ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಂಬೊ ಮೀಸೆರ ಬಂಬೋ ಆದ ಲೋಕೇಶ್ ಅಚ್ಚಪ್ಪ

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಮಡಿಕೇರಿ, ಜನವರಿ 3: ಕೊಡಗಿನಲ್ಲಿ ಪುರುಷರು ದಪ್ಪನೆ ಹುರಿಮೀಸೆ, ಮಹಿಳೆಯರು ಉದ್ದದ ಜಡೆ ಬಿಟ್ಟು ಗಮನ ಸೆಳೆಯುತ್ತಾರೆ. ಅದರಲ್ಲೂ ಆಜಾನುಭಾವು ದೇಹ ಹೊಂದಿದ ವ್ಯಕ್ತಿಗೆ ಹುರಿಮೀಸೆ ಎದ್ದು ಕಾಣುತ್ತದೆ. ಅಷ್ಟೇ ಅಲ್ಲ, ಅದು ಗತ್ತುಗೈರತ್ತನ್ನು ಬಿಂಬಿಸುತ್ತದೆ.

ಹಿಂದಿನ ಕಾಲದಲ್ಲಿ ಹುರಿಮೀಸೆ (ಕೊಡಗಿನಲ್ಲಿ ಕೊಂಬ ಮೀಸೆ ಎನ್ನುತ್ತಾರೆ) ಯಿಟ್ಟು ಪುರುಷನೊಬ್ಬ ಬರುತ್ತಿದ್ದಾನೆ ಎಂದರೆ ಅದರ ಗಮ್ಮತ್ತೇ ಬೇರೆಯಿತ್ತು. ಇತ್ತೀಚೆಗಿನ ತಲೆಮಾರುಗಳಲ್ಲಿ ಕೊಂಬಮೀಸೆ ಬಿಡುವುದು ಕಡಿಮೆಯೇ ಎನ್ನಬೇಕು. ಆದರೆ ಐವತ್ತರ ಗಡಿ ದಾಟಿದ ಹಲವು ಪುರುಷರು ತಮ್ಮ ಕೊಂಬ ಮೀಸೆಯಿಂದ ಎಲ್ಲರ ಗಮನ ಸೆಳೆಯುತ್ತಿರುವುದನ್ನು ನಾವು ಕಾಣಬಹುದಾಗಿದೆ.[ವೃದ್ಧಿ ಕಾಣದ ನಾಯಿಗಾಗಿ ಕೊಡಗಿನಲ್ಲಿ ವಿಶಿಷ್ಟ ಆಚರಣೆ!]

Mustache cometition

ಕೊಂಬ ಮೀಸೆಯ ಪುರುಷರನ್ನು ಮತ್ತು ಉದ್ದ ಜಡೆಯ ಮಹಿಳೆಯರನ್ನು ಪ್ರೋತ್ಸಾಹಿಸುವ ಸಲುವಾಗಿಯೇ ಯುಕೊ ಸಂಘಟನೆ ನೇತೃತ್ವದಲ್ಲಿ ಮೂರ್ನಾಡು ಪಾಂಡಾಣೆ ಮಂದ್ ಆಶ್ರಯದಲ್ಲಿ ಕೊಡವ ಮಂದ್ ನಮ್ಮೆ ಕಾರ್ಯಕ್ರಮದಲ್ಲಿ ಕೊಂಬೊ ಮೀಸೆರ ಬಂಬೋ' ಹಾಗೂ ಬೋಜಿ ಜಡೆರ ಬೋಜಕ್ಕ' ಎಂಬ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ಸ್ಪರ್ಧೆಯಲ್ಲಿ ಕೊಂಬ ಮೀಸೆಯ 9 ಪುರುಷರು ಉದ್ದ ಜಡೆಯ 12 ಮಹಿಳೆಯರು ಪಾಲ್ಗೊಂಡಿದ್ದರು. ಪುರುಷರು ಮೀಸೆ ತಿರುವುತ್ತಾ ವೇದಿಕೆಯಲ್ಲಿ ಹೆಜ್ಜೆ ಹಾಕಿದರೆ, ಮಹಿಳೆಯರು ತಮ್ಮ ಜಡೆಯನ್ನು ಮುಂದೆ ಹಾಕಿ ವಯ್ಯಾರದ ನಡಿಗೆಯನ್ನು ಪ್ರದರ್ಶಿಸಿ ಎಲ್ಲರ ಗಮನಸೆಳೆದರು.[ನೇಪಥ್ಯಕ್ಕೆ ಸರಿದ ಕೊಡಗಿನ ಜೇನುತುಪ್ಪ!]

ಸ್ಪರ್ಧೆಯಲ್ಲಿ ಪುರುಷರ ವಿಭಾಗದ ಕೊಂಬೊ ಮೀಸೆರ ಬಂಬೋ'ದಲ್ಲಿ ಕೊಂಗೇಟಿರ ಲೋಕೇಶ್ ಅಚ್ಚಪ್ಪ (ಪ್ರಥಮ), ಚಾಮೇರ ಚಿಯ್ಯಣ್ಣ (ದ್ವಿತೀಯ), ಒಡಿಯಂಡ ಅಯ್ಯಣ್ಣ (ತೃತೀಯ) ಸ್ಥಾನ ಪಡೆದರು. ಮಹಿಳೆಯರ ವಿಭಾಗದ ಬೋಜಿ ಜಡೆರ ಬೋಜಕ್ಕ'ದಲ್ಲಿ ಬಾಚಿನಾಡಂಡ ಶೀತಲ್ ಪೊನ್ನಪ್ಪ (ಪ್ರಥಮ), ಮಾಣೀರ ಡೈಸಿ ವಿಜು(ದ್ವಿತೀಯ) ಪಾರಿತೋಷಕ ಹಾಗೂ ನಗದು ಬಹುಮಾನ ಪಡೆದರು.

Mustache competition

ಎರಡನೇ ಬಾರಿಗೆ ಪ್ರಶಸ್ತಿ: ಇನ್ನು ಕೊಂಬೊ ಮೀಸೆರ ಬಂಬೋ'ದಲ್ಲಿ ಪ್ರಥಮ ಸ್ಥಾನ ಪಡೆದ ಕೊಂಗೇಟಿರ ಲೋಕೇಶ್ ಅಚ್ಚಪ್ಪನವರಿಗೆ ಎರಡನೇ ಬಾರಿಗೆ ಬಹುಮಾನ ದೊರೆಯುತ್ತಿರುವ ಅಗ್ಗಳಿಕೆಯಾಗಿದೆ. ಇವರ ಮೀಸೆ ಬಗ್ಗೆ ತಿಳಿಯುತ್ತಾ ಹೋದರೆ ಒಂದಷ್ಟು ಕುತೂಹಲಕಾರಿ ವಿಚಾರಗಳು ಹೊರಬರುತ್ತವೆ.

ಮೂಲತಃ ಸೋಮವಾರಪೇಟೆ ತಾಲೂಕಿನ ಚೇರಳ ಶ್ರೀಮಂಗಲ ಗ್ರಾಮದ ಚೆಟ್ಟಳ್ಳಿಯ ನಿವಾಸಿಯಾಗಿರುವ ಇವರು ಸದಾ ಕೊಂಬ ಮೀಸೆಯಲ್ಲೇ ಕಂಗೊಳಿಸುತ್ತಾರೆ. ಲೋಕೇಶ್ ಬಿಎಸ್‍ಎಫ್ ನಲ್ಲಿ ಯೋಧನಾಗಿ ಕಾರ್ಯನಿರ್ವಹಿಸಿ ನಿವೃತ್ತರಾದವರು. ಇವರಿಗೆ ಹುರಿಮೀಸೆ ಬಿಡುವ ಬಯಕೆ ಶುರುವಾಗಿದ್ದು ಆಕಸ್ಮಿಕ ಸಂದರ್ಭದಲ್ಲಂತೆ.

ಇವರು 1981ರಲ್ಲಿ ಬಿಎಸ್‍ಎಫ್ ಗೆ ಸೇರಿ 2001ರವರೆಗೆ ಕಾಶ್ಮೀರ, ಪಂಜಾಬ್, ರಾಜಸ್ತಾನ್, ದೆಹಲಿ ಹಾಗೂ ಬೆಂಗಳೂರು ಸೇರಿದಂತೆ ಹಲವೆಡೆ ಕಾರ್ಯ ನಿರ್ವಹಿಸಿದ್ದಾರೆ. ಹೀಗೆ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭ ಒಮ್ಮೆ ಅವರ ಕಮಾಂಡೆಂಟ್ ಆಗಿದ್ದ ಎಸ್.ಎಸ್.ಬಿಂಡಕ್ಕ್ ಎಂಬುವರು ನೀನು ಕೊಂಬ ಮೀಸೆ ಬಿಟ್ಟರೆ ಗಣರಾಜ್ಯೋತ್ಸವದ ದಿನ ಪರೇಡ್ ಎಡ ಅಥವಾ ಬಲದ ಮುಂದಿನ ನಿಯಂತ್ರಕನಾಗಿ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದರಂತೆ.[ದೇಶಕ್ಕಾಗಿ ಪ್ರಾಣತೆತ್ತ ಕೊಡವ ಯೋಧರೆಷ್ಟು ಗೊತ್ತಾ?]

ಅವರ ಮಾತನ್ನು ಗಂಭೀರವಾಗಿ ಪರಿಗಣಿಸಿದ ಲೋಕೇಶ್ ಅಚ್ಚಪ್ಪ, ಮೀಸೆ ಬಿಡುವ ಮೂಲಕ ತನ್ನ ಆಸೆಯನ್ನು ಈಡೇರಿಸಿಕೊಂಡರಂತೆ. ಅಲ್ಲಿಂದ ಇಲ್ಲಿಯವರೆಗೂ ಕೊಂಬ ಮೀಸೆಯಲ್ಲಿಯೇ ಕಂಗೊಳಿಸುತ್ತಾರೆ. ತಮ್ಮ ಸೇವಾವಧಿಯಲ್ಲಿ ಕೊಂಬ ಮೀಸೆ ಬಿಟ್ಟಿದ್ದರಿಂದ ಆದ ಕೆಲವೊಂದು ಅನುಭವಗಳನ್ನು ಹೊರ ಹಾಕುವ ಅವರು ಅವತ್ತಿನ ದಿನಗಳಲ್ಲಿ ಮುಂಜಾನೆ ಎದ್ದು ತನ್ನ ಮೀಸೆಯನ್ನು ಬಾಚಿ ಅದನ್ನು ಸಿದ್ದಗೊಳಿಸುವುದೇ ಒಂದು ಕೆಲಸವಾಗಿ ಬಿಡುತ್ತಿತ್ತಂತೆ.

ಇದರಿಂದಾಗಿ ಬೆಳಗ್ಗಿನ ತಿಂಡಿ ಕಳೆದುಕೊಂಡಿದ್ದ ದಿನಗಳು ಇವೆಯಂತೆ. ಆದರೆ ಅವರಿಗೆ ಸೇನೆಯಿಂದ ಮೀಸೆ ನಿರ್ವಹಣೆಗಾಗಿ ತಿಂಗಳಿಗೆ ಮೂವತ್ತು ರೂಪಾಯಿಯ ಹೆಚ್ಚಿನ ಭತ್ಯೆಯನ್ನು ನೀಡಲಾಗುತ್ತಿತ್ತಂತೆ. ಅವತ್ತಿನಿಂದ ಇವತ್ತಿನವರೆಗೂ ತನ್ನ ಮೀಸೆಯನ್ನು ಕಾಳಜಿಯಿಂದ ನಿರ್ವಹಿಸಿಕೊಂಡು ಬಂದಿರುವ ಲೋಕೇಶ್ ಅಚ್ಚಪ್ಪ ಅವರು ಕೊಡಗಿನಲ್ಲಿ ಎಲ್ಲರ ಗಮನಸೆಳೆಯುತ್ತಿದ್ದಾರೆ.

English summary
Mustache competition for men and long hair competition for women held in Kodagu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X