Kodagu: ಪುಷ್ಯ ಮಳೆಯ ಅಬ್ಬರಕ್ಕೆ ಬೆಚ್ಚಿ ಬಿದ್ದ ಕೊಡಗು: ದಿನದಿಂದ ದಿನಕ್ಕೆ ಹೆಚ್ಚಿದ ಆತಂಕ
ಮಡಿಕೇರಿ, ಜುಲೈ 30: ಕೊನೆಯ ಚರಣದಲ್ಲಿರುವ ಪುಷ್ಯ ಮಳೆ ಕೊಡಗಿನಲ್ಲಿ ಮತ್ತೆ ಅಬ್ಬರಿಸಿದ ಪರಿಣಾಮ ಎರಡನೇ ಬಾರಿಗೆ ಭಾಗಮಂಡಲ ತ್ರಿವೇಣಿ ಸಂಗಮ ಸೇರಿದಂತೆ ಕೊಡಗಿನ ಹಲವು ಪ್ರದೇಶಗಳು ಜಲಾವೃತಗೊಂಡಿದೆ. ಜಿಲ್ಲೆಗೆ ಹೊಂದಿಕೊಂಡಂತಿರುವ ಕೇರಳದ ವಯನಾಡು ಪ್ರದೇಶದಲ್ಲಿ ಮಳೆ ಅಬ್ಬರಿಸಿ ಭಾರೀ ಭೂಕುಸಿತವಾಗಿರುವ ಬೆನ್ನಲ್ಲೇ ಅದರ ಪರಿಣಾಮಗಳು ಕೊಡಗಿನ ಮೇಲೆ ಬೀರಲಾರಂಭಿಸಿದ್ದು ಜನ ಆತಂಕದಲ್ಲಿ ದಿನ ಕಳೆಯುವಂತಾಗಿದೆ.
ಜುಲೈ 15 ರಿಂದ ಆಗಸ್ಟ್ 15ರವರೆಗಿನ ದಿನಗಳನ್ನು ಅತಿಹೆಚ್ಚು ಮಳೆ ಬೀಳುವ ದಿನಗಳೆಂದು ಪರಿಗಣಿಸಲಾಗಿದೆ. ಅದರಲ್ಲೂ 2018ರ ನಂತರವಂತು ಇದೇ ಸಮಯದಲ್ಲಿ ಭಾರೀ ಮಳೆ ಸುರಿಯುವುದರೊಂದಿಗೆ ಭೂಕುಸಿತದಂತಹ ದುರ್ಘಟನೆಗಳು ನಡೆಯುತ್ತಿವೆ. ಕಳೆದ ಮೂರು ವರ್ಷಗಳಿಂದ ಕೊಡಗಿನಲ್ಲಿ ಭೂಕುಸಿತದಂತಹ ಘಟನೆಗಳು ನಡೆದಿರಲಿಲ್ಲ. ಜತೆಗೆ ಭಾರೀ ಪ್ರಮಾಣದ ಮಳೆಯೂ ಸುರಿದಿರಲಿಲ್ಲ. ಆದರೀಗ ಸುರಿಯುತ್ತಿರುವ ಮಳೆಯ ಪ್ರಮಾಣವನ್ನು ಗಮನಿಸಿದರೆ ಭಯ ಹುಟ್ಟಿಸುವಂತಿದೆ.

ಇದೀಗ ಒಂದೇ ದಿನದಲ್ಲಿ ಜಿಲ್ಲೆಯಲ್ಲಿ ಸರಾಸರಿ 117.40 ಮಿ.ಮೀ. ಮಳೆಯಾಗಿರುವುದು ಭಯಹುಟ್ಟಿಸಿದೆ. ಜತೆಗೆ ಭಾಗಮಂಡಲ ವ್ಯಾಪ್ತಿಯಲ್ಲಿ 245 ಮಿ.ಮೀ. ಮಳೆ ಸುರಿದಿರುವುದು ಜನಜೀವನವನ್ನು ದುಸ್ತರಗೊಳಿಸಿದೆ. ಮಳೆಯ ರಭಸಕ್ಕೆ ಭಾಗಮಂಡಲದ ತ್ರಿವೇಣಿ ಸಂಗಮ ಜಲಾವೃತವಾಗಿದ್ದು, ಕಾವೇರಿ ನದಿ ಪಾತ್ರದಲ್ಲಿ ಮತ್ತೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ವಿರಾಜಪೇಟೆ ಹೋಬಳಿ ಬೇತ್ರಿ ಕಾವೇರಿ ಹಿನ್ನಿರಿನಲ್ಲಿ ಸಿಲುಕಿದ ಆರು ಜನರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಬೋಟ್ ಮೂಲಕ ರಕ್ಷಣೆ ಮಾಡಿದ್ದಾರೆ. ಈಗಾಗಲೇ ಪ್ರವಾಹದಿಂದ ಸಂಕಷ್ಟಕ್ಕೀಡಾಗಿದ್ದ ಜನರಿಗೆ ಮತ್ತೆ ಮಳೆಯ ಅಬ್ಬರ, ಕಾವೇರಿಯ ಪ್ರವಾಹ ಬೆಚ್ಚಿ ಬೀಳಿಸಿದೆ.
ಕಳೆದ ವರ್ಷಕ್ಕಿಂತ 945 ಮಿ.ಮೀ ಹೆಚ್ಚು ಮಳೆ
ಸದ್ಯ ಕೊಡಗಿನಲ್ಲಿ ಜನವರಿಯಿಂದ ಇಲ್ಲಿವರೆಗೆ ಎರಡು ಸಾವಿರ ಮಿಲಿ ಮೀಟರ್ ಮಳೆ ಸುರಿದಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು 945 ಮಿ.ಮೀ,ನಷ್ಟು ಹೆಚ್ಚು ಮಳೆಯಾಗಿರುವುದು ಕಂಡು ಬರುತ್ತಿದೆ. ಕಳೆದ ವರ್ಷ ಈ ಸಮಯದಲ್ಲಿ ಕೇವಲ 1171 ಮಿ.ಮೀ ಮಾತ್ರ ಮಳೆ ಸುರಿದಿತ್ತು. ಮಡಿಕೇರಿ ತಾಲೂಕು ವ್ಯಾಪ್ತಿಯಲ್ಲಿ ಭಾರೀ ಮಳೆ ಸುರಿಯುತ್ತಿರುವುದು ಜನರ ನಿದ್ದೆಗೆಡಿಸಿದೆ. ಒಂದೇ ದಿನದಲ್ಲಿ 180.03 ಮಿ.ಮೀ. ಮಳೆ ಸುರಿಯುವ ಮೂಲಕ ಜನವರಿಯಿಂದ ಇಲ್ಲಿಯವರೆಗಿನ ಮಳೆಯ 2877.27 ಮಿ.ಮೀ,ಗೆ ತಲುಪಿದೆ. ಮಳೆ ಹೀಗೆಯೇ ಮುಂದುವರೆದರೆ ಭಾರೀ ಹಾನಿಯಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಜಿಲ್ಲೆಯಲ್ಲಿ ಹೋಬಳಿವಾರು ಮಡಿಕೇರಿ ಕಸಬಾ 112.80, ನಾಪೋಕ್ಲು 177.80, ಸಂಪಾಜೆ 184.50, ಭಾಗಮಂಡಲ 245, ವಿರಾಜಪೇಟೆ 142, ಅಮ್ಮತ್ತಿ 107.50, ಹುದಿಕೇರಿ 147.30, ಶ್ರೀಮಂಗಲ 136.40, ಪೊನ್ನಂಪೇಟೆ 149, ಬಾಳೆಲೆ 80, ಸೋಮವಾರಪೇಟೆ ಕಸಬಾ 80.20, ಶನಿವಾರಸಂತೆ 73, ಶಾಂತಳ್ಳಿ 165, ಕೊಡ್ಲಿಪೇಟೆ 90, ಕುಶಾಲನಗರ 42, ಸುಂಟಿಕೊಪ್ಪ 62 ಮಿ.ಮೀ.ಮಳೆ ಸುರಿಯುತ್ತಿದೆ. ಈ ಪ್ರಮಾಣದ ಮಳೆ ಸುರಿದರೆ ಸಂಕಷ್ಟ ತಪ್ಪಿದಲ್ಲ.
ಬಿಡುವು ನೀಡದ ಮಳೆಯಿಂದ ಅನಾಹುತ
ಇನ್ನು ಕುಶಾಲನಗರ ಬಳ್ಳಿಯ ಗೊಂದಿಬಸವನಹಳ್ಳಿಯ ಕೆರೆ ಏರಿ ಒಡೆದು ಭಾರಿ ನಷ್ಟವಾಗಿದೆ. ಜತೆಗೆ ಕಾವೇರಿ ನದಿ ಪ್ರವಾಹೋಪಾದಿಯಲ್ಲಿ ಹರಿಯುತ್ತಿದ್ದು ಭಾರೀ ಸಂಕಷ್ಟ ಎದುರಾಗಿದೆ. ಈಗಾಗಲೇ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಒಟ್ಟಾರೆ ಕೊಡಗು ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರಿ ಮಳೆ ಸಂಕಷ್ಟದ ಸರಮಾಲೆಯನ್ನೇ ತಂದೊಡ್ಡಿದ್ದಂತು ನಿಜ. ಮೇ ತಿಂಗಳಿನಿಂದ ಇಲ್ಲಿಯವರೆಗೆ ಈ ವರ್ಷ ಭಾರೀ ಮಳೆ ಸುರಿದಿರುವುದರಿಂದ ಅಂತರ್ಜಲದ ಪ್ರಮಾಣವೂ ಹೆಚ್ಚಾಗಿದ್ದು, ಬೆಟ್ಟಗುಡ್ಡ ಸೇರಿದಂತೆ ಎಲ್ಲೆಡೆಯಲ್ಲಿಯೂ ಜಲಹುಟ್ಟಿ ಹರಿಯುತ್ತಿದೆ. ಹೀಗಾಗಿ ಭೂಕುಸಿತದ ಭಯವೂ ಇಲ್ಲದಿಲ್ಲ. ಹೀಗಾಗಿ ಜನ ಎಚ್ಚರಿಕೆಯಿಂದ ಇರುವುದು ಅತ್ಯಗತ್ಯವಾಗಿದೆ.












Click it and Unblock the Notifications