ಮಡಿಕೇರಿಯಲ್ಲಿ ಹೊಸ ಬದುಕಿಗೆ ಕಾಲಿಟ್ಟ ಸಂತ್ರಸ್ತ ಕುಟುಂಬದ ಯುವತಿ!
ಮಡಿಕೇರಿ, ಆಗಸ್ಟ್ 26 : ಪ್ರಕೃತಿ ವಿಕೋಪದಿಂದಾಗಿ ಕೊಡಗು ಜಿಲ್ಲೆಯಲ್ಲಿ ಜನರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಪ್ರಕೃತಿಯ ಮುನಿಸಿನಿಂದ ಮನೆ ಕಳೆದುಕೊಂಡ ಜೋಡಿ ಭಾನುವಾರ ಹೊಸ ಜೀವನಕ್ಕೆ ಕಾಲಿಟ್ಟಿದೆ. ಜಿಲ್ಲಾಧಿಕಾರಿಗಳು ನವ ಜೋಡಿಗೆ ಶುಭ ಹಾರೈಸಿದರು.
ಭಾನುವಾರ ಆರ್.ಮಂಜುಳಾ ಅವರು ಕೇರಳದ ಕಣ್ಣೂರು ಜಿಲ್ಲೆಯ ರಜೀಶ್ ಅವರನ್ನು ವಿವಾಹವಾದರು. ಮಂಜುಳಾ ಅವರು ಎಮ್ಮೆತ್ತಾಳು ಗ್ರಾಮದವರು. ಅವರ ವಿವಾಹ ಹಿಂದೆಯೇ ನಿಶ್ಚಯವಾಗಿತ್ತು. ಆದರೆ, ಗುಡ್ಡ ಕುಸಿತದಲ್ಲಿ ಅವರ ಗ್ರಾಮ ಸಂಪೂರ್ಣವಾಗಿ ನಾಶವಾಗಿದೆ.
ಮಡಿಕೇರಿ ನಗರದ ನೆರೆ ಸಂತ್ರಸ್ತರ ಪರಿಹಾರ ಕೇದ್ರ ಗಜ್ಜೆ ಸಂಗಪ್ಪ ಹಾಲ್‌ನಲ್ಲಿ ಭಾನುವಾರ ಮಂಜುಳಾ ಮತ್ತು ರಜೀಶ್ ವಿವಾಹವಾದರು. ಕೊಡಗು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಹೊಸ ಜೀವನಕ್ಕೆ ಕಾಲಿಟ್ಟ ದಂಪತಿಗಳಿಗೆ ಶುಭ ಕೋರಿದರು.

ಮೊದಲೇ ಮದುವೆ ನಿಶ್ಚಯವಾಗಿದ್ದರೂ ನೆರೆ ಪ್ರವಾಹಕ್ಕೆ ತುತ್ತಾಗಿದ್ದ ಕುಟುಂಬಕ್ಕೆ ಸೇರಿದ ಮಂಜುಳ ಅವರ ವಿವಾಹ ನಡೆಯುವ ಬಗ್ಗೆ ಅನಿಶ್ಚಿತತೆ ಎದುರಾಗಿತ್ತು. ಜನರು, ಸಂಘ ಸಂಸ್ಥೆಗಳ ಸಹಕಾರದ ಮೂಲಕ ಸರಳವಿವಾಹ ನಡೆಯಿತು.

ಪ್ರವಾಹದಿಂದ ಎಲ್ಲವನ್ನು ಕಳೆದುಕೊಂಡಿದ್ದ ಪೋಷಕರು ಮಗಳ ವಿವಾಹದ ಬಗ್ಗೆ ಆತಂಕಕ್ಕೆ ಒಳಗಾಗಿದ್ದರು. ಈ ಸಂದರ್ಭದಲ್ಲಿ ಜಿಲ್ಲಾಉಸ್ತುವಾರಿ ಸಚಿವರು, ಜಿಲ್ಲಾಡಳಿತ ಹಾಗೂ ಸಾರ್ವಜನಿಕ ಸಂಘಟನೆಗಳ ನೆರವಿನೊಂದಿಗೆ ನಿಗದಿತ ದಿನಾಂಕದಲ್ಲಿಯೇ ವಿವಾಹ ಮಹೋತ್ಸವ ನಡೆಸಲಾಯಿತು.












Click it and Unblock the Notifications