ಕೊಡಗಿನ ಈ ಗ್ರಾಮದ 30 ವರ್ಷಗಳ 'ಸೇತುವೆ' ಕನಸು ಕೊನೆಗೂ ನನಸು
ಕೊಡುಗು, ಆಗಸ್ಟ್ 26: ಪ್ರತಿ ವರ್ಷ ಮಳೆಗಾಲದಲ್ಲಿ ಸುರಿಯುವ ಭಾರಿ ಮಳೆಯಿಂದಾಗಿ ಕೊಡಗು ವ್ಯಾಪ್ತಿಯಲ್ಲಿ ಗುಡ್ಡ, ಮನೆ ಕುಸಿತ, ಸೇತುವೆ ಮುಳುಗಡೆಯಂತಹ ಸಮಸ್ಯೆ ಉದ್ಭವಿಸುತ್ತವೆ. ನದಿಗಳು ಒಳಹರಿವು ಹೆಚ್ಚಾಗಿ ಗ್ರಾಮಗಳೇ ದ್ವೀಪಗಳಂತಾಗಿಬಿಡುತ್ತವೆ. ಆಗ ಗ್ರಾಮಗಳಿಗೆ ಸಂಪರ್ಕ ಕಡಿತಗೊಳ್ಳುತ್ತವೆ. ಇಂತದ್ದೆ ಸಮಸ್ಯೆಯನ್ನು ಕಳೆದ 03 ದಶಕಗಳಿಂದ ಎದುರಿಸುತ್ತಿದ್ದ ಕೊಡುಗು ಜಿಲ್ಲೆಯ ಈ ಗ್ರಾಮಕ್ಕೆ ಇದೀಗ ನೂತನ ಸೇತುವೆಯು ಪರಿಹಾರವಾಗಿ ಸಿಕ್ಕಿದೆ.
ಹೌದು, ಕೊಡಗು ಜಿಲ್ಲೆಯ ಚೆಂಬು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜನರಿಗೆ ಸೇತುವೆಯೊಂದು ಅಗತ್ಯವಾಗಿತ್ತು. ಈ ಚೆಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅತ್ಯಾಡಿಯಲ್ಲಿ ಜೋರು ಮಳೆ ಬಂದರೆ ಉಂಬಾಳೆ ಹೊಳೆ ತುಂಬಿ ಹರಿದು ಇಡೀ ಗ್ರಾಮವೇ ದ್ವೀಪವಾಗಿ ಬದಲಾಗುತ್ತದೆ. ಇದರಿಂದ ಗ್ರಾಮಸ್ಥರು ಕಳೆದ 30 ವರ್ಷಗಳಿಂದ ನದಿ ದಾಟಲಾಗದೇ ತೊಂದರೆವ ಎದುರಿಸುತ್ತಿದ್ದರು.

ಭಾನುವಾರ ಸೇತುವೆ ಉದ್ಘಾಟಿಸಿ ಹಸ್ತಾಂತರ
ಈ ಗ್ರಾಮಸ್ಥರ ಸಮಸ್ಯೆ ಆಲಿಸಿದ ಬೆಂಗಳೂರಿನ ಪ್ರಣವ್ ಫೌಂಡೇಶನ್ ಕೈ ಜೋಡಿಸಿದೆ. ಚೆಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅತ್ಯಾಡಿಯಲ್ಲಿ ನಿರ್ಮಿಸಿದ 'ಪ್ರಣವ ಸೇತು' ಸೇತುವೆಯನ್ನು ನಿರ್ಮಿಸಿ ಗ್ರಾಮಸ್ಥರಿಗೆ ಆಸರೆಯಾಗಿದೆ. ಈ ಸೇತುವೆಯನ್ನು ನೆನ್ನೆ ಭಾನುವಾರ (ಆಗಸ್ಟ್ 25) ಉದ್ಘಾಟಿಸಿ ಗ್ರಾಮಸ್ಥರ ಹಸ್ತಾಂತರಿಸಲಾಯಿತು. ಈ ಮೂಲಕ ಚೆಂಬು ಗ್ರಾಮದ ಜನರು 30 ವರ್ಷಗಳ ಕನಸು ಮಾಡಲಾಯಿತು.
ಈ ಗ್ರಾಮದ ಸಮಸ್ಯೆಯ ನಿವಾರಣೆಗೆ ಸಹಕರಿಸಿದ ಪ್ರಣವ್ ಫೌಂಡೇಶನ್ ಸೂಕ್ತ ಪ್ಲಾನ್ ಮಾಡಿಕೊಂಡು ಬರೋಬ್ಬರಿ 2.50 ಲಕ್ಷ ರೂಪಾಯಿ ವೆಚ್ಚದಲ್ಲಿ 24 ಮೀಟರ್ ಉದ್ದದ ಸೇತುವೆ ನಿರ್ಮಿಸಿದೆ. ತೂಗುಸೇತುವೆಗಳ ಸರದಾರ, ಪದ್ಮಶ್ರೀ ಗಿರೀಶ್ ಭಾರದ್ವಾಜ್ ಅವರ ತಂಡ ಸೇತುವೆ ನಿರ್ಮಿಸಿದೆ.
ಕೊಡಗು ಜಿಲ್ಲೆಯ ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಶನ್, ಟೀಮ್ 12 ಆಫ್ ರೋಡರ್ಸ್ ಮತ್ತು ಮಲ್ನಾಡ್ ಯೂಥ್ ಅಸೋಸಿಯೇಶನ್‌ನವರು ಸೇತುವೆ ನಿರ್ಮಾಣಕ್ಕೆ ಸಹಕಾರ ನೀಡಿದ್ದನ್ನು ಉದ್ಘಾಟನೆ ವೇಳೆ ಸ್ಮರಿಸಲಾಯಿತು.
ಪ್ರಣವ ಸೇತು ಸೇತುವೆ ವಿಶೇಷತೆಗಳು
ಚೆಂಬು ಗ್ರಾಮ ಪಂಚಾಯತಿ ವ್ಯಾಪ್ತಿಯ ಅತ್ಯಾಡಿ ಗ್ರಾಮದಲ್ಲಿರುವ ಉಂಬಾಳೆ ನದಿಗೆ ಅಡ್ಡಲಾಗಿ ಈ ಸೇತುವೆ ನಿರ್ಮಿಸಲಾಗಿದೆ.
ಉಕ್ಕಿನಿಂದ ಮಾಡಿರುವ ಒಟ್ಟು 24 ಮೀಟರ್ ಉದ್ದದ ಸೇತುವೆ ಇದಾಗಿದೆ. ಇದರ ಒಟ್ಟು ಅಗಲ 0.75 ಮೀಟರ್ ಇದ್ದು, ಈ ಸೇತುವೆ ಮೇಲೆ ಏಕಕಾಲದಲ್ಲಿ 10 ಜನರು ನಿಲ್ಲಬಹುದು, ಓಡಾಡಿದರೂ ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ.

ಸೇತುವೆ ಕಂಡು ಗ್ರಾಮಸ್ಥರಲ್ಲಿ ಹರ್ಷ
ಈ ಸೇತುವೆ ನಿರ್ಮಾಣದಿಂದ ಈ ಭಾಗದ ಜನರು ಇನ್ನುಮುಂದೆ ನದಿ ತುಂಬಿ ಹರಿದರೂ ಧೈರ್ಯದಿಂದ ಓಡಾಡಬಹುದಾಗಿದೆ.
30 ವರ್ಷಗಳಿಂದ ಈ ಸಮಸ್ಯೆ ಎದುರಿಸುತ್ತಿದ್ದೇವೆ. ಮಳೆಗಾಲದಲ್ಲಿ ಹೊಳೆ ದಾಟಲು ಬಹಳ ಕಷ್ಟವಾಗುತ್ತಿತ್ತು. ಬಿದಿರಿನ ಪಾಲವಿದ್ದರೂ, ಭಯದಿಂದ ಓಡಾಡುವ ಸ್ಥಿತಿ ಇತ್ತು. ಈಗ ಉಕ್ಕಿನ ಸೇತುವೆ ನಮಗೆ ದೊರೆತಿದೆ ಎಂದು ಗ್ರಾಮದ ಮಹಿಳೆ ಮನುಜ ಹರ್ಷ ವ್ಯಕ್ತಪಡಿಸಿದರು.
ಮಳೆಗಾಲದಲ್ಲಿ ಬಿದಿರಿನ ಪಾಲ ಜಾರುತ್ತಿತ್ತು. ಉಕ್ಕಿನ ಸೇತುವೆಯಿಂದ ನಮ್ಮ ಗ್ರಾಮದ ವಿದ್ಯಾರ್ಥಿಗಳು, ಅಂಗವಿಕಲರು, ಹಿರಿಯ ನಾಗರಿಕರು ಓಡಾಡಲು ಅನುಕೂಲವಾಗಿದೆ ಎಂದು ಇಲ್ಲಿನ ವಿದ್ಯಾರ್ಥಿ ಸುತನ್ ಮಾಹಿತಿ ಹಂಚಿಕೊಂಡರು.
ಸಂಸದ, ಶಾಸಕರ ಬೆಂಬಲ
ಬೆಂಗಳೂರಿನ ಈ ಪ್ರಣವ ಫೌಂಡೇಶನ್ ಸೇತುವೆ ನಿರ್ಮಾಣ ಕೆಲಸಕ್ಕೆ ಮೈಸೂರು ಲೋಕಸಭಾ ಕೇತ್ರದ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ, ಪಬ್ಲಿಕ್ ಟಿವಿ ಮುಖ್ಯಸ್ಥರಾದ ಎಚ್.ಆರ್.ರಂಗನಾಥ್ ಹಾಗೂ ಅತ್ಯಾಡಿ ಗ್ರಾಮಸ್ಥರು ಬೆಂಬಲ ನೀಡಿದ್ದಾರೆ ಎಂದು ಫೌಂಡೇಶನ್ ಸದಸ್ಯರು ಮಾಹಿತಿ ನೀಡಿದ್ದಾರೆ.
ಸೇತುವೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರಣವ್ ಫೌಂಡೇಶನ್ ಅಧ್ಯಕ್ಷ ರಾಕೇಶ್ ರೈ, ಕಾರ್ಯದರ್ಶಿ ನಾಗರಾಜ ಹೆಬ್ಬಾಳ್, ಟ್ರಸ್ಟಿಗಳಾದ ಎನ್.ನೇತ್ರ, ಮಹೇಶ್ ಕುಮಾರ್ ಮೇನಾಲ, ಮಂಜುನಾಥ ಭಟ್, ಕೆ.ಪಿ.ರಕ್ಷಿತ್, ಯೋಜನೆ ಸಂಯೋಜಕ ದೇವಿಪ್ರಸಾದ್ ಅತ್ಯಾಡಿ, ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಶನ್ ಅಧ್ಯಕ್ಷ ಶ್ರೀನಿಧಿ ಲಿಂಗಪ್ಪ ಉಪಸ್ಥಿತರಿದ್ದರು.












Click it and Unblock the Notifications