ಮುಂಗಾರು ಮಳೆ; ಕೊಡಗಿಗೆ ಬಂದ ಎನ್‍ಡಿಆರ್‌ಎಫ್ ಪಡೆ
ಮಡಿಕೇರಿ, ಜುಲೈ 03; ಮುಂಗಾರು ಮಳೆಯ ಸಂದರ್ಭದಲ್ಲಿ ಪಾಕೃತಿಕ ವಿಕೋಪಗಳು ಸಂಭವಿಸಿದರೆ ರಕ್ಷಣಾ ಕಾರ್ಯಕ್ಕಾಗಿ ಕೊಡಗು ಜಿಲ್ಲೆಗೆ ಎನ್‌ಡಿಆರ್‌ಎಫ್ ಪಡೆ ಆಗಮಿಸಿದೆ. ಈ ಪಡೆ ನಡೆಸಿದ ಅಣಕು ಪ್ರದರ್ಶನದಲ್ಲಿ ಪೊಲೀಸ್, ಅಗ್ನಿಶಾಮಕ, ಗೃಹರಕ್ಷಕ ದಳ ಜೊತೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಪ್ರಾಕೃತಿಕ ವಿಕೋಪ ಸಂಭವಿಸಿದಲ್ಲಿ ಹೇಗೆ ರಕ್ಷಣಾ ಕಾರ್ಯವನ್ನು ಕೈಗೊಳ್ಳಬೇಕು? ಎಂಬ ಬಗ್ಗೆ ಅಣಕು ಪ್ರದರ್ಶನ ಮಡಿಕೇರಿ ತಾಲ್ಲೂಕಿನ ಹೆಬ್ಬೆಟ್ಟಗೇರಿ ಗ್ರಾಮದಲ್ಲಿ ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ನೇತೃತ್ವದಲ್ಲಿ ನಡೆಯಿತು. ಕೊಡಗು ಜಿಲ್ಲಾಡಳಿತ, ಎನ್‍ಡಿಆರ್‌ಎಫ್, ಪೊಲೀಸ್ ಮತ್ತು ಅಗ್ನಿಶಾಮಕ, ಗೃಹ ರಕ್ಷಕ ದಳ ಹೀಗೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಪ್ರಾತ್ಯಕ್ಷಿಕೆ ನಡೆಯಿತು.

ಭೂಕುಸಿತ, ಪ್ರವಾಹ ಮತ್ತಿತರ ವಿಪತ್ತುಗಳು ಸಂಭವಿಸಿದ ಸಂದರ್ಭದಲ್ಲಿ ರಕ್ಷಣಾ ಕಾರ್ಯಗಳನ್ನು ಹೇಗೆ ಕೈಗೊಳ್ಳಬೇಕು? ಎಂಬ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿಬ್ಬಂದಿಯವರು ಸಹ ಅಣಕು ಪ್ರದರ್ಶನಕ್ಕೆ ಕೈ ಜೋಡಿಸಿದರು.ಜನರ ರಕ್ಷಣೆ ಹೇಗೆ ಮಾಡುತ್ತೇವೆ? ಎಂದು ಅಧಿಕಾರಿಗಳು ತಿಳಿಸಿಕೊಟ್ಟರು.
ಹಲವು ರೀತಿಯ ಪ್ರದರ್ಶನ; ಭಾರೀ ಮಳೆಯ ಕಾರಣ ಪ್ರವಾಹ, ಭೂ ಕುಸಿತ ಮುಂತಾದ ಪ್ರಾಕೃತಿಕ ವಿಕೋಪ ಸಂಭವಿಸಿದಲ್ಲಿ ಅಂತಹ ಸ್ಥಳದಲ್ಲಿ ವಿದ್ಯುತ್ ಕಡಿತಗೊಳಿಸುವುದು, ಘಟನಾ ಸ್ಥಳವನ್ನು ಸೀಲು ಮಾಡುವುದು, ಬಳಿಕ ರಕ್ಷಣಾ ಕಾರ್ಯ ಕೈಗೊಂಡು ಪ್ರಥಮ ಚಿಕಿತ್ಸೆ ನೀಡುವುದು, ಗಂಭೀರ ಗಾಯವಾಗಿದ್ದಲ್ಲಿ ಆಸ್ಪತ್ರೆಗೆ ಕರೆದೊಯ್ಯುವುದು ಹೀಗೆ 9ಕ್ಕೂ ಹೆಚ್ಚು ರೀತಿಯ ಅಣಕು ಪ್ರದರ್ಶನವನ್ನು ನಡೆಸಲಾಯಿತು.
ಅಣಕು ಕಾರ್ಯಾಚರಣೆಯಲ್ಲಿ ಎನ್‍ಡಿಆರ್‌ಎಫ್ ತಂಡದ ಇನ್ಸ್‌ಪೆಕ್ಟರ್ ಶಾಂತಿಲಾಲ್ ಜಾಟಿಯಾ ಅವರ ನೇತೃತ್ವದಲ್ಲಿ 23 ಮಂದಿ, ಪೊಲೀಸ್ ಇಲಾಖೆಯಿಂದ ಡಿಎಆರ್ ತಂಡದ ಚೆನ್ನನಾಯಕ ನೇತೃತ್ವದಲ್ಲಿ 15 ಜನ ಪೊಲೀಸರು, ಅಗ್ನಿಶಾಮಕ ಇಲಾಖೆಯಿಂದ ನಾಗರಾಜು ನೇತೃತ್ವದಲ್ಲಿ 8 ಮಂದಿ, ಗೃಹ ರಕ್ಷಕ ದಳ ವಿಭಾಗದಿಂದ ಅಕ್ಷಯ್ ಅವರ ನೇತೃತ್ವದ 8 ಮಂದಿ ಸಿಬ್ಬಂದಿಗಳು ಸೇರಿ ಒಟ್ಟು 54 ಸಿಬ್ಬಂದಿಗಳು ಪಾಲ್ಗೊಂಡರು.
ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, "ಜಿಲ್ಲಾಡಳಿತದ ಸಹಯೋಗದಲ್ಲಿ ಎನ್‍ಡಿಆರ್‌ಎಫ್, ಪೊಲೀಸ್, ಗೃಹರಕ್ಷಕ ದಳ ವಿವಿಧ ಇಲಾಖೆಗಳ ಸಹಕಾರದಲ್ಲಿ ಅಣಕು ಪ್ರದರ್ಶನ ಏರ್ಪಡಿಸಲಾಗಿದೆ. ಹೆಚ್ಚಿನ ಮಳೆಯಿಂದ ಪ್ರವಾಹ, ಭೂಕುಸಿತ ಉಂಟಾದಲ್ಲಿ ರಕ್ಷಣಾ ಕಾರ್ಯ ಕೈಗೊಳ್ಳುವ ಬಗ್ಗೆ ಜನರಿಗೆ ಮಾಹಿತಿ ನೀಡಲಾಯಿತು" ಎಂದರು.
"ಕೊಡಗು ಜಿಲ್ಲೆಯಲ್ಲಿ 2018, 2019, 2020ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ತುಂಬಾ ತೊಂದರೆ ಆಗಿತ್ತು. ಆ ನಿಟ್ಟಿನಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಹೇಗೆ ಕೈಗೊಳ್ಳಬೇಕು? ಎಂಬ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಅಣಕು ಪ್ರದರ್ಶನದಿಂದ ಜನರಿಗೆ ಮಾಹಿತಿ ನೀಡಲಾಗಿದೆ" ಎಂದು ಹೇಳಿದರು.
ಕಡಿಮೆ ಮಳೆ; ಈ ಬಾರಿ ಜೂನ್ ತಿಂಗಳಿನಲ್ಲಿ ರಾಜ್ಯಾದ್ಯಂತ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ನೈಋತ್ಯ ಮುಂಗಾರು ಮಳೆಯ ಕೊರತೆ ಉಂಟಾಗಿದೆ. ಕೊಡಗು ಜಿಲ್ಲೆಯಲ್ಲಿಯೂ ಜೂನ್ ತಿಂಗಳಲ್ಲಿ ಸರಾಸರಿಗಿಂತ ಕಡಿಮೆ ಮಳೆಯಾಗಿದೆ. ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಸರಾಸರಿಯಷ್ಟು ಮಳೆಯಾಗುವ ಸಾಧ್ಯತೆ ಇದೆ.
ಜಿಲ್ಲೆಯಲ್ಲಿರುವ ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು. ಸದ್ಯ ಡ್ಯಾಂನಲ್ಲಿನ ನೀರಿನ ಮಟ್ಟ 2821.62 ಅಡಿಗಳು. ಕಳೆದ ವರ್ಷ ಇದೇ ದಿನ 2857.38 ಅಡಿಗಳ ನೀರಿನ ಸಂಗ್ರಹವಿತ್ತು. ಜಲಾಶಯಕ್ಕೆ ನೀರಿನ ಒಳಹರಿವು 608 ಕ್ಯುಸೆಕ್, ಹೊರ ಹರಿವು ನದಿಗೆ 30 ಕ್ಯುಸೆಕ್. ನಾಲೆಗೆ 20 ಕ್ಯುಸೆಕ್ ಆಗಿದೆ.












Click it and Unblock the Notifications