Get Updates
Get notified of breaking news, exclusive insights, and must-see stories!

Mahadevapura elections: ಬಿಜೆಪಿ ಭದ್ರಕೋಟೆ ಭೇದಿಸಲು ಕಾಂಗ್ರೆಸ್‌ ಮಾಡಿದ ಪ್ಲಾನ್ ಏನು?

ಬೆಂಗಳೂರು, ಮಾರ್ಚ್‌, 26: ಬೆಂಗಳೂರಿನ ಹೊರವಲಯದಲ್ಲಿರುವ ಮಹದೇವಪುರ ಕ್ಷೇತ್ರವು ಐ.ಟಿ ತವರೂರು ಅಂತಲೇ ಪ್ರಸಿದ್ಧಿ ಪಡೆದಿದೆ. ಈ ಕ್ಷೇತ್ರ ಬರೀ ಐ.ಟಿ ಕಂಪನಿಗಳಿಂದ ಪ್ರಸಿದ್ಧಿಯಾಗಿರುವುದಲ್ಲದೇ, ರಾಜಕೀಯ ರಣರಂಗದಲ್ಲೂ ಕೂಡ ಅಷ್ಟೇ ಮಹತ್ವ ಪಡೆದಿದೆ. ಹಾಗಾದರೆ ಇಲ್ಲಿನ ರಾಜಕೀಯ ಪರಿಸ್ಥಿತಿ ಹೇಗಿದೆ ಎಂದು ತಿಳಿಯೋಣ ಬನ್ನಿ.

ನಗರದ ಸುತ್ತಮುತ್ತಲಿನ ಹಳ್ಳಿಗಳು ಅತ್ಯಂತ ವೇಗವಾಗಿ ಬೆಳೆಯುತ್ತಲೇ ಇದ್ದು, ಇಲ್ಲಿನ ಹೊರವಲಯದಲ್ಲಿರುವ ಮಹದೇವಪುರ ವಿಧಾನಸಭಾ ಕ್ಷೇತ್ರ ವಿಸ್ತೀರ್ಣದ ದೃಷ್ಟಿಯಿಂದಲೂ ಬೃಹತ್‌ ಆಕಾರವಾಗಿದೆ. ತುಂಬಾ ಐ.ಟಿ ಕಂಪನಿಗಳು ಇದೇ ಕ್ಷೇತ್ರದಲ್ಲಿ ನೆಲೆಯೂರಿರುವುದು ಇನ್ನೂ ವಿಶೇಷವಾಗಿದೆ. ಯಲಹಂಕಕ್ಕೆ ಹೊಂದಿಕೊಂಡಂತಿರುವ ಪ್ರದೇಶದಿಂದ ಪ್ರಾರಂಭವಾಗಿ ಸರ್ಜಾಪುರದ ರಸ್ತೆವರೆಗೂ ಇದು ಚಾಚಿಕೊಂಡಿದೆ. ಗರುಡಾಚಾರ್‌ ಪಾಳ್ಯ, ಹೂಡಿ, ಕಾಡಗೋಡಿ, ವೈಟ್‌ಫೀಲ್ಡ್‌, ಹಗದೂರು, ದೊಡ್ಡನೆಕ್ಕುಂದಿ ಮಾರತಹಳ್ಳಿ, ವರ್ತೂರು, ದೊಡ್ಡಕನ್ನಲಿ, ಬೆಳ್ಳಂದೂರು ಸುತ್ತಮುತ್ತಲಿನ ವ್ಯಾಪ್ತಿಗೆ ಬೆರೆತುಹೋಗಿದೆ.

Mahadevapura map

ಮಹದೇವಪುರ ಕ್ಷೇತ್ರ ಪರಿಚಯ

ಮತ್ತೊಮ್ಮೆ ಚುನಾವಣಾ ಸಮರಕ್ಕೆ ಸಜ್ಜಾಗಿರುವ ಮಹದೇವಪುರ ಕ್ಷೇತ್ರ ಕರ್ನಾಟಕ ರಾಜ್ಯದ 224 ಕ್ಷೇತ್ರಗಳ ಪೈಕಿ ಒಂದಾಗಿದೆ. 2018, ಕಳೆದ ಚುನಾವಣೆಯಲ್ಲಿ ಇಲ್ಲಿ ಭಾರತೀಯ ಜನತಾ ಪಾರ್ಟಿ ಪಕ್ಷದ ಅಭ್ಯರ್ಥಿ ಜಯ ಸಾಧಿಸಿದ್ದರು. ಮಹದೇವಪುರ ಕ್ಷೇತ್ರದ ಚುನಾವಣಾ ಇತಿಹಾಸ, ಈಗಿನ ಬೆಳವಣಿಗೆಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ವರ್ಷ ವಿಜೇತರು ಮತಗಳು ಸೋತವರು ಮತಗಳು
2008 ಅರವಿಂದ್ ಲಿಂಬಾವಳಿ(ಬಿಜೆಪಿ) 76,376 ಬಿ. ಶಿವಣ್ಣ (ಕಾಂಗ್ರೆಸ್‌) 63,018
2013 ಅರವಿಂದ್ ಲಿಂಬಾವಳಿ(ಬಿಜೆಪಿ) 110,244 ಎ.ಸಿ.ಶ್ರೀನಿವಾಸ್ (ಕಾಂಗ್ರೆಸ್‌) 104,095
2018 ಅರವಿಂದ್ ಲಿಂಬಾವಳಿ(ಬಿಜೆಪಿ) 141,682 ಎ.ಸಿ.ಶ್ರೀನಿವಾಸ (ಕಾಂಗ್ರೆಸ್) 123,898

ಇಲ್ಲಿ 2018 ರಲ್ಲಿ ಬಿಜೆಪಿಯ ಅರವಿಂದ ಲಿಂಬಾವಳಿ ಗೆಲುವು ಸಾಧಿಸಿದ್ದರು. ಇವರ ವಿರುದ್ಧ ಕಾಂಗ್ರೆಸ್‌ನಿಂದ ಎ.ಸಿ ಶ್ರೀನಿವಾಸ್‌ ಸ್ಪರ್ಧಿಸಿ 17784 ಮತಗಳ ಅಂತರದಿಂದ ಸೋಲನುಭವಿಸಿದ್ದರು. ನಗರದ ಹೊರವಲಯದಲ್ಲಿರುವ 11 ಗ್ರಾಮ ಪಂಚಾಯತಿಗಳು ಕೂಡ ಮಹದೇವಪುರ ಕ್ಷೇತ್ರದ ವ್ಯಾಪ್ತಿಯಲ್ಲಿ ಇವೆ.

ಅರವಿಂದ ಲಿಂಬಾವಳಿ ಹ್ಯಾಟ್ರಿಕ್‌ ಗೆಲುವು

ಮಹದೇವಪುರ ಕ್ಷೇತ್ರದಲ್ಲಿ ಶಾಸಕ ಅರವಿಂದ ಲಿಂಬಾವಳಿ ಸತತವಾಗಿ ಹ್ಯಾಟ್ರಿಕ್‌ ಗೆಲುವು ಸಾಧಿಸಿದ್ದಾರೆ. ಆದ್ದರಿಂದ ಈ ಬಾರಿ ಕ್ಷೇತ್ರದಲ್ಲಿ ಲಿಂಬಾವಳಿಯವರ ಹಿಡಿತವನ್ನು ತಪ್ಪಿಸಲು ಕಾಂಗ್ರೆಸ್‌ ಇನ್ನಿಲ್ಲದ ಪ್ರಯತ್ನಗಳನ್ನುನ್ನು ಮಾಡುತ್ತಿದೆ. ಕಾಂಗ್ರೆಸ್‌ ನಾಯಕರು ಇಲ್ಲಿ ಹೇಗಾದರೂ ಮಾಡಿ ಈ ಬಾರಿ ಶತಾಯಗತಾಯ ಗೆಲ್ಲಲೇಬೇಕೆನ್ನುವ ಪಣತೊಟ್ಟು ನಿಂತಿದ್ದಾರೆ.

Mahadevapura

ಬಿಜೆಪಿಯಿಂದ ಇನ್ನು ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿಲ್ಲ. ಆದರೆ ಕಾಂಗ್ರೆಸ್‌ನಿಂದ ಈಗಾಗಲೇ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಮಹದೇವಪುರ ಕ್ಷೇತ್ರಕ್ಕೆ ನಾಗೇಶ್‌ ಅವರನ್ನು ಆಯ್ಕೆ ಮಾಡಿದ್ದು, ಈ ಮೂಲಕ ಕ್ಷೇತ್ರದಲ್ಲಿ ಬಿಜೆಪಿಗೆ ಠಕ್ಕರ್‌ ಕೊಡಲು ಕಾಂಗ್ರೆಸ್‌ ಮುಂದಾಗಿದೆ.
ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಿವೆ. ಅದರಲ್ಲಿ ಹೆಚ್ಚು ಮತದಾರರನ್ನು ಹೊಂದಿರುವ 2ನೇ ಕ್ಷೇತ್ರ ಇದಾಗಿದೆ.

ಕ್ಷೇತ್ರದಲ್ಲಿನ ಮತದಾರರ ವಿವರ

ಮಹದೇವಪುರ ಕ್ಷೇತ್ರದಲ್ಲಿ 5.72 ಲಕ್ಷ ಮತದಾರರಿದ್ದು, ವಿವಿಧ ಕ್ಷೇತ್ರಗಳಲ್ಲಿ ಹಂಚಿಹೋಗಿದ್ದ ಪ್ರದೇಶಗಳು 2008ರ ಕ್ಷೇತ್ರ ಮರು ವಿಂಗಡಣೆ ಸಂದರ್ಭದಲ್ಲಿ ಮಹದೇವಪುರ ಕ್ಷೇತ್ರದಲ್ಲಿ ಸೇರ್ಪಡೆಗೊಂಡವು. ಪರಿಶಿಷ್ಟ ಜಾತಿಗೆ ಮೀಸಲಾದ ಈ ಕ್ಷೇತ್ರದಲ್ಲಿ ನಡೆದಿರುವ ಮೂರು ಚುನಾವಣೆಗಳಲ್ಲೂ ಬಿಜೆಪಿ ಪಕ್ಷದ ಅರವಿಂದ ಲಿಂಬಾವಳಿಯವರೇ ವಿಜಯ ಪತಾಕೆಯನ್ನು ಹಾರಿಸಿದ್ದಾರೆ.

ಕ್ಷೇತ್ರದಲ್ಲಿ ಮೂರು ಬಾರಿಯೂ ಕೂಡ ಕಾಂಗ್ರೆಸ್‌ ಬಿಜೆಪಿ ವಿರುದ್ಧ ತೀವ್ರ ಪೈಪೋಟಿ ನಡಸಿತ್ತು. ಕಾಂಗ್ರೆಸ್‌ ಪಕ್ಷದಿಂದ 2008ರಲ್ಲಿ ಬಿ. ಶಿವಣ್ಣ ಸ್ಪರ್ಧಿಸಿದರೆ, 2013 ಮತ್ತು 2018ರಲ್ಲಿ ಎ.ಸಿ. ಶ್ರೀನಿವಾಸ್‌ ಪೈಪೋಟಿ ನೀಡಿದ್ದರು. ಇನ್ನು ಜೆಡಿಎಸ್‌ ಪಕ್ಷ ಅಖಾಡಕ್ಕಿಳಿದಿದ್ದರೂ ಕೂಡ ಹೆಚ್ಚು ಮತಗಳನ್ನು ಬೊಕ್ಕಸಕ್ಕೆ ಹಾಕಿಕೊಳ್ಳುವಲ್ಲಿ ವಿಫಲವಾಯಿತು.

Mahadevapura constituency

ಸಮಸ್ಯೆಗಳ ಸರಮಾಲೆ

ಐ.ಟಿ ಕಂಪನಿಗಳ ತವರು ಎಂದೇ ಪ್ರಸಿದ್ಧಿ ಪಡೆದಿರುವ ಈ ಕ್ಷೇತ್ರದಲ್ಲಿ ಸಮಸ್ಯೆಗಳ ಸರಮಾಲೆಯೇ ಇದೆ. ಕ್ಷೇತ್ರದ ಜನ ಸಮಸ್ಯೆಗಳನ್ನೇ ಹೊದ್ದು ಮಲಗಿದ್ದಾರೆ. ಇಲ್ಲಿನ ಜನರು ಪ್ರತಿನಿತ್ಯವೂ ಸಂಚಾರ ದಟ್ಟಣೆಯಿಂದ ಕಿರಿಕಿರಿ ಅನುಭವಿಸುವಂತಾಗಿದೆ. ವೈಟ್‌ಫೀಲ್ಡ್‌ಗೆ ಮೆಟ್ರೊ ರೈಲು ಸಂಪರ್ಕಿಸುವ ಕಾಮಗಾರಿ ಇದೀಗ ಅಂತಿಮ ಹಂತಕ್ಕೆ ಬಂದು ತಲುಪಿದೆ. ಸಿಲ್ಕ್‌ಬೋರ್ಡ್‌ನಿಂದ ಹೊರವರ್ತುಲ ರಸ್ತೆ, ಕೆ.ಆರ್‌.ಪುರ, ಹೆಬ್ಬಾಳ ಮೂಲಕ ವಿಮಾಣ ನಿಲ್ದಾಣ ತಲುಪುವ ಮೆಟ್ರೋ ರೈಲು ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದೆ.

ಇನ್ನು ಈ ವರ್ಷ ಸುರಿದ ಮಳೆ ಕ್ಷೇತ್ರದ ಜನರನ್ನು ಕಂಗಾಲಾಗುವಂತೆ ಮಾಡಿತ್ತು. ಹೊರವರ್ತುಲ ರಸ್ತೆಯಲ್ಲೇ ನೀರು ಹರಿದಿದ್ದು, ಐ.ಟಿ.ಕಂಪನಿಗಳು ಮತ್ತು ಪ್ರತಿಷ್ಠಿತ ಬಡಾವಣೆಗಳು ಸಂಪೂರ್ಣ ಜಲಾವೃತವಾಗಿದ್ದವು. ಇಲ್ಲಿ ಇನ್ನು ಸಂಪರ್ಕ ರಸ್ತೆಗಳು ಅಭಿವೃದ್ಧಿ ಆಗಬೇಕಿದೆ. ಈ ಎಲ್ಲಾ ಸಮಸ್ಯೆಗಳ ನಡುವೆ ವಿಧಾನಸಭೆ ಚುನಾವಣೆ ಎದುರಾಗಿದ್ದು, ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ಮಾಡಿಕೊಂಡಿವೆ.

ಬಿಜೆಪಿಗೆ ಸೆಡ್ಡು ಒಡೆಯಲು ಕಾಂಗ್ರೆಸ್‌ ತಯಾರಿ

ಬಿಜೆಪಿಯಿಂದ ಅರವಿಂದ ಲಿಂಬಾವಳಿಗೆ ಟಿಕೆಟ್‌ ದೊರಕುವ ಸಾಧ್ಯತೆಯಿದೆ. ಲಿಂಬಾವಳಿಯನ್ನು ಬೇರೆ ಕ್ಷೇತ್ರದಿಂದ ಕಣಕ್ಕಿಳಿಸುವ ಬಗ್ಗೆಯೂ ಈಗಾಗಲೇ ಬಿಜೆಪಿ ಆಲೋಚನೆ ನಡೆಸುತ್ತಿದೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ. ಇದೀಗ ಕಾಂಗ್ರೆಸ್‌ನಿಂದ ಅಭ್ಯರ್ಥಿಗಳ ಮೊಲದ ಪಟ್ಟಿ ಬಿಡುಗಡೆಯಾಗಿದ್ದು, ಮಹದೇವಪುರ ಕ್ಷೇತ್ರದಿಂದ ಶಾಸಕ ಎಚ್‌.ನಾಗೇಶ್‌ ಅವರನ್ನು ಆಯ್ಕೆ ಮಾಡಿದೆ. ಇದು ಬಿಜೆಪಿಗೆ ಮತ್ತಷ್ಟು ತಲೆನೋವಾಗಿ ಪರಿಣಮಿಸಿದೆ.

ಇನ್ನು ಜೆಡಿಎಸ್‌ ಪಕ್ಷದ ಕ್ಷೇತ್ರ ಘಟಕದ ಅಧ್ಯಕ್ಷ ಮುನಿವೆಂಕಟಪ್ಪ, ಎಎಪಿ ಪಕ್ಷದಿಂದ ಅಶೋಕ್‌ ಮೃತ್ಯುಂಜಯ ಅಖಾಡಕ್ಕಳಿಯುವ ಸಾಧ್ಯೆತೆಯಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಒಟ್ಟಿನಲ್ಲಿ ಕ್ಷೇತ್ರದಲ್ಲಿ ಜೆಡಿಎಸ್‌ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದ್ದು, ಮತ್ತೊಂದೆಡೆ ಕಾಂಗ್ರೆಸ್‌ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಈ ಮೂಲಕ ಕಾಂಗ್ರೆಸ್‌ನ ಅಭ್ಯರ್ಥಿ ಘೋಷಣೆಯಾಗಿರುವುದು ಬಿಜೆಪಿಗೆ ದೊಡ್ಡ ಸವಾಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+