• search
  • Live TV
ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊಡಗಿನ ಪ್ರವಾಹದಲ್ಲಿ ಪತ್ರಕರ್ತರ ಮನೆಗಳೇ ಕೊಚ್ಚಿಹೋಗಿವೆ

|

ಮಡಿಕೇರಿ, ಸೆಪ್ಟೆಂಬರ್ 22 : ಕೊಡಗಿನ ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕುಗಳಲ್ಲಿ ಆಗಸ್ಟ್‌ನಲ್ಲಿ ಸಂಭವಿಸಿದ ಜಲಪ್ರಳಯದಲ್ಲಿ ಹಲವು ಪತ್ರಕರ್ತರ ಮನೆಗಳಿಗೆ ಹಾನಿಯಾಗಿದ್ದು, ಇವರಿಗೆ ಸಹಾಯ ಮಾಡಲು ಇದೀಗ ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಮುಂದಾಗಿದೆ.

ಕೊಡಗು 1500 ನಿರಾಶ್ರಿತ ಕುಟುಂಬಗಳಿಗೆ 50 ಸಾವಿರ ಪರಿಹಾರ

ಈಗಾಗಲೇ ಹಾನಿಗೀಡಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆಯನ್ನು ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಆಡಳಿತ ಮಂಡಳಿಯು ಮಾಡಿದೆ.

ಹಲವು ಪತ್ರಕರ್ತರು ನೆಲೆಸಿದ್ದ ಊರುಗಳು ಧ್ವಂಸವಾಗಿದ್ದರೆ, ಮತ್ತೆ ಕೆಲವು ಕಡೆ ದಾರಿಯೇ ಇಲ್ಲದಂತಾಗಿದೆ. ಕೆಲವರ ಮನೆಗಳಿಗೆ ಭಾರೀ ಹಾನಿಯಾಗಿದ್ದರೆ, ಮತ್ತೆ ಕೆಲವರದು ಕುಸಿದು ಬಿದ್ದಿದೆ. ಅಂತಹವರ ಮನೆಗಳಿಗೆ ತೆರಳಿ ಪರಿಶೀಲನೆ ನಡೆಸಿ ಪರಿಹಾರ ನೀಡುವ ಮಹಾ ಕಾರ್ಯಕ್ಕೆ ಸಂಘದ ಸದಸ್ಯರು ಮುಂದಾಗಿದ್ದಾರೆ.

ಜಲಪ್ರಳಯದ ವೇಳೆ ಹಟ್ಟಿಹೊಳೆಯಲ್ಲಿ ವಾಸವಾಗಿರುವ ಪ್ರಜಾಸತ್ಯ ಪತ್ರಿಕೆ ವರದಿಗಾರ ವಿನೋದ್ ಅವರಿಗೆ ಸೇರಿದ ಮನೆ ಹಟ್ಟಿಹೊಳೆ ನದಿ ಪ್ರವಾಹಕ್ಕೆ ಸಿಲುಕಿ ಪೂರ್ಣವಾಗಿ ಕುಸಿದುಬಿದ್ದಿದೆ. ಕುಸಿದ ಮನೆಯಡಿ ಬೆಲೆಬಾಳುವ ಅನೇಕ ಸಾಮಗ್ರಿಗಳು ಸಮಾಧಿಯಾಗಿವೆ. ಜತೆಗೆ ಮನೆಯು ವಾಸಕ್ಕೆ ಯೋಗ್ಯವಿಲ್ಲದಂತಾಗಿದೆ. ಮನೆಯು ನಾಶವಾಗಿರುವುದರಿಂದ ಮತ್ತೆ ಹೊಸದಾಗಿ ಮನೆಯನ್ನು ನಿರ್ಮಾಣ ಮಾಡುವುದು ಅನಿವಾರ್ಯವಾಗಿದೆ. ಇದೀಗ ಕುಟುಂಬ ಬೇರೆಯವರ ಮನೆಯಲ್ಲಿ ಆಶ್ರಯ ಪಡೆದುಕೊಂಡಿದೆ. ಅವರಿಗೆ ಮನೆಕಟ್ಟಿಕೊಡುವ ಕಾರ್ಯ ಮಾಡಿಕೊಡಬೇಕಾಗಿದೆ.

ಮಡಿಕೇರಿ : ಪ್ರವಾಹ ಸಂತ್ರಸ್ತರಿಗೆ ಸ್ವ ಉದ್ಯೋಗ ತರಬೇತಿ

ಇದೇ ರೀತಿ ಶಕ್ತಿ ಪತ್ರಿಕೆ ಉಪ ಸಂಪಾದಕ ಕುಡೆಕಲ್ ಸಂತೋಷ್ ಅವರಿಗೆ ಸೇರಿದ ಮನೆಯೂ ಹಾನಿಗೀಡಾಗಿದೆ. ಮಕ್ಕಂದೂರು ಗ್ರಾಮದಲ್ಲಿ ಮಹಾಮಳೆಗೆ ಪ್ರವಾಹ, ಮತ್ತು ಭೂಕುಸಿತ ಸಂಭವಿಸಿತ್ತು. ಈ ವೇಳೆ ಹಲವರ ಮನೆ ಕಾಫಿ ತೋಟಗಳು ನಾಶವಾಗಿದ್ದು, ಅದರಲ್ಲಿ ಕುಡೆಕಲ್ ಸಂತೋಷ್ ಅವರ ಮನೆಯೂ ಒಂದಾಗಿತ್ತು. ಸದ್ಯ ಅವರ ಮನೆ ಪರಿಸ್ಥಿತಿ ಹೇಗಿದೆ ಎಂದರೆ ಮನೆಯ ಗೋಡೆಗಳು ಕುಸಿದುಬಿದ್ದಿದ್ದು, ಸಾಮಗ್ರಿಗಳು ಮಣ್ಣು ಪಾಲಾಗಿವೆ. ಹೀಗಾಗಿ ಅವರ ಕುಟುಂಬ ಮಡಿಕೇರಿಯಲ್ಲಿ ಆಶ್ರಯ ಪಡೆಯುವಂತಾಗಿದೆ.

ಇನ್ನು ಇದೇ ಗ್ರಾಪಂ ವ್ಯಾಪ್ತಿಯ ಜಾಂಗೀರ್ ಪೈಸಾರಿಯಲ್ಲಿ ವಾಸವಾಗಿರುವ ನವೀನ್‌ ಡಿಸೋಜಾ ಅವರ ಮನೆಯ ಸುತ್ತಮುತ್ತ ಭೂಕುಸಿತ ಸಂಭವಿಸಿದೆ. ಆದರೆ ಇವರ ಮನೆ ಉಳಿದುಕೊಂಡಿದೆ. ಅಲ್ಲಿ ಮತ್ತೆ ಜೀವನ ಮಾಡುತ್ತೇವೆ ಎಂಬ ಧೈರ್ಯ ಅವರಿಗಿಲ್ಲವಾಗಿದೆ. ಜತೆಗೆ ಈ ಪ್ರದೇಶ ವಾಸಕ್ಕೆ ಯೋಗ್ಯವಲ್ಲ ಎಂಬುವುದಾಗಿ ಅಧಿಕಾರಿಗಳು ಸರ್ಕಾರಕ್ಕೆ ವರದಿ ನೀಡಿದ್ದಾರೆ.

ಕುಶಾಲನಗರ ಸಂತ್ರಸ್ತರ ಕ್ಯಾಂಪ್‌ನಲ್ಲಿ ತಹಶೀಲ್ದಾರ್ ಮೇಲೆ ಹಲ್ಲೆ

ವಿಜಯವಾಣಿ ಛಾಯಾಗ್ರಾಹಕ, ಕಾಟಕೇರಿ ಗ್ರಾಮದ ಕೆ.ಎಸ್. ಲೋಕೇಶ್ ಅವರ ಮನೆ ಕೂಡ ನೆಲಕ್ಕುರುಳಿದೆ. ಅಳಿದುಳಿದ ಮನೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಶಕ್ತಿ ಉಪ ಸಂಪಾದಕ ಉಜ್ವಲ್ ರಂಜಿತ್ ಅವರ ಮಡಿಕೇರಿಯ ಮಂಗಳಾದೇವಿ ನಗರದಲ್ಲಿರುವ ಮನೆಯ ಹಿಂಬದಿ ಭಾರೀ ಭೂಕುಸಿತವಾಗಿದ್ದು, ಮನೆ ಅಪಾಯಕಾರಿ ಸ್ಥಿತಿಯಲ್ಲಿದೆ. ಹೀಗಾಗಿ ಕುಟುಂಬ ಬಾಡಿಗೆ ಮನೆಯಲ್ಲಿ ನೆಲೆಯೂರಿದೆ.

ಆಂದೋಲನ ಜಿಲ್ಲಾ ವರದಿಗಾರ ಎಂ.ಎನ್. ನಾಸಿರ್ ಅವರ ಮಡಿಕೇರಿಯ ಹಿಲ್ ರಸ್ತೆಯ ಮಕಾನ್ ಗಲ್ಲಿಯಲ್ಲಿರುವ ಮನೆಯ ಅಡುಗೆ ಕೋಣೆಯ ಗೋಡೆ ಕುಸಿದು ಬಿದ್ದಿದ್ದರೆ, ಮಡಿಕೇರಿಯ ಇಂದಿರಾನಗರದಲ್ಲಿ ವಾಸವಾಗಿರುವ ಸುದ್ದಿ ಟಿವಿ ಕ್ಯಾಮೆರಾಮ್ಯಾನ್ ಆರ್.ಆರ್. ಮನೋಜ್ ಅವರ ಮನೆ ಅಪಾಯದಲ್ಲಿದ್ದು, ಯಾವಾಗ ಬೇಕಾದರೂ ಕುಸಿದು ಬೀಳುವ ಸ್ಥಿತಿಯಲ್ಲಿದೆ. ಇಷ್ಟೇ ಅಲ್ಲದೆ ಚಿತ್ತಾರ ವಾಹಿನಿಯ ಕಚೇರಿಯ ಗೋಡೆಗಳು ಬಿರುಕು ಬಿಟ್ಟಿವೆ.

ಕುಟುಂಬವೇ ಕಷ್ಟದಲ್ಲಿದ್ದರೂ ಕೊಡಗಿನ ಡಿಸಿ ಶ್ರೀವಿದ್ಯಾ ಕೆಲಸ ಗೊತ್ತೆ?

ಇದೀಗ ಪ್ರಕೃತಿ ವಿಕೋಪದಡಿ ಸಿಲುಕಿರುವ ಪತ್ರಕರ್ತರು ತಮ್ಮ ಬದುಕನ್ನು ಮತ್ತೆ ಕಟ್ಟಿಕೊಳ್ಳಬೇಕಾಗಿರುವ ಕಾರಣ ಅವರ ಸಹಾಯಕ್ಕೆ ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಮುಂದಾಗಿದ್ದು, ಎಲ್ಲರ ಮನೆಗಳಿಗೆ ತೆರಳಿ ಪರಿಸ್ಥಿತಿಯನ್ನು ವೀಕ್ಷಿಸಿ ವರದಿಯನ್ನು ತಯಾರಿಸಿದೆ. ಜತೆಗೆ ರಾಜ್ಯ ಪತ್ರಕರ್ತರ ಸಂಘದ ಮೂಲಕ ಸಂತ್ರಸ್ತರಿಗೆ ನೆರವು ನೀಡಲು ಆಡಳಿತ ಮಂಡಳಿ ನಿರ್ಧರಿಸಿದ್ದು, ಇದೀಗ ಪರಿಶೀಲನೆ ವೇಳೆ ಕಟ್ಟಡಗಳ ತಾಂತ್ರಿಕ ಪರಿಣತಿ ಹೊಂದಿರುವ ಕದೀರ್ ಅವರು ನೆರವು ನೀಡಿದ್ದಾರೆ.

ಹಾನಿಗೊಳಗಾದ ಪತ್ರಕರ್ತರ ಮನೆಗಳಿಗೆ ಭೇಟಿ ನೀಡುವ ವೇಳೆ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ, ಉಪಾಧ್ಯಕ್ಷ ಪಾರ್ಥ ಚಿಣ್ಣಪ್ಪ, ರಾಜ್ಯ ಸಮಿತಿ ಸದಸ್ಯ ಎ.ಆರ್.ಕುಟ್ಟಪ್ಪ, ಪ್ರಧಾನ ಕಾರ್ಯದರ್ಶಿ ಅನು ಕಾರ್ಯಪ್ಪ, ಖಜಾಂಚಿ ಆರುಣ್ ಕುಮಾರ್ ಹಾಗೂ ಕಾರ್ಯದರ್ಶಿ ಆನಂದ್ ಕೊಡಗು ಸೇರಿದಂತೆ ಹಲವರಿದ್ದರು.

English summary
Reconstruction of houses belonging to journalists in Kodagu district has been taken up by Journalists' association. Many houses belonging to media people were washed away in floods in Kodagu in August.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X