ಮಡಿಕೇರಿಯಲ್ಲಿ ಅದ್ಧೂರಿ ದಸರಾ ಜನೋತ್ಸವ: ಇಲ್ಲಿದೆ ಕಾರ್ಯಕ್ರಮಗಳ ಸಂಪೂರ್ಣ ವಿವರ
ಮಡಿಕೇರಿ, ಸೆಪ್ಟೆಂಬರ್ 27: ಮೈಸೂರಿನಲ್ಲಿ ನಡೆಯುವ ವಿಶ್ವವಿಖ್ಯಾತ ದಸರಾದಂತೆ ಮಡಿಕೇರಿ ದಸರಾದಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರಲಾಗುತ್ತಿದೆ. ಮಡಿಕೇರಿ ದಸರಾ ವರ್ಷದಿಂದ ವರ್ಷಕ್ಕೆ ಜನಪ್ರಿಯವಾಗಿ ಗಮನಸೆಳೆಯುತ್ತಾ ಬರುತ್ತಿದೆ. ಮಡಿಕೇರಿ ದಸರಾ ವೀಕ್ಷಿಸಲೆಂದೇ ಸಹಸ್ರಾರು ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿ ಈ ಬಾರಿ ಮಡಿಕೇರಿ ದಸರಾದಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಮಡಿಕೇರಿ ದಸರಾ ಜನೋತ್ಸವ ಪ್ರಯುಕ್ತ ಅಕ್ಟೋಬರ್ 4ರಿಂದ ಅಕ್ಟೋಬರ್ 12 ರವರೆಗೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲಾಗಿದೆ. ಅಕ್ಟೋಬರ್ 4 ರಂದು ಸಂಜೆ 6 ಗಂಟೆಗೆ ಗಾಂಧಿ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ. ಅಕ್ಟೋಬರ್ 5 ರಂದು ಬೆಳಗ್ಗೆ 9.30 ಗಂಟೆಯಿಂದ ರೋಟರಿ ಮಿಸ್ಟಿ ಹಿಲ್ಸ್ ಸಹಯೋಗದಲ್ಲಿ 11ನೇ ವರ್ಷದ ಮಕ್ಕಳ ದಸರಾ ಅಂಗವಾಗಿ ಮಕ್ಕಳ ಸಂತೆ, ಮಕ್ಕಳ ಅಂಗಡಿ, ಮಕ್ಕಳ ಮಂಟಪ, ಛದ್ಮವೇಷ ಹಾಗೂ ಕ್ಲೇ ಮಾಡೆಲಿಂಗ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಅಲ್ಲದೇ ಅಂದು ಸಂಜೆ 6 ಗಂಟೆಯಿಂದ ಮಕ್ಕಳಿಂದಲೇ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿದೆ.

ಅಕ್ಟೋಬರ್ 6 ರಂದು ಬೆಳಗ್ಗೆ 10 ಗಂಟೆಗೆ ಮೊದಲ ವರ್ಷದ ಕಾಫಿ ದಸರಾ ಚಾಲನೆಗೊಳ್ಳಲಿದೆ. ಕಾಫಿ ಮಂಡಳಿ, ಕರ್ನಾಟಕ ಬೆಳೆಗಾರರ ಸಂಘ, ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ, ಮೀನುಗಾರಿಕಾ ಇಲಾಖೆ, ಚೆಟ್ಟಳ್ಳಿ ತೋಟಗಾರಿಕಾ ಸಂಶೋಧನಾ ಕೇಂದ್ರ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕಾಫಿ ದಸರಾ ಆಯೋಜಿತವಾಗಿದೆ.
ಕಾಫಿ ದಸರಾ ಪ್ರಯುಕ್ತ ನಿರ್ಮಾಣಗೊಳ್ಳುವ 31 ಮಳಿಗೆಗಳಲ್ಲಿ ಕಾಫಿ, ಕೃಷಿ ಸಂಬಂಧಿತ ಪ್ರದರ್ಶನ, ಮಾರಾಟ ಮೇಳ ಇರಲಿದೆ, 11 ಗಂಟೆಯಿಂದ ಕಲಾ ಸಂಭ್ರಮ ವೇದಿಕೆಯಲ್ಲಿ ಕಾಫಿ ಮತ್ತು ಕೃಷಿ ಸಂಬಂಧಿತ ಪರಿಣಿತರಿಂದ ವಿಚಾರಸಂಕಿರಣ ಆಯೋಜಿತವಾಗಿದೆ. ಸಂಜೆ 5 ಗಂಟೆಯವರೆಗೆ ಮಳಿಗೆಗಳು ಸಾರ್ವಜನಿಕರ ಭೇಟಿಗೆ ತೆರೆದಿರುತ್ತದೆ ಹಾಗೂ ಸಂಜೆ 6 ಗಂಟೆಯಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಅಕ್ಟೋಬರ್ 8 ರಂದು ಮಂಗಳವಾರ 7ನೇ ವರ್ಷದ ಮಹಿಳಾ ದಸರಾ ನಡೆಯಲಿದ್ದು, ವೈವಿಧ್ಯಮಯ ಮನರಂಜನಾ ಸ್ಪರ್ಧೆಗಳು ಮಹಿಳೆಯರಿಗಾಗಿ ಆಯೋಜಿತವಾಗಿದೆ. ಮಡಿಕೇರಿ ನಗರಸಭಾ ಸದಸ್ಯೆಯರು, ಕೊಡಗು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಮಹಿಳಾ ದಸರಾ ಆಯೋಜಿಸಲ್ಪಟ್ಟಿದೆ, ಸಂಜೆ 6 ಗಂಟೆಗೆ ಮಹಿಳೆಯರಿಂದಲೇ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿದೆ.

ಅಕ್ಟೋಬರ್ 9 ರಂದು ಸಂಜೆ 6 ಗಂಟೆಯಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಅಕ್ಟೋಬರ್ 10 ರಂದು ಬೆಳಗ್ಗೆ 9 ಗಂಟೆಗೆ ಕೊಡಗು ಜಿಲ್ಲಾ ಜಾನಪದ ಪರಿಷತ್ ಸಹಯೋಗದಲ್ಲಿ ಜಾನಪದ ದಸರಾ ಆಯೋಜಿಸಲಾಗಿದ್ದು, ಕಲಾಜಾಥಾ, ವೈವಿಧ್ಯಮಯ ಜಾನಪದ ಕಲಾ ತಂಡಗಳ ಪ್ರದರ್ಶನ ನಡೆಯಲಿದೆ. ಸಂಜೆ 6 ಗಂಟೆಗೆ ಸೋಮು ಮತ್ತು ಅಜ್ಜೇಟಿರ ಲೋಕೇಶ್ ಸಂಚಾಲಕತ್ವದಲ್ಲಿ ಯುವ ದಸರಾ ಆಯೋಜಿತವಾಗಿದೆ.
ಅಕ್ಟೋಬರ್ 11ರಂದು ಆಯುಧ ಪೂಜಾ ಪ್ರಯುಕ್ತ ಸಂಜೆ 7 ಗಂಟೆಗೆ ರಾಜ್ಯದ ಹೆಸರಾಂತ ಗಾಯಕರಾದ ಅರ್ಜುನ್ ಜನ್ಯ ಮತ್ತು ರಾಜೇಶ್ ಕೃಷ್ಣನ್ ತಂಡದಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಅಕ್ಟೋಬರ್ 12 ರಂದು ವಿಜಯದಶಮಿ ಹಿನ್ನೆಲೆಯಲ್ಲಿ 7 ಗಂಟೆಯಿಂದ 10 ಗಂಟೆಯವರೆಗೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ರಾತ್ರಿ 10 ಗಂಟೆಯಿಂದ ಮರುದಿನ ಬೆಳಗ್ಗಿನ ಜಾವದವರೆಗೆ ರಾಜ್ಯದ ಹೆಸರಾಂತ ಸಂಗೀತ ತಂಡದಿಂದ ಸಂಗೀತ ರಸಮಂಜರಿ ನಡೆಯಲಿದೆ.












Click it and Unblock the Notifications