ಇಂದು ಮುಂಜಾನೆ 12.57ಕ್ಕೆ ತೀರ್ಥರೂಪಿಣಿಯಾಗಿ ಉಕ್ಕಿದ ಕಾವೇರಿ
ಮಡಿಕೇರಿ, ಅಕ್ಟೋಬರ್ 18: ತಂಪಾದ ಹವಾಗುಣ, ವೇದ ಮಂತ್ರ, ಸಹಸ್ರಾರು ಭಕ್ತಾದಿಗಳ ಜಯ ಘೋಷದ ನಡುವೆ ದಕ್ಷಿಣ ಕಾಶಿ ತಲಕಾವೇರಿಯಲ್ಲಿ ಜೀವನದಿ ಕಾವೇರಿಯು ಭಕ್ತರಿಗೆ ತೀರ್ಥರೂಪಿಣಿಯಾಗಿ ಒಲಿದಳು.
ಸಹಸ್ರಾರು ಭಕ್ತರು ಸಾಕ್ಷಿಯಾದ ಈ ಅಭೂತಪೂರ್ವ ಕ್ಷಣವು ನಿಗದಿತ ಅವಧಿಗಿಂತ ಎರಡು ನಿಮಿಷ ಮೊದಲೇ ನಡೆಯಿತು. ಭಾರತೀಯ ಕಾಲಮಾನ ರಾತ್ರಿ 12.59ಕ್ಕೆ ತೀರ್ಥೋದ್ಭವ ಆಗುತ್ತದೆಂದು ನಿರೀಕ್ಷಿಸಲಾಗಿದ್ದು ಎರಡು ನಿಮಿಷ ಮೊದಲೇ, ಅಂದರೆ 12.57ಕ್ಕೆ ತೀರ್ಥೋದ್ಭವ ಆಯಿತು. ಕ್ಷೇತ್ರದ ಅರ್ಚಕರು ದೇವಿಗೆ ವಿವಿಧ ಪೂಜೆ ಪುನಸ್ಕಾರಗಳನ್ನು ಮಾಡಿದರು. ಬಳಿಕ ನೆರೆದಿದ್ದ ಭಕ್ತರಿಗೆ ತೀರ್ಥ ಪ್ರೋಕ್ಷಣೆ ಮಾಡಿದರು. ತೀರ್ಥ ಕೊಂಡೊಯ್ಯಲು ಬಂದಿದ್ದವರು ಚಳಿಯ ನಡುವೆಯೂ ಸ್ನಾನಕೊಳಕ್ಕೆ ಧುಮುಕಿ ತೀರ್ಥ ಕೊಂಡೊಯ್ದರು. ಕಾವೇರಿ ಕೊಡಗಿನ ಕುಲದೇವಿ. ಹೀಗಾಗಿ, ಆಕೆಯ ತೀರ್ಥೋದ್ಭವ ಸಂಭ್ರಮಕ್ಕೆ ಮಳೆ, ಚಳಿಯನ್ನೂ ಲೆಕ್ಕಿಸದೇ ಸ್ಥಳೀಯ ಭಕ್ತರೂ ಸೇರಿದಂತೆ ಹೊರಗಿನವರೂ ಸಾಕ್ಷಿಯಾದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಗುರುವಾರ ಸಂಜೆಯಿಂದಲೇ ಭಕ್ತಿಗೀತೆ ಗಾಯನ ನಡೆಯಿತು. ಸ್ನಾನಕೊಳದ ಬಳಿ ನೂಕುನುಗ್ಗಲು ತಡೆಯಲು ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿತ್ತು. ಇದೇ ಮೊದಲ ಬಾರಿಗೆ ಪ್ಲಾಸ್ಟಿಕ್ ಕೊಡ, ಪ್ಲಾಸ್ಟಿಕ್ ಬಾಟಲ್ ನಲ್ಲಿ ತೀರ್ಥ ಕೊಂಡೊಯ್ಯಲು ಅವಕಾಶ ನೀಡಿರಲಿಲ್ಲ. ಆದರೂ, ಭಕ್ತರು ಪ್ಲಾಸ್ಟಿಕ್ ಕೊಡ ಹಾಗೂ ಪ್ಲಾಸ್ಟಿಕ್ ಬಾಟಲ್ ತಂದಿದ್ದರು. ಆ ಭಕ್ತರಿಗೆ ಸ್ಟೀಲ್ ಡ್ರಂನಲ್ಲಿ ತೀರ್ಥ ಇಡಲಾಗಿತ್ತು.

ಬ್ರಹ್ಮಕುಂಡಿಕೆಯ ಬಳಿ ನಡೆಯುವ ಪೂಜಾ ಕಾರ್ಯಕ್ರಮಗಳನ್ನು ಎಲ್‌ಇಡಿ ಪರದೆಯ ಮೂಲಕ ನೇರ ಪ್ರಸಾರ ಮಾಡಲಾಯಿತು. ಸಹಸ್ರಾರು ಭಕ್ತರು ಕುಳಿತ ಸ್ಥಳದಲ್ಲೇ ಧಾರ್ಮಿಕ ವಿಧಿವಿಧಾನ ವೀಕ್ಷಿಸಿದರು. ಕೊಡಗು ಏಕೀಕರಣ ರಂಗದಿಂದ ಅನ್ನದಾನ ವ್ಯವಸ್ಥೆ ಮಾಡಲಾಗಿದ್ದು ಇಂದಿನಿಂದ ಒಂದು ತಿಂಗಳು ಕ್ಷೇತ್ರಕ್ಕೆ ಬರುವ ಭಕ್ತರಿಗೆ ಅನ್ನಸಂತರ್ಪಣೆ ನಡೆಯಲಿದೆ.
ತೀರ್ಥೋದ್ಭವಕ್ಕೆ ಸಾಕ್ಷಿಯಾಗಲು ಸಚಿವರಾದ ಆರ್.ಅಶೋಕ್, ವಿ.ಸೋಮಣ್ಣ ಬಂದಿದ್ದರು. ಬಿಬಿಎಂಪಿ ಮೇಯರ್ ಗೌತಮ್ ಜೈನ್, ಶಾಸಕರಾದ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮೇಯರ್ ಗೌತಮ್ ಜೈನ್ ಅವರು ತಲಕಾವೇರಿ ಕ್ಷೇತ್ರದ ಅಭಿವೃದ್ಧಿಗೆ ಒಂದು ಕೋಟಿ ರೂಪಾಯಿಗಳ ನೆರವನ್ನು ಪಾಲಿಕೆಯಿಂದ ನೀಡುವುದಾಗಿ ಭರವಸೆ ನೀಡಿದರು.
ತೀರ್ಥೋದ್ಭವದಿಂದ ಒಂದು ತಿಂಗಳ ಕಾಲ ಇಲ್ಲಿ ಪುಣ್ಯ ಸ್ನಾನ ಮಾಡಲು ಸಾವಿರಾರು ಭಕ್ತರು ಆಗಮಿಸಲಿದ್ದಾರೆ.












Click it and Unblock the Notifications