ಹಾರಂಗಿ ಒಡಲು ಭರ್ತಿ, ಹಾಲ್ನೊರೆಯಂತೆ ಧುಮ್ಮುಕ್ಕುತ್ತಿದೆ ನೀರು
ಕೊಡಗು, ಆಗಸ್ಟ್ 08 : ಕಾವೇರಿ ಕೊಳ್ಳದ ಪ್ರಮುಖ ಜಲಾಶಯ ಹಾರಂಗಿ ಭರ್ತಿಯಾಗಿದೆ. ನಾಲ್ಕು ಗೇಟ್‌ಗಳ ಮೂಲಕ ನೀರನ್ನು ಹೊರಬಿಡಲಾಗಿದ್ದು ಹಾಲ್ನೊರೆಯಂತೆ ಧುಮ್ಮುಕ್ಕುತ್ತಿರುವ ನೀರು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.
ಕಾವೇರಿ ನದಿಯ ಉಪನದಿ ಹಾರಂಗಿಗೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನಲ್ಲಿ ಜಲಾಶಯ ನಿರ್ಮಾಣ ಮಾಡಲಾಗಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಕೆ.ಆರ್.ಎಸ್ ಜಲಾಶಯಕ್ಕೆ ಹಾರಂಗಿ ಪ್ರಮುಖವಾದ ಜಲಸಂಪನ್ಮೂಲವಾಗಿದೆ.
ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಹಾರಂಗಿ ಜಲಾಶಯಕ್ಕೆ ನೀರಿನ ಒಳ ಹರಿವು ಹೆಚ್ಚುತ್ತಿದೆ. ಆದ್ದರಿಂದ, ಮುನ್ನೆಚ್ಚರಿಕಾ ಕ್ರಮವಾಗಿ ಗುರುವಾರ ಜಲಾಶಯದಿಂದ 30,000 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಜಲಾಶಯದಿಂದ ನೀರು ಹೊರ ಬಿಡುತ್ತಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಧಿಕಾರಿ, ಆರಕ್ಷಕ ಅಧೀಕ್ಷಕರು ಮತ್ತು ಕೊಡಗು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಈ ಜಲಾಶಯದಿಂದ ಕೊಡಗು ಮತ್ತು ಮೈಸೂರು ಜಿಲ್ಲೆಯ ವಿವಿಧ ತಾಲೂಕಿಗೆ ಕೃಷಿಗಾಗಿ ನೀರು ಪೂರೈಕೆ ಮಾಡಲಾಗುತ್ತದೆ.

ಹಾರಂಗಿ ಜಲಾಶಯದ ನೀರಿನ ಮಟ್ಟ
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿ. ಆಗಸ್ಟ್ 8ರ ಗುರುವಾರ 2,849 ಅಡಿ ನೀರಿನ ಸಂಗ್ರಹವಿದೆ. 16,801 ಕ್ಯುಸೆಕ್ ಒಳಹರಿವು ದಾಖಲಾಗಿದೆ. ಆದ್ದರಿಂದ, ಜಲಾಶಯದಿಂದ 30 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ.

ರೈತರ ಮೊಗದಲ್ಲಿ ಮಂದಹಾಸ
ಹಾರಂಗಿ ಕಾವೇರಿ ಕಣಿವೆಯ ಪ್ರಮುಖ ಜಲಾಶಯವಾಗಿದೆ. ಜಲಾಶಯ ಭರ್ತಿಯಾಗಿ ನೀರು ಬಿಡುಗಡೆ ಮಾಡಿದ್ದರಿಂದ ರೈತರು ಸಂತಸಗೊಂಡಿದ್ದಾರೆ. ಹಾರಂಗಿ ಜಲಾಶಯದಲ್ಲಿ 8.5 ಟಿಎಂಸಿ ಅಡಿ ನೀರನ್ನು ಸಂಗ್ರಹಿಸಬಹುದಾಗಿದೆ.

ಎರಡು ಜಿಲ್ಲೆಗಳಿಗೆ ನೀರು ಪೂರೈಕೆ
ಹಾರಂಗಿ ಜಲಾಶಯದಿಂದ ಮೈಸೂರು ಮತ್ತು ಕೊಡಗು ಜಿಲ್ಲೆಗೆ ನೀರನ್ನು ಪೂರೈಕೆ ಮಾಡಲಾಗುತ್ತದೆ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಹುಣಸೂರು, ಕೆ.ಆರ್.ನಗರ ಹಾಗೂ ಹಾಸನ ಜಿಲ್ಲೆಯ ಅರಕಲಗೂಡು ಸೇರಿದಂತೆ 1,34,895 ಎಕರೆ ಪ್ರದೇಶಕ್ಕೆ ನೀರು ಪೂರೈಕೆ ಮಾಡಲಾಗುತ್ತದೆ.

ಕೆ.ಆರ್.ಎಸ್ ಸೇರಲಿದೆ ನೀರು
ಹಾರಂಗಿ ಜಲಾಶಯದಿಂದ ನೀರನ್ನು ಬಿಟ್ಟರೆ ಕೂಡಿಗೆ ಬಳಿ ಹಾರಂಗಿ ನದಿ ಕಾವೇರಿ ಸೇರಲಿದೆ. ಆದ್ದರಿಂದ, ನೀರು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಕೆ.ಆರ್.ಎಸ್.ಜಲಾಶಯಕ್ಕೆ ಹರಿದು ಬರುತ್ತದೆ. 124.80 ಅಡಿ ಎತ್ತರದ ಕೆ.ಆರ್.ಎಸ್‌ನಲ್ಲಿ ಪ್ರಸ್ತುತ 91 ಅಡಿ ನೀರಿನ ಸಂಗ್ರಹವಿದೆ. 30,774 ಕ್ಯುಸೆಕ್ ಒಳಹರಿವು ಇದೆ.












Click it and Unblock the Notifications