Tala Kaveri: ನಾಳೆಯೇ ತಲಕಾವೇರಿಯಲ್ಲಿ ತೀರ್ಥೋದ್ಭವ: ಹೇಗಿದೆ ಅಂತಿಮ ಸಿದ್ಧತೆ?
ಮಡಿಕೇರಿ, ಅಕ್ಟೋಬರ್ 16: ಜೀವನದಿ ಕಾವೇರಿಯ ಉಗಮ ಸ್ಥಳವಾದ ತಲಕಾವೇರಿಯಲ್ಲಿ ಅ.17 ಬೆಳಿಗ್ಗೆ 7:40 ಗಂಟೆಗೆ ನಡೆಯಲಿರುವ ಪವಿತ್ರ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದೆ. ಜಿಲ್ಲಾಡಳಿತ ಈ ಪವಿತ್ರ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದು, ಈಗಾಗಲೇ ಭಾಗಮಂಡಲ ಹಾಗೂ ತಲಕಾವೇರಿಯಲ್ಲಿ ಹೂವಿನ ಅಲಂಕಾರ ನಡೆಯುತ್ತಿದೆ.
ತಲಕಾವೇರಿಯಲ್ಲಿ ಸ್ವಚ್ಛತಾ ಕಾರ್ಯ ಹಾಗೂ ವಿದ್ಯುತ್ ದೀಪ ಅಲಂಕಾರ, ಧ್ವನಿವರ್ಧಕ ಜೋಡಣೆ, ಪಾರ್ಕಿಂಗ್ ವ್ಯವಸ್ಥೆ, ಸಿದ್ಧತಾ ಕಾರ್ಯ ನಡೆದಿದ್ದು, ಭಕ್ತರು ದಂಡೇ ಹರಿದು ಬರುತ್ತಿದೆ. ಇನ್ನು ಜಿಲ್ಲಾ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಕಾರ್ಯಕ್ಕೆ ಸಿಬ್ಬಂದಿಗಳನ್ನು ಇಂದು ಮಧ್ಯಾಹ್ನದಿಂದಲೇ ನಿಯೋಜಿಸಲಾಗುತ್ತಿದೆ.

ಮುಜರಾಯಿ ಇಲಾಖೆಯ ಅಧೀನದಲ್ಲಿ ಬರುವ ದೇವಾಲಯದ ಆವರಣದಲ್ಲಿ ಪ್ರತಿ ವರ್ಷದಂತೆ ಕೊಡಗು ಏಕೀಕರಣ ರಂಗದ ವತಿಯಿಂದ ಒಂದು ತಿಂಗಳಗಳ ಕಾಲ ಉಪಹಾರ ಹಾಗೂ ಭೋಜನ ವ್ಯವಸ್ಥೆಗೆ ಸಕಲ ಸಿದ್ಧತೆಗಳು ನಡೆದಿದೆ. ವ್ಯವಸ್ಥಾಪನ ಸಮಿತಿ ವತಿಯಿಂದ ಭಾಗಮಂಡಲದಲ್ಲಿ ಅನ್ನಸಂತರ್ಪಣೆ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿದೆ.
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್ ಪೊನ್ನಣ್ಣ ಭೇಟಿ ನೀಡಿ ಸಿದ್ಧತಾ ಕಾರ್ಯಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಹೆಚ್ಚುವರಿ ಜಿಲ್ಲಾಧಿಕಾರಿಗಳು ಹಾಗೂ ಆಡಳಿತ ಅಧಿಕಾರಿಗಳಾದ ಐಶ್ವರ್ಯ ಹಾಗೂ ದೇವಾಲಯದ ಕಾರ್ಯನಿರ್ವಣಾಧಿಕಾರಿಗಳಾದ ಚಂದ್ರಶೇಖರ್, ಜಾತ್ರೆಗೆ ಸಕಲ ಸಿದ್ಧತೆಗಳನ್ನು ಕೈಗೊಂಡಿದ್ದಾರೆ. ತಲಕಾವೇರಿ ಭಾಗಮಂಡಲದಲ್ಲಿ ಅರ್ಚಕರ ತಂಡ ಧಾರ್ಮಿಕ ವಿಧಿ ವಿಧಾನಗಳನ್ನು ಅನುಷ್ಠಾನ ಗೊಳಿಸಲು ಸಿದ್ಧತೆ ನಡೆದಿದೆ.
ಕಾವೇರಿ ತೀರ್ಥ ರೂಪಿಣಿಯಾಗಿ ದರ್ಶನ ನೀಡಲಿರುವ ಸುಮಧುರ ಕ್ಷಣಕ್ಕೆ ಸಾಕ್ಷ್ಯಿಯಾಗಲು. ಯುವಕರ ತಂಡವೊಂದು ಕಳೆದ ನಾಲ್ಕು ವರ್ಷಗಳಿಂದ ವಿರಾಜಪೇಟೆಯಿಂದ ತಲಕಾವೇರಿಯವರೆಗೆ 62 ಕಿ.ಮೀ. ಪಾದಯಾತ್ರೆ ಮಾಡುತ್ತಿದ್ದು ಅದರಂತೆ ತಂಡ ಈಗಾಗಲೇ ಹೊರಟಿದೆ.

ವಿರಾಜಪೇಟೆಯಿಂದ ಬುಧವಾರ ಬೆಳಗಿನ ಜಾವ 5 ಗಂಟೆಗೆ ಪಾದಯಾತ್ರೆ ಮೂಲಕ ಹೊರಟಿದ್ದು ತಂಡದಲ್ಲಿ ಮುರುವಂಡ ಸಾವನ್ ಸೋಮಣ್ಣ, ಚೇಟ್ಟೊಳಿರ ಶರತ್ ಸೋಮಣ್ಣ, ಕಾಳಮಂಡ ರಾಬಿನ್ ಅಚ್ಚಮ್ಮ, ಮುಕ್ಕಾಟಿರ ಉತ್ತಪ್ಪ, ಅವರುಗಳನ್ನು ಒಳಗೊಂಡ ತಂಡದಲ್ಲಿ ವಿಶೇಷವಾಗಿ ಮುರುವಂಡ ಸ್ಪೂರ್ತಿ ಸೀತಮ್ಮ ನಾಪೋಕ್ಲು ವಿನಿಂದ, ಪೊರುಕೊಂಡ ಶಾನ್ ನಾಣಯ್ಯ ಮೊದಲಾದವರಿದ್ದಾರೆ.
ಇದೆಲ್ಲದರ ನಡುವೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ತೊಡಿಕಾನ ಶ್ರೀಮಲ್ಲಿಕಾರ್ಜುನ ದೇವಸ್ಥಾನದಿಂದಲೂ ಭಕ್ತರು ಬರಲಿದ್ದಾರೆ. ತೊಡಿಕಾನವು ತಲಕಾವೇರಿಯಿಂದ ಒಂಬತ್ತು ಕಿ.ಮೀ.ದೂರದಲ್ಲಿದ್ದು ಸಂಪರ್ಕಿಸುವ ರಸ್ತೆಯು ಅರಣ್ಯ ಪ್ರದೇಶಕ್ಕಾಗಿ ಹಾದು ಹೋಗುತ್ತಿದ್ದು, ಇದರಲ್ಲಿ ಎರಡು ಕಿ.ಮೀ. ವನ್ಯಜೀವಿ ವಿಭಾಗ, ಎರಡು ಕಿ.ಮೀ. ಮೀಸಲು ಅರಣ್ಯ ಪ್ರದೇಶದಲ್ಲಿ ಹಾದು ಹೋಗುತ್ತಿದೆ.
ತಲಕಾವೇರಿ ತೀರ್ಥೋದ್ಭವ ಸಂದರ್ಭದಲ್ಲಿ ಕಾವೇರಿ ತೀರ್ಥವನ್ನು ತೊಡಿಕಾನ ದೇವಸ್ಥಾನಕ್ಕೆಂದು ಮೊದಲು ತೆಗೆದಿಡಲಾಗುತ್ತದೆ. ಈ ತೀರ್ಥವನ್ನು ಕೊಂಡೊಯ್ಯಲು ಹಿಂದಿನ ಕಾಲದಲ್ಲಿ ಅರ್ಚಕರು ತಲಕಾವೇರಿಗೆ ಕಾಲ್ನಡಿಗೆಯಲ್ಲಿಯೇ ಬರುತ್ತಿದ್ದರಂತೆ ಆದರೆ ಈಗ ವಾಹನಗಳಲ್ಲಿ ತೊಡಿಕಾನ-ಪಟ್ಟಿ-ಭಾಗಮಂಡಲ ರಸ್ತೆಯಲ್ಲಿ ಬಂದು ಕಾವೇರಿ ತೀರ್ಥ ಕೊಂಡೊಯ್ದು ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರಿಗೆ ಅಭಿಷೇಕ ಮಾಡಲಾಗುತ್ತದೆ.
ಹಿಂದೆ ಕುಂದಾಪುರ ಮುಂತಾದ ಕಡೆಗಳಿಂದಲೂ ಭಕ್ತರು ಕಾವೇರಿ ಜಾತ್ರೆಗೆ ಕಾಲ್ನಡಿಗೆಯಲ್ಲಿ ಬರುತ್ತಿದ್ದರಂತೆ ಹಾಗೆ ಬರುತ್ತಿದ್ದವರು ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ರಾತ್ರಿ ಕಳೆದು, ದೇವರ ದರ್ಶನ ಹಾಗೂ ವಿಶ್ರಾಂತಿ ಪಡೆದು ಆ ನಂತರ ತೊಡಿಕಾನ-ಪಟ್ಟಿ-ಭಾಗಮಂಡಲ ರಸ್ತೆಯಲ್ಲಿ ಪಾದಯಾತ್ರೆ ಮೂಲಕ ತಲಕಾವೇರಿಯನ್ನು ತಲಪುತ್ತಿದ್ದರು ಎಂದು ಹೇಳಲಾಗುತ್ತಿದೆ. ಇವತ್ತಿಗೂ ತಲಕಾವೇರಿ ತೀರ್ಥೋದ್ಭವಕ್ಕೂ ಮುನ್ನಾ ದಿನ ತೊಡಿಕಾನ ದೇವಸ್ಥಾನದಲ್ಲಿ ಕೊಪ್ಪರಿಗೆ ಏರಿಸುವ ಸಂಪ್ರದಾಯವಿರುವುದನ್ನು ಕಾಣಬಹುದಾಗಿದೆ.












Click it and Unblock the Notifications