ಕೊಡಗಿನಲ್ಲಿ ನಡೆಯುವ ಕೊಳಲು ಹಬ್ಬದ ವಿಶೇಷತೆ ಏನು ಗೊತ್ತಾ..?
ಮಡಿಕೇರಿ, ಮಾರ್ಚ್ 05: ಕೊಡಗಿನಲ್ಲಿ ನಡೆಯುವ ಒಂದೊಂದು ಹಬ್ಬವೂ ಇತರ ಕಡೆಗಳಲ್ಲಿ ನಡೆಯುವ ಹಬ್ಬಕ್ಕಿಂತ ವಿಭಿನ್ನ ಮತ್ತು ವಿಶಿಷ್ಟವಾಗಿರುತ್ತದೆ. ಇದಕ್ಕೊಂದು ಸಾಕ್ಷಿ ನಡುಬೇಸಿಗೆಯ ದಿನಗಳಲ್ಲಿ ನಡೆಯುವ ಚಿನ್ನತಪ್ಪ ಹಬ್ಬವಾಗಿದೆ. ಹಾಗಾದರೆ ಏನಿದು ಚಿನ್ನತಪ್ಪ? ಎಲ್ಲಿ ನಡೆಯುತ್ತದೆ? ಏನಿದರ ವಿಶೇಷತೆ ಹೀಗೆ ಹತ್ತಾರು ಪ್ರಶ್ನೆಗಳು ಮೂಡುವುದು ಸಹಜ. ಇದಕ್ಕೆ ಉತ್ತರ ಸಿಗಬೇಕಾದರೆ ಈ ಹಬ್ಬದ ಬಗೆಗೆ ಒಂದಷ್ಟು ವಿಚಾರಗಳನ್ನು ತಿಳಿಯಲೇ ಬೇಕಾಗಿದೆ.
ಈ ಚಿನ್ನತಪ್ಪ ಹಬ್ಬಕ್ಕೆ ಹೋದರೆ ಕಿವಿಗೆ ಇಂಪು ನೀಡುವ ಕೊಳಲಿನ ನಿನಾದ... ಚಂಡೆಮದ್ದಳೆಯ ಸದ್ದು... ಅವಲಕ್ಕಿ ಬೋಜನ.. ಹೀಗೆ ಹಲವು ದೃಶ್ಯಗಳು ಕಣ್ಮನ ಸೆಳೆಯುವುದರೊಂದಿಗೆ ಖುಷಿಕೊಡುತ್ತದೆ. ಅಷ್ಟೇ ಅಲ್ಲದೆ ಕೃಷ್ಣನ ಬಗೆಗೆ ಭಕ್ತಿಯು ಮೂಡುತ್ತದೆ. ಇಷ್ಟಕ್ಕೂ ಚಿನ್ನತಪ್ಪ ಹಬ್ಬವೆಂದರೆ ಏನು ಗೊತ್ತಾ? ಅದು ಶ್ರೀಕೃಷ್ಣನ ನೆನಪಲ್ಲಿ ಅವಲಕ್ಕಿ ಬೋಜನ ಮಾಡಿ, ಕೃಷ್ಣನ ಕೊಳಲನ್ನು ಪೂಜಿಸುವ ಹಬ್ಬ ಇದಾಗಿದೆ.

ಇನ್ನು ಈ "ಚಿನ್ನತಪ್ಪ" ಹಬ್ಬ ಹೇಗೆ ನಡೆಯುತ್ತದೆ ಎಂದರೆ ಗ್ರಾಮಸ್ಥರು ಹಬ್ಬವನ್ನು ಕಟ್ಟುನಿಟ್ಟಾಗಿ ಆಚರಿಸುತ್ತಾರೆ. ಹಬ್ಬ ಆಚರಣೆಯ ಮುನ್ನ ಅಶ್ವತ್ಥ ವೃಕ್ಷಕ್ಕೆ ಕಟ್ಟು ಕಟ್ಟಲಾಗುತ್ತದೆ. ಅದರಂತೆ ಅಂದಿನಿಂದ ಹಬ್ಬ ಮುಗಿಯುವ ತನಕ ಊರೊಳಗೆ ಪ್ರಾಣಿ ಹಿಂಸೆ, ಮಾಂಸ ಸೇವನೆ ಸೇರಿದಂತೆ ಮದುವೆ ಇನ್ನಿತರ ಶುಭಕಾರ್ಯ ಮಾಡುವುದಿಲ್ಲ. ಅಲ್ಲದೆ ಹಬ್ಬದ ಸಂದರ್ಭ ಗ್ರಾಮದಲ್ಲಿ ಮಂಚದಲ್ಲಿ ಮಲಗುವಂತಿಲ್ಲ. ಎಲ್ಲರೂ ಮನೆಯಲ್ಲಿ ಅವಲಕ್ಕಿಯನ್ನೇ ಸೇವಿಸುವುದು ಪ್ರಮುಖ ಕಟ್ಟುಪಾಡು ಆಗಿದೆ.
ಕೊಳಲನ್ನು ಹೊರತಂದು ಪೂಜೆ
ಧಾರೆಪೂಜೆ, ಪಟ್ಟಣಿ, ಭಂಡಾರ ಹಾಕುವುದು ಹೀಗೆ ಮೂರು ದಿನಗಳ ಕಾಲ ನಡೆಯುವ ಹಬ್ಬದ ಆಚರಣೆ ನಡೆಯುತ್ತದೆ. ಹಬ್ಬದ ಮೊದಲ ದಿನ ಬೆಳಿಗ್ಗೆ ಸಾಂಪ್ರದಾಯಿಕ ಉಡುಗೆ ತೊಟ್ಟು ದೇವಾಲಯಕ್ಕೆ ಆಗಮಿಸುವ ತಕ್ಕ ಮುಖ್ಯಸ್ಥರು ಹಬ್ಬಕ್ಕೆ ಚಾಲನೆ ನೀಡುತ್ತಾರೆ. ಈ ಸಂದರ್ಭ ದೇವಾಲಯದ ಒಂದು ಪಾರ್ಶ್ವದಲ್ಲಿ ಚಂಡೆ ಸದ್ದು ನೀರವ ಮೌನವನ್ನು ಸೀಳಿ ಹಬ್ಬಕ್ಕೆ ರಂಗು ನೀಡುತ್ತದೆ. ಇದೇ ವೇಳೆ ಶ್ವೇತ ವಸ್ತ್ರದಿಂದ ಮುಚ್ಚಲಾದ ಶ್ರೀಕೃಷ್ಣನ ಕೊಳಲನ್ನು ಹೊರತರಲಾಗುತ್ತದೆ.
ಇದನ್ನು "ಊರ್ಮಂದ್"ನ ಗದ್ದೆ ಬಳಿಯಲ್ಲಿರುವ ನಿರ್ದಿಷ್ಟ ಸ್ಥಳಕ್ಕೆ ತಂದು, ಆ ನಂತರ ದೇವಾಲಯಕ್ಕೆ ಹಿಂತಿರುಗಿಸಲಾಗುತ್ತದೆ. ಈ ಸಂದರ್ಭ ನಡೆಯುವ ಪೂಜಾ ಕಾರ್ಯಕ್ರಮಕ್ಕೆ ಗ್ರಾಮಸ್ಥರು ಮಾತ್ರವಲ್ಲದೆ, ಸುತ್ತಮುತ್ತಲಿನ ಗ್ರಾಮಗಳಿಂದಲೂ ಭಕ್ತರು ಆಗಮಿಸುತ್ತಾರೆ. ಅಂದು ಸಂಜೆ ಸೂರ್ಯಾಸ್ತವಾಗುತ್ತಿದ್ದಂತೆಯೇ ತಕ್ಕ ಮುಖ್ಯಸ್ಥರು ಕೊಳಲಿನೊಂದಿಗೆ ದೇವಾಲಯದ ಎಡಭಾಗದಲ್ಲಿರುವ ಕಲ್ಲುಹೊಳೆಗೆ ತೆರಳಿ ಅಲ್ಲಿ ರಾತ್ರಿ 7.30 ರಿಂದ ಮರುದಿನ ಮುಂಜಾನೆ 3.30ರವರೆಗೆ ಧಾರೆಪೂಜೆಯನ್ನು ನೆರವೇರಿಸುತ್ತಾರೆ. ಧಾರೆಪೂಜೆ ಬಳಿಕ ಕೊಳಲನ್ನು ಮತ್ತೆ ದೇವಸ್ಥಾನಕ್ಕೆ ತರಲಾಗುತ್ತದೆ.

ಗಮನ ಸೆಳೆಯುವ ಶ್ವೇತ ವಸ್ತ್ರಧಾರಿಣಿ ಮಹಿಳೆಯರು
ಎರಡನೆಯ ದಿನ ಪಟ್ಟಣಿ ಹಬ್ಬ ನಡೆಯುತ್ತದೆ. ಅಂದು ಬೆಳಿಗ್ಗೆಯಿಂದ ಪೂಜಾ ಕಾರ್ಯಕ್ರಮಗಳು ನಡೆದು ಮಧ್ಯಾಹ್ನವಾಗುತ್ತಿದ್ದಂತೆಯೇ ತಕ್ಕ ಮುಖ್ಯಸ್ಥರಲ್ಲದೆ, ಬಿದ್ದಿಯಂಡ ಹಾಗೂ ಚೀಂಗಂಡ ಕುಟುಂಬದಿಂದ ತಲಾ ಒಬ್ಬರಂತೆ ಸೇರಿ ವಸ್ತ್ರದಿಂದ ಮುಚ್ಚಲಾದ ಕೊಳಲನ್ನು ನಿರ್ದಿಷ್ಟ ಸ್ಥಳದಲ್ಲಿ ನುಡಿಸುತ್ತಾ ಊರ್ ಮಂದ್ಗೆ ಬರುತ್ತಾರೆ. ಇಲ್ಲಿಗೆ ಸಮೀಪದಲ್ಲಿರುವ ಗದ್ದೆ ಬಳಿ ಕೊಳಲು ನುಡಿಸಲಾಗುತ್ತದೆ. ಅಲ್ಲಿಂದ ನಂತರ "ನಾಳೆಯಂಡ ಮಾನಿ" ಎಂಬಲ್ಲಿಗೆ ತೆರಳುತ್ತಾರೆ. ಅಲ್ಲಿ ಎತ್ತುಪೋರಾಟವೂ ನಡೆಯುತ್ತದೆ.
ಇದೇ ವೇಳೆಗೆ ಶ್ವೇತವಸ್ತ್ರಧಾರಿಣಿ ಸ್ತ್ರೀಯರು ಅಕ್ಕಿ, ಹೂ, ದೀಪವಿರುವ ಹರಿವಾಣವನ್ನು ಹೊತ್ತು ಎತ್ತುಪೋರಾಟದೊಂದಿಗೆ ಊರ್ ಮಂದ್ಗೆ ಬರುತ್ತಾರೆ. ಅಲ್ಲಿ ಮೂರು ಬಾರಿ ಎತ್ತುಪೋರಾಟ ನಡೆಯುತ್ತದೆಯಲ್ಲದೆ, ಅಶ್ವತ್ಥ ವೃಕ್ಷದ ಮೇಲೆ ಕಟ್ಟಲಾದ ತೆಂಗಿನಕಾಯಿಗೆ ಗುಂಡು ಹಾರಿಸಿ ಕಟ್ಟನ್ನು ಸಡಿಲಿಸಲಾಗುತ್ತದೆ. ಬಳಿಕ ಕೊಳಲನ್ನು ನಿರ್ದಿಷ್ಟ ಸ್ಥಳದಲ್ಲಿ ನುಡಿಸುತ್ತಾ ಬಿದ್ದಿಯಂಡ ಮಾನಿಯತ್ತ ತೆರಳುತ್ತಾರೆ. ಈ ಸಂದರ್ಭ ಎತ್ತುಪೋರಾಟದ ಎತ್ತುಗಳನ್ನು ಓಡಿಸಲಾಗುತ್ತದೆ.
ಕೃಷ್ಣ ಬಿಟ್ಟು ಹೋದ ಕೊಳಲಂತೆ
ಆಮೇಲೆ ದೇವರ ಜಳಕಕ್ಕೆ ಅನುಮತಿ ಕೋರಲಾಗಿ, ಧಾರೆಪೂಜೆ ನಡೆದ ಸ್ಥಳಕ್ಕೆ ತೆರಳಿ ಎಲ್ಲರೂ ಜಳಕ ಮಾಡಿ ದೇವಾಲಯಕ್ಕೆ ಹಿಂತಿರುಗುತ್ತಾರೆ. ಅಲ್ಲಿಗೆ ಪಟ್ಟಣಿ ಹಬ್ಬ ಮುಗಿಯುತ್ತದೆ. ಕೊನೆಯ ದಿನ ದೇವರಿಗೆ ಭಂಡಾರ ಹಾಕಲಾಗುತ್ತದೆ. ಈ ಸಂದರ್ಭ ನೂರಾರು ಲೀಟರ್ ಹರಕೆಯ ಎಣ್ಣೆಯನ್ನು ಭಕ್ತರು ದೇವರಿಗೆ ಅರ್ಪಿಸುತ್ತಾರೆ. ಪೂಜೆಯೊಂದಿಗೆ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯುತ್ತದೆ. ಇಲ್ಲಿಗೆ ಮೂರು ದಿನಗಳ ಹಬ್ಬಕ್ಕೆ ತೆರೆಬೀಳುತ್ತದೆ.

ಇನ್ನು ಹಬ್ಬದ ವೇಳೆ ಪೂಜಿಸಲ್ಪಡುವ ಕೊಳಲಿಗೂ ಪೌರಾಣಿಕ ಇತಿಹಾಸವಿದೆ.
ಪುರಾಣ ಕಾಲದಲ್ಲಿ ಬೆಟ್ಟಗುಡ್ಡ ಕಾಡುಗಳಿಂದ ಆವೃತವಾಗಿದ್ದ ಈ ಪ್ರದೇಶದಲ್ಲಿ ನೆಲೆಸಿದ್ದ ತಾಯಿ ಯಶೋಧೆ ಕೃಷ್ಣನಿಗೆ ಹೊಸ ಬಟ್ಟೆ ತೊಡಿಸಿ ಜೊತೆಯಲ್ಲಿ ತಿನ್ನಲು ವಿವಿಧ ತಿಂಡಿಗಳನ್ನು ಕೊಟ್ಟು ಬಲರಾಮನೊಂದಿಗೆ ದನಗಳನ್ನು ಮೇಯಿಸಿಕೊಂಡು ಬರಲು ಕಳಿಸುತ್ತಿದ್ದಳಂತೆ. ಅಲ್ಲಿ ದನ ಮೇಯಿಸಲು ಬರುತ್ತಿದ್ದ ಗೊಲ್ಲ ಮಕ್ಕಳೊಂದಿಗೆ ಬೆರೆಯುತ್ತಾ... ಕೊಳಲನ್ನು ಊದುತ್ತಾ ಕೃಷ್ಣ ಸಂತೋಷದಿಂದ ದಿನ ಕಳೆಯುತ್ತಿದ್ದನಂತೆ. ಆದರೆ ಮುಂದೆ ಮಥುರೆಗೆ ಹೋಗುವ ಸಂದರ್ಭ ತನ್ನ ಮೆಚ್ಚಿನ ಕೊಳಲನ್ನು ಇಲ್ಲಿಯೇ ಬಿಟ್ಟು ಹೋದನಂತೆ. ಅದನ್ನು ಜೋಪಾನವಾಗಿರಿಸಿ ಪೂಜಿಸುತ್ತಾ ಬರಲಾಯಿತು ಎಂಬ ದಂತಕಥೆಯಿದೆ.
ಕೊಡಗಿನ ಏಕೈಕ ಕೃಷ್ಣ ದೇಗುಲ
ಇನ್ನು ಕೆಲವರ ಪ್ರಕಾರ ಹಿಂದಿನ ಕಾಲದಲ್ಲಿ ಗ್ರಾಮದ ಚೀಂಗಂಡ ಹಾಗೂ ಬಿದ್ದಿಯಂಡ ಕುಟುಂಬದ ಹಿರಿಯರು ಗದ್ದೆ ಉಳುಮೆ ಮಾಡುತ್ತಿದ್ದ ಸಂದರ್ಭ ಶ್ರೀಕಷ್ಣನ ಕೊಳಲು ನದಿಯೊಂದರಲ್ಲಿ ತೇಲಿ ಬರುತ್ತಿದ್ದುದನ್ನು ಕಂಡು ಅದು ನದಿ ನೀರಲ್ಲಿ ಕೊಚ್ಚಿ ಹೋಗುವುದನ್ನು ತಪ್ಪಿಸಿ ಬಿದ್ದಿಯಂಡ ಕುಟುಂಬದ ಐನ್ ಮನೆಗೆ ಕೊಂಡೊಯ್ದು ಪೂಜಿಸುತ್ತಾ ಬಂದರಂತೆ. ಇದು ಕೊಳಲಿನ ಬಗ್ಗೆ ಗ್ರಾಮಸ್ಥರಲ್ಲಿರುವ ನಂಬಿಕೆಯಾಗಿದೆ. ಈ ಕೊಳಲನ್ನು ಶ್ವೇತ ವಸ್ತ್ರಗಳಿಂದ ಮುಚ್ಚಿ ವೀಕ್ಷಕರ ಕಣ್ಣಿಗೆ ಬೀಳದಂತೆ ಎಚ್ಚರ ವಹಿಸುವುದು ಇಲ್ಲಿನ ಮತ್ತೊಂದು ವಿಶೇಷತೆ. ಹಾಗಾಗಿ ಇದುವರೆಗೆ ಕೃಷ್ಣನ ಕೊಳಲು ಹೇಗಿದೆ ಎಂಬುವುದು ಕೊಳಲನ್ನು ಊದುವ ತಕ್ಕ ಮುಖ್ಯಸ್ಥರನ್ನು ಹೊರತು ಬೇರೆಯವರಿಗೆ ತಿಳಿದಿಲ್ಲ.
ಚಿನ್ನತಪ್ಪ ಹಬ್ಬವು ಅಯ್ಯಂಗೇರಿ ಗ್ರಾಮದಲ್ಲಿ ನಡೆಯುತ್ತದೆ. ಇಲ್ಲಿಗೆ ತೆರಳಬೇಕಾದರೆ ಕೊಡಗಿನ ಮುಖ್ಯಪಟ್ಟಣ ಮಡಿಕೇರಿಯಿಂದ ನಾಪೋಕ್ಲು ಮೂಲಕ ಭಾಗಮಂಡಲಕ್ಕೆ ತೆರಳುವ ಮಾರ್ಗದಲ್ಲಿ ಸುಮಾರು 40 ಕಿ.ಮೀ. ದೂರ ಸಾಗಬೇಕು. ಇನ್ನು ಮಡಿಕೇರಿಯಿಂದ ಭಾಗಮಂಡಲಕ್ಕೆ ತೆರಳಿದರೆ ಅಲ್ಲಿಂದ ಆರು ಕಿ.ಮೀ. ಸಾಗಿದರೆ ಅಯ್ಯಂಗೇರಿ ಗ್ರಾಮವನ್ನು ತಲುಪಬಹುದಾಗಿದೆ. ಜಿಲ್ಲೆಯಲ್ಲಿಯೇ ಏಕೈಕ ಕೃಷ್ಣದೇಗುಲವಿರುವ ಗ್ರಾಮ ಇದಾಗಿದೆ.












Click it and Unblock the Notifications