ಪುಂಡರಿಗೂ ಬಿಜೆಪಿ ಅಪರೇಷನ್ ಕಮಲ ಮಾಡುತ್ತಿದೆಯೇ? ಸಿದ್ದರಾಮಯ್ಯ ವ್ಯಂಗ್ಯ
ಮಡಿಕೇರಿ, ಆಗಸ್ಟ್ 20: ಇಲ್ಲಿಯವರೆಗೂ ಶಾಸಕರನ್ನು ಅಪರೇಷನ್ ಕಮಲದ ಮೂಲಕ ಪಕ್ಷಕ್ಕೆ ಸೆಳೆದುಕೊಳ್ಳುತ್ತಿದ್ದ ಬಿಜೆಪಿ ಪುಂಡರನ್ನೂ ಕೂಡ ಅಪರೇಷನ್ ಕಮಲದ ಮೂಲಕ ಪಕ್ಷಕ್ಕೆ ಸೇರಿಸಿಕೊಳ್ಳಲು ಶುರು ಮಾಡಿದಿಯೇ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಡಿಕೇರಿ ಘಟನೆ ಉದಾಹರಣೆ ನೀಡಿ ವ್ಯಂಗ್ಯ ಮಾಡಿ ಬಿಜೆಪಿ ಕಾಲೆಳೆದಿದ್ದಾರೆ.
ಗುರುವಾರ ಸಿದ್ದರಾಮಯ್ಯ ಕೊಡಗು ಪ್ರವಾಸಕ್ಕೆ ತೆರಳಿದ್ದ ವೇಳೆ ಹಿಂದು ಸಂಘಟನೆ ಹಾಗೂ ಬಿಜೆಪಿ ಕಾರ್ಯಕರ್ತರು ಗೋ ಬ್ಯಾಕ್ ಸಿದ್ದರಾಮಯ್ಯ ಎಂದು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಪ್ರತಿಭಟನಾಕಾರರಲ್ಲಿ ಕೆಲವರು ಸಿದ್ದರಾಮಯ್ಯರ ಕಾರಿಗೆ ಮೊಟ್ಟೆ ಎಸೆದಿದ್ದರು. ಈ ಘಟನೆ ರಾಜ್ಯಾದ್ಯಂತ ದೊಡ್ಡ ಸುದ್ದಿಯಾಗಿದ್ದು, ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದರೆ, ಸಿಎಂ ಸೇರಿ ಬಿಜೆಪಿ ನಾಯಕರು ಕೂಡ ಇಂತಹ ಘಟನೆಯನ್ನೂ ಸಹಿಸಲಾಗುವುದಿಲ್ಲ ಎಂದು ಖಂಡಿಸಿದ್ದರು.
ನಾಗಾಲೋಟದಲ್ಲಿರುವ ಕಾಂಗ್ರೆಸ್ಸಿಗೆ ಮತ್ತೊಂದು ಅಸ್ತ್ರ ಕೊಟ್ಟ ಬಿಜೆಪಿ
ಈ ಮಧ್ಯೆ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಪ್ರತಿಭಟನೆ ಮಾಡುತ್ತಿದ್ದವರು ಮಾತ್ರ ನಮ್ಮ ಕಾರ್ಯಕರ್ತರು, ಮೊಟ್ಟೆ ಹೊಡೆದಿದ್ದು ಕಾಂಗ್ರೆಸ್ ಕಾರ್ಯಕರ್ತರೇ ಎಂದು ಹೇಳಿಕೆ ನೀಡಿದ್ದರು. ಅದರೆ ವರದಿಗಳ ಪ್ರಕಾರ ಸಿದ್ದರಾಮಯ್ಯ ಮೇಲೆ ಮೊಟ್ಟೆ ಹೊಟೆದ ಘಟನೆಯಲ್ಲಿ ಬಂಧಿತರಾಗಿದ್ದವರನ್ನು ಅದೇ ರಾತ್ರಿ ಶಾಸಕ ಅಪ್ಪಚ್ಚು ರಂಜನ್ ಜಾಮೀನಿನ ಮೇಲೆ ಬಿಡಿಸಿಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮೂಲಕ ಬಿಜೆಪಿಯನ್ನು ಕಾಲೆಳೆದಿದ್ದಾರೆ.
"ಮೊಟ್ಟೆ ಹೊಡೆದ ಕಾರ್ಯಕರ್ತ ಕಾಂಗ್ರೆಸ್ ಕಾರ್ಯಕರ್ತರ ಎಂದು ಹೇಳಿದ್ದರಲ್ಲ. ಆದರೆ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್, ರಾತ್ರೋ ರಾತ್ರಿ ಪೊಲೀಸ್ ಠಾಣೆಗೆ ಹೋಗಿ ಬಿಡಿಸಿಕೊಂಡು ಬರಬೇಕಿತ್ತಾ? ಕಾಂಗ್ರೆಸ್ ನವನೆಂದು ಹೇಳಿಕೊಂಡರೆ ಮಾತ್ರ ಪೊಲೀಸರಿಂದ ಬಿಡಿಸುತ್ತೇನೆ ಎಂದು ಆರೋಪಿಗೆ ಷರುತ್ತು ಹಾಕಿ ಬಿಡುಗಡೆ ಮಾಡಿಸಿದ್ದೀರಾ?" ಎಂದು ಟೀಕಿಸಿದ್ದಾರೆ.
ಪುಂಡರಿಗೂ ಅಪರೇಷನ್ ಕಮಲ ಮಾಡ್ತಾರಾ?
ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಹೊಡೆದ ಪ್ರಕರಣದಲ್ಲಿ ಪೊಲೀಸರು 9 ಮಂದಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದರು. ಆದರೆ ಅವರೆಲ್ಲರೂ ಬಿಜೆಪಿ ಕಾರ್ಯಕರ್ತರೆಂದು ತಿಳಿದ ಕೂಡಲೆ ಶಾಸಕ ಅಪ್ಪಚ್ಚು ರಂಜನ್ ಬಿಡಿಸಿಕೊಂಡು ಹೋಗಿದ್ದರು. ಆದರೆ ಇದಕ್ಕೂ ಮುನ್ನ ಮೊಟ್ಟೆ ಹೊಡೆದವರು ಕಾಂಗ್ರೆಸ್‌ನವರೇ ಎಂದಿದ್ದರು. ಈ ವಿಚಾರವನ್ನು ಮುಂದಿಟ್ಟುಕೊಂಡು ಸಿದ್ದರಾಮಯ್ಯ ಮತ್ತೊಂದು ಟ್ವೀಟ್‌ನಲ್ಲಿ ಬಿಜೆಪಿ ಕಾಲೆಳೆದಿದ್ದಾರೆ.
"ಆಪರೇಷನ್ ಕಮಲ ಎಂದರೇ ಶಾಸಕರಿಗೆ ಮಾತ್ರ ಎಂದು ತಿಳಿದುಕೊಂಡಿದ್ದೆವು. ಈಗ ಬೀದಿ ಪುಂಡರ ಆಪರೇಷನ್ ಕಮಲ ಕೂಡಾ ಬಿಜೆಪಿ ನಡೆಸುತ್ತಿದೆ ಎನ್ನುವುದು ಮಡಿಕೇರಿಯಲ್ಲಿ ಸಾಬೀತಾಗಿದೆ ಎಂದು ವ್ಯಂಗ್ಯವಾಡಿರುವ ಸಿದ್ದರಾಮಯ್ಯ, ಬಿಜೆಪಿಯ ಇಂತಹ ನಾಟಕಗಳೆಲ್ಲಾ ಹಳೆತಾಗಿವೆ. ಮೊಟ್ಟೆ ಎಸೆದವ ಕಾಂಗ್ರೆಸ್ ಪಕ್ಷದವನಾಗಿದ್ದರೆ ಅವನನ್ನು ಮೊದಲು ಜೈಲಿಗೆ ಕಳುಹಿಸಿ ನಿಮಗ್ಯಾಕೆ ಅವನ ಹಿತರಕ್ಷಣೆಯ ಉಸಾಬರಿ" ಎಂದು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ನಾನು ಕಾಂಗ್ರೆಸ್ ಕಾರ್ಯಕರ್ ಎಂದು ಹೇಳಿದ್ದ ಆರೋಪಿ
ಸಿದ್ದರಾಮಯ್ಯ ಕಾರಿನ ಮೊಟ್ಟೆ ಎಸೆದ ಆರೋಪಿ ಸಂಪತ್ ತಾನೂ ಕಾಂಗ್ರೆಸ್ ಕಾರ್ಯಕರ್ತ ಎಂದು ಹೇಳಿಕೊಂಡಿದ್ದಾನೆ. ತಾನು ಜೀವಿಜಯರ ಅನುಯಾಯಿಯಾಗಿದ್ದು, ಅವರು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದಾಗ ನಾನು ಕಾಂಗ್ರೆಸ್ ಸೇರಿಕೊಂಡಿದ್ದೆ. ಆದರೆ ಸಿದ್ದರಾಮಯ್ಯ ಟಿಪ್ಪು ವಿಚಾರದಲ್ಲಿ ನೀಡಿದ ಹೇಳಿಕೆಯಿಂದ ನಾನು ನಿರಾಸೆಗೊಂಡಿದ್ದೆ. ಜೊತೆಗೆ ಅವರು ಕೊಡಗಿನ ಜನರು ದನದ ಮಾಂಸವನ್ನು ತಿನ್ನುತ್ತಾರೆ ಎಂದಿದ್ದರು. ಈ ಹೇಳಿಕೆ ನನಗೆ ತುಂಬಾಕೋಪ ತರಿಸಿತ್ತು. ಅದಕ್ಕಾಗಿ ನಾನು ಗುಡ್ಡೆ ಹೊಸೂರಿಗೆ ವೈಯಕ್ತಿಕ ಕೆಸಲದ ಮೇಲೆ ತೆರಳಿದ್ದ ವೇಳೆ ಪ್ರತಿಭಟನಾ ಗುಂಪನ್ನು ಸೇರಿ ಕಾರಿನ ಮೇಲೆ ಮೊಟ್ಟೆ ಎಸೆದೆ ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಇನ್ನೂ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತದ ಪ್ರಕರಣವನ್ನು ಖಂಡಿಸಿ ಇದೇ ಆಗಸ್ಟ್ 26ರಂದು ಮಡಿಕೇರಿ ಚಲೋ ನಡೆಸಲು ಕಾಂಗ್ರೆಸ್ ಮುಂದಾಗಿದೆ. ಈ ಮೂಲಕ ಬಿಜೆಪಿ ವಿರುದ್ಧ ಮತ್ತೊಂದು ಬಾರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ತಮ್ಮ ಬಲ ಪರೀಕ್ಷೆ ಮಾಡಲಿದೆ. ಸಿದ್ದರಾಮೋತ್ಸವ ನಂತರ ಕಾಂಗ್ರೆಸ್ ಪಕ್ಷದಲ್ಲಿ ಹೊಸ ಹುಮ್ಮಸ್ಸು ಉಂಟಾಗಿತ್ತು. ಇದೀಗ ಮಡಿಕೇರಿ ಚಲೋ ಮತ್ತೊಂದು ಅವಕಾಶ ಮಾಡಿಕೊಟ್ಟಿದೆ.