. ಅವರನ್ನು ಗೆಲ್ಲಿಸಲೇ ಬೇಕೆಂಬ ಹಠವೂ ಇತ್ತು. ಆಗ ರಾಜ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವಿತ್ತು. ಮಂಡ್ಯ ಜಿಲ್ಲೆಯಲ್ಲಿನ ಕಾಂಗ್ರೆಸ್ ನಾಯಕರು ಮತ್ತು ಮುಖಂಡರು ತಮ್ಮ ಪಕ್ಷದಿಂದ ಸುಮಲತಾ ಅಂಬರೀಶ್ ಅವರಿಗೆ ಟಿಕೆಟ್ ನೀಡುವಂತೆ ಒತ್ತಾಯ ಮಾಡುತ್ತಿದ್ದರು.

ಆದರೆ ಅದಾಗಲೇ ಸಮ್ಮಿಶ್ರ ಸರ್ಕಾರ ರಾಜ್ಯದಲ್ಲಿ ಆಡಳಿತ ನಡೆಸುತ್ತಿತ್ತು. ಹೀಗಾಗಿ ಎಚ್. ಡಿ. ಕುಮಾರಸ್ವಾಮಿ ತನ್ನ ಪುತ್ರನನ್ನು ಲೋಕಸಭೆಗೆ ಕಳಿಸುವ ಆತುರ ತೋರಿದರು. ಅದಕ್ಕೆ ಕಾಂಗ್ರೆಸ್ ಮುಖಂಡರು ಒಪ್ಪಿಕೊಳ್ಳಲೇ ಬೇಕಾಗಿತ್ತು. ಇದು ಕಾರ್ಯಕರ್ತರ ಅಸಹನೆಗೂ ಕಾರಣವಾಗಿತ್ತು.

ಪ್ರಜ್ವಲ್ ರೇವಣ್ಣ, ನಿಖಿಲ್ ಕುಮಾರಸ್ವಾಮಿ

ಪ್ರಜ್ವಲ್ ರೇವಣ್ಣ, ನಿಖಿಲ್ ಕುಮಾರಸ್ವಾಮಿ

ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್. ಡಿ. ಕುಮಾರಸ್ವಾಮಿಗೆ ರಾಜ್ಯದಲ್ಲಿ ತಮ್ಮದೇ ಸಮ್ಮಿಶ್ರ ಸರ್ಕಾರವಿರುವುದರಿಂದ ಮತ್ತು ಮಂಡ್ಯ ಜೆಡಿಎಸ್‌ನ ಭದ್ರಕೋಟೆ ಆಗಿರುವುದರಿಂದ ಸುಲಭವಾಗಿ ಪುತ್ರ ನಿಖಿಲ್ ಕುಮಾರಸ್ವಾಮಿ ಗೆಲ್ಲಿಸಿಕೊಂಡು ಬರಬಹುದು ಎಂಬ ಆಲೋಚನೆಯಿತ್ತು.

ಆದರೆ ಅತ್ತ ಹಾಸನದಲ್ಲಿ ಎಚ್. ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ,ಇತ್ತ ಮಂಡ್ಯದಲ್ಲಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಜೆಡಿಎಸ್ ಕುಟುಂಬ ರಾಜಕಾರಣ ಮಾಡುತ್ತಿದೆ ಎಂಬುದು ಜಗಜ್ಜಾಹೀರಾಗಿತ್ತು. ಅದನ್ನೇ ಬಿಜೆಪಿ ರಾಜಕೀಯವಾಗಿ ಬಳಸಿಕೊಂಡಿತು. ಆದರೆ ಪ್ರಜ್ವಲ್ ರೇವಣ್ಣ ಹಾಸನದಲ್ಲಿ ಗೆದ್ದರು, ನಿಖಿಲ್ ಮಂಡ್ಯದಲ್ಲಿ ಸೋತರು.

ಅದೊಂದು ಅಪರೂಪದ ಸನ್ನಿವೇಶವಾಗಿತ್ತು!

ಅದೊಂದು ಅಪರೂಪದ ಸನ್ನಿವೇಶವಾಗಿತ್ತು!

ಮಂಡ್ಯದಲ್ಲಿ ಬಿಜೆಪಿ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೂ ಗೆಲುವು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಸುಮಲತಾಗೆ ಪಕ್ಷ ಬೆಂಬಲ ಸೂಚಿಸಿತು. ಇನ್ನೊಂದು ಕಡೆಗೆ ರೈತ ಸಂಘದ ನಾಯಕರು ಕೂಡ ಸುಮಲತಾ ಅಂಬರೀಶ್‌ಗೆ ಕೈಜೋಡಿಸಿದ್ದರು. ಬೇರೆಲ್ಲ ಪಕ್ಷಗಳಲ್ಲಿ ಕಾರ್ಯಕರ್ತರಾಗಿದ್ದ ಅಂಬರೀಶ್ ಅಭಿಮಾನಿಗಳು ತಮ್ಮದೇ ಪಕ್ಷದ ಬಾವುಟಗಳನ್ನು ಹಿಡಿದುಕೊಂಡು ಸುಮಲತಾ ಪ್ರಚಾರ ಸಮಾವೇಶಗಳಲ್ಲಿ ಪಾಲ್ಗೊಂಡರು ಪರಿಣಾಮ ಅವರ ಕಾರ್ಯಕ್ರಮಗಳಲ್ಲಿ ಎಲ್ಲ ಪಕ್ಷಗಳ ಬಾವುಟಗಳು ಹಾರಾಡತೊಡಗಿದವು. ಇದು ಬಹುಶಃ ಭಾರತದ ರಾಜಕೀಯ ಇತಿಹಾಸದ ವಿಶೇಷವಾಗಿತ್ತು. ಇಂಡಿಯಾದ ಜನ ಮಂಡ್ಯದತ್ತ ಬೆರಗು ಕಣ್ಣಿನಿಂದ ನೋಡಿದ್ದರು.

ಚಿತ್ರರಂಗದಿಂದ ಸಿಕ್ಕ ಬೆಂಬಲ

ಚಿತ್ರರಂಗದಿಂದ ಸಿಕ್ಕ ಬೆಂಬಲ

ಕನ್ನಡ ಚಲನಚಿತ್ರ ನಾಯಕ ನಟರಾದ ದರ್ಶನ್, ಯಶ್, ಹಿರಿಯನಟರಾದ ದೊಡ್ಡಣ್ಣ, ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್ ಹೀಗೆ ಹಲವರು ಸುಮಲತಾ ಅಂಬರೀಶ್‌ ಗೆಲುವಿಗೆ ಕೈಜೋಡಿಸಿದರು. ಪರಿಣಾಮ ಸುಮಲತಾ ಅಂಬರೀಶ್ ಐತಿಹಾಸಿಕ ಗೆಲುವಿಗೆ ಸಾಕ್ಷಿಯಾದರು. ಆದರೆ ಮುಂದೆ 2024ರಲ್ಲಿ ಅವರು ಚುನಾವಣೆಗೆ ಸ್ಪರ್ಧಿಸಿದರೆ ಹಿಂದೆ ಆದ ಯಾವ ಬೆಳವಣಿಗೆಗಳು ಆಗುವುದು ಕಷ್ಟ ಸಾಧ್ಯ. ಜತೆಗೆ ಆ ಮಟ್ಟಿಗಿನ ಬೆಂಬಲವೂ ಅವರಿಗೆ ದಕ್ಕುತ್ತದೆ ಎನ್ನಲಾಗದು. ಇದೆಲ್ಲವನ್ನು ನೋಡಿದರೆ ಮುಂದಿನ ಲೋಕಸಭಾ ಚುನಾವಣೆ ವೇಳೆಗೆ ಅವರು ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಪಡೆಯುವುದು ಅಷ್ಟು ಸುಲಭವಲ್ಲ. ಅವರು ಯಾವುದಾದರೊಂದು ಪಕ್ಷದಲ್ಲಿ ಗುರುತಿಸಿಕೊಳ್ಳುವುದು ಅನಿವಾರ್ಯವಾಗುತ್ತೋ ಗೊತ್ತಿಲ್ಲ.

English summary
Will Mandya MP Sumalatha will contest for 2024 lok sabha election as independent candidate. Here are the report of Mandya politics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X