ಮಡಿಕೇರಿಯಲ್ಲಿ ಮನೆಗಳ ಮುಂದೆಯೇ ಹಾದುಹೋದ ಕಾಡಾನೆಗಳು

Posted By: ಮಡಿಕೇರಿ ಪ್ರತಿನಿಧಿ
Subscribe to Oneindia Kannada

ಮಡಿಕೇರಿ, ಡಿಸೆಂಬರ್ 29 : ಗ್ರಾಮೀಣ ಪ್ರದೇಶಗಳಿಗೆ ಲಗ್ಗೆಯಿಟ್ಟು ಭತ್ತದ ಗದ್ದೆ, ಕಾಫಿ ತೋಟಗಳನ್ನು ನಾಶ ಮಾಡುತ್ತಾ ಬೆಳೆಗಾರರ ಪಾಲಿಗೆ ದುಃಸ್ವಪ್ನವಾಗಿ ಕಾಡುತ್ತಿರುವ ಕಾಡಾನೆಗಳು ಮಡಿಕೇರಿ ನಗರದತ್ತ ಶುಕ್ರವಾರ ಬೆಳಗ್ಗೆ ಬರುವುದರೊಂದಿಗೆ ಸ್ಥಳೀಯರನ್ನು ಬೆಚ್ಚಿ ಬೀಳುವಂತೆ ಮಾಡಿವೆ.

ಬೆಳಗ್ಗೆ ವಾಕಿಂಗ್ ಹೊರಟ ಜನರಿಗೆ ರಸ್ತೆಯಲ್ಲಿ ಬರುತ್ತಿದ್ದ ಆನೆಗಳು ಶಾಕ್ ನೀಡಿವೆ. ಹಿಂಡಿನಿಂದ ತಪ್ಪಿಸಿಕೊಂಡು ಬಂದ ಕಾಡಾನೆಗಳೆರಡು ಕುಶಾಲನಗರ ಕಡೆಗೆ ತೆರಳುವ ಚೈನ್ ಗೇಟ್ ಬಳಿ ಕಾಣಸಿಕ್ಕಿವೆ. ರಸ್ತೆಗೆ ಅಡ್ಡ ದಾಟಿದ ಈ ಆನೆಗಳು ಮನೆಗಳನ್ನು ಕಂಡು ಯಾವ ಕಡೆಗೆ ತೆರಳಬೇಕೆಂದು ಗೊತ್ತಾಗದೆ ಅಡ್ಡಾದಿಡ್ಡಿ ಓಡಿವೆ. ಮುಂಜಾನೆ ಸುಮಾರು 5.30ರ ಸಮಯದಲ್ಲಿ ಬಂದ ಆನೆಗಳು ನಗರದೊಳಗೆ ನುಗ್ಗದೆ ರಾಜಮಾರ್ಗದಲ್ಲಿ ಸಂಚರಿಸಿವೆ.

Wild Elephant

ಇದನ್ನು ನೋಡಿದ ಸಾರ್ವಜನಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಬಂದು ಆನೆಗಳನ್ನು ಕಾಡಿಗೆ ಅಟ್ಟುವ ಹರಸಾಹಸ ಮಾಡಿದ್ದಾರೆ. ಈ ವೇಳೆ ಅಷ್ಟೊಂದಾಗಿ ವಾಹನಗಳ ಸಂಚಾರವಿಲ್ಲದ ಕಾರಣ ಯಾವುದೇ ತೊಂದರೆ ಆಗಲಿಲ್ಲ. ಆದರೆ ಆನೆಗಳು ಮನೆಗಳ ಪಕ್ಕದಲ್ಲಿ ಹಾದು ಹೋದ ಕಾರಣ ಮನೆ ಮುಂದೆ ಇಟ್ಟಿದ್ದ ಹೂಕುಂಡಗಳು ನೆಲಕ್ಕುರುಳಿ, ನಾಶವಾಗಿವೆ.

ಚಿತ್ರದುರ್ಗದಲ್ಲಿ ಆನೆ ದಾಳಿ : 6 ಮಂದಿಗೆ ಗಂಭೀರ ಗಾಯ

ಅರಣ್ಯ ಇಲಾಖೆ ಸಿಬ್ಬಂದಿ ಪಟಾಕಿಗಳನ್ನು ಸಿಡಿಸಿ ಮತ್ತೆ ಕಾಡಿನತ್ತ ಅಟ್ಟಿದ್ದಾರೆ. ಸಕಾಲದಲ್ಲಿ ಅರಣ್ಯ ಸಿಬ್ಬಂದಿ ಬಂದು ಆನೆಗಳನ್ನು ಕಾಡಿಗೆ ಅಟ್ಟಿದ್ದರಿಂದ ಯಾವುದೇ ರೀತಿ ತೊಂದರೆಯಾಗದೆ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಈಗಾಗಲೇ ಕೊಡಗಿನಾದ್ಯಂತ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಗದ್ದೆ, ತೋಟಗಳಲ್ಲಿ ಬೀಡು ಬಿಟ್ಟ ಆನೆಗಳು ಉಪಟಳ ನೀಡುತ್ತಲೇ ಇವೆ. ಇವೆಲ್ಲದರ ನಡುವೆ ನಗರದತ್ತ ಆನೆಗಳು ಮುಖ ಮಾಡಿರುವುದು ಆತಂಕದ ವಿಚಾರ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Wild elephants passes in front of houses in Madikeri, after that people are panic and tense.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ