ದಕ್ಷಿಣ ಕೊಡಗಿನಲ್ಲಿ ಕೆಸರು ಎರಚಿ ಹರಕೆ ತೀರಿಸುವ ಅಪರೂಪದ ಹಬ್ಬ

ಮಡಿಕೇರಿ, ಮೇ 20: ಕೊಡಗಿನ ವಿಶಿಷ್ಟ ಹಬ್ಬ 'ಬೋಡ್ ನಮ್ಮೆ' ಸಾಮಾನ್ಯವಾಗಿ ಜಿಲ್ಲೆಯಾದ್ಯಂತ ನಡೆಯುತ್ತದೆಯಾದರೂ ಒಂದು ಕಡೆಯಿಂದ ಮತ್ತೊಂದು ಕಡೆಗೆ ಆಚರಣೆಯಲ್ಲಿ ವಿಭಿನ್ನತೆ ಇರುವುದನ್ನು ನಾವು ಕಾಣಬಹುದಾಗಿದೆ.

ಇದೀಗ ದಕ್ಷಿಣ ಕೊಡಗಿನ ಪೊನ್ನಂಪೇಟೆ ಸಮೀಪದ ಹಳ್ಳಿಗಟ್ಟು ಭದ್ರಕಾಳಿ ಹಾಗೂ ಗುಂಡಿಯತ್ ಅಯ್ಯಪ್ಪ ದೇವರ ವಾರ್ಷಿಕ ಬೇಡು ಹಬ್ಬ ಆರಂಭವಾಗಿದ್ದು, ಗ್ರಾಮದಲ್ಲಿ ಸಂಭ್ರಮದ ವಾತಾವರಣ ಸೃಷ್ಠಿಯಾಗಿದೆ.

ಹಬ್ಬವು ಶನಿವಾರ (ಮೇ.19) ರಂದು ಆರಂಭವಾಗಿದ್ದು ಭಾನುವಾರ (ಮೇ.20) ಮುಕ್ತಾಯಗೊಳ್ಳಲಿದೆ. ಈ ಎರಡು ದಿನಗಳ ಕಾಲ ಹಬ್ಬದ ಅಂಗವಾಗಿ ಹಲವು ಸಂಪ್ರದಾಯದ ಕಾರ್ಯಕ್ರಮಗಳು, ಪೂಜಾ ಕಾರ್ಯಗಳು ನಡೆಯಲಿವೆ.

ಎರಡು ದಿನಗಳ ಹಬ್ಬ

ಎರಡು ದಿನಗಳ ಹಬ್ಬ

ನಿನ್ನೆ (ಮೇ.19) ಗುಂಡಿಯತ್ತ್ ಅಯ್ಯಪ್ಪ ದೇವರ ಅವುಲ್ ಹಾಗೂ ರಾತ್ರಿ ಮನೆ ಮನೆ ಕಳಿ ಊರು ತಕ್ಕರಾದ ಚಮ್ಮಟೀರ ಮನೆಯಿಂದ ಹೊರಟಿದೆ. ಇಂದು (ಮೇ. 20) ಕೃತಕವಾಗಿ ಶೃಂಗರಿಸಲಾದ ಒಂದು ಕುದುರೆ ಚಮ್ಮಟೀರ ಹಾಗೂ ಮತ್ತೊಂದು ಕುದುರೆ ಮೂಕಳೇರ ಕುಟುಂಬದ ಮನೆಯಿಂದ ಹೊರಟು ದೇವಸ್ಥಾನದ ಸಮೀಪ ಅಂಬಲದಲ್ಲಿ ಪರಸ್ಪರ ಕೆಸರು ಎರಚಾಟದ ನಂತರ ದೇವಸ್ಥಾನದಲ್ಲಿ ಹರಕೆ ಕಾಣಿಕೆ ಒಪ್ಪಿಸುವುದರೊಂದಿಗೆ ಹಬ್ಬಕ್ಕೆ ತೆರೆ ಬೀಳಲಿದೆ.

ಎರಡು ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ಹಲವು ವಿಶೇಷತೆಗಳನ್ನು ನಾವು ಕಾಣಬಹುದಾಗಿದೆ. ಈ ಬೋಡು ಹಬ್ಬದಲ್ಲಿ ಅವಲಕ್ಕಿ ಪ್ರಸಾದ ಮತ್ತು ಕೆಸರು ಎರಚಾಟ ಪ್ರಮುಖವಾಗಿದ್ದು ಮೊದಲಿನಿಂದಲೂ ಇದಕ್ಕೆ ಹೆಚ್ಚಿನ ಮಹತ್ವ ನೀಡುತ್ತಾ ಬರಲಾಗಿದೆ.

‘ಪೆಲವಂದೆರೆ’ ಮೂಲಕ ಹಬ್ಬಕ್ಕೆ ಚಾಲನೆ

‘ಪೆಲವಂದೆರೆ’ ಮೂಲಕ ಹಬ್ಬಕ್ಕೆ ಚಾಲನೆ

ಇನ್ನು ಈ ಹಬ್ಬದ ಆಚರಣೆಯೂ ವಿಚಿತ್ರವಾಗಿದೆ. ಹಬ್ಬದ ದಿನ ಚಮ್ಮಟೀರ ಕುಟುಂಬದ ಮನೆಯಿಂದ ಮೂಲ ನಿವಾಸಿಗಳಲ್ಲಿ ಒಬ್ಬರಾದ ಪಣಿಕ ಜನಾಂಗದಿಂದ 'ಪೆಲವಂದೆರೆ' ಹೊರಡುವ ಮೂಲಕ ಎರಡು ದಿನಗಳ ಹಬ್ಬಕ್ಕೆ ಚಾಲನೆ ನೀಡಲಾಗುತ್ತದೆ. ನಂತರ ಊರಿನ ಮೂರು ನಿಗದಿತ ದೇವರ ನೆಲೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಪೆಲವಪ್ಪಂಡ ಕೋಟದಲ್ಲಿ (ದೇವಸ್ಥಾನ) ಊರಿನ ಜನರು, ಹೆಂಗಸರು, ಮಕ್ಕಳು ಸೇರುತ್ತಾರೆ.

ಇದಕ್ಕೆ ಮುಂಚೆ ಇಬ್ಬರು ಕೊಡವ ಪೂಜಾರಿಗಳು (ಒಬ್ಬರು ಚಮ್ಮಟೀರ ಹಾಗೂ ಮತ್ತೊಬ್ಬರು ಮೂಕಳೇರ) ಮೂಕಳೇರ ಬಲ್ಯಮನೆಯ ಹತ್ತಿರದ ದೇವರ ಕೆರೆಯಲ್ಲಿ ಸ್ನಾನ ಮಾಡಿ ವಿವಿಧ ವಿಧಿ ವಿಧಾನದೊಂದಿಗೆ ಭಂಡಾರ ಪೆಟ್ಟಿಗೆ ಶುದ್ಧಿಗೊಳಿಸಿ ನಂತರ ಕೆರೆಯ ಹತ್ತಿರದಲ್ಲಿ ಹೊಸ ಮಣ್ಣಿನ ಮಡಿಕೆಯಲ್ಲಿ ಭತ್ತವನ್ನು ಬೇಯಿಸಿ ಹದಗೊಳಿಸಿ ಇದನ್ನು ಕುಟ್ಟಿ ಅವಲಕ್ಕಿಯನ್ನು ಮಾಡಿ ದೇವರಿಗೆ ನೈವೇದ್ಯವನ್ನು ತಯಾರು ಮಾಡುತ್ತಾರೆ.

ಗುಂಡಿಯತ್ ಅಯ್ಯಪ್ಪ ದೇವಸ್ಥಾನ

ಗುಂಡಿಯತ್ ಅಯ್ಯಪ್ಪ ದೇವಸ್ಥಾನ

ಈ ಇಬ್ಬರು ಪೂಜಾರಿಗಳು ಹಬ್ಬದ ದಿನದಂದು ಬೆಳಿಗ್ಗೆಯಿಂದಲೇ ಉಪವಾಸ ಮತ್ತು ಕಟ್ಟುನಿಟ್ಟಿನ ವೃತ ಮಾಡುತ್ತಾರೆ. ನೀರು ಸಹ ಸೇವಿಸುವಂತಿಲ್ಲ. ಬಳಿಕ ಪೊಲವಪ್ಪಂಡ ಕೋಟ ಪ್ರವೇಶಿಸಿ ವಿಶೇಷ ಪೂಜೆ ಸಲ್ಲಿಸಿ ಅಲ್ಲಿ ನೆರೆದ ಭಕ್ತರಿಗೆ ಅವಲಕ್ಕಿಗೆ ಬಾಳೆ ಹಣ್ಣು ಸೇರಿಸಿ ಅವುಲ್ ಎಂಬ ಪ್ರಸಾದವನ್ನು ನೀಡುತ್ತಾರೆ.

ವಿಶೇಷ ಪೂಜೆಯ ನಂತರ ಸಂಜೆಯಾಗುತ್ತಿದ್ದಂತೆ ಜೋಡುಬೀಟಿಯಲ್ಲಿರುವ ಪ್ರಮುಖ ದೇವಾಲಯದಲ್ಲಿ ಒಂದಾದ ಗುಂಡಿಯತ್ ಅಯ್ಯಪ್ಪ ದೇವಸ್ಥಾನ ಪ್ರವೇಶಿಸುತ್ತಾರೆ (ಇಲ್ಲಿ ಹೆಂಗಸರು ಪ್ರವೇಶಿಸುವಂತಿಲ್ಲ). ಈ ಎಲ್ಲಾ ದೇವಸ್ಥಾನಕ್ಕೂ ಬ್ರಾಹ್ಮಣರ ಪೂಜೆ ನಿಷೇಧವಾಗಿದೆ. ಈ ದೇವಸ್ಥಾನದ ಸುತ್ತ ಶುಚಿಗೊಳಿಸಿ ಇಲ್ಲಿ ವಿಶೇಷ ಪೂಜೆ ಸಲ್ಲಿಸಿ ನೈವೇದ್ಯ ಸಲ್ಲಿಸಲಾಗುತ್ತದೆ. ಸಂಪ್ರದಾಯವನ್ನು ಮುರಿದರೆ ಹೆಜ್ಜೇನು ಕಡಿಯುತ್ತದೆ ಎಂಬ ಭಯವೂ ಇದೆ.

ವಿಶೇಷ ಪೂಜೆ ಬಳಿಕ ಇಲ್ಲಿ ಸಾವಿರಾರು ತೆಂಗಿನ ಕಾಯಿಯನ್ನು ಈಡು ಕಾಯಿ ರೂಪದಲ್ಲಿ ಭಕ್ತರು ಒಡೆದು ಹರಕೆ ತೀರಿಸಿಕೊಳ್ಳುತ್ತಾರೆ. ನಂತರ ಇಲ್ಲಿಂದ ಹೊರಟು ಸಮೀಪದ ನಿಗದಿತ ಜಾಗದಲ್ಲಿ ತೆಂಗಿನ ಕಾಯಿ, ಬಾಳೆಹಣ್ಣು ತಿನ್ನುವ ಮೂಲಕ ಪೂಜಾರಿಗಳು ಉಪವಾಸವನ್ನು ಅಂತ್ಯಗೊಳಿಸುತ್ತಾರೆ.

ಆಲಂಗಿಸಿಕೊಂಡು ಹಬ್ಬದ ಆಚರಣೆ

ಆಲಂಗಿಸಿಕೊಂಡು ಹಬ್ಬದ ಆಚರಣೆ

ಬಳಿಕ ಹೊರಟು ಮೂಕಳೇರ ಬಲ್ಯಮನೆಯಲ್ಲಿ ಸಾಮೂಹಿಕ ಭೋಜನ ಮಾಡಿ ನಂತರ ಚಮ್ಮಟೀರ ಬಲ್ಯಮನೆಗೆ ತೆರಳಿ ಅಲ್ಲಿ ವಿವಿಧ ವೇಷದಲ್ಲಿ ದೇವರ ಕಳಿ ಹಾಕಿ ಮನೆ ಮನೆಗೆ ತೆರಳಲಾಗುತ್ತದೆ. ಚಮ್ಮಟೀರ, ಮಚ್ಚಿಯಂಡ ಹಾಗೂ ಮೂಕಳೇರ ಬಲ್ಯ (ಹಿರಿ) ಮನೆಯಲ್ಲಿ ಈ ಕಳಿ (ಆಟ) ರಾತ್ರಿಯಿಡಿ ನಡೆಯುತ್ತದೆ. ನಂತರ ಅಲ್ಲಿನ ಅಂಬಲ (ಮೈದಾ) ದಲ್ಲಿ ಮುಂಜಾನೆ ಮನೆ ಕಳಿ ಮುಕ್ತಾಯವಾಗುತ್ತದೆ.

ಮಾರನೆಯ ದಿನದ ಮಧ್ಯಾಹ್ನದ ಮೇಲೆ ಚಮ್ಮಟೀರ ಹಾಗೂ ಮೂಕಳೇರ ಮನೆಯಿಂದ ಒಂದೊಂದು ಕುದುರೆ ಹಾಗೂ ಮೊಗವನ್ನು ಶೃಂಗರಿಸಿ ಅದನ್ನು ಹೊತ್ತು ಊರಿನ ಪ್ರಮುಖ ದೇವಾಲಯವಾದ ಭದ್ರಕಾಳಿ ದೇವಸ್ಥಾನದ ಹತ್ತಿರದ ದೇವರ ಕೆರೆಯ ಸಮೀಪದ ಅಂಬಲ (ಮೈದಾನ)ದಲ್ಲಿ ಸೇರುತ್ತಾರೆ. ಎರಡು ಕಡೆಯಿಂದ ತಲಾ ಒಂದೊಂದು ಕುದುರೆ (ಕೃತಕವಾಗಿ ತಯಾರಿಸಿದ್ದು) ಹಾಗೂ ಮೊಗ ಮುಖಾಮುಖಿ ಆಗುತ್ತಿದ್ದಂತೆ ಪರಸ್ಪರ ಊರಿನವರು ಆಲಂಗಿಸಿಕೊಂಡು ಸಂಪ್ರ್ರದಾಯಿಕ ವಾಲಗಕ್ಕೆ ಹೆಜ್ಜೆಹಾಕುತ್ತಾರೆ.

ಕೆಸರೆರಚಾಟ

ಕೆಸರೆರಚಾಟ

ನಂತರ ಅಂಬಲದ ಸಮೀಪದ ದೇವರ ಕೆರೆಯಿಂದ ಕೆಸರನ್ನು ತಂದು ಹಿರಿಯರು, ಕಿರಿಯರು, ಮಕ್ಕಳು ಎಂಬ ಭೇದವಿಲ್ಲದೆ ಪರಸ್ಪರ ಎರಚಾಡಿ ಅಲಂಗಿಸಿಕೊಳ್ಳುತ್ತಾರೆ. ಇಲ್ಲಿ ಹೆಂಗಸರಿಗೆ ಹಾಗೂ ಪರ ಊರಿನವರಿಗೆ ಹಾಗೂ ನೆಂಟರಿಗೆ ಕೆಸರು ಎರಚುವಂತಿಲ್ಲ. ಆದರೆ ಪರ ಊರಿನವರಿಗೆ ಹಾಗೂ ನೆಂಟರಿಗೆ ಮುಕ್ತವಾಗಿ ಇಲ್ಲಿ ಕುಣಿಯಲು ಅವಕಾಶವಿದೆ. ಅಂತಹವರಿಗೆ ಒಂದೊಂದು ಬೆತ್ತದ ಕೋಲು ನೀಡಲಾಗುತ್ತದೆ. ಆ ಕೋಲು ಹಿಡಿದವರಿಗೆ ಕೆಸರು ಎರಚುವಂತಿಲ್ಲ.

ಈ ಅಂಬಲದಲ್ಲಿ ಸುಮಾರು ಒಂದು ಘಂಟೆ ಕಾಲ ಪರಸ್ಪರ ಕೆಸರು ಎರಚಿ ಸಂಭ್ರಮಿಸುತ್ತಾರೆ. ಬಳಿಕ ಭದ್ರಕಾಳಿ ದೇವಸ್ಥಾನದಲ್ಲಿ ಸೇರಿ ಮೂರು ಸುತ್ತು ಬಂದು ಹರಕೆ, ಕಾಣಿಕೆ ಹಾಕುವ ಮೂಲಕ ಹಬ್ಬಕ್ಕೆ ತೆರೆ ಎಳೆಯಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+