ಒಂದು ತಿಂಗಳಿನಲ್ಲಿ ಮೈಸೂರು-ಕುಶಾಲನಗರ 4ಪಥದ ರಸ್ತೆ ಕಾಮಗಾರಿ ಆರಂಭ
ಮಡಿಕೇರಿ, ಜೂನ್ 02: "ಮೈಸೂರು-ಕುಶಾಲನಗರ ನಡುವಿನ 4 ಪಥದ ಹೆದ್ದಾರಿಯ ಕಾಮಗಾರಿಯನ್ನು ಒಂದು ತಿಂಗಳಲ್ಲಿ ಆರಂಭಿಸಲಾಗುತ್ತದೆ" ಎಂದ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. 93 ಕಿ. ಮೀ. ಉದ್ದದ ಹೆದ್ದಾರಿ ಕಾಮಗಾರಿಯನ್ನು 4,130 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ.
ಮಡಿಕೇರಿ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯಲ್ಲಿ ಅವರು ಮಾತನಾಡಿದರು. "ಈಗಾಗಲೇ ಮೈಸೂರು-ಕುಶಾಲನಗರ 4 ಪಥದ ಹೆದ್ದಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದು, ಒಂದು ತಿಂಗಳಿನಲ್ಲಿ ಕಾಮಗಾರಿ ಆರಂಭಿಸಲಾಗುತ್ತದೆ" ಎಂದರು.

ಮೈಸೂರು-ಕುಶಾಲನಗರ ಮಾರ್ಗದ 4 ಪಥದ ರಸ್ತೆ ಕಾಮಗಾರಿಯನ್ನು 4 ಭಾಗವಾಗಿ ವಿಭಾಗ ಮಾಡಿ ಕಾಮಗಾರಿ ಕೈಗೊಳ್ಳಲು ಈ ಹಿಂದೆ ತೀರ್ಮಾನ ಮಾಡಲಾಗಿತ್ತು. ಮಾರ್ಚ್‌ನಲ್ಲಿ ಕರ್ನಾಟಕಕ್ಕೆ ಬಂದಿದ್ದ ನರೇಂದ್ರ ಮೋದಿ ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದಾರೆ. ಎರಡು ವರ್ಷಗಳಲ್ಲಿ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಮೈಸೂರು-ಬೆಂಗಳೂರು ದಶಪಥ ರಸ್ತೆ ಉದ್ಘಾಟನೆಗೊಂಡಿದೆ. ಮಾರ್ಚ್ 11ರಂದು ಟ್ವೀಟ್ ಮಾಡಿದ್ದ ಪ್ರತಾಪ್ ಸಿಂಹ, "ನನ್ನ ಮುಂದಿನ ಗುರಿ ಮೋದೀಜಿ ಭೂಮಿ ಪೂಜೆ ಮಾಡಿದ ಮೈಸೂರು-ಕುಶಾಲನಗರ 4 ಪಥದ ಹೊಸ ಹೆದ್ದಾರಿ ಕಾಮಗಾರಿಯನ್ನು 2025 ರೊಳಗೆ ಮುಗಿಸುವುದು ಮತ್ತು ಮೈಸೂರು-ನಂಜನಗೂಡು ನಡುವಿನ ರಸ್ತೆಯನ್ನು 6 ಪಥಕ್ಕೆ ಹೆಚ್ಚಿಸುವುದಾಗಿದೆ. ನಿಮ್ಮ ಆಶೀರ್ವಾದವಿರಲಿ" ಎಂದು ಹೇಳಿದ್ದರು.
ಮೈಸೂರು-ಕುಶಾಲನಗರ ಮಾರ್ಗದ 4 ಪಥರ ರಸ್ತೆಯಾದರೆ ಬೆಂಗಳೂರು ನಗರದಿಂದ ಕುಶಾಲನಗರಕ್ಕೆ ಸಂಚಾರ ನಡೆಸುವ ಜನರಿಗೆ ಸಹ ಅನುಕೂಲವಾಗಲಿದೆ. ಪ್ರಯಾಣದ ಸಮಯ ಸಹ ಉಳಿತಾಯವಾಗಲಿದೆ. ಈಗ ಈ ರಸ್ತೆ ಕಾಮಗಾರಿ ಮುಂದಿನ ತಿಂಗಳು ಆರಂಭವಾಗಲಿದೆ ಎಂದು ಸಂಸದರು ಭರವಸೆ ನೀಡಿದ್ದಾರೆ.

ವಿವಿಧ ರಸ್ತೆ ಯೋಜನೆಗಳು; ಸಂಸದ ಪ್ರತಾಪ್ ಸಿಂಹ ದಿಶಾ ಸಭೆಯಲ್ಲಿ ಕ್ಷೇತ್ರದ ಹಲವು ರಸ್ತೆ ಯೋಜನೆಗಳ ಕುರಿತು ಮಾತನಾಡಿದರು. "ಕುಶಾಲನಗರ-ಸಂಪಾಜೆ ಮಾರ್ಗದಲ್ಲಿ ಅಪಘಾತ ಸ್ಥಳಗಳನ್ನು ಗುರುತಿಸಿ ವರದಿ ನೀಡಬೇಕು. ಇಂತಹ ಸ್ಥಳಗಳಲ್ಲಿ ಅಪಘಾತ ತಪ್ಪಿಸಲು ಅಗತ್ಯ ಕ್ರಮವಹಿಸಬೇಕು" ಎಂದು ಹೆದ್ದಾರಿ ಇಲಾಖೆಯ ಇಂಜಿನಿಯರ್‌ಗಳಿಗೆ ಸೂಚಿಸಿದರು.
"ಮದೆನಾಡು ಬಳಿಯ ಕರ್ತೋಜಿ ಗುಡ್ಡ ಮೇಲ್ಭಾಗದಲ್ಲಿ ಬಿರುಕು ಬಿಟ್ಟಿದ್ದು, ಮಳೆಗಾಲದಲ್ಲಿ ಮಣ್ಣು ರಸ್ತೆಗೆ ಬರುವ ಸಾಧ್ಯತೆ ಇದೆ. ಆದ್ದರಿಂದ ತಡೆಗೋಡೆ ನಿರ್ಮಿಸಬೇಕಿದೆ. ಈ ಸಂಬಂಧ ಎಂಜಿನಿಯರ್‌ಗಳು ಸೂಕ್ತ ಕ್ರಮವಹಿಸಬೇಕು. ಹೆದ್ದಾರಿಯಲ್ಲಿ ಸಾರಿಗೆ ಸಂಚಾರಕ್ಕೆ ಯಾವುದೇ ರೀತಿಯ ವ್ಯತ್ಯಯ ಉಂಟಾಗದಂತೆ ಗಮನಹರಿಸಬೇಕು" ಎಂದು ನಿರ್ದೇಶನ ನೀಡಿದರು.
ಶಾಸಕರಾದ ಎ. ಎಸ್. ಪೊನ್ನಣ್ಣ ಮಾತನಾಡಿ, "ಮಳೆಗಾಲದಲ್ಲಿ ಹೆದ್ದಾರಿಯಲ್ಲಿ ಅಡಚಣೆ ಉಂಟಾಗದಂತೆ ಗಮನಹರಿಸಬೇಕು. ಕರ್ತೋಜಿ ಬಳಿ ಗುಡ್ಡ ಕುಸಿತ ಹಾಗೂ ಕೊಯನಾಡು ಬಳಿ ಪ್ರವಾಹ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು" ಎಂದು ಸೂಚಿಸಿದರು.
ಕೊಡಗು ಜಿಲ್ಲಾಧಿಕಾರಿ ಡಾ. ಬಿ. ಸಿ. ಸತೀಶ ಮಾತನಾಡಿ, "ಮುಂಗಾರು ಎದುರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈಗಾಗಲೇ ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ಸಭೆ ನಡೆಸಲಾಗಿದೆ. ವಿವಿಧ ಇಲಾಖಾ ಹಂತದಲ್ಲಿ ಹಾಗೆಯೇ ತಾಲ್ಲೂಕು ಮಟ್ಟದಲ್ಲಿಯೂ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ" ಎಂದು ಹೇಳಿದರು.
ಭಾಗಮಂಡಲ ಮೇಲುಸೇತುವೆ ನಿರ್ಮಾಣ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅವಕಾಶ ಮಾಡುವಂತೆ ಸಂಸದರಾದ ಪ್ರತಾಪ್ ಸಿಂಹ ನಿರ್ದೇಶನ ನೀಡಿದರು.
ಜಲ ಜೀವನ್ ಮಿಷನ್; ಸಂಸದರು ಜಲ ಜೀವನ್ ಮಿಷನ್ ಯೋಜನೆ ಯಡಿ ಪ್ರತಿ ಕುಟುಂಬಕ್ಕೂ ನಲ್ಲಿ ನೀರು ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ 1.36 ಲಕ್ಷ ಮನೆಗಳ ಗುರಿಯಲ್ಲಿ ಈಗಾಗಲೇ 1.14 ಲಕ್ಷ ಮನೆಗಳಿಗೆ ನಲ್ಲಿ ನೀರು ಸಂಪರ್ಕ ಕಲ್ಪಿಸಲಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯರಾದ ಬೋಜೇಗೌಡ ಜಲ ಜೀವನ್ ಮಿಷನ್ ಯೋಜನೆ ಮತ್ತು ಅಮೃತ ಯೋಜನೆಗಳು ಅರ್ಹರಿಗೆ ಸರಿಯಾಗಿ ತಲುಪಬೇಕು ಎಂದು ಸಲಹೆ ನೀಡಿದರು. ಶಾಸಕ ಎ. ಎಸ್. ಪೊನ್ನಣ್ಣ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಇನ್ನೂ ಹಲವು ಗ್ರಾಮಗಳ ಮನೆಗಳಿಗೆ ಜಲಜೀವನ್ ಮಿಷನ್ ಯೋಜನೆ ತಲುಪಬೇಕಿದೆ ಎಂದು ಸಭೆಯ ಗಮನ ಸೆಳೆದರು.












Click it and Unblock the Notifications