ಕೊಡಗಿನಲ್ಲಿ ಜನ-ಜಾನುವಾರನ್ನು ಕಾಡಿದ್ದ ಹುಲಿ ದುರ್ಮರಣ

By: ಮಡಿಕೇರಿ ಪ್ರತಿನಿಧಿ
Subscribe to Oneindia Kannada

ಮಡಿಕೇರಿ, ಜನವರಿ 23: ದಕ್ಷಿಣ ಕೊಡಗಿನ ಬಾಳಲೆ ವ್ಯಾಪ್ತಿಯಲ್ಲಿ ಜಾನುವಾರುಗಳನ್ನು ಹಿಡಿದು ತಿನ್ನುತ್ತಾ, ಕಾರ್ಮಿಕನೊಬ್ಬನ ಮೇಲೆ ದಾಳಿ ಮಾಡುತ್ತಾ ಭಯ ಹುಟ್ಟಿಸಿದ್ದ ಹುಲಿ ಕಾದಾಟದಲ್ಲಿ ಸಾವನ್ನಪ್ಪಿರುವುದು ಗೋಚರಿಸಿದೆ.

ಸುಮಾರು ಹತ್ತು ವರ್ಷದ ಹುಲಿ ಇದಾಗಿದ್ದು, ಕಳೇಬರ ನಿಟ್ಟೂರು ಗ್ರಾಮದ ಚಕ್ಕೇರ ಅಯ್ಯಪ್ಪ ಅವರ ಗದ್ದೆ ಬಳಿಯ ಲಕ್ಷ್ಮಣ ತೀರ್ಥ ನದಿಯ ದಡದ ಪೈಸಾರಿ ಜಾಗದಲ್ಲಿ ದೊರೆತಿದೆ. ಈ ಹುಲಿ ನಾಗರಹೊಳೆ ಅಭಯಾರಣ್ಯದಿಂದ ಆಗಾಗ್ಗೆ ನಾಡಿನತ್ತ ಬಂದು ಜಾನುವಾರುಗಳನ್ನು ತಿಂದು ಹಾಕಿತ್ತು. ಇದರ ಸೆರೆಗಾಗಿ ಭಾರೀ ಕಾರ್ಯಾಚರಣೆ ನಡೆಸಲಾಗಿತ್ತು. ಹಲವೆಡೆ ಸಿಸಿಟಿವಿ ಅಳವಡಿಸಿ, ಡ್ರೋಣ್ ತಂತ್ರಜ್ಞಾನದ ಮೂಲಕ ಹಾಗೂ ಸಾಕಾನೆಗಳ ಮೂಲಕ ಕೂಬಿಂಗ್ ನಡೆಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಎಷ್ಟೇ ಕಷ್ಟಪಟ್ಟು ಹುಡುಕಿದರೂ ಹುಲಿಯ ಜಾಡು ಸಿಕ್ಕಿರಲಿಲ್ಲ.[ಹುಲಿ ಕಾರ್ಯಾಚರಣೆಯಲ್ಲಿ ಗುಂಡೇಟು: ಓರ್ವ ಸಾವು, ಇಬ್ಬರಿಗೆ ಗಾಯ]

Tiger bloody death of people and livestock in Kodagu

ಇದೇ ಜಾಗದಲ್ಲಿ ಬೇರೆ ಬೇರೆ ಕಡೆ ಹುಲಿಗಳು ಇರುವುದು ಪತ್ತೆಯಾಗಿದ್ದು ಹಲವರ ಕೊಟ್ಟಿಗೆಗೆ ನುಗ್ಗಿ ದಾಳಿ ಮಾಡಿದ್ದರೆ, ಕೆಲವರು ಸಾಕಿದ ಹಂದಿ ಮೇಲೆಯೂ ದಾಳಿ ನಡೆಸಿದ ಉದಾಹರಣೆಗಳು ಇವೆ. ಈಗ ಕಾಫಿ ಕೊಯ್ಲು ಆಗಿರುವುದರಿಂದ ತೋಟದಲ್ಲಿ ಕೆಲಸ ಮಾಡಲು ಮತ್ತು ಕಾಫಿ ಕಣದಲ್ಲಿ ರಾತ್ರಿ ಕಾವಲು ಕಾಯಲು ಕಾರ್ಮಿಕರು ಹೆದರುವಂತಾಗಿತ್ತು.

ಜನರಿಗೆ ಹಲವು ರೀತಿಯಲ್ಲಿ ಉಪಟಳ ನೀಡುತ್ತಿದ್ದ ಹುಲಿ ಇದೀಗ ಸಾವನ್ನಪ್ಪಿರುವುದು ಮತ್ತೊಂದು ಹುಲಿಯೊಂದಿಗೆ ನಡೆದ ಕಾದಾಟದಿಂದ ಎಂಬುದು ಇದೀಗ ಪತ್ತೆಯಾಗಿದೆ. ಇದಕ್ಕೆ ಸಾಕ್ಷಿಯಾಗಿ ದೇಹದ ಭಾಗಗಳಲ್ಲಿ ಮಾರಣಾಂತಿಕ ಗಾಯಗಳಾಗಿದ್ದು, ಒಂದು ಕಣ್ಣನ್ನು ಕಳೆದುಕೊಂಡಿದೆ. ಮುಳ್ಳು ಹಂದಿಯನ್ನು ಬೇಟೆಯಾಡುವಾಗ ಚುಚ್ಚಿದ ಮುಳ್ಳು ಕೂಡ ಇದೆ. ಮೈಮೇಲಿನ ಗಾಯದಿಂದ ಕೀವು ತುಂಬಿಕೊಂಡು ನಿತ್ರಾಣಗೊಂಡು ಸಾವನ್ನಪ್ಪಿದೆ ಎನ್ನಲಾಗಿದೆ.[ಗುಂಡ್ರೆ ಅರಣ್ಯದಲ್ಲಿ ಹಸಿವು ತಾಳಲಾರದೆ ಹುಲಿ ಸಾವು]

ನಾಗರಹೊಳೆಯ ಹುಲಿ ಯೋಜನೆಯ ನಿರ್ದೇಶಕ ಹಾಗೂ ಅರಣ್ಯ ಸಂರಕ್ಷಣಾಧಿಕಾರಿ ಮಣಿಕಂಠನ್ ಸಮ್ಮುಖದಲ್ಲಿ ವನ್ಯಜೀವಿ ವೈದ್ಯ ಡಾ. ಉಮಾಶಂಕರ್ ಹುಲಿಯ ಮರಣೋತ್ತರ ಪರೀಕ್ಷೆ ನಡೆಸಿದ್ದು, ಕಳೇಬರವನ್ನು ಸುಟ್ಟುಹಾಕಲಾಗಿದೆ. ಈ ಸಂದರ್ಭ ಕೊಡಗು ವೃತ್ತ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್, ಕೊಡಗು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿ ಕಾರಿ ಎಂ.ಎಂ.ಜಯ ಮುಂತಾದವರು ಇದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Tiger bloody death of people and livestock in Kodagu. It is said that the tiger was killed in the fight.
Please Wait while comments are loading...