ಶ್ರೀರಂಗಪಟ್ಟಣ-ಕುಶಾಲನಗರ; 4 ಪಥದ ಹೆದ್ದಾರಿ ಕಾಮಗಾರಿ ಅಪ್‌ಡೇಟ್
ಮಡಿಕೇರಿ, ಡಿಸೆಂಬರ್ 11: ಕೊಡಗು ಮತ್ತು ಮಂಡ್ಯದ ಜನರಿಗೆ ಪ್ರಮುಖವಾದ ಮಾಹಿತಿಯೊಂದಿದೆ. ಶ್ರೀರಂಗಪಟ್ಟಣ ಮತ್ತು ಕುಶಾಲನಗರ ನಡುವಿನ ಚತುಷ್ಪಥ ರಸ್ತೆ ಯೋಜನೆ ಘೋಷಣೆಯಾಗಿದ್ದರೂ ಕಾಮಗಾರಿಯು ಇನ್ನೂ ಆರಂಭವಾಗಿಲ್ಲ. ಸುಮಾರು 4,130 ಕೋಟಿ ರೂ.ಗಳು ಯೋಜನೆ ಇದಾಗಿದ್ದು, ಈ ಮಹತ್ವದ ಯೋಜನೆ ಕುರಿತು ಈಗ ಅಪ್‌ಡೇಟ್ ಒಂದು ಸಿಕ್ಕಿದೆ.
ಕೊಡಗು-ಮೈಸೂರು ಲೋಕಸಭಾ ಸದಸ್ಯ ಯದುವೀರ ಒಡೆಯರ್ ಮಡಿಕೇರಿಯಲ್ಲಿ ಸಂಸದರ 'ಸೇವಾರಾಂಭ' ಕಛೇರಿಯನ್ನು ಉದ್ಘಾಟಿಸಿದರು. ಬಳಿಕ ಶ್ರೀರಂಗಪಟ್ಟಣ ಮತ್ತು ಕುಶಾಲನಗರ 4 ಪಥದ ರಸ್ತೆ ಯೋಜನೆಯ ಕುರಿತು ಮಾಹಿತಿಯನ್ನು ನೀಡಿದ್ದಾರೆ.

ಕಾಮಗಾರಿ ಶೀಘ್ರವೇ ಆರಂಭ: ಶ್ರೀರಂಗಪಟ್ಟಣ ಮತ್ತು ಕುಶಾಲನಗರ ನಡುವಿನ ಚತುಷ್ಪಥ ರಸ್ತೆ ಯೋಜನೆ ಕಾಮಗಾರಿ ಮುಂದಿನ ಮೂರು ತಿಂಗಳಿನಲ್ಲಿ ಆರಂಭವಾಗಲಿದೆ. ಈ ರಸ್ತೆ ಯೋಜನೆಯಿಂದ ಮೈಸೂರು-ಕೊಡಗು ಮಾರ್ಗದಲ್ಲಿ ಸದ್ಯ ಇರುವ ಸಂಚಾರ ದಟ್ಟಣೆ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ.
92 ಕಿ. ಮೀ.ಗಳ ಚತುಷ್ಪಥ ರಸ್ತೆ ಯೋಜನೆಯನ್ನು ಸುಮಾರು 4,130 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುತ್ತದೆ. ಶ್ರೀರಂಗಪಟ್ಟಣ, ಹುಣಸೂರು, ಪಿರಿಯಾಪಟ್ಟಣ ಮೂಲಕ ಕುಶಾಲನಗರಕ್ಕೆ ಈ ರಸ್ತೆ ಸಂಪರ್ಕವನ್ನು ಕಲ್ಪಿಸುತ್ತದೆ.
ಜುಲೈನಲ್ಲಿ ಸಂಸದ ಯದುವೀರ್ ಒಡೆಯರ್ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಭೇಟಿ ಮಾಡಿದ್ದರು. ಈ ಯೋಜನೆ ಕುರಿತು ವಿವರಣೆ ನೀಡಿದ್ದರು. ಈ ಯೋಜನೆಗೆ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ 2023ರ ಮಾರ್ಚ್‌ನಲ್ಲಿ ಶಂಕು ಸ್ಥಾಪನೆ ಮಾಡಿದ್ದಾರೆ. ಈ ಯೋಜನೆಗೆ 547 ಹೆಕ್ಟೇರ್ ಭೂಮಿ ಅಗತ್ಯವಿದ್ದು, ಭೂ ಸ್ವಾಧೀನಕ್ಕೆ ಸುಮಾರು 1,100 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.
ಈ ರಸ್ತೆ ಯೋಜನೆ ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿ ಬಳಿ ಆರಂಭವಾಗಲಿದೆ. ಕುಶಾಲನಗರದ ಗುಡ್ಡೆಹೊಸೂರು ಬಳಿ ಅಂತ್ಯವಾಗಲಿದೆ. ಈ ಯೋಜನೆಯನ್ನು ವಿಭಾಗವಾಗಿ ಮಾಡಿಕೊಂಡು ಕಾಮಗಾರಿ ಕೈಗೊಳ್ಳಲಾಗುತ್ತದೆ. ಪಿ. ಅಗ್ರಹಾರ, ಪಾಲಹಳ್ಳಿ, ಶ್ರೀರಂಗಪಟ್ಟಣ, ಹುಣಸೂರು, ಪಿರಿಯಾಪಟ್ಟಣ ಮೂಲಕ ರಸ್ತೆ ಕುಶಾಲನಗರಕ್ಕೆ ತಲುಪಲಿದೆ.
ಶ್ರೀರಂಗಪಟ್ಟಣ ಮತ್ತು ಕುಶಾಲನಗರ ನಡುವಿನ ಚತುಷ್ಪಥ ರಸ್ತೆ ಯೋಜನೆ ಕೊಡಗು ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಲಿದೆ. ಅದರಲ್ಲೂ ಮೈಸೂರು-ಕೊಡಗು ರಸ್ತೆಯ ಮೇಲೆ ಈಗಿರುವ ಒತ್ತಡವನ್ನು ಕಡಿಮೆ ಮಾಡಲಿದೆ.
ಶಂಕು ಸ್ಥಾಪನೆ ಮಾಡಿದ್ದ ಮೋದಿ: 2023ರ ಮಾರ್ಚ್‌ನಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಉದ್ಘಾಟನೆ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಶ್ರೀರಂಗಪಟ್ಟಣ-ಕುಶಾಲನಗರ ಚತುಷ್ಪಥ ರಸ್ತೆ ಯೋಜನೆಗೆ ಶಂಕು ಸ್ಥಾಪನೆ ಮಾಡಿದ್ದರು. ಈ ಹಿಂದೆ ಮೈಸೂರು-ಕೊಡಗು ಸಂಸದರಾಗಿದ್ದ ಪ್ರತಾಪ್ ಸಿಂಹ ಅವರ ಕನಸಿನ ಯೋಜನೆಗಳಲ್ಲಿ ಇದೂ ಸಹ ಒಂದಾಗಿದೆ.
ಈ ಚತುಷ್ಪಥ ರಸ್ತೆ ಕಾಮಗಾರಿಯು ಬಹಳ ಹಿಂದೆಯೇ ಆರಂಭವಾಗಬೇಕಿತ್ತು. ಆದರೆ ವಿವಿಧ ಕಾರಣಗಳಿಂದ ಕಾಮಗಾರಿ ವಿಳಂಬವಾಗಿದೆ. ಮೈಸೂರು-ಮಡಿಕೇರಿ ಮಾರ್ಗದಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿರುವ ಹಿನ್ನೆಲೆ ಚತುಷ್ಪಥ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಸಾರ್ವಜನಿಕರ ಅನುಕೂಲಕ್ಕೆ ಚತುಷ್ಪಥ ರಸ್ತೆ ನಿರ್ಮಾಣ ಮಾಡಲಾಗುತ್ತದೆ. ಆ ನಿಟ್ಟಿನಲ್ಲಿ ಶ್ರೀರಂಗಪಟ್ಟಣದಿಂದ ಕುಶಾಲನಗರವರೆಗೆ ರಸ್ತೆ ಕಾಮಗಾರಿ ಕೈಗೊಳ್ಳಲಾಗುವುದು ಸಂಸದರು ಹೇಳಿದ್ದರು.












Click it and Unblock the Notifications