Monsoon Rain: ಕೊಡಗು ಜಿಲ್ಲೆಯಲ್ಲಿ ಮತ್ತೆ ಧಾರಾಕಾರ ಮಳೆ
ಮಡಿಕೇರಿ, ಜುಲೈ 27: ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆ ಮತ್ತೆ ಬಿರುಸುಗೊಂಡಿದ್ದು, ಮುಂದಿನ ದಿನಗಳಲ್ಲಿ ಮಳೆ ಮತ್ತಷ್ಟು ಹೆಚ್ಚಾಗುವ ಮುನ್ಸೂಚನೆಯೂ ಇದೆ. ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿಯವರೆಗೆ ಸುರಿದ ಮಳೆ 1,858.69 ಮಿ. ಮೀ., ಕಳೆದ ವರ್ಷ ಇದೇ ಅವಧಿಯಲ್ಲಿ 1,105.19 ಮಿ. ಮೀ. ಮಳೆಯಾಗಿತ್ತು.
ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಪ್ರಾಕೃತಿಕ ವಿಕೋಪ ನಿರ್ವಹಣೆ ಸಂಬಂಧ ಸಭೆಯನ್ನು ನಡೆಸಿದರು. "ಜಿಲ್ಲೆಯಲ್ಲಿ ಮತ್ತೆ ಮಳೆ ಬಿರುಸುಗೊಂಡಿದ್ದು, ಮುಂದಿನ ದಿನಗಳಲ್ಲಿಯೂ ಹೆಚ್ಚಿನ ಮಳೆಯಾದಲ್ಲಿ ಪ್ರಾಕೃತಿಕ ವಿಕೋಪವನ್ನು ಸಮರ್ಥವಾಗಿ ನಿರ್ವಹಿಸಬೇಕು" ಎಂದು ನಿರ್ದೇಶನ ನೀಡಿದರು.

"ಪ್ರಾಕೃತಿಕ ವಿಕೋಪ ನಿರ್ವಹಣೆಯಲ್ಲಿ ಕಂದಾಯ, ಲೋಕೋಪಯೋಗಿ, ಪಂಚಾಯತ್ ರಾಜ್, ಅರಣ್ಯ, ಸೆಸ್ಕ್, ಅಗ್ನಿಶಾಮಕ ಹೀಗೆ ವಿವಿಧ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದು, ಮುಂದಿನ ದಿನಗಳಲ್ಲಿಯೂ ಸಹ ಇದೇ ರೀತಿ ಉತ್ತಮವಾಗಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಯಾವುದೇ ರೀತಿಯ ಹಾನಿ ಆಗದಂತೆ ಅಗತ್ಯ ಮುನ್ನೆಚ್ಚರ ವಹಿಸಬೇಕು" ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಆಗಸ್ಟ್‌ನಲ್ಲಿ ಹೆಚ್ಚಿನ ಮಳೆಯಾಗಿದೆ: "ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆಯಿಂದಾಗಿ ಜಲಾಶಯಗಳು, ಜಲಪಾತಗಳು, ಹಳ್ಳ ಕೊಳ್ಳ, ನದಿ ತೊರೆಗಳು ತುಂಬಿ ಹರಿಯುತ್ತಿವೆ. ಇದರಿಂದ ಅಂತರ್ಜಲವು ಸಹ ಹೆಚ್ಚಾಗಿದೆ. ಹೀಗಾಗಿ ಯಾವುದೇ ರೀತಿ ಹಾನಿ ಉಂಟಾಗದಂತೆ ಎಚ್ಚರ ವಹಿಸಬೇಕು" ಎಂದು ಜಿಲ್ಲಾಧಿಕಾರಿಗಳು ಹೇಳಿದರು.
"ಕಳೆದ 2018, 2019, 2020ರಲ್ಲಿ ಆಗಸ್ಟ್ ತಿಂಗಳಲ್ಲಿಯೇ ಹೆಚ್ಚಿನ ಮಳೆಯಾಗಿದೆ. ಹಾಗಾಗಿ ಮತ್ತಷ್ಟು ಮುನ್ನೆಚ್ಚರಿಕೆ ವಹಿಸಬೇಕು. ಜನ, ಜಾನುವಾರು ರಕ್ಷಣೆಗೆ ಮುಂದಾಗಬೇಕು. ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಲೋಕೋಪಯೋಗಿ ಮತ್ತು ಪಂಚಾಯತ್ ರಾಜ್ ರಸ್ತೆಗಳು, ಸೆಸ್ಕ್ ವಿದ್ಯುತ್ ಕಂಬಗಳು ಮತ್ತು ಪರಿವರ್ತಕಗಳು, ಸರ್ಕಾರಿ ಶಾಲಾ-ಕಾಲೇಜು ಕಟ್ಟಡಗಳು, ಸರ್ಕಾರಿ ಕಚೇರಿಗಳು, ಮನೆ ಹಾಗೂ ಬೆಳೆ ಹಾನಿ ಹೀಗೆ ವಿವಿಧ ರೀತಿಯ ಹಾನಿಯಾಗಿದ್ದು, ಇದನ್ನು ಆಯಾಯ ಸಂದರ್ಭದಲ್ಲಿಯೇ ಸರಿಪಡಿಸುವ ಕಾರ್ಯ ಆಗಬೇಕು" ಎಂದು ಅಧಿಕಾರಿಗಳಿಗೆ ಸೂಚಿಸಿದರು.
"ಈಗಾಗಲೇ ಹೆಚ್ಚಿನ ಮಳೆಯಾಗಿ ಶ್ರೀಮಂಗಲ-ಕುಟ್ಟ ರಸ್ತೆ, ಶಾಂತಳ್ಳಿ ರಸ್ತೆ ಹೀಗೆ ಹಲವು ರಸ್ತೆಗಳು ಹೆಚ್ಚಿನ ಹಾನಿಯಾಗಿದ್ದು, ಈ ಸಂಬಂದ ಮರಳು, ಜಲ್ಲಿಯನ್ನು ತುಂಬಿ ಸರಿಪಡಿಸುವ ಕಾರ್ಯವಾಗಬೇಕು. ಬ್ಯಾರಿಕೇಡ್ ಅಳವಡಿಸಬೇಕು. ಸಾರಿಗೆ ಸಂಚಾರಕ್ಕೆ ಯಾವುದೇ ರೀತಿಯ ವ್ಯತ್ಯಯ ಉಂಟಾಗದಂತೆ ಗಮನಹರಿಸಬೇಕು. ಸಾರಿಗೆ ಸಂಪರ್ಕದಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾದಲ್ಲಿ, ಕೂಡಲೇ ಜಿಲ್ಲಾಡಳಿತದ ಗಮನಕ್ಕೆ ತಂದು ಪರ್ಯಾಯ ಸಾರಿಗೆ ಸಂಪರ್ಕ ಕಲ್ಪಿಸಬೇಕು. ಯಾರಿಗೂ ತೊಂದರೆಯಾಗದಂತೆ ಗಮನಹರಿಸುವುದು ಅತೀಮುಖ್ಯವಾಗಿದೆ" ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲೆಯಲ್ಲಿ ಹೆಚ್ಚಿನ ಗಾಳಿ, ಮಳೆಯಿಂದ ಮನೆ ಹಾನಿಯಾದಲ್ಲಿ ಅಥವಾ ಇತರೆ ಸಮಸ್ಯೆಗಳು ಉಂಟಾದಲ್ಲಿ ಅಂತಹ ಕುಟುಂಬಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಿ ಅಗತ್ಯ ಮೂಲ ಸೌಲಭ್ಯವನ್ನು ಕಲ್ಪಿಸಬೇಕು. ತಹಶೀಲ್ದಾರ್, ತಾಲೂಕು ಪಂಚಾಯಿತಿ ಇಒ, ಅರಣ್ಯ, ಸೆಸ್ಕ್, ಅಗ್ನಿಶಾಮಕ ದಳ ಹೀಗೆ ಹಲವು ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಮನ್ವಯತೆಯಿಂದ ಮುಂದಿನ ದಿನಗಳಲ್ಲಿಯೂ ಕರ್ತವ್ಯ ನಿರ್ವಹಿಸಬೇಕು ಎಂದು ಸೂಚಿಸಲಾಗಿದೆ.
ಮನೆ ಹಾನಿಗೆ ಸಂಬಂಧಿಸಿದಂತೆ ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ 24 ಗಂಟೆಯೊಳಗೆ ಪರಿಹಾರ ವಿತರಿಸಬೇಕು. ಸಾರ್ವಜನಿಕರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಭೆಗಳನ್ನು ನಡೆಸಿ ಪ್ರಾಕೃತಿಕ ವಿಕೋಪ ನಿರ್ವಹಿಸಬೇಕು ಎಂದು ನಿರ್ದೇಶನ ನೀಡಲಾಗಿದೆ.
ಪ್ರಾಕೃತಿಕ ವಿಕೋಪ ನಿರ್ವಹಣೆ ಸಂಬಂಧಿಸಿದಂತೆ ಈಗಾಗಲೇ ಹೋಬಳಿ ಮಟ್ಟದಲ್ಲಿ ನಿಯೋಜಿಸಿರುವ ನೋಡಲ್ ಅಧಿಕಾರಿಗಳು ವಿವಿಧ ರೀತಿಯ ಹಾನಿ ಮತ್ತಿತರ ಸ್ಥಿತಿಗತಿ ಬಗ್ಗೆ ಪ್ರತಿನಿತ್ಯ ವರದಿ ನೀಡಬೇಕು. ತುರ್ತು ಕಾರ್ಯವಿದ್ದಲ್ಲಿ ನೇರವಾಗಿ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ನಿರ್ದೇಶನ ಕೊಟ್ಟರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮಾತನಾಡಿ, "ಲೋಕೋಪಯೋಗಿ, ಪಂಚಾಯತ್ ರಾಜ್, ಸೆಸ್ಕ್, ಅರಣ್ಯ, ಅಗ್ನಿಶಾಮಕ ಹೀಗೆ ಪ್ರತಿ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸುತ್ತಿದ್ದು, ಉತ್ತಮವಾಗಿ ಸ್ಪಂದನೆ ಇದೆ. ಆ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿಯೂ ಇನ್ನೂ ಹೆಚ್ಚಿನ ಕೆಲಸ ಮಾಡಬೇಕು" ಎಂದು ಸಲಹೆ ನೀಡಿದರು.
ಮಳೆಯಾಗುತ್ತಿರುವುದರಿಂದ ಪ್ರವಾಹ ಪೀಡಿತ ಪ್ರದೇಶಗಳು, ನಗರ, ಪಟ್ಟಣ ಎಲ್ಲೆಡೆ ಡೆಂಗ್ಯೂ ಸೇರಿದಂತೆ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಹೆಚ್ಚಿನ ಅರಿವು ಮೂಡಿಸಬೇಕು. ಡೆಂಗ್ಯೂ ನಿಯಂತ್ರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.












Click it and Unblock the Notifications