ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರ್ಕಾರಿ ಶಾಲೆಯಂದ್ರೆ ಹಾಕತ್ತೂರು ಶಾಲೆಯಂತಿರಬೇಕು

By ಬಿಎಂ ಲವಕುಮಾರ್, ಮಡಿಕೇರಿ
|
Google Oneindia Kannada News

ಗ್ರಾಮಸ್ಥರ ಸಹಕಾರ.. ಶಿಕ್ಷಕರ ನಿಷ್ಕಲ್ಮಶ ಪ್ರಾಮಾಣಿಕ ಸೇವೆ.. ಮಕ್ಕಳಲ್ಲಿ ಕಲಿಯುವ ಹುಮ್ಮಸ್ಸು.. ಇಷ್ಟು ಇದ್ದರೆ ಸರ್ಕಾರಿ ಶಾಲೆ ಕೂಡ ಯಾವುದೇ ಖಾಸಗಿ ಶಾಲೆಗಳಿಗೂ ಕಡಿಮೆಯಿಲ್ಲದಂತೆ ಅಭಿವೃದ್ಧಿ ಪಥದತ್ತ ಸಾಗಬಹುದು.

ಇದಕ್ಕೆ ಸಾಕ್ಷಿಯಾಗಿ ನಿಂತಿದೆ ಮಡಿಕೇರಿಗೆ ಸಮಾರು 10 ಕಿ.ಮೀ. ದೂರದಲ್ಲಿರುವ ಹಾಕತ್ತೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆ. 35 ವರ್ಷಗಳ ಹಿಂದೆ ಸುತ್ತಮುತ್ತಲ ಗ್ರಾಮದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಈ ಪ್ರೌಢಶಾಲೆಯನ್ನು ಆರಂಭಿಸಲಾಯಿತು. ಆರಂಭದ ದಿನಗಳಲ್ಲಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಪಕ್ಕದ ಪುಟ್ಟ ಕಟ್ಟಡದಲ್ಲಿ ಆರಂಭವಾಯಿತಾದರೂ ಕೊಠಡಿಯ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಯಿತು.

ಗ್ರಾಮಕ್ಕೊಂದು ಉತ್ತಮ ರೀತಿಯ ಸರ್ಕಾರಿ ಪ್ರೌಢಶಾಲೆಯನ್ನು ನಿರ್ಮಿಸಬೇಕೆಂಬ ಉದ್ದೇಶ ಗ್ರಾಮಸ್ಥರಲ್ಲಿ ಮೊಳಕೆಯೊಡಯಲಾರಂಭಿಸಿತು. ಆಗ ದ್ವಾರಕ ಎಸ್ಟೇಟ್‌ನ ಮಾಲೀಕರು, ವಕೀಲರು ಆಗಿದ್ದ ಸಿ.ಎಸ್.ನಾರಾಯಣ ಎಂಬುವರು ಮೂರು ಎಕರೆ ಹಾಗೂ ಶ್ರೀಮತಿ ಬುಟ್ಟಿಯಂಡ ಕಾವೇರಿ ತಿಮ್ಮಯ್ಯ ಎಂಬುವರು 36 ಸೆಂಟ್ ಜಾಗವನ್ನು ಉದಾರವಾಗಿ ನೀಡಿದರು. [ಸೋರುತಿಹುದು ಮಚ್ಚರೆ ಶಾಲೆಯ ಮಾಳಿಗೆ, ಪಾಠ ಮಾಡುವುದು ಹೇಗೆ?]

Model government school in Hakattur, Madikeri

ಸರ್ಕಾರದ ಅನುದಾನದ ಜತೆಗೆ ಹಲವಾರು ದಾನಿಗಳ ಸಹಕಾರದೊಂದಿಗೆ ಸುಸಜ್ಜಿತ ಕಟ್ಟಡದೊಂದಿಗೆ ಪ್ರೌಢಶಾಲೆ ಆರಂಭವಾಯಿತು. ಇವತ್ತು ಗ್ರಾಮಸ್ಥರು, ಜನಪ್ರತಿನಿಧಿಗಳು, ಇಲಾಖೆಯ ಅಧಿಕಾರಿಗಳು, ಶಿಕ್ಷಕರು, ನಿವೃತ್ತ ಶಿಕ್ಷಕರು, ಎಸ್‌ಡಿಎಂಸಿ ಪೋಷಕರು, ಹಳೆಯ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿಗಳ ಸಹಕಾರದೊಂದಿಗೆ ಇಂದು ಶಾಲೆಯು ಸಕಲ ಸೌಲಭ್ಯಗಳನ್ನು ಹೊಂದಿ ಗಮನಸೆಳೆಯುತ್ತಿದೆ.

ಇವತ್ತು ಇಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳಿಗೆ ಪರಿಪೂರ್ಣ ತರಬೇತಿಯನ್ನು ನೀಡಲಾಗುತ್ತಿದೆ. 2015-16ನೇ ಶೈಕ್ಷಣಿಕ ವರ್ಷದಲ್ಲಿ ಹತ್ತನೇ ತರಗತಿಯಲ್ಲಿ ಒಟ್ಟು 56 ವಿದ್ಯಾರ್ಥಿಗಳಲ್ಲಿ 55 ವಿದ್ಯಾರ್ಥಿಗಳು ಉತ್ತೀರ್ಣರಾಗುವುದರ ಮೂಲಕ ಶೇಕಡ 98.21% ಫಲಿತಾಂಶವು ಶಾಲೆಗೆ ಬಂದಿದೆ. ಗುಣಮಟ್ಟದ ಕಲಿಕೆಯಲ್ಲಿ ಸರ್ಕಾರಿ ಪ್ರೌಢಶಾಲೆಗಳಲ್ಲಿ ಹಾಕತ್ತೂರು ಪ್ರೌಢಶಾಲೆಯು ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿದ್ದು, ಅತ್ಯುತ್ತಮ ಸರ್ಕಾರಿ ಪ್ರೌಢಶಾಲೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ವಿಧಾನಸಭಾ ಸದಸ್ಯರು, ವಿಧಾನ ಪರಿಷತ್ ಸಭಾಪತಿಗಳು, ಸಂಸದರು, ಜಿಲ್ಲಾ ಪಂಚಾಯತ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಮಂಡಳಿ ಹಾಗೂ ದಾನಿಗಳ ಸಹಾಯದಿಂದ ಶಾಲೆಯಲ್ಲಿ 100 ಅಡಿ ಉದ್ದ ಹಾಗೂ 40 ಅಡಿ ಅಗಲದ ಸುಸಜ್ಜಿತವಾದ ಸಭಾಭವನವನ್ನು ನಿರ್ಮಿಸಲಾಗಿದೆ. ಶಾಲೆಯಲ್ಲಿ ಹೊಲಿಗೆ ತರಬೇತಿ ಕೇಂದ್ರವಿದ್ದು, ಇಲಾಖೆ ಹಾಗೂ ದಾನಿಗಳಿಂದ ಪಡೆದ 13 ಹೊಲಿಗೆ ಯಂತ್ರಗಳಲ್ಲಿ ವಿದ್ಯಾರ್ಥಿಗಳಿಗೆ ಹೊಲಿಗೆ ತರಬೇತಿಯನ್ನು ನೀಡಲಾಗುತ್ತಿದೆ.

Read Also : ಖಾಸಗಿ ಶಾಲೆಗೆ ಸೆಡ್ಡು ಹೊಡೆದ ಮಂಡ್ಯದ ಸರ್ಕಾರಿ ಶಾಲೆ

ಹಾಗೆಯೇ ಶಾಲೆಯಲ್ಲಿ ಸುಸಜ್ಜಿತವಾದ ಕಂಪ್ಯೂಟರ್ ಲ್ಯಾಬ್‌ನೊಂದಿಗೆ 19 ಕಂಪ್ಯೂಟರ್‌ಗಳಿದ್ದು ಇವುಗಳ ಮೂಲಕ ಕಂಪ್ಯೂಟರ್ ಶಿಕ್ಷಣವನ್ನು ನೀಡಲಾಗುತ್ತಿದೆ. ಎಜುಸ್ಯಾಟ್, ಡಿಶ್‌ಗಳನ್ನು ಶಾಲೆಯಲ್ಲಿ ಅಳವಡಿಸಲಾಗಿದ್ದು, ಡಿಎಸ್‌ಇಆರ್‌ಟಿಯಿಂದ ಪ್ರಸಾರವಾಗುವ ವಿದ್ಯಾವಾಹಿನಿ ಕಾರ್ಯಕ್ರಮಗಳನ್ನು ವೀಕ್ಷಿಸುವ ಅವಕಾಶವನ್ನು ವಿದ್ಯಾರ್ಥಿಗಳಿಗೆ ಕಲ್ಪಿಸಿಕೊಡಲಾಗಿದೆ. ಶಾಲೆಯಲ್ಲಿ ಸ್ಮಾರ್ಟ್‌ಕ್ಲಾಸ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದು, ತಂತ್ರಜ್ಞಾನದ ಮೂಲಕ ವಿದ್ಯಾರ್ಥಿಗಳಿಗೆ ಬೋಧನೆಯನ್ನು ಮಾಡಲಾಗುತ್ತಿದೆ.

ಕಳೆದ ಹಲವು ವರ್ಷಗಳಿಂದ ಶಾಲೆಯಲ್ಲಿ ಒಂದೊಂದು ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡು ಬಂದಿರುವುದು ಈ ಶಾಲೆಯ ಮತ್ತೊಂದು ವಿಶೇಷ. ಗುರುವಂದನಾ ಕಾರ್ಯಕ್ರಮ, ಅಡುಗೆ ಸ್ಪರ್ಧೆ, ಹೂ ಜೋಡಣೆ, ಮಕ್ಕಳ ಸಂತೆ, ಓದುವ ಹಬ್ಬ, ಬರೆಯುವ ಹಬ್ಬ, ಊಟದ ಹಬ್ಬ, ದಾಖಲಾತಿ ಹಬ್ಬ, ಪರೀಕ್ಷೆ ಹಬ್ಬ ಇವೇ ಮೊದಲಾದ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗಾಗಿ ಶಾಲೆಯು ಹಗಲಿರುಳು ಶ್ರಮಿಸುತ್ತಿದೆ.

Read Also : ಕನ್ನಡ ಶಾಲೆಗಳನ್ನು ಮುಚ್ಚಲು ಹೊರಟಿರುವ ಸರ್ಕಾರಕ್ಕೆ ಧಿಕ್ಕಾರ!

ಶ್ರೀಪತಿ ಹೆಬ್ಬಾರ್ (ಅರುವತ್ತೋಕ್ಲು ತೋಟ), ದಂಬೆಕೋಡಿ ಲೀಲಾವತಿ ಚಿಣ್ಣಪ್ಪ (ಮಡಿಕೇರಿ), ಮಂಞೀರ ಸಾಬು ತಿಮ್ಮಯ್ಯ (ಬಿಳಿಗೇರಿ), ಶಕ್ತಿ ಪ್ರತಿಷ್ಠಾನ (ಮಡಿಕೇರಿ), ಮಲ್ಲಂಗಡ ಕುಸುಮ್ ನೆಹರು (ಅಧ್ಯಕ್ಷರು, ಕಾಂಫರ್ಟ್ ಫೌಂಡೆಶನ್, ಬೆಂಗಳೂರು), ರೋಟರಿ ಮಿಸ್ಟಿ ಹಿಲ್ಸ್ (ಮಡಿಕೇರಿ), ಮಾತಂಡ ಕಾರ್ಯಪ್ಪ (ಮಾಲೀಕರು, ಇಂಡೇನ್ ಗ್ಯಾಸ್, ಮಡಿಕೇರಿ), ಹೀಗೆ ಹಲವಾರು ದಾನಿಗಳು ಸದಾ ಸಹಾಯ ಹಸ್ತ ನೀಡುತ್ತಿದ್ದು, ಬಡ ವಿದ್ಯಾರ್ಥಿಗಳ ಬದುಕಿಗೆ ಆಶಾದೀಪವಾಗಿದ್ದಾರೆ.

ಹತ್ತನೇ ತರಗತಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳ ಪ್ರಥಮ ಪಿಯುಸಿ ತರಗತಿಯ ಸಂಪೂರ್ಣ ವೆಚ್ಚವನ್ನು ದಾನಿಗಳ ಸಹಾಯದಿಂದ ಶಾಲಾವತಿಯಿಂದಲೇ ಭರಿಸುವ ಮೂಲಕ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಗುತ್ತಿದ್ದು, ಈಗಾಗಲೇ 12 ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಪಡೆದುಕೊಂಡಿರುತ್ತಾರೆ. ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಅತೀ ಹೆಚ್ಚು ಅಂಕ ಪಡೆದ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಸರಕಾರದ ವತಿಯಿಂದ ಉಚಿತ ಕಂಪ್ಯೂಟರ್ ಅನ್ನು ನೀಡುತ್ತಿದ್ದು, ಈಗಾಗಲೇ ಈ ಶಾಲೆಯ 10 ವಿದ್ಯಾರ್ಥಿಗಳು ಉಚಿತ ಕಂಪ್ಯೂಟರನ್ನು ಪಡೆದುಕೊಂಡಿರುವುದು ಶಾಲೆಯಲ್ಲಿ ಸಿಗುತ್ತಿರುವ ಗುಣಮಟ್ಟದ ಶಿಕ್ಷಣಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಅಂತೆಯೇ ಕಳೆದ ಹಲವು ವರ್ಷಗಳಿಂದ ಶಾಲೆಯ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಾದ ಪ್ರಬಂಧ, ಕ್ವಿಜ್, ಭಾಷಣ, ಕರಾಟೆ ಹಾಗೂ ಕ್ರೀಡೆಗಳಲ್ಲಿ ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಭಾಗವಹಿಸಿ ಬಹುಮಾನವನ್ನು ಪಡೆದು ಶಾಲೆಗೆ ಕೀರ್ತಿಯನ್ನು ತರುತ್ತಿರುವುದು ವಿಶೇಷವಾಗಿದೆ.

Read Also : ಮರಳಿ ಶಾಲೆಗೆ : ಇಲ್ಲಿ ಬಾಗಿಲು ತೆರೆದಿದೆ, ಛಾವಣಿಯೂ ತೆರೆದಿದೆ!

ಶಾಲೆಗೆ ಅಗತ್ಯವಿರುವ ಕುಡಿಯುವ ನೀರಿನ ವ್ಯವಸ್ಥೆ, ಬಾಲಕ-ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ, ಕ್ರೀಡಾಂಗಣ, ಅಕ್ಷರ ದಾಸೋಹ ಕೊಠಡಿ, ಗ್ರಂಥಾಲಯ ಮೊದಲಾದ ಸೌಲಭ್ಯಗಳು ಇಲ್ಲಿದೆ. 2013-14 ಮತ್ತು 2014-15ನೇ ಸಾಲಿನಲ್ಲಿ ಈ ಶಾಲೆಗೆ ಹಸಿರು ಶಾಲೆ ಪ್ರಶಸ್ತಿ, 2015-16ನೇ ಸಾಲಿನಲ್ಲಿ ವಂಡರ್ ಲಾ ಸಂಸ್ಥೆ, ಬೆಂಗಳೂರು ವತಿಯಿಂದ ಉತ್ತಮ ಹಸಿರು ಶಾಲೆ ಎಂಬ ಪ್ರಶಸ್ತಿಯು ಶಾಲೆಗೆ ಲಭಿಸಿದೆ. ಒಂದು ಸರ್ಕಾರಿ ಪ್ರೌಢಶಾಲೆ ಹೇಗಿರಬೇಕೆಂಬುವುದನ್ನು ಹಾಕತ್ತೂರು ಸರ್ಕಾರಿ ಪ್ರೌಢಶಾಲೆ ತೋರಿಸಿಕೊಟ್ಟಿದೆ ಎಂದರೆ ಅತಿಶಯೋಕ್ತಿಯಾಗಲಾರದು.

English summary
A government school in Hakattur village in Madikeri district has shown that if there is a will, even government schools can compete with private schools in all respect. With aid from several people and organizations, the school has grown as model school.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X