ಕೊಡಗಿನ ಕೃಷಿಕರ ನಿದ್ದೆಗೆಡಿಸಿದ ವನ್ಯಪ್ರಾಣಿಗಳು!

By: ಬಿಎಂ ಲವಕುಮಾರ್
Subscribe to Oneindia Kannada

ಮಡಿಕೇರಿ, ಜುಲೈ 12: ಕಾಫಿ ತೋಟದಲ್ಲಿ ಅಡ್ಡಾಡುವ ಕಾಡಾನೆಗಳು.. ಗದ್ದೆ, ತೋಟಕ್ಕೆ ಲಗ್ಗೆಯಿಡುವ ಕಾಡುಹಂದಿಗಳು.. ಭತ್ತದ ಕೃಷಿಯ ಬಿತ್ತನೆ ಬೀಜವನ್ನೇ ತಿಂದು ತೇಗುವ ನವಿಲುಗಳು.. ಅರಣ್ಯದಂಚಿನಿಂದ ಇಣುಕಿ ಭಯ ಹುಟ್ಟಿಸುತ್ತಿರುವ ಹುಲಿ.. ಇದು ಕೊಡಗಿನ ಸದ್ಯದ ಪರಿಸ್ಥಿತಿಯಾಗಿದ್ದು, ಇಲ್ಲಿನ ಹೆಚ್ಚಿನ ಕೃಷಿಕರು ನೆಮ್ಮದಿ ಕಳೆದುಕೊಂಡು ಜೀವನ ಸಾಗಿಸುವಂತಾಗಿದೆ.

ಭರ್ತಿಯಾಗದ ಹಾರಂಗಿ: ಚಿಂತಾಕ್ರಾಂತರಾದ ರೈತರು!

ದಕ್ಷಿಣ ಕೊಡಗಿನ ಬಾಳೆಲೆ ಸಮೀಪ ಕೊಟ್ಟಗೇರಿ ಗ್ರಾಮದಲ್ಲಿ ಹುಲಿಯೊಂದು ಗ್ರಾಮಸ್ಥರಿಗೆ ಕಾಣಿಸಿಕೊಂಡಿದೆ. ದೂರದಿಂದ ಹುಲಿಯನ್ನು ನೋಡಿದವರು ಜೀವ ಉಳಿದರೆ ಸಾಕೆಂದು ಓಡಿ ಬಂದು ಮನೆ ಸೇರಿಕೊಂಡಿದ್ದಾರೆ.

'ಮುಗಿಲುಪೇಟೆ'ಯಲ್ಲಿ ಕೊಂಡ ಆ ಮಂಜಿನ ಹನಿಗಳು..!

ನಾಗರಹೊಳೆ ಅರಣ್ಯದಿಂದ ಬಂದಿರುವ ಈ ಹುಲಿ ಗ್ರಾಮ ವ್ಯಾಪ್ತಿಯಲ್ಲಿ ಹಲವರ ಕಣ್ಣಿಗೆ ಬಿದ್ದಿದೆ. ಹೀಗಾಗಿ ಕಾಫಿ ತೋಟಕ್ಕೆ ಹೋಗಲು ಭಯಪಡುವಂತಾಗಿದೆ. ಯಾವಾಗ ಯಾರನ್ನು ಬಲಿ ಪಡೆಯುತ್ತೋ ಎಂಬ ಭಯದಲ್ಲಿ ಜೀವನ ಸಾಗಿಸುವಂತಾಗಿದೆ.

ಒಂದು ವಾರದಿಂದ ಅಡ್ಡಾಡುತ್ತಿರುವ ಹುಲಿ

ಒಂದು ವಾರದಿಂದ ಅಡ್ಡಾಡುತ್ತಿರುವ ಹುಲಿ

ಹುಲಿ ಕಳೆದ ಒಂದುವಾರದಿಂದ ಅಡ್ಡಾಡುತ್ತಿದ್ದು ಅಣಬೆ ಹುಡುಕಿಕೊಂಡು ಕಾರ್ಮಿಕರೊಂದಿಗೆ ತೆರಳುತ್ತಿದ್ದಾಗ ದೂರದಲ್ಲಿ ನೋಡಿದ್ದಾಗಿ ಕೊಟ್ಟಗೇರಿ ಗ್ರಾಮದ ನಿವಾಸಿ ಮಾಚಂಗಡ ಅನಿತಾ ಎಂಬುವರು ತಿಳಿಸಿದ್ದಾರೆ.

ಜತೆಗೆ ಯಾವುದೇ ಜಾನುವಾರು, ಸಾಕುಪ್ರಾಣಿಗಳನ್ನು ಕೊಂದು ತಿಂದ ಪ್ರಕರಣಗಳು ನಡೆದಿಲ್ಲ. ಆದರೂ ಹೊಂಚು ಹಾಕುತ್ತಿರುವ ಹುಲಿ ಯಾವಾಗ ಬೇಕಾದರೂ ದಾಳಿ ಮಾಡಬಹುದು ಎಂಬ ಭಯದಿಂದ ಯಾರೂ ಕೂಡ ಮನೆಯಿಂದ ಹೊರ ಬಾರದಂತಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹುಲಿ ಇರುವುದು ನಿಜನಾ ಎಂಬುದನ್ನು ಖಚಿತಪಡಿಸಿಕೊಂಡು ಬೋನಿಟ್ಟು ಸೆರೆ ಹಿಡಿಯುವ ಕೆಲಸವನ್ನು ಮಾಡಿದರೆ ಈ ಭಾಗದ ಜನ ನೆಮ್ಮದಿಯಾಗಿ ನಿತ್ಯದ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಲಿದೆ.

ಕಾಫಿತೋಟದಲ್ಲಿ ಕಾಡಾನೆಗಳ ವಾಸ್ತವ್ಯ

ಕಾಫಿತೋಟದಲ್ಲಿ ಕಾಡಾನೆಗಳ ವಾಸ್ತವ್ಯ

ಕಾಡಾನೆಗಳಂತೂ ವರ್ಷದ ಎಲ್ಲ ದಿನಗಳಲ್ಲೂ ನಾಡಿನತ್ತ ಬರುತ್ತಿದ್ದು, ಕಾಫಿ ತೋಟದಲ್ಲಿ ವಾಸ್ತವ್ಯ ಹೂಡುತ್ತಿವೆ. ಮೊದಲೆಲ್ಲ ಅರಣ್ಯದಲ್ಲಿ ಮೇವು ಸಿಗದಾಗ, ಹಲಸಿನ ಹಣ್ಣನ್ನು ಅರಸಿ, ಹಿಂಡಿನಿಂದ ತಪ್ಪಿಸಿಕೊಂಡು ಹೀಗೆ ಅಪರೂಪಕ್ಕೆ ನಾಡಿನೊಳಕ್ಕೆ ಬರುತ್ತಿದ್ದವು. ಆದರೆ ಇತ್ತೀಚೆಗೆ ಹೆಚ್ಚಿನ ಕಾಡಾನೆಗಳು ಅರಣ್ಯದಿಂದ ನೇರವಾಗಿ ಕಾಫಿ ತೋಟಗಳಿಗೆ ಬರುತ್ತಿದ್ದು, ಎಲ್ಲೆಂದರಲ್ಲಿ ನಡೆದಾಡುತ್ತಾ ಬಾಳೆ, ಅಡಿಕೆ, ತೆಂಗನ್ನು ತಿಂದು ನಾಶ ಮಾಡುತ್ತಿರುವುದಲ್ಲದೆ, ಮನುಷ್ಯರನ್ನು ಬಲಿ ತೆಗೆದುಕೊಳ್ಳುತ್ತಿವೆ.

ಅರಣ್ಯ ಇಲಾಖೆ ಒಂದು ಕಡೆಯಿಂದ ಅರಣ್ಯಕ್ಕೆ ಅಟ್ಟಿದರೆ, ಮತ್ತೊಂದು ಕಡೆಯಿಂದ ನಾಡಿಗೆ ಬರುತ್ತಿರುವುದು ಮಾಮೂಲಿಯಾಗಿದೆ. ಇಲ್ಲಿ ಗ್ರಾಮಗಳ ಕಾಫಿ ತೋಟ, ಅರಣ್ಯದಂಚಿನಲ್ಲಿ ಹೆಚ್ಚಿನವರು ವಾಸ ಮಾಡುತ್ತಿರುವುದರಿಂದ ಅಡ್ಡಾಡುವ ಕಾಡಾನೆಗಳು ಯಾವಾಗ ತಮ್ಮ ಮೇಲೆ ದಾಳಿ ಮಾಡಿಬಿಡುತ್ತವೆಯೋ ಎಂಬ ಭಯ ಇಲ್ಲಿನವರದ್ದಾಗಿದೆ. ಕಾಡಾನೆಗಳಿಂದ ಲಕ್ಷಾಂತರ ರೂ.ಗಳಷ್ಟು ನಷ್ಟ ಕಾಫಿ ಬೆಳೆಗಾರರಿಗಾಗುತ್ತಿದ್ದು, ಕೃಷಿ ಕಾರ್ಯದಿಂದ ವಿಮುಖರಾಗುವ ಸ್ಥಿತಿ ನಿರ್ಮಾಣವಾಗತೊಡಗಿದೆ.

ಗದ್ದೆಗೆ ಲಗ್ಗೆಯಿಡುವ ನವಿಲುಗಳು

ಗದ್ದೆಗೆ ಲಗ್ಗೆಯಿಡುವ ನವಿಲುಗಳು

ಸಾಮಾನ್ಯವಾಗಿ ಕೊಡಗಿನಲ್ಲಿ ನವಿಲುಗಳು ಕಾಣಿಸಿಕೊಳ್ಳುತ್ತಿರಲಿಲ್ಲ. ಆದರೆ ಈ ಬಾರಿ ಕುಶಾಲನಗರ ವ್ಯಾಪ್ತಿಯಲ್ಲಿ ನವಿಲುಗಳು ಕಾಣಿಸಿಕೊಂಡಿವೆ. ಭತ್ತದ ಗದ್ದೆಗೆ ಲಗ್ಗೆಯಿಡುತ್ತಿರುವ ಇವು ಗದ್ದೆಯಲ್ಲಿ ಬಿತ್ತನೆ ಮಾಡಿದ ಭತ್ತವನ್ನೇ ತಿಂದು ಹಾಕುತ್ತಿವೆ. ಇವುಗಳನ್ನು ಓಡಿಸಿದರೂ ಮತ್ತೆ, ಮತ್ತೆ ಬರುತ್ತಿವೆ.

ಕಾವೇರಿ ನದಿದಡದ ಗುಡ್ಡೆಹೊಸೂರು ವ್ಯಾಪ್ತಿಯಲ್ಲಿ ಬಹಳಷ್ಟು ರೈತರು ಭತ್ತದ ಕೃಷಿ ಮಾಡುತ್ತಿದ್ದು, ಇದುವರೆಗೆ ಕಾಣಿಸಿಕೊಳ್ಳದ ನವಿಲುಗಳು ಈ ಬಾರಿ ಕಾಣಿಸಿಕೊಂಡಿವೆ.

ಕಾಡುಹಂದಿ ಹಾವಳಿ

ಕಾಡುಹಂದಿ ಹಾವಳಿ

ಜಿಲ್ಲೆಯ ಹಲವೆಡೆ ಭತ್ತದ ಕೃಷಿ ಮಾಡಲು ನೀರಿನ ಕೊರತೆಯಿರುವ ಕಾರಣ ಮರಗೆಣಸು, ಸಿಹಿ ಗೆಣಸು, ಸುವರ್ಣಗೆಡ್ಡೆ, ಕೆಸಗೆಡ್ಡೆಯನ್ನು ಬೆಳೆಯುತ್ತಿದ್ದು, ಈ ಬೆಳೆಗಳನ್ನು ಕಾಡುಹಂದಿಗಳಿಂದ ರಕ್ಷಿಸಿಕೊಳ್ಳುವುದೇ ಕಷ್ಟವಾಗಿದೆ. ರಾತ್ರೋರಾತ್ರಿ ಬರುವ ಹಂದಿಗಳು ಕಷ್ಟಪಟ್ಟು ಬೆಳೆದ ಬೆಳೆಯನ್ನೆಲ್ಲ ನಾಶ ಮಾಡಿಹೋಗುತ್ತಿವೆ.

ಪ್ರಾಣಿ ಭಯಕ್ಕೆ ತತ್ತರಿಸಿದ ಕೃಷಿಕರು

ಪ್ರಾಣಿ ಭಯಕ್ಕೆ ತತ್ತರಿಸಿದ ಕೃಷಿಕರು

ಒಟ್ಟಾರೆ ವನ್ಯಪ್ರಾಣಿಗಳ ಹಾವಳಿಯಿಂದ ಇಲ್ಲಿನ ಕೃಷಿಕರು ತತ್ತರಿಸಿದ್ದಾರೆ. ಕೊಡಗಿನಲ್ಲಿ ಕೃಷಿಯೇ ಜೀವನಕ್ಕೆ ಆಧಾರವಾಗಿದ್ದು, ಇತ್ತೀಚೆಗಿನ ವರ್ಷಗಳಲ್ಲಿ ಅರಣ್ಯದಲ್ಲಿ ವನ್ಯಪ್ರಾಣಿಗಳಿಗೆ ಬೇಕಾದಂತಹ ಮೇವು ಸಿಗದೆ ಇರುವುದರಿಂದಾಗಿ ಅವುಗಳು ನೇರವಾಗಿ ರೈತರ ಗದ್ದೆ, ಹೊಲ, ತೋಟಗಳಿಗೆ ನುಗ್ಗುತ್ತಿವೆ. ಪರಿಣಾಮ ವನ್ಯಪ್ರಾಣಿ ಮತ್ತು ಮಾನವನ ಸಂಘರ್ಷ ಶುರುವಾಗಿದ್ದು, ಕೃಷಿಯೇ ಬೇಡ ಎನ್ನುವಂತಹ ಪರಿಸ್ಥಿತಿಗೆ ಬಂದು ತಲುಪಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The wild animals are moving in every corner of the Kodagu. Crops have been destroyed by wildlife. So most of the farmers here are losing their crops.
Please Wait while comments are loading...