ತಲಕಾವೇರಿ ಜಾತ್ರೆ; ಭಕ್ತಾಧಿಗಳಿಗೆ ತೊಂದರೆ ಆಗದಂತೆ ಸಿದ್ಧತೆಗಳು
ಮಡಿಕೇರಿ, ಸೆಪ್ಟೆಂಬರ್ 29; ಕೊಡಗು ಜಿಲ್ಲೆಯಲ್ಲಿ ತಲಕಾವೇರಿಯಲ್ಲಿ ಅಕ್ಟೋಬರ್ 17ರಂದು ರಾತ್ರಿ 1.27 ನಿಮಿಷಕ್ಕೆ ಸಲ್ಲುವ ಕರ್ಕಾಟಕ ಲಗ್ನದಲ್ಲಿ ಕಾವೇರಿ ತೀರ್ಥೋದ್ಭವ ನಡೆಯಲಿದೆ. ತಲಕಾವೇರಿ ಜಾತ್ರೆಗೆ ಲಕ್ಷಾಂತರ ಜನರು ಸೇರುವುದರಿಂದ ಭಕ್ತರಿಗೆ ತೊಂದರೆ ಆಗದಂತೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ.
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ. ಎಸ್. ಪೊನ್ನಣ್ಣ ಭಾಗಮಂಡಲ ಭಗಂಡೇಶ್ವರ ದೇವಾಲಯ ಬಳಿಯ ಮುಡಿ ಕಟ್ಟಡದಲ್ಲಿ 'ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ' ಜಾತ್ರಾ ಮಹೋತ್ಸವದ ಸಂಬಂಧ ಪೂರ್ವಭಾವಿ ಸಭೆಯನ್ನು ನಡೆಸಿದರು.

ಶಾಸಕರು ಮಾತನಾಡಿ, ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಜಾತ್ರಾ ಮಹೋತ್ಸವವನ್ನು ಸಂಭ್ರಮ, ಸಡಗರದಿಂದ ರಾಜ್ಯದಲ್ಲಿ ಮಾದರಿಯಾಗಿ ಆಚರಿಸುವಂತಾಗಬೇಕು. ಆ ನಿಟ್ಟಿನಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ಕೊಟ್ಟರು.
ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಜಾತ್ರಾ ಮಹೋತ್ಸವವು ಕೊಡಗು ಜಿಲ್ಲೆಯಲ್ಲಿ ವಿಶಿಷ್ಟವಾದ ಹಬ್ಬವಾಗಿದೆ. ಆ ನಿಟ್ಟಿನಲ್ಲಿ ಉತ್ಸವವಾಗಿ ನಡೆಸುವಂತಾಗಬೇಕು. ಜಾತ್ರೆ ಸಂದರ್ಭದಲ್ಲಿ ಭಕ್ತಾಧಿಗಳಿಗೆ ಯಾವುದೇ ರೀತಿ ತೊಂದರೆಯಾಗದಂತೆ ಎಚ್ಚರವಹಿಸಬೇಕು. ಪೊಲೀಸ್, ಸಾರಿಗೆ, ಅರಣ್ಯ, ಲೋಕೋಪಯೋಗಿ, ಪಂಚಾಯತ್ ರಾಜ್, ಸೆಸ್ಕ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹೀಗೆ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ತಮ್ಮ ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಬೇಕು ಎಂದರು.
ವಿದ್ಯುತ್ ವ್ಯವಸ್ಥೆಗೆ ಸೂಚನೆ; ಶಾಸಕ ಎ. ಎಸ್. ಪೊನ್ನಣ್ಣ ಮಾತನಾಡಿ, "ಮಡಿಕೇರಿಯಿಂದ ತಲಕಾವೇರಿಯವರೆಗೆ, ನಾಪೋಕ್ಲುವಿನಿಂದ ಭಾಗಮಂಡಲ ಹಾಗೆಯೇ ಭಾಗಮಂಡಲ-ಕರಿಕೆ ರಸ್ತೆ ಸರಿಪಡಿಸಬೇಕು. ಗಿಡಗಂಟೆಗಳನ್ನು ಕಡಿಯಬೇಕು. ಜೊತೆಗೆ ರಸ್ತೆ ಬದಿ ಬೆಳೆದಿರುವ ಮರದ ಕೊಂಬೆಗಳನ್ನು ಕಡಿಯಬೇಕು" ಎಂದು ಸೂಚಿಸಿದರು.
"ಈ ಬಾರಿ ಪವಿತ್ರ ತೀರ್ಥೋದ್ಭವ ಮಧ್ಯರಾತ್ರಿ ಸಂಭವಿಸುವುದರಿಂದ ನಿರಂತರ ವಿದ್ಯುತ್ ಪೂರೈಕೆಗೆ ಕ್ರಮವಹಿಸಬೇಕು. ವಿದ್ಯುತ್ ಮಾರ್ಗಗಳನ್ನು ಸರಿಪಡಿಸಬೇಕು. ಅಗತ್ಯ ಬೆಳಕಿನ ವ್ಯವಸ್ಥೆಗೆ ಕ್ರಮಗಳನ್ನು ಕೈಗೊಳ್ಳಬೇಕು" ಎಂದು ಹೇಳಿದರು.
"ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತಾದಿಗಳಿಗೆ ಕುಡಿಯುವ ನೀರು ಪೂರೈಸಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ಜೊತೆಗೆ ಅಗತ್ಯ ಶೌಚಾಲಯ ವ್ಯವಸ್ಥೆ ಮಾಡಬೇಕು. ಹಾಗೆಯೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ತಜ್ಞ ವೈದ್ಯರನ್ನು ನಿಯೋಜಿಸಬೇಕು, ಆಂಬ್ಯುಲೆನ್ಸ್ ಸೇವೆಯನ್ನು ಒದಗಿಸುವಂತೆ" ಪೊನ್ನಣ್ಣ ತಿಳಿಸಿದರು.
ಶಾಸಕರು "ಪೊಲೀಸ್ ಇಲಾಖೆಯಿಂದ ಅಗತ್ಯ ಬಂದೋಬಸ್ತ್ ಮಾಡಿಕೊಳ್ಳಬೇಕು. ಭಕ್ತಾದಿಗಳಿಗೆ ಕಿರಿಕಿರಿ ಉಂಟಾಗದಂತೆ ಗಮನಹರಿಸಬೇಕು. ಹಾಗೆಯೇ ಹೆಚ್ಚುವರಿ ಬಸ್ ಸೇವೆಯನ್ನು ಕಲ್ಪಿಸಬೇಕು. ಜಾತ್ರಾ ಮಹೋತ್ಸವದಂದು ಭಾಗಮಂಡಲದಿಂದ ತಲಕಾವೇರಿವರೆಗೆ ಎಲ್ಲರಿಗೂ ಸರ್ಕಾರಿ ಸಾರಿಗೆ ಬಸ್‍ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಮಾಡುವಂತೆ" ಹೇಳಿದರು.
ಸಭೆಯಲ್ಲಿ ಮಾತನಾಡಿದ ಸೂರ್ತಲೆ ಕಾಶಿ, "ಪುರಾತನ ಕಾಲದಿಂದಲೂ ಇಲ್ಲಿನ ಸ್ಥಳೀಯರು ಕೇಶಮುಂಡನೆ ಮಾಡಿ, ಪಿಂಡ ಪ್ರಧಾನ ಮಾಡಿಕೊಂಡು ಬರುತ್ತಿದ್ದಾರೆ. ಕುಂಕುಮಾರ್ಚನೆ ಮಾಡಿ ಅಗಸ್ತ್ಯ ಮುನಿಗಳಿಗೆ ಪೂಜೆ ಸಲ್ಲಿಸುತ್ತಾರೆ. ಆದ್ದರಿಂದ ತಲಕಾವೇರಿಯ ಕುಂಡಿಕೆ ಬಳಿ ಕುಂಕುಮಾರ್ಚನೆಗೆ ಅವಕಾಶ ಮಾಡಬೇಕು" ಎಂದು ಮನವಿ ಮಾಡಿದರು.
ಎಂ. ಬಿ. ದೇವಯ್ಯ ಮಾತನಾಡಿ, "ತಲಕಾವೇರಿ ಜಾತ್ರಾ ಮಹೋತ್ಸವ ನಂತರ ಅಷ್ಟಮಂಗಳ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಸಾಧಕ ಬಾದಕಗಳ ಬಗ್ಗೆ ಚರ್ಚಿಸಿ ಪರಿಹರಿಸುವಂತಾಗಬೇಕು. ಹಾಗೆಯೇ 'ದುಡಿ' ನುಡಿಸುವವರಿಗೆ ತಲಕಾವೇರಿಗೆ ತೆರಳಲು ವಾಹನ ಪಾಸ್‍ಗೆ ವ್ಯವಸ್ಥೆ ಮಾಡಬೇಕು" ಎಂದು ಕೋರಿದರು.
ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ ಮಾತನಾಡಿ, "ಜಾತ್ರಾ ದಿನದಂದು ಭಾಗಮಂಡಲದಿಂದ ತಲಕಾವೇರಿಯವರೆಗೆ ಖಾಸಗಿ ಬಸ್‍ಗಳ ಓಡಾಟಕ್ಕೂ ಅವಕಾಶ ಮಾಡಬೇಕು" ಎಂದು ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮಾತನಾಡಿ, "ಈ ಬಾರಿ ರಾತ್ರಿ ವೇಳೆ ತೀರ್ಥೋದ್ಭವ ಸಂಭವಿಸುವುದರಿಂದ ಅಗತ್ಯ ಪೊಲೀಸ್ ಬಂದೋ ಬಸ್ತ್ ಮಾಡಲಾಗುವುದು. ತಣ್ಣಿಮಾನಿ-ತಲಕಾವೇರಿ ರಸ್ತೆ ಕಠಿಣವಾಗಿದೆ. ಕೋರಂಗಾಲ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಪರಿಶೀಲಿಸಲಾಗುವುದು. ಭಾಗಮಂಡಲ-ತಲಕಾವೇರಿ ರಸ್ತೆ ಬದಿ ವಿದ್ಯುತ್ ದೀಪಗಳನ್ನು ಅಳವಡಿಸಬೇಕು. ತಲಕಾವೇರಿಯಲ್ಲಿ ವಾಹನ ನಿಲುಗಡೆಗೆ ಅಗತ್ಯ ವ್ಯವಸ್ಥೆ ಮಾಡಲಾಗುವುದು"












Click it and Unblock the Notifications