ಮೈಸೂರು-ಕುಶಾಲನಗರ 4 ಪಥದ ರಸ್ತೆ ಯೋಜನೆ: ಅಪ್‌ಡೇಟ್
ಬೆಂಗಳೂರು, ಡಿಸೆಂಬರ್ 26: ಮೈಸೂರು-ಕುಶಾಲನಗರ ನಡುವಿನ ರಸ್ತೆಯನ್ನು ನಾಲ್ಕು ಪಥದ ರಸ್ತೆಯಾಗಿ ಅಭಿವೃದ್ಧಿಗೊಳಿಸಲಾಗುತ್ತದೆ. ಸುಮಾರು 4130 ಕೋಟಿ ರೂ.ಗಳ ಯೋಜನೆ ಇದಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಯೋಜನೆಗೆ ದಿನಾಂಕ 12/03/2023ರಲ್ಲಿ ಶಂಕುಸ್ಥಾಪನೆ ಮಾಡಿದ್ದರು. ಆದರೆ ಇನ್ನೂ ಸಹ ಕಾಮಗಾರಿ ಆರಂಭವಾಗಿಲ್ಲ. ಈ ಯೋಜನೆ ಕುರಿತು ಈಗ ಮಾಜಿ ಸಂಸದ ಪ್ರತಾಪ್ ಸಿಂಹ ಅಪ್‌ಡೇಟ್ ನೀಡಿದ್ದಾರೆ.
ಮೈಸೂರು-ಕೊಡಗು ಕ್ಷೇತ್ರದ ಮಾಜಿ ಸಂಸದ ಪ್ರತಾಪ್ ಸಿಂಹ ಬೆಂಗಳೂರಿನ ಅರಣ್ಯ ಭವನದಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬ್ರಿಜೇಶ್ ಕುಮಾರ್ ದೀಕ್ಷಿತ್ ಅವರನ್ನು ಭೇಟಿ ಮಾಡಿದರು. ಮೈಸೂರು-ಕುಶಾಲನಗರ ನಡುವಿನ ರಸ್ತೆ ಯೋಜನೆ, ಅರಣ್ಯ ಇಲಾಖೆಯಿಂದ ಸಿಗಬೇಕಿರುವ ಒಪ್ಪಿಗೆ ಕುರಿತು ಚರ್ಚೆಯನ್ನು ನಡೆಸಿದರು.

ಬಳಿಕ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಪ್ರತಾಪ್ ಸಿಂಹ ಯೋಜನೆ ಕುರಿತು ಮಾಹಿತಿ ನೀಡಿದ್ದಾರೆ. ಈ ರಸ್ತೆ ಯೋಜನೆಗೆ ಅರಣ್ಯ ಇಲಾಖೆ ವತಿಯಿಂದ ನಿರಾಕ್ಷೇಪಣಾ ಪ್ರಮಾಣ ಪತ್ರ ಶೀಘ್ರವೇ ಸಿಗಲಿದೆ ಎಂದು ಹೇಳಿದ್ದಾರೆ. ಆದ್ದರಿಂದ ರಸ್ತೆ ಕಾಮಗಾರಿ ಸಹ ಬೇಗನೇ ಆರಂಭವಾಗುವ ನಿರೀಕ್ಷೆ ಇದೆ.
ಪ್ರತಾಪ್ ಸಿಂಹ ಪೋಸ್ಟ್: ರಾಷ್ಟ್ರೀಯ ಹೆದ್ದಾರಿ-275ರ ಮೈಸೂರು-ಕುಶಾಲನಗರ ಭಾಗದ 93 ಕಿ. ಮೀ. ಉದ್ದದ ರಸ್ತೆ ಕಾಮಗಾರಿಯ ಯೋಜನೆಯನ್ನು 4 ಪ್ಯಾಕೇಜ್‌ಗಳಾಗಿ ವಿಂಗಡಿಸಲಾಗಿದೆ. ಈ 4 ಪ್ಯಾಕೇಜ್‌ಗಳನ್ನು 2023ರಲ್ಲಿ ನನ್ನ ಅಧಿಕಾರಾವಧಿಯಲ್ಲಿ ರೂ. 4126 ಕೋಟಿ ವೆಚ್ಚದಲ್ಲಿ ಮಂಜೂರು ಮಾಡಲಾಗಿತ್ತು.
ಈ ನಾಲ್ಕು ಪ್ಯಾಕೇಜ್‌ಗಳಿಗೆ ಸನ್ಮಾನ್ಯ ಪ್ರಧಾನ ಮಂತ್ರಿಗಳು ದಿ. 12.03.2023 ರಂದು ಮಂಡ್ಯದಲ್ಲಿ ಶಿಲಾನ್ಯಾಸ ಮಾಡಿದ್ದರು. ಸದರಿ ಕಾಮಗಾರಿಗೆ ಸಂಬಂಧಿಸಿದಂತೆ ಭೂಸ್ವಾಧೀನದ ಪ್ರಕ್ರಿಯೆಯು ಪ್ರಗತಿಯಲ್ಲಿದ್ದು, ಪ್ಯಾಕೇಜ್ -2ರಲ್ಲಿ ಸುಮಾರು 84%, ಪ್ಯಾಕೇಜ್-3ರಲ್ಲಿ ಸುಮಾರು 80%, ಪ್ಯಾಕೇಜ್-4ರಲ್ಲಿ ಸುಮಾರು 70% ಮತ್ತು ಪ್ಯಾಕೇಜ್-5ರಲ್ಲಿ ಸುಮಾರು 84% ಕಾಮಗಾರಿಯನ್ನು ಕೈಗೊಳ್ಳಲು ಭೂಮಿ ಲಭ್ಯವಿರುತ್ತದೆ ಎಂದು ಹೇಳಿದ್ದಾರೆ.
ಆದರೆ ಕಾಮಗಾರಿಯನ್ನು ಪ್ರಾರಂಭಿಸಲು ಅರಣ್ಯ ಇಲಾಖೆ ವತಿಯಿಂದ ನಿರಾಕ್ಷೇಪಣಾ ಪ್ರಮಾಣ ಪತ್ರ ಅಗತ್ಯವಿರುತ್ತದೆ. ಇದಕ್ಕೆ ಸಂಬಂಧಿಸಿದಂತೆ ಇಂದು ನಾನು ಬೆಂಗಳೂರಿನಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶ್ರೀ ಬ್ರಿಜೇಶ್ ಕುಮಾರ್ ದೀಕ್ಷಿತ್ ಅವರನ್ನು ಖುದ್ದು ಭೇಟಿ ಮಾಡಿದೆ ಎಂದು ತಿಳಿಸಿದ್ದಾರೆ.
ಮೈಸೂರು ಮತ್ತು ಕೊಡಗು ಜನರಿಗೆ ಅನುಕೂಲವಾಗುವಂತೆ ಮತ್ತು ಮಂಗಳೂರಿನ ಬಂದರು ಸಂಪರ್ಕವನ್ನು ಸುಧಾರಿಸುವ ಮತ್ತು ಶಿರಾಡಿ ಘಾಟ್‌ನ ರಸ್ತೆ ಮುಚ್ಚುವ ಸಮಯದಲ್ಲಿ ಪರ್ಯಾಯ ಮಾರ್ಗ ಸಂಪರ್ಕವನ್ನು ಒದಗಿಸುವ ಮೈಸೂರು-ಕುಶಾಲನಗರ ನಡುವಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಕೈಗೊಳ್ಳಲು ಅನುಗುಣವಾಗಿ ಅರಣ್ಯ ಇಲಾಖೆ ವತಿಯಿಂದ ನಿರಾಕ್ಷೇಪಣಾ ಪ್ರಮಾಣ ಪತ್ರ ತುರ್ತಾಗಿ ನೀಡುವಂತೆ ಕೋರಿ ಮನವಿ ಮಾಡಲಾಯಿತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಕೂಡಲೇ ಅನುಮೋದನೆ ನೀಡುವ ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.
ಈ ಯೋಜನೆ ಪೂರ್ಣಗೊಂಡರೆ ಹುಣಸೂರು, ಪಿರಿಯಾಪಟ್ಟಣ, ನಾಗರಹೊಳೆ, ಕೇರಳಕ್ಕೆ ಹೋಗುವವರು ಮೈಸೂರು ನಗರ ಪ್ರವೇಶಿಸುವುದು ತಪ್ಪಲಿದೆ. ನಂಜನಗೂಡು ಭಾಗದಲ್ಲಿ ಈಗ ಕೈಗಾರಿಕೆಗಳು ಅಭಿವೃದ್ಧಿಗೊಳ್ಳುತ್ತಿವೆ. ಈ ಹೆದ್ದಾರಿ ನಿರ್ಮಾಣದಿಂದ ಬಿಳಿಕೆರೆ, ಹುಣಸೂರು, ಪಿರಿಯಾಪಟ್ಟಣ ಭಾಗದಲ್ಲಿಯೂ ಕೈಗಾರಿಕಾ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಅಂದಾಜಿಸಲಾಗಿದೆ.












Click it and Unblock the Notifications