ಕೊಡಗಿನಲ್ಲಿ ಮಲಬಾರ್ ಮಲ್ಟಿ ಸ್ಟೇಟ್ ಆಗ್ರೋ ಕೋ-ಆಪರೇಟಿವ್ ಸೊಸೈಟಿ ಸಿಇಒ ಅರೆಸ್ಟ್
ಮಡಿಕೇರಿ, ಅಕ್ಟೋಬರ್ 25: ಕೊಡಗು ಜಿಲ್ಲೆಯ ಗೋಣಿಕೊಪ್ಪ, ವಿರಾಜಪೇಟೆ. ಕುಶಾಲನಗರದಲ್ಲಿ ಮಲಬಾರ್ ಮಲ್ಟಿ ಸ್ಟೇಟ್ ಆಗ್ರೋ ಕೋ-ಆಪರೇಟಿವ್ ಸೊಸೈಟಿ ಜಿಲ್ಲೆಯ ವಿವಿಧಡೆ ಶಾಖೆಗಳನ್ನು ತೆರೆದು ಗ್ರಾಹಕರಿಗೆ ವಂಚಿಸಿದ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಕಂಪನಿ ಬೀಗಮುದ್ರೆ ಹಾಕಿರುವ ಘಟನೆಗೆ ಸಂಬಂಧಿಸಿದಂತೆ ಗ್ರಾಹಕರಿಂದ ವಿವಿಧ ಕಡೆ ದೂರು ದಾಖಲಾಗಿತ್ತು.
ಮಲಬಾರ್ ಮಲ್ಟಿ ಸ್ಟೇಟ್ ಆಗೋ ಕೋ-ಅಪರೇಟಿವ್ ಸೊಸೈಟಿ ಲಿಮಿಟೆಡ್ ಮುಖ್ಯಸ್ಥರಾದ ರಾಹುಲ್ ಚಕ್ರಪಾಣಿ ಹಾಗೂ ಸಿಇಓ ಆದ ಸನ್ನಿ ಅಬ್ರಹಾಂ & ಇತರರು ಸೇರಿ ವಂಚನೆ ಮಾಡಿರುವ ಕುರಿತು ಈಗಾಗಲೇ ಕುಶಾಲನಗರ, ಗೋಣಿಕೊಪ್ಪ ಹಾಗೂ ವಿರಾಜಪೇಟೆ ಠಾಣೆಗಳಲ್ಲಿ ದೂರು ದಾಖಲಾಗಿದೆ.

ಈ ದೂರುಗಳ ಆಧಾರದ ಮೇಲೆ ಗೋಣಿಕೊಪ್ಪಲು ಪೊಲೀಸರು ಆರೋಪಿಗಳ ಜಾಡನ್ನು ಹಿಡಿದು ಕೇರಳ ರಾಜ್ಯದ ಕಣ್ಣೂರು ಜಿಲ್ಲೆಗೆ ತೆರಳಿ, ಸಂಸ್ಥೆಯ ಸಿ ಇ ಓ ಸನ್ನಿ ಅಬ್ರಹಾಂ (58) ಬಂಧಿಸಿ ಗೋಣಿಕೊಪ್ಪಲಿಗೆ ಕರೆ ತಂದಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಮಲಬಾರ್ ಮಲ್ಟಿ ಸ್ಟೇಟ್ ಆಗ್ರೋ ಕೋ-ಆಪರೇಟಿವ್ ಸೊಸೈಟಿ ಹೆಸರಿನಲ್ಲಿ ಕಚೇರಿ ತೆರೆದು, ಸುತ್ತಮುತ್ತಲಿನ ಹಲವು ಗ್ರಾಹಕರಿಂದ ಪಿಗ್ನಿ ಕಲೆಕ್ಷನ್, ಆರ್.ಡಿ. ಹಾಗೂ ಬಾಂಡ್ ಮುಖಾಂತರ ಹಣವನ್ನು ಹೂಡಿಕೆ ಮಾಡಿಸಿಕೊಳ್ಳಲಾಗಿದೆ. ಬಳಿಕ ಪಡೆದ ಹಣ ಹಿಂತಿರುಗಿಸದೇ ಕಚೇರಿ ಮುಚ್ಚಿ ಸಾರ್ವಜನಿಕರಿಗೆ ವಂಚನೆ ಮಾಡಿ ಆರೋಪಿಗಳು ತಲೆಮರೆಸಿಕೊಂಡಿದ್ದರು. ಸದ್ಯ ಆರೋಪಿಗಳ ಬಂಧನವಾಗಿದ್ದು, ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದವರಿಗೆ ಮರು ಜೀವ ಬಂದಂತಾಗಿದೆ.
ಇತ್ತೀಚಿಗೆ ಕೊಡಗಿನ ಬೇರೆ ಬೇರೆ ಪಟ್ಟಣಗಳಲ್ಲಿ ಕೇರಳ ರಾಜ್ಯ ಮೂಲದ ವ್ಯಕ್ತಿಗಳು ಸಹಕಾರಿ ಸಂಸ್ಥೆಗಳ ಹೆಸರಿನಲ್ಲಿ ಫೈನಾನ್ಸ್ ಹಾಗೂ ಬ್ಯಾಂಕುಗಳನ್ನು ತೆರೆಯುವುದು ಹೆಚ್ಚಾಗುತ್ತಿದೆ. ಇಲ್ಲಿನ ಗ್ರಾಹಕರಿಗೆ ಭದ್ರತಾ ಠೇವಣಿಗಳಿಗೆ ರಾಷ್ಟ್ರೀಕೃತ ಬ್ಯಾಂಕ್ ಗಳಿಗಿಂತ ಮೂರರಿಂದ ನಾಲ್ಕು ಪಟ್ಟು ಹೆಚ್ಚಿನ ಬಡ್ಡಿಯನ್ನು ನೀಡುವ ಆಮಿಷವೊಡ್ಡಿ, ಪಿಗ್ಮಿ ಸಾಲ, ಚಿನ್ನಾಭರಣ ಸಾಲಾಗಳನ್ನು ನೀಡಲಾಗುವುದು ಎಂದು ಘೋಷಿಸಲಾಗುತ್ತದೆ.
ಈ ಮೂಲಕ ಸ್ಥಳೀಯರಿಗೆ ಬ್ಯಾಂಕಿನಲ್ಲಿ ಉದ್ಯೋಗವನ್ನು ಕಲ್ಪಿಸಿ ಒಂದೆರಡು ವರ್ಷಗಳಲ್ಲಿ ಬೀಗ ಮುದ್ರೆ ಜಡಿದು ಬ್ಯಾಂಕುಗಳನ್ನು ಮುಚ್ಚಿ ಹೋಗುವ ಲಕ್ಷಣಗಳು ಕಂಡು ಬರುತ್ತಿದೆ. ಜಿಲ್ಲೆಯಲ್ಲಿ ನಾಯಿ ಕೊಡೆಗಳಂತೆ ತಲೆ ಎತ್ತುತ್ತಿರುವ ಕೇರಳ ಮೂಲದ ಫೈನಾನ್ಸ್ ಕಂಪನಿಗಳ ಬಗ್ಗೆ ಪೊಲೀಸ್ ಇಲಾಖೆ ಮಾಹಿತಿ ಪಡೆದುಕೊಂಡು ಸಂಸ್ಥೆಗಳ ಬಗೆ ಮಾಹಿತಿಗಳನ್ನು ಸಾರ್ವಜನಿಕರಿಗೆ ನೀಡುವುದು ಸೂಕ್ತವಾಗಿದೆ.












Click it and Unblock the Notifications