• search
  • Live TV
ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊಡವ ಹಾಕಿ ಹಬ್ಬಕ್ಕೆ ಸಜ್ಜಾದ ನಾಪೋಕ್ಲು, ಏ. 17ರಿಂದ ಆರಂಭ

By ಬಿ.ಎಂ.ಲವಕುಮಾರ್
|

ಮಡಿಕೇರಿ, ಏಪ್ರಿಲ 16: ಕೊಡಗಿನಲ್ಲಿ ಹಾಕಿ ಹಬ್ಬದ ಸಡಗರ ಮನೆ ಮಾಡಿದೆ. ಏ.17ರಿಂದ ಆರಂಭವಾಗಿ ಮೇ.7ರವರೆಗೆ ಕೊಡವ ಕುಟುಂಬಗಳ ನಡುವಿನ ಹಾಕಿ ಪಂದ್ಯಾವಳಿ 'ಬಿದ್ದಾಟಂಡ ಹಾಕಿ ನಮ್ಮೆ- 2017' ನಡೆಯಲಿದ್ದು ಇದಕ್ಕಾಗಿ ನಾಪೋಕ್ಲು ಸರ್ವ ವಿಧದಲ್ಲಿಯೂ ಸಜ್ಜಾಗಿ ನಿಂತಿದೆ.

ಈ ಬಾರಿ ಹಾಕಿ ಉತ್ಸವದ ಸಾರಥ್ಯವನ್ನು ಬಿದ್ದಾಟಂಡ ಕುಟುಂಬ ವಹಿಸಿಕೊಂಡಿದೆ. ಏ.17ರಂದು ಬೆಳಿಗ್ಗೆ 10.30ಕ್ಕೆ ನಾಪೋಕ್ಲಿನ ಸರ್ಕಾರಿ ಪ್ರೌಢಶಾಲೆಯ ಜನರಲ್ ತಿಮ್ಮಯ್ಯ ಸ್ಟೇಡಿಯಂನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅರ್ಜುನ ಪ್ರಶಸ್ತಿ ವಿಜೇತ ಒಲಂಪಿಯನ್ ಡಾ. ಅಂಜಪರವಂಡ ಬಿ. ಸುಬ್ಬಯ್ಯ ಹಾಕಿ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ.[ದಿಡ್ಡಳ್ಳಿ ಗುಂಡಿನ ದಾಳಿ ಪ್ರಕರಣ:ಆರೋಪಿ ಬಂಧನ]

ಬಿದ್ದಾಟಂಡ ಕುಟುಂಬದ ಪಟ್ಟೇದಾರ(ಯಜಮಾನ) ಬಿ.ಸಿ.ಪೊನ್ನಪ್ಪ ಹಾಗೂ ಪಂದ್ಯಾವಳಿ ಸಂಸ್ಥಾಪಕರೂ, ಕೊಡವ ಅಕಾಡೆಮಿಯ ಅಧ್ಯಕ್ಷರೂ ಆಗಿರುವ ಪಾಂಡಂಡ ಕುಟ್ಟಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಸಚಿವರಾದ ಕಾಗೋಡು ತಿಮ್ಮಪ್ಪ, ರಮಾನಾಥ್ ರೈ, ಮಾಜಿ ಸಚಿವ ಎಂ.ಸಿ.ನಾಣಯ್ಯ, ಸಂಸದ ಪ್ರತಾಪ್ ಸಿಂಹ, ಶಾಸಕ ಕೆ.ಜಿ.ಬೋಪಯ್ಯ, ವಿಧಾನಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ, ಎಸ್ಪಿ ರಾಜೇಂದ್ರ ಪ್ರಸಾದ್, ಕೂರ್ಗ್ ಹಾಕಿ ಅಧ್ಯಕ್ಷ ಪೈಕೇರ ಕಾಳಯ್ಯ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.

ಉದ್ಘಾಟನಾ ಪಂದ್ಯದಲ್ಲಿ ರೆಸ್ಟ್ ಆಫ್ ಇಂಡಿಯಾ ಮತ್ತು ಕೂರ್ಗ್ ರೆಜಿಮೆಂಟ್ ನಡುವೆ ಪಂದ್ಯ ನಡೆಯಲಿದೆ. ಇದೇ ವೇಳೆ ಕೊಡವ ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು, ನಾಟಕ ಪ್ರದರ್ಶನವೂ ನಡೆಯಲಿದೆ.

ಹಾಕಿ ಉತ್ಸವದ ಇಣುಕು ನೋಟ

ಹಾಕಿ ಉತ್ಸವದ ಇಣುಕು ನೋಟ

ಎರಡು ದಶಕಗಳಿಂದ ನಡೆಯುತ್ತಾ ಬಂದಿರುವ ಕೊಡವ ಹಾಕಿ ಉತ್ಸವವನ್ನು ಇಣುಕಿ ನೋಡಿದರೆ ಇಲ್ಲಿ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಹಂತದಲ್ಲಿ ಸಾಗಿದ ಹೆಜ್ಜೆ ಗುರುತುಗಳು ಸಾಕ್ಷಿಯಾಗಿ ನಿಲ್ಲುತ್ತವೆ.

ಇನ್ನು ಪ್ರತಿಬಾರಿಯೂ ಪಂದ್ಯಾವಳಿಯನ್ನು ಕೇವಲ ಪಂದ್ಯವಾಗಿ ನೋಡದೆ ಕುಟುಂಬದ ಹಬ್ಬ(ನಮ್ಮೆ) ದಂತೆ ಕಂಡು ಯಶಸ್ವಿಯಾಗಿ ನಡೆಸಿದ ಕೀರ್ತಿ ಆಯಾಯ ಕುಟುಂಬಕ್ಕೆ ಸಲ್ಲಬೇಕು. ಪ್ರತಿವರ್ಷವೂ ಕೋಟ್ಯಂತರ ರೂ. ಖರ್ಚು ಮಾಡಿ ಪಂದ್ಯಾವಳಿ ನಡೆಸುವುದು ಸುಲಭದ ಕೆಲಸವಲ್ಲ. ಆದರೆ ಅದನ್ನು ಚಾಚೂ ತಪ್ಪದೆ ನಡೆಸಿಕೊಂಡು ಬಂದಿರುವುದು ನಿಜಕ್ಕೂ ಹೆಮ್ಮೆಯ ವಿಚಾರ.

ಲಿಮ್ಕಾ ಬುಕ್ ಆಫ್ ರೆಕಾರ್ಡ್ ಸೇರಿದ ಹಾಕಿ ಹಬ್ಬ

ಲಿಮ್ಕಾ ಬುಕ್ ಆಫ್ ರೆಕಾರ್ಡ್ ಸೇರಿದ ಹಾಕಿ ಹಬ್ಬ

ಇಷ್ಟು ವರ್ಷಗಳ ಕಾಲ ಪಂದ್ಯಾವಳಿಯನ್ನು ನಡೆಸಿದ ಕುಟುಂಬ, ಪಾಲ್ಗೊಂಡ ತಂಡಗಳು, ಗೆಲುವು ಪಡೆದು ಇತಿಹಾಸ ನಿರ್ಮಿಸಿದ ತಂಡಗಳನ್ನು ನಾವು ನೋಡಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ.

ಹಾಕಿಯನ್ನು ಕೊಡವ ಕುಟುಂಬಗಳ ಹಬ್ಬವಾಗಿ ಆಚರಿಸಲು ಮುಂದಾಗಿದ್ದು 1997ರಲ್ಲಿ. ಅವತ್ತು ವೀರಾಜಪೇಟೆ ತಾಲೂಕಿನ ಕುಗ್ರಾಮ ಕರಡದಲ್ಲಿ ಆರಂಭಗೊಂಡಾಗ ಹಾಕಿ ನಮ್ಮೆ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಾ ಮುಂದೊಂದು ದಿನ ‘ಲಿಮ್ಕಾ ಬುಕ್ ಆಫ್ ರೆಕಾರ್ಡ್'ನಲ್ಲಿ ದಾಖಲಾಗುವಷ್ಟರ ಮಟ್ಟಿಗೆ ಗಮನಸೆಳೆಯುತ್ತದೆ ಎಂದು ಯಾರೂ ಯೋಚಿಸಿರಲಿಲ್ಲ.

ಮೊದಲ ಪಂದ್ಯದ ಸಾರಥ್ಯವನ್ನು ಪಾಂಡಂಡ ಕುಟುಂಬವೇ ವಹಿಸಿಕೊಂಡಿತು. ಆರಂಭದ ವರ್ಷ ಸುಮಾರು 60ಕುಟುಂಬಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು, ಕಲಿಯಂಡ ಕುಟುಂಬದ ತಂಡ ಕಪ್ ಒಡೆತನ ಸಾಧಿಸಿತು.[ಏಪ್ರಿಲ್ 17ರಿಂದ ಕೊಡವ ಕುಟುಂಬಗಳ ಹಾಕಿ ಉತ್ಸವ ಆರಂಭ]

1998ರ ನಂತರ

1998ರ ನಂತರ

ಬಳಿಕ 1998ರಲ್ಲಿ ಕಡಂಗದಲ್ಲಿ ಪಂದ್ಯಾವಳಿ ನಡೆದಾಗ ಕೋಡಿರ ಕುಟುಂಬ ಅದರ ಸಾರಥ್ಯ ವಹಿಸಿತ್ತು ಅವತ್ತು 116 ತಂಡಗಳು ಪಾಲ್ಗೊಂಡು ಕುಲ್ಲೇಟಿರ ತಂಡ ವಿಜಯಿಯಾಗಿತ್ತು. ಇದಾದ ಬಳಿಕ ವರ್ಷದಿಂದ ವರ್ಷಕ್ಕೆ ಹಾಕಿ ಪಂದ್ಯಾವಳಿ ತನ್ನ ಜನಪ್ರಿಯತೆಯನ್ನು ಹೆಚ್ಚಿಸುತ್ತಲೇ ಹೋಯಿತು.

1999ರಲ್ಲಿ ಕಾಕೋಟುಪರಂಬುನಲ್ಲಿ ನಡೆದ ಬಲ್ಲಚಂಡಕಪ್‍ನಲ್ಲಿ 140 ತಂಡಗಳು ಪಾಲ್ಗೊಂಡಿದ್ದು, ಕೂತಂಡ ಹಾಗೂ ಕುಲ್ಲೇಟಿರ ತಂಡಗಳು ಕಪ್‍ನ ಒಡೆತನವನ್ನು ಹಂಚಿಕೊಂಡಿದ್ದವು. 2000ರಲ್ಲಿ ಪೊನ್ನಂಪೇಟೆಯಲ್ಲಿ ನಡೆದ ಚೆಪ್ಪುಡಿರಕಪ್‍ನಲ್ಲಿ 170 ತಂಡಗಳು ಭಾಗವಹಿಸಿದ್ದು ಕೂತಂಡ ತಂಡ ಗೆಲುವು ಪಡೆದಿತ್ತು.

2000 ಇಸವಿಯ ನಂತರ

2000 ಇಸವಿಯ ನಂತರ

2001ರಲ್ಲಿ ಅಮ್ಮತ್ತಿಯಲ್ಲಿ ನಡೆದ ನೆಲ್ಲಮಕ್ಕಡ ಕಪ್‍ನಲ್ಲಿ 220 ತಂಡಗಳು ಭಾಗವಹಿಸಿದ್ದು ಕೂತಂಡ ತಂಡ ವಿಜಯಿಯಾಗಿತ್ತು. 2002ರಲ್ಲಿ ಹುದಿಕೇರಿಯಲ್ಲಿ ನಡೆದ ಚಕ್ಕೇರಕಪ್‍ನಲ್ಲಿ 252 ತಂಡಗಳು ಪಾಲ್ಗೊಂಡಿದ್ದು ಅವುಗಳಲ್ಲಿ ಕುಲ್ಲೇಟಿರ ತಂಡ ಒಡೆತನ ಸಾಧಿಸಿತ್ತು. 2003ರಲ್ಲಿ ನಾಪೋಕ್ಲುನಲ್ಲಿ ನಡೆದ ಕಲಿಯಂಡ ಕಪ್‍ನಲ್ಲಿ 280 ತಂಡಗಳು ಭಾಗವಹಿಸಿದ್ದು ನೆಲ್ಲಮಕ್ಕಡ ತಂಡ ಗೆಲುವು ಸಾಧಿಸಿತ್ತು.

2004ರಲ್ಲಿ ಮಾದಾಪುರದಲ್ಲಿ ನಡೆದ ಮಾಳೆಯಂಡ ಕಪ್‍ನಲ್ಲಿ 235 ತಂಡ ಪಾಲ್ಗೊಂಡು ಕೂತಂಡ ತಂಡ ಗೆಲುವು ಪಡೆದಿತ್ತು. 2005ರಲ್ಲಿ ಮಡಿಕೇರಿಯಲ್ಲಿ ನಡೆದ ಬಿದ್ದಂಡ ಕಪ್‍ನಲ್ಲಿ 222ತಂಡಗಳು ಭಾಗವಹಿಸಿ ನೆಲ್ಲಮಕ್ಕಡ ತಂಡ ವಿಜಯಿಯಾಗಿತ್ತು.[ಕೊಡಗಿನಲ್ಲಿ ಗುಡುಗು ಸಹಿತ ಮಳೆ: ಧರೆಗುರುಳಿದ ಮರ]

200ಕ್ಕೂ ಹೆಚ್ಚು ತಂಡಗಳ ಭರ್ಜರಿ ಆಟ

200ಕ್ಕೂ ಹೆಚ್ಚು ತಂಡಗಳ ಭರ್ಜರಿ ಆಟ

2006ರಲ್ಲಿ ಪೊನ್ನಂಪೇಟೆಯಲ್ಲಿ ನಡೆದ ಕಳ್ಳಿಚಂಡ ಕಪ್‍ನಲ್ಲಿ 217 ತಂಡಗಳು ಭಾಗವಹಿಸಿ ಪಳಂಗಂಡ ತಂಡ ಒಡೆತನ ಸಾಧಿಸಿತ್ತು. 2007ರಲ್ಲಿ ಕಾಕೋಟುಪರಂಬುನಲ್ಲಿ ನಡೆದ ಮಂಡೇಟಿರ ಕಪ್‍ನಲ್ಲಿ 186 ತಂಡ ಪಾಲ್ಗೊಂಡು ಮಂಡೇಪಂಡ ತಂಡ ಗೆಲುವು ಪಡೆದಿತ್ತು. 2008ರಲ್ಲಿ ಪೊನ್ನಂಪೇಟೆಯಲ್ಲಿ ನಡೆದ ಅಳಮೇಂಗಡ ಕಪ್‍ನಲ್ಲಿ 216 ತಂಡಗಳು ಪಾಲ್ಗೊಂಡು ಅಂಜಪರವಂಡ ಗೆಲುವು ಪಡೆದಿತ್ತು.

2009ರಲ್ಲಿ ಅಮ್ಮತ್ತಿಯಲ್ಲಿ ನಡೆದ ಮಂಡೇಪಂಡ ಕಪ್‍ನಲ್ಲಿ 231 ತಂಡಗಳು ಭಾಗವಹಿಸಿ ನೆಲ್ಲಮಕ್ಕಡ ತಂಡ ಒಡೆತನ ಸಾಧಿಸಿತ್ತು. 2010ರಲ್ಲಿ ಪೊನ್ನಂಪೇಟೆಯಲ್ಲಿ ನಡೆದ ಮನೆಯಪಂಡ ಕಪ್‍ನಲ್ಲಿ ಸುಮಾರು 214 ತಂಡಗಳು ಭಾಗವಹಿಸಿದ್ದವಲ್ಲದೆ ಅಂತಿಮವಾಗಿ ಪಳಂಗಂಡ ತಂಡ ಕಪ್‍ನ್ನು ತನ್ನದಾಗಿಸಿಕೊಂಡಿತು.

ಪಳಂಗಂಡ ತಂಡದ ಹ್ಯಾಟ್ರಿಕ್ ಸಾಧನೆ

ಪಳಂಗಂಡ ತಂಡದ ಹ್ಯಾಟ್ರಿಕ್ ಸಾಧನೆ

2011ರಲ್ಲಿ ಪೊನ್ನಂಪೇಟೆಯಲ್ಲಿ ನಡೆದ ಮಚ್ಚಾಮಾಡ ಕಪ್ ಪಂದ್ಯಾವಳಿಯಲ್ಲಿ 228 ತಂಡಗಳು ಭಾಗವಹಿಸಿದ್ದ ಆಟದಲ್ಲಿ ಪಳಂಗಂಡ ತಂಡ ಕಪ್‍ನ್ನು ತನ್ನದಾಗಿಸಿಕೊಂಡಿತ್ತು. 2012ರಲ್ಲಿ ಅಮ್ಮತ್ತಿಯಲ್ಲಿ ನಡೆದ ಐಚೆಟ್ಟಿರ ಕಪ್ ಪಂದ್ಯಾವಳಿಯಲ್ಲಿ 217 ತಂಡಗಳು ಭಾಗವಹಿಸಿದ್ದವಾದರೂ ಪಳಂಗಂಡ ಮೂರನೇ ಬಾರಿಗೆ ಗೆದ್ದು ಹ್ಯಾಟ್ರಿಕ್ ಸಾಧಿಸಿತ್ತು.

2013ರಲ್ಲಿ ವೀರಾಜಪೇಟೆಯ ಬಾಳುಗೋಡುವಿನಲ್ಲಿ ಮಾದಂಡ ಕಪ್ ನಡೆದು 225 ತಂಡಗಳು ಭಾಗವಹಿಸಿ ಅಂಜಪರವಂಡ ತಂಡ ಚಾಂಪಿಯನ್ ಪಟ್ಟ ಪಡೆದುಕೊಂಡರೆ ಹ್ಯಾಟ್ರಿಕ್ ಸಾಧನೆ ಮಾಡಿದ ಪಳಂಗಂಡ ತಂಡ ರನ್ನರ್‍ಗೆ ತೃಪ್ತಿಪಟ್ಟುಕೊಂಡಿತ್ತು. 2014ರಲ್ಲಿ ವೀರಾಜಪೇಟೆಯಲ್ಲಿ ತಾತಂಡಕಪ್ ನಡೆದು 242 ತಂಡಗಳು ಭಾಗವಹಿಸಿ ಕಲಿಯಂಡ ಕುಟುಂಬದ ತಂಡ ಚಾಂಪಿಯನ್ ಪಟ್ಟ ಕಟ್ಟಿಕೊಂಡರೆ ಪಳಂಗಂಡ ರನ್ನರ್‍ಗೆ ತೃಪ್ತಿಪಟ್ಟುಕೊಂಡಿತ್ತು.

20 ವರ್ಷ ಪೂರೈಸಿದ ಹಾಕಿ ಉತ್ಸವ

20 ವರ್ಷ ಪೂರೈಸಿದ ಹಾಕಿ ಉತ್ಸವ

19ನೇ ವರ್ಷದ ಕುಪ್ಪಂಡ ಕಪ್ ಹಾಕಿ ನಮ್ಮೆ-2015ರಲ್ಲಿ ವೀರಾಜಪೇಟೆಯ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆದು 255 ತಂಡಗಳು ಪಾಲ್ಗೊಳ್ಳುವ ಮೂಲಕ ಪಾಲಂಗಡ ತಂಡ ಚೇಂದಂಡ ತಂಡವನ್ನು ಮಣಿಸಿ ಗೆಲುವು ಸಾಧಿಸಿತ್ತು.

20ನೇ ವರ್ಷದ ಪಂದ್ಯ 2016ರಲ್ಲಿ ಮಡಿಕೇರಿಯ ಎಫ್‍ಎಂಸಿ ಕಾಲೇಜು ಮೈದಾನದಲ್ಲಿ ಶಾಂತೆಯಂಡ ಕುಟುಂಬದ ಸಾರಥ್ಯದಲ್ಲಿ ನಡೆದು 299 ತಂಡಗಳು ಪಾಲ್ಗೊಂಡು ಪಾಲಂಗಡ ತಂಡವನ್ನು ಕಲಿಯಂಡ ತಂಡ ಮಣಿಸಿ ಗೆಲುವಿನ ಪತಾಕೆಯನ್ನು ಹಾರಿಸಿತ್ತು.

ಈ ಬಾರಿ 21ನೇ ವರ್ಷದ ಪಂದ್ಯಾವಳಿ ನಾಪೋಕ್ಲುನಲ್ಲಿ ನಡೆಯುತ್ತಿದ್ದು, ಬಿದ್ದಾಟಂಡ ಕುಟುಂಬ ಸಾರಥ್ಯವನ್ನು ವಹಿಸಿಕೊಂಡಿದೆ. ಈ ಬಾರಿಯ ಪಂದ್ಯಾವಳಿಯಲ್ಲಿ ಇಲ್ಲೀವರೆಗಿನ ಗರಿಷ್ಠ 306ತಂಡಗಳು ಸೆಣಸಾಡಲಿವೆ.

ಲಿಮ್ಕಾ ಬುಕ್‍ನಲ್ಲಿ ಶಾಂತೆಯಂಡ ಕಪ್

ಲಿಮ್ಕಾ ಬುಕ್‍ನಲ್ಲಿ ಶಾಂತೆಯಂಡ ಕಪ್

ಈ ಹಿಂದೆ ನಡೆದ ಪಂದ್ಯಾವಳಿಯಲ್ಲಿ ಬಿದ್ದಂಡ, ನೆಲ್ಲಮಕ್ಕಡ, ಕುಪ್ಪಂಡ ಕುಟುಂಬಗಳು ಲಿಮ್ಕಾ ಬುಕ್‍ನಲ್ಲಿ ದಾಖಲೆಯಾಗಿ ಸೇರ್ಪಡೆಯಾಗಿದ್ದವು. ಇದೀಗ ಕಳೆದ ವರ್ಷ ಅಂದರೆ 2015-16ನೇ ಸಾಲಿನಲ್ಲಿ ಶಾಂತೆಯಂಡ ಕುಟುಂಬದ ಸಾರಥ್ಯದಲ್ಲಿ ನಡೆದ ಹಾಕಿ ಪಂದ್ಯಾವಳಿಯೂ ಲಿಮ್ಕಾ ಬುಕ್‍ನಲ್ಲಿ ದಾಖಲಾಗಿದೆ. ಈ ಪಂದ್ಯಾವಳಿಯಲ್ಲಿ 229 ತಂಡಗಳು ಪಾಲ್ಗೊಂಡಿರುವುದು ದಾಖಲೆ ಸೃಷ್ಟಿಸಲು ಕಾರಣವಾಗಿದೆ.

ಕೊಡಗಿನ ಕ್ರೀಡಾ ಹಿರಿಮೆಗೆ ಮತ್ತೊಂದು ಗರಿ

ಕೊಡಗಿನ ಕ್ರೀಡಾ ಹಿರಿಮೆಗೆ ಮತ್ತೊಂದು ಗರಿ

ಈ ಕುರಿತು ಮಾತನಾಡಿದ 'ಶಾಂತೆಯಂಡ ಹಾಕಿ ನಮ್ಮೆ'ಯ ಸಮಿತಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ, "ನಮ್ಮ ಕುಟುಂಬದ ಹಾಕಿ ಉತ್ಸವವನ್ನು ಗಿನ್ನಿಸ್ ದಾಖಲೆಗೆ ಸೇರ್ಪಡೆಗೊಳಿಸಲು ಪ್ರಯತ್ನ ನಡೆಸಿರುವುದಾಗಿಯೂ ತಿಳಿಸಿದ್ದಾರೆ. ವರ್ಷದಿಂದ ವರ್ಷಕ್ಕೆ ಅಭಿವೃದ್ಧಿಯತ್ತ ಕೊಡವ ಕೌಟುಂಬಿಕ ಹಾಕಿ ಉತ್ಸವ ಸಾಗುತ್ತಿದ್ದು, ಕೊಡವ ಕುಟುಂಬಗಳ ತಂಡದ ಸಂಖ್ಯೆ ಏರಿಕೆಯಾಗುತ್ತಿದೆ. ಲಿಮ್ಕಾ ದಾಖಲೆಗೆ ಪಾತ್ರವಾಗಿರುವುದು ಕೊಡಗಿನ ಕ್ರೀಡಾ ಹಿರಿಮೆಗೆ ಮತ್ತೊಂದು ಗರಿ ಸೇರ್ಪಡೆಯಾದಂತಾಗಿದೆ," ಎಂದು ಹೇಳಿದ್ದಾರೆ.

English summary
The 21st annual Kodava hockey festival, ‘Biddatanda Hockey Namme - 2017’ begins from April 7 at the General Thimmayya Stadium, Napoklu in Kodagu. A Record of 306 teams participating in this Festival.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X