ಇನ್ಮುಂದೆ ಕೊಡಗಿನಲ್ಲಿ ಆಟೋಟಗಳದ್ದೇ ದರ್ಬಾರ್..ಏಕೆ ಗೊತ್ತಾ? ವಿವರ ತಿಳಿಯಿರಿ

ಮಡಿಕೇರಿ, ಫೆಬ್ರವರಿ 22: ಬೇಸಿಗೆ ಬಂತೆಂದರೆ ಕೊಡಗಿನಲ್ಲಿ ಕಾಫಿ, ಕರಿಮೆಣಸು ಕೊಯ್ಲು ಮುಗಿದು ಜನ ಒಂದಷ್ಟು ದಿನಗಳ ಕಾಲ ಆರಾಮಾಗಿದ್ದು, ಮದುವೆ, ನಾಮಕರಣ, ಹಬ್ಬ ಹೀಗೆ ವಿವಿಧ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವ ಸಮಯ. ಆದರೆ ಇದರ ನಡುವೆಯೂ ತಮ್ಮ ಊರುಗಳ ಮೈದಾನಗಳಲ್ಲಿ ವಿವಿಧ ಕ್ರೀಡೆಗಳನ್ನು ಆಯೋಜಿಸಿ ಸಂಭ್ರಮಿಸುವುದು ಇಲ್ಲಿ ಹಾಸುಹೊಕ್ಕಾಗಿದೆ.

ಕೊಡಗಿಗೂ ಕ್ರೀಡೆಗೂ ಅವಿನಾಭಾವ ಸಂಬಂಧವಿದ್ದು ವರ್ಷಪೂರ್ತಿ ಇಲ್ಲಿ ಕ್ರೀಡಾಚಟುವಟಿಕೆಗಳು ನಡೆಯುತ್ತವೆ. ಅದರಲ್ಲೂ ಬೇಸಿಗೆಯ ಸಮಯದಲ್ಲಿ ವಿವಿಧ ಜಾತಿ, ಜನಾಂಗಗಳು ತಮಗೆ ಅನುಕೂಲವಾಗುವ ಕ್ರೀಡೆಗಳನ್ನು ಆಯೋಜಿಸಿ ಸಂಭ್ರಮಿಸುವುದು, ಆ ಮೂಲಕ ತಮ್ಮ ಸಮುದಾಯದ ಜನರ ನಡುವೆ ಉತ್ತಮ ಬಾಂಧವ್ಯವನ್ನು ಬೆಸೆಯುವುದು ಇಲ್ಲಿನ ವಿಶೇಷತೆಯಾಗಿದೆ.

Sports Are Started In The Towns Of Kodagu District

ಹಾಗೆನೋಡಿದರೆ ವರ್ಷಪೂರ್ತಿ ಅದರಲ್ಲೂ ಸುರಿಯುವ ಮಳೆಯಲ್ಲಿಯೂ ಕೆಸರು ಗದ್ದೆಗಳಲ್ಲಿ ಕ್ರೀಡಾಕೂಟ ನಡೆಸುವುದು ಇತ್ತೀಚೆಗಿನ ದಶಕಗಳಲ್ಲಿ ಟ್ರೆಂಡ್ ಆಗಿದೆ. ಇದು ಸಮುದಾಯಕ್ಕಿಂತ ಹೆಚ್ಚಾಗಿ ಸಾರ್ವಜನಿಕವಾಗಿ ನಡೆಯುತ್ತದೆ. ಆದರೆ ಬೇಸಿಗೆಯಲ್ಲಿ ನಡೆಯುವ ಕ್ರೀಡಾಕೂಟಗಳ ಪೈಕಿ ಹೆಚ್ಚಿನ ಕ್ರೀಡೆಗಳು ಕುಟುಂಬ, ಜಾತಿ, ಸಮುದಾಯ ಆಧಾರಿತವಾಗಿ ನಡೆಯುತ್ತದೆ.

ಜಿಲ್ಲೆಯಲ್ಲಿ ಶುರುವಾಗಲಿದೆ ಕ್ರೀಡಾಚಟುವಟಿಕೆ

ಎಲ್ಲ ಕ್ರೀಡಾ ಚಟುವಟಿಕೆಗಳಿಗೆ ಈಗ ಆರಂಭ ದೊರೆತಿದ್ದು, ಮೇ ವೇಳೆಗೆ ಕೊನೆಗೊಳ್ಳಲಿವೆ. ಸದ್ಯಕ್ಕೆ ಕಾಫಿ ಕೊಯ್ಲು ಮತ್ತು ಕರಿಮೆಣಸು ಕೊಯ್ಲು ಇನ್ನೂ ಮುಗಿಯದ ಕಾರಣ ಪೂರ್ಣ ಪ್ರಮಾಣದಲ್ಲಿ ಜನರು ತೊಡಗಿಸಿಕೊಂಡಂತೆ ಕಾಣಿಸುತ್ತಿಲ್ಲ. ಆದರೆ ಮಾರ್ಚ್ ತಿಂಗಳ ಮೊದಲ ವಾರದಲ್ಲೆಲ್ಲ ಕೊಯ್ಲು ಮುಗಿದು ಜನ ಸ್ವಲ್ಪ ಮಟ್ಟಿಗೆ ಬಿಡುವು ಆಗುವುದರಿಂದ ಕ್ರೀಡಾ ಚಟುವಟಿಕೆಗೆ ವೇಗ ಸಿಕ್ಕಲಿದೆ.

ಕೊಡವ ಕಪ್, ಗೌಡ ಕಪ್, ಮುಸ್ಲಿಂ ಕಪ್ ಹೀಗೆ ವಿವಿಧ ಜಾತಿ, ಜನಾಂಗಗಳು ವಿವಿಧ ಕ್ರೀಡಾಕೂಟಗಳು ನಡೆಯಲಿವೆ. ಹಾಕಿ ಕ್ರಿಕೆಟ್ ಜತೆಗೆ ವಾಲಿಬಾಲ್, ಹಗ್ಗ ಜಗ್ಗಾಟ, ಸೇರಿದಂತೆ ಗ್ರಾಮೀಣ ಕ್ರೀಡೆಗಳಿಗೂ ಆದ್ಯತೆ ಸಿಗಲಿದೆ. ಕುಟುಂಬ ಮತ್ತು ಜಾತಿ, ಸಮುದಾಯದ ಕ್ರೀಡಾಕೂಟಗಳ ನಡುವೆ ಕೆಲವು ಸಂಘ ಸಂಸ್ಥೆಗಳು ಸಾರ್ವಜನಿಕವಾಗಿ ಜಿಲ್ಲಾ ಹಾಗೂ ರಾಜ್ಯಮಟ್ಟದ ಕ್ರೀಡಾಕೂಟಗಳನ್ನು ಏರ್ಪಡಿಸಲಿವೆ.

Sports Are Started In The Towns Of Kodagu District

ದಾಖಲೆ ಸೃಷ್ಟಿಸಿದ ಕೊಡವ ಹಾಕಿ

ಕೆಲವು ಗ್ರಾಮಾಂತರ ಪ್ರದೇಶಗಳ ಸಂಘಸಂಸ್ಥೆಗಳು ವಾಲಿಬಾಲ್, ಕಬಡ್ಡಿ ಸೇರಿದಂತೆ ಹಲವು ರೀತಿಯ ಗ್ರಾಮೀಣ ಕ್ರೀಡೆಗಳನ್ನು ನಡೆಸುತ್ತಿವೆ. ಇವುಗಳಿಗೆ ಅಬ್ಬರದ ಪ್ರಚಾರ ಸಿಗದ ಕಾರಣ ಅಂತಹ ಪಂದ್ಯಾವಳಿಗಳು ಬೆಳಕಿಗೆ ಬಾರದೆ ಗ್ರಾಮಕ್ಕಷ್ಟೆ ಸೀಮಿತವಾಗಿ ನಡೆಯುತ್ತಿವೆ. ಇದೆಲ್ಲದರ ನಡುವೆ ಕೊಡವ ಕುಟುಂಬಗಳ ನಡುವೆ ನಡೆಯುವ ಹಾಕಿ ಪಂದ್ಯಾವಳಿ ಕೊಡಗಿನ ಮಟ್ಟಿಗೆ ಹಬ್ಬವಾಗಿ ಗಮನಸೆಳೆಯಲಿದೆ. ಬೆಳ್ಳಿ ಹಬ್ಬದ ಸಂಭ್ರಮದತ್ತ ಈ ಕೊಡವ ಹಾಕಿ ಪಂದ್ಯಾವಳಿ ದಾಪುಗಾಲಿಟ್ಟಿದೆ.

ಇದಿಷ್ಟೇ ಅಲ್ಲದೆ ದ್ವಿಚಕ್ರ ಹಾಗೂ ನಾಲ್ಕುಚಕ್ರ ವಾಹನಗಳ ಆಟೋಕ್ರಾಸ್ ಸೇರಿದಂತೆ ಹಲವು ಕ್ರೀಡಾಕೂಟಗಳು ಮುಂದಿನ ದಿನಗಳಲ್ಲಿ ನಡೆಯಲಿದ್ದು, ಕ್ರೀಡಾ ಸಂಭ್ರಮದಲ್ಲಿ ಜಿಲ್ಲೆಯ ಜನ ಮಿಂದೇಳಲಿದ್ದಾರೆ. ಕೆಲಸ ಕಾರ್ಯಗಳ ಒತ್ತಡದ ನಡುವೆಯೂ ಪಾಲ್ಗೊಂಡು ನಾವು ವೀರ ಶೂರರು ಮಾತ್ರವಲ್ಲ ಕ್ರೀಡಾಪ್ರೇಮಿಗಳು ಕೂಡ ಹೌದು ಎಂಬುದನ್ನು ನಿರೂಪಿಸುತ್ತಾ ಬಂದಿದ್ದಾರೆ.

ಮಕ್ಕಳು ಮಹಿಳೆಯರಿಗೂ ಅವಕಾಶ

ಕೊಡಗಿನಲ್ಲಿ ಕ್ರೀಡಾಚಟುವಟಿಕೆ ಇವತ್ತು ಹುಟ್ಟಿಕೊಂಡಿದ್ದಲ್ಲ. ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ವರ್ಷದ ಎಲ್ಲ ದಿನಗಳಲ್ಲಿಯೂ ಗ್ರಾಮದ ಹಬ್ಬ, ಊರ ಹಬ್ಬ ಹೀಗೆ ಎಲ್ಲ ಸಂದರ್ಭಗಳಲ್ಲಿಯೂ ಮಕ್ಕಳಿಗೆ, ಪುರುಷರಿಗೆ, ಮಹಿಳೆಯರಿಗೆ ಪ್ರತ್ಯೇಕವಾದ ಕ್ರೀಡೆಗಳನ್ನು ನಡೆಸುತ್ತಾ ಬಂದಿರುವುದನ್ನು ನಾವು ಕಾಣಬಹುದಾಗಿದೆ. ಚಿಕ್ಕಂದಿನಿಂದಲೇ ಮಕ್ಕಳಲ್ಲಿ ಶಕ್ತಿ, ಛಲ, ಜಾಣ್ಮೆ ಪರೀಕ್ಷಿಸಲು ಅಂಬುಕಾಯಿ (ತೆಂಗಿನಕಾಯಿ ಕೀಳುವ) ಸ್ಪರ್ಧೆ ನಡೆಸಲಾಗುತ್ತಿತ್ತು.

Sports Are Started In The Towns Of Kodagu District

ಇನ್ನು ಹಳ್ಳಿ ಮಕ್ಕಳಿಗಾಗಿ ಕಾಲಿಗೆ ಯಾವುದೇ ಶೂ ಹಾಕದೆ ಹತ್ತಾರು ಕಿ.ಮೀ. ದೂರವನ್ನು ಕ್ರಮಿಸುವ ಗುಡ್ಡಗಾಡು ಓಟದ ಸ್ಪರ್ಧೆಯನ್ನು ಹಿಂದೆ ನಡೆಸಲಾಗುತ್ತಿತ್ತು. ಬೇಸಿಗೆಯಲ್ಲಿ ಮೈದಾನಗಳಲ್ಲಿ ಕ್ರೀಡಾ ಕೂಟ ನಡೆದರೆ ಮಳೆಗಾಲದಲ್ಲಿ ಸುರಿಯುವ ಮಳೆಗೆ ಕೈಕಟ್ಟಿ ಕೂರದೆ ಕೆಸರು ಗದ್ದೆಯಲ್ಲಿಯೇ ಓಟ, ಹಗ್ಗಜಗ್ಗಾಟ, ವಾಲಿಬಾಲ್ ಸೇರಿದಂತೆ ಹಲವು ಕ್ರೀಡೆಗಳನ್ನು ಏರ್ಪಡಿಸಿ ಮನರಂಜನೆ ಪಡೆಯುತ್ತಿದ್ದರು. ಅದು ಮುಂದುವರೆಯುತ್ತಾ ಸಾಗುತ್ತಿರುವುದನ್ನು ನಾವು ನೋಡಬಹುದಾಗಿದೆ.

ಎಲ್ಲೆಡೆ ಮನೆ ಮಾಡಿದ ಸಂಭ್ರಮ

ಒಟ್ಟಾರೆ ಕೊಡಗಿನಲ್ಲಿ ಕ್ರೀಡೆಯೇ ಜೀವಾಳ ಎಂಬಂತೆ ಅದನ್ನು ನಡೆಸಿಕೊಂಡು ಬರಲಾಗುತ್ತಿದೆ. ಕೃಷಿ ಕೆಲಸದಲ್ಲಿ ನಿರತರಾದವರು ತಮ್ಮ ಕೃಷಿ ಕೆಲಸದ ನಡುವೆ ಸಮಯ ಮಾಡಿಕೊಂಡರೆ, ಜಿಲ್ಲೆಯಿಂದ ಹೊರಹೋಗಿ ಕೆಲಸ ಮಾಡುವವರು ಸಮಯ ಮಾಡಿಕೊಂಡು ಬಂದು ಕ್ರೀಡಾಕೂಟಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಆ ಮೂಲಕ ಎಲ್ಲರೊಂದಿಗೆ ಬೆರೆತು ಸಂಭ್ರಮಿಸುತ್ತಾರೆ. ಒಟ್ಟಾರೆ ಕ್ರೀಡಾಸ್ಪೂರ್ತಿ ತುಂಬುತ್ತಾ ಸಂಬಂಧಗಳನ್ನು ಬೆಸೆಯುತ್ತಾ ಮುನ್ನಡೆಯುತ್ತಿರುವ ಕಾರಣದಿಂದ ಪ್ರತಿವರ್ಷವೂ ಕೊಡಗಿನಲ್ಲಿ ಕ್ರೀಡಾ ಸಂಭ್ರಮ ಮನೆ ಮಾಡುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+