Karnataka Rain: ಕಾವೇರಿ ತವರಲ್ಲಿ ಮಳೆ ಕೊರತೆ, ಭತ್ತಕ್ಕೆ ಹಿನ್ನಡೆ!
ಮಳೆರಾಯ ಕೈಕೊಟ್ಟು ಹೋಗಿದ್ದು, ಧೋ ಅಂತಾ ಮಳೆ ಸುರಿಯಬೇಕಿದ್ದ ಸಮಯದಲ್ಲೇ ಬಿಸಿಲು ಧಗಧಗಿಸುತ್ತಿದೆ. ಹೀಗಾಗಿ ಕರ್ನಾಟಕದಲ್ಲಿ ಬರದ ಛಾಯೆ ಆವರಿಸಿದ್ದು, ಮುಂದಿನ ಪರಿಸ್ಥಿತಿ ಬಗ್ಗೆ ಚಿಂತೆ ಶುರುವಾಗಿದೆ. ಇದೇ ಸಂದರ್ಭದಲ್ಲಿ ಜೀವನದಿ ಕಾವೇರಿಯ ತವರು, ಕೊಡಗು ಜಿಲ್ಲೆಯ ಸ್ಥಿತಿ ಕೂಡ ದಿನ ದಿನಕ್ಕೂ ಭೀಕರವಾಗುತ್ತಿದೆ.
ನೋಡ ನೋಡುತ್ತಲೇ ಮೋಡಗಳು ಮರೆಯಾಗಿವೆ. ಗಿರಿ ಶಿಖರಗಳ ನಾಡು ಕೊಡಗಿನಲ್ಲೂ ಭಾರಿ ಮಳೆ ಕೊರತೆ ಎದುರಾಗಿದ್ದು, ಕೃಷಿ ಚಟುವಟಿಕೆಗೆ ಪೆಟ್ಟು ಬಿದ್ದಿದೆ. ಆಗಸ್ಟ್ ತಿಂಗಳಲ್ಲಿ ಮೊದಲ ಅರ್ಧಕ್ಕೆ ಶೇಕಡಾ 39ರಷ್ಟು ಪ್ರದೇಶದಲ್ಲಿ ಮಾತ್ರ ಭತ್ತದ ಕೃಷಿ ನಡೆದಿದ್ದು. ಜಿಲ್ಲೆಯ ನೈಋತ್ಯ & ವಾಯುವ್ಯ ಭಾಗಗಳ ಕೆಲವು ಕಡೆಗಳಲ್ಲಿ ಜುಲೈ ಕೊನೆಯ ವಾರದಲ್ಲಿ ಭತ್ತದ ಕೃಷಿ ನಡೆದಿದೆ. ಆದರೆ ಹೆಚ್ಚಿನ ಪ್ರದೇಶದಲ್ಲಿ ಮಳೆ ಕೊರತೆ ಪರಿಣಾಮ ಭತ್ತ ನಾಟಿ ಮಾಡೇ ಇಲ್ಲ. ಈ ಮೂಲಕ ಮಳೆ ಕೊರತೆ ಜೊತೆಗೆ ಆಹಾರದ ಅಭಾವದ ಆತಂಕ ಕೂಡ ಆವರಿಸಿದೆ.

ಮಳೆ ನೀರು ಬೇಕೆ ಬೇಕು!
ಕೊಡಗು ಜಿಲ್ಲೆಯಲ್ಲಿ ಮಳೆ ಬಂದರೆ ಉತ್ತಮ ಬೆಳೆ, ಅದರಲ್ಲೂ ಭತ್ತಕ್ಕೆ ಮಳೆಯ ನೀರೇ ಅತ್ಯಗತ್ಯ. ಹೀಗಾಗಿ ಭತ್ತ ಬೆಳೆಯಲು ಮಳೆ ಅವಲಂಬಿಸಿದ್ದಾರೆ ಕೊಡಗು ಭಾಗದ ಕೃಷಿಕರು. ಪರಿಸ್ಥಿತಿ ಹೀಗಿದ್ದಾಗ ಪಂಪ್ ಮಾಡಿದ ನೀರಿಂದ ಭೂಮಿಗೆ ನೀರುಣಿಸಿದ್ರೆ ನೀರು ಹೊರಬರುತ್ತೆ ಅನ್ನೋ ಮಾತಿದೆ. ಏಕೆಂದರೆ ಮಣ್ಣಿನ ವಿನ್ಯಾಸವು ಅಂತಹದ್ದಾಗಿದೆ ಹಾಗೂ ಭೂಮಿ ಕೂಡ ಶೀಘ್ರ ಒಣಗುತ್ತದೆ. ಹೀಗಾಗಿ ಭತ್ತ ನಾಟಿ ಮಾಡಿರುವ ರೈತರಿಗೆ ಹೊಸ ಭಯ ಕಾಡುತ್ತಿದ್ದು ಭತ್ತ ಒಣಗುವ ಆತಂಕವಿದೆ. ಬರದ ನಡುವೆ ಇದು ಮತ್ತೊಂದು ಮಹಾನ್ ಹೊಡೆತವನ್ನ ಕೊಡುತ್ತಿದೆ.
ಕೈಕೊಟ್ಟ ಮಳೆ, ಆತಂಕ ಶುರು!
ಪ್ರತಿ ವರ್ಷ ಆಗಸ್ಟ್ ಮಧ್ಯದ ಹೊತ್ತಿಗೆ ಕೊಡಗು ಜಿಲ್ಲೆಯಲ್ಲಿ ಶೇ.80ರಷ್ಟು ಕೃಷಿ ಭೂಮಿಯಲ್ಲಿ ಭತ್ತ ನಾಟಿ ಮಾಡುತ್ತಿದ್ದರು. ಆದರೆ ಪ್ರಸಕ್ತ ವರ್ಷ ಕೇವಲ ಶೇಕಡಾ 39ರಷ್ಟು ಮಾತ್ರ ಭತ್ತ ನಾಟಿ ಮಾಡಲಾಗಿದೆ. ಮಡಿಕೇರಿ ಹಾಗೂ ವಿರಾಜಪೇಟೆ ತಾಲೂಕಿನಲ್ಲಿ ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದೆ. ಮಡಿಕೇರಿಯಲ್ಲಿ 6,000 ಹೆಕ್ಟೇರ್ ಪೈಕಿ ಬರೀ 1,600 ಹೆಕ್ಟೇರ್‌ನಲ್ಲಿ ಭತ್ತ ನಾಟಿಯಾಗಿದೆ. ಶೇಕಡಾ 26 ರಷ್ಟು ಗುರಿ ಸಾಧಿಸಲಾಗಿದೆ ಎನ್ನಲಾಗಿದೆ. ಇನ್ನು ವಿರಾಜಪೇಟೆಯ 29,000 ಹೆಕ್ಟೇರ್‌ಗಳಲ್ಲಿ 9,793 ಕೃಷಿಯೊಂದಿಗೆ ಶೇ. 33.7% ರಷ್ಟು ಪ್ರಗತಿ ಕಾಣಲಾಗಿದೆ. ಮಳೆ ಇದೇ ರೀತಿ ಕೈಕೊಟ್ಟರೆ ಪರಿಸ್ಥಿತಿ ಇನ್ನಷ್ಟು ಭೀಕರವಾಗಲಿದೆ.

ಬರದಲ್ಲಿ ಬೆಂದಿರುವ ಕಾವೇರಿ ಕೊಳ್ಳ
ಕಾವೇರಿ ಕೊಳ್ಳದ ಪರಿಸ್ಥಿತಿ ಭೀಕರವಾಗಿದೆ. ಆದರೂ ತಮಿಳುನಾಡಿಂದ ನೀರು ಬಿಡಲು ಒತ್ತಡ ಜೋರಾಗಿದೆ. ಸರಿಯಾಗಿ ಮಳೆಯೇ ಬಾರದಿದ್ದರೆ ಎಲ್ಲಿಂದ ನೀರು ಬಿಡಲು ಆಗುತ್ತೆ? ಈಗಾಗಲೇ ತಮಿಳುನಾಡು ಸರ್ಕಾರ ಮೆಟ್ಟೂರು ಜಲಾಶಯದಲ್ಲಿದ್ದ ನೀರು ಬೇಕಾಬಿಟ್ಟಿ ಖರ್ಚು ಮಾಡಿದೆ. ಆದ್ರೆ ಈಗ ನಮ್ಮ ಮೇಲೆ ಒತ್ತಡ ಹಾಕಿ ನೀರು ಕಿತ್ತುಕೊಳ್ಳುತ್ತಿದೆ ಎಂಬ ಆರೋಪ ಕೃಷಿಕರದ್ದು. ಮೊದಲೇ ಮುಂಗಾರು ಕೈಕೊಟ್ಟು ಚಿಂತೆ ಕಾಡುವಾಗ ತಮಿಳುನಾಡು ಕಿರಿಕ್ ಜೋರಾಗುತ್ತಿದೆ. ಕಾವೇರಿ ಕೊಳ್ಳದ ಡ್ಯಾಂಗಳ ನೀರನ್ನು ತಮಿಳುನಾಡಿಗೆ ಹರಿಸಲಾಗುತ್ತಿದೆ.
ಮಳೆಯ ಕೊರತೆ ಕೇಳಿದರೆ ಭಯವಾಗುತ್ತೆ
ಈ ವರ್ಷ ಮುಂಗಾರು ಮಳೆ ಶುರುವಾಗಿದ್ದೇ ತಡವಾಗಿತ್ತು. ಹೀಗೆ ಕಾವೇರಿ ಕೊಳ್ಳದ ಭಾಗದಲ್ಲು ದುರ್ಬಲ ಮುಂಗಾರಿನ ಕಾರಣದಿಂದ ಕಾವೇರಿ ಜಲಾನಯನ ಪ್ರದೇಶದ ಅಣೆಕಟ್ಟುಗಳಿಗೆ ನೀರಿನ ಒಳಹರಿವು ಶೇ 42.54ರಷ್ಟು ತಗ್ಗಿದೆ. ಜೂನ್ 1, 2023ರಿಂದ ಆಗಸ್ಟ್ 9, 2023 ತನಕ ಕಾವೇರಿ ಕೊಳ್ಳದ ಅಣೆಕಟ್ಟುಗಳಾದ ಕಬಿನಿ, ಹಾರಂಗಿ, ಹೇಮಾವತಿ & ಕೆಆರ್‌ಎಸ್‌ನಲ್ಲಿ ಒಳ ಹರಿವಿನ ಪ್ರಮಾಣ 30 ವರ್ಷ ಸರಾಸರಿಗೆ ಹೋಲಿಸಿದರೆ ಶೇ 42.54ರಷ್ಟು ಇಳಿಮುಖವಾಗಿದೆ. ಜೂನ್ 1ರಿಂದ ಆಗಸ್ಟ್ 10ರ ತನಕ ಕೆಆರ್‌ಎಸ್ ಡ್ಯಾಂ ವ್ಯಾಪ್ತಿ ಪ್ರದೇಶಗಳಲ್ಲಿ ಶೇಕಡಾ 23ರಷ್ಟು, ಕಬಿನಿ ವ್ಯಾಪ್ತಿಯಲ್ಲಿ ಶೇ 22ರಷ್ಟು ಮಳೆ ಕೊರತೆಯಾಗಿದೆ.












Click it and Unblock the Notifications