ಎಲ್ಲಾ ಹೋಂ ಸ್ಟೇಗಳ ನೋಂದಣಿಗೆ ಸೂಚನೆ ಕೊಟ್ಟ ಕೊಡಗು ಡಿಸಿ
ಕೊಡಗು, ಮಾರ್ಚ್ 13: ಕೊಪ್ಪಳದಲ್ಲಿ ವಿದೇಶಿ ಮಹಿಳೆ ಸೇರಿ ಇಬ್ಬರ ಮೇಲೆ ಅತ್ಯಾಚಾರ ನಡೆಸಿ, ಒಬ್ಬರನ್ನು ಕಾಲುವೆಗೆ ತಳ್ಳಿ ಕೊಲೆ ಮಾಡಿರುವ ಪ್ರಕರಣದ ಬಳಿಕ ಕರ್ನಾಟಕ ಸರ್ಕಾರ ರೆಸಾರ್ಟ್/ ಹೋಂ ಸ್ಟೇಗಳಲ್ಲಿ ಪ್ರವಾಸಿಗರ ಸುರಕ್ಷತೆಗೆ ಹೆಚ್ಚಿನ ಆದ್ಯತೆಯನ್ನು ನೀಡಿದೆ. ಕೊಡಗು ಜಿಲ್ಲೆಯಲ್ಲಿಯೂ ಪ್ರವಾಸಿಗರ ಸುರಕ್ಷತೆ ಮತ್ತು ಭದ್ರತೆಗೆ ಒತ್ತು ನೀಡಲಾಗಿದ್ದು, ನೋಂದಣಿ ಆಗದಿರುವ ಹೋಂ ಸ್ಟೇಗಳಿಗೆ ಖಡಕ್ ಸೂಚನೆ ನೀಡಲಾಗಿದೆ.
ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಭದ್ರತೆ ಮತ್ತು ಸುರಕ್ಷತೆ ನಿರ್ವಹಿಸುವ ಕುರಿತು ಜಿಲ್ಲೆಯ ಹೋಟೆಲ್, ರೆಸಾರ್ಟ್, ಹೋಂ-ಸ್ಟೇ ಹಾಗೂ ಟ್ರಾವೆಲ್ಸ್ ಏಜೆನ್ಸಿ ಪ್ರತಿನಿಧಿಗಳ ಜತೆ ಸಭೆ ನಡೆಸಿದರು. ಜಿಲ್ಲಾಡಳಿತವು ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸುರಕ್ಷತೆಗಾಗಿ ಪೊಲೀಸ್ ಇಲಾಖೆಯೊಂದಿಗೆ ಸಮನ್ವಯತೆ ಸಾಧಿಸಿ ಎಲ್ಲ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಜಿಲ್ಲೆಯ ಪ್ರವಾಸಿ ತಾಣಗಳನ್ನು ಪ್ರವಾಸಿ ಸ್ನೇಹಿಯಾಗಿರುವಂತೆ ಕ್ರಮವಹಿಸಲು ಉಪನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಜಿಲ್ಲೆಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ, ಮುಖ್ಯಾಧಿಕಾರಿಗಳಿಗೆ, ತಹಶೀಲ್ದಾರ್‌ಗೆ ಹಾಗೂ ಹೋಂ-ಸ್ಟೇ, ರೆಸಾರ್ಟ್, ಅಸೋಸಿಯೇಷನ್ ಹಾಗೂ ಟೂರ್ ಅಂಡ್ ಟ್ರಾವೆಲ್ಸ್ ಅಪರೇಟರ್‌ಗಳಿಗೆ ನಿರ್ದೇಶನಗಳನ್ನು ನೀಡಿದರು.
ಪ್ರವಾಸಿಗರ ಸುರಕ್ಷತೆಗೆ ಕ್ರಮ: ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ,"ಪ್ರವಾಸಿಗರ ಸುರಕ್ಷತೆ ಮಾರ್ಗಸೂಚಿ ಬಗ್ಗೆ ಜಿಲ್ಲೆಯ ಅಧಿಕೃತ ವೆಬ್‍ಸೈಟ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿಗಳನ್ನು ನೀಡಿ ಜಾಗೃತಿ ವಹಿಸಲು ಕ್ರಮ ಕೈಗೊಳ್ಳಲಾಗುವುದು" ಎಂದರು.
ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕಿ ಅನಿತಾ ಭಾಸ್ಕರ್ ಮಾತನಾಡಿ, "ಜಿಲ್ಲೆಯಲ್ಲಿ 3500ಕ್ಕೂ ಹೆಚ್ಚು ಹೋಂ ಸ್ಟೇಗಳು ಇದ್ದು, ಸದ್ಯ 2269 ಹೋಂ ಸ್ಟೇಗಳು ನೋಂದಣಿಯಾಗಿವೆ. ಜಿಲ್ಲೆಯ ಪ್ರವಾಸಿ ವೆಬ್‍ಸೈಟ್ ಅಪ್‍ಡೇಟ್ ಆಗಬೇಕು. ಇದರಿಂದ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಹಕಾರಿಯಾಗಲಿದೆ. ಪ್ರತಿಯೊಬ್ಬರು ವೆಬ್‍ಸೈಟ್‍ನಲ್ಲಿ ಹುಡುಕುವುದರಿಂದ ಸಹಕಾರಿಯಾಗಲಿದೆ" ಎಂದು ಸಲಹೆ ನೀಡಿದರು.
ಹೋಂ ಸ್ಟೇ ಅಸೋಷಿಯೇಷನ್‍ನ ಮೋಂತಿ ಗಣೇಶ್ ಮಾತನಾಡಿ, "ಹೋಂಸ್ಟೇಗಳ ನೋಂದಣಿ ಸಂಬಂಧ ಮತ್ತಷ್ಟು ಜಾಗೃತಿ ಮೂಡಿಸಬೇಕು. ಪ್ರವಾಸಿಗರ ಸುರಕ್ಷತೆ ಮತ್ತು ಭದ್ರತೆಗೆ ಒತ್ತು ನೀಡಲು ಶ್ರಮಿಸಲಾಗುವುದು" ಎಂದರು.
ಪ್ರವಾಸಿಗರ ರಕ್ಷಣೆಗೆ ಈಗಾಗಲೇ ಸರ್ಕಾರ ಸಹ ಕ್ರಮ ಕೈಗೊಂಡಿದೆ. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಒಳಾಡಳಿತ ಇಲಾಖೆ ಈ ಕುರಿತು ಸುತ್ತೋಲೆಯನ್ನು ದಿನಾಂಕ 10-03-2025ರಂದು ಹೊರಡಿಸಿದ್ದಾರೆ. ರಾಜ್ಯದ ಪ್ರವಾಸಿ ತಾಣಗಳಲ್ಲಿನ ಹೋಂ-ಸ್ಟೇಗಳು ವಿದೇಶಿ ಪ್ರವಾಸಿಗರನ್ನು ಒಳಗೊಂಡಂತೆ ಎಲ್ಲಾ ಪ್ರವಾಸಿಗರ ಭದ್ರತೆ ಹಾಗೂ ಸುರಕ್ಷತೆಗಾಗಿ ಕ್ರಮಗಳನ್ನು ಕಡ್ಡಾಯವಾಗಿ ತೆಗೆದುಕೊಳ್ಳತಕ್ಕದ್ದು ಎಂದು ಸೂಚನೆ ಕೊಟ್ಟಿದ್ದಾರೆ. ಹೊರವಲಯಗಳಲ್ಲಿ ಅಥವಾ ನಿರ್ಜನ ಪ್ರದೇಶಗಳಿಗೆ ಪ್ರವಾಸಿಗರನ್ನು ಕರೆದೊಯ್ಯವ ಮುಂಚೆ ಸಂಬಂಧಿಸಿದ ಅಧಿಕಾರ ವ್ಯಾಪ್ತಿಯುಳ್ಳ ಪೊಲೀಸ್ ಠಾಣೆಯಲ್ಲಿ ಮಾಹಿತಿಯನ್ನು ನೀಡಿ ಅನುಮತಿ ಪಡೆಯತಕ್ಕದ್ದು ಎಂದು ಹೇಳಿದ್ದಾರೆ.
* ಪ್ರವಾಸಿ ತಾಣದ ಸಂಸ್ಕೃತಿ, ಸುರಕ್ಷತೆ ಅಪಾಯಗಳು ಮತ್ತು ಕಾನೂನುಗಳನ್ನು ಪ್ರಯಾಣಕ್ಕೆ ಮುನ್ನವೇ ತಿಳಿದುಕೊಳ್ಳಿ.
* ಪ್ರಮುಖ ದಾಖಲೆ ಪ್ರತಿಗಳನ್ನು (ಪಾಸ್‌ಪೋರ್ಟ್, ವೀಸಾ, ವಿಮೆ) ಇಟ್ಟುಕೊಳ್ಳಿ.
* ಸುತ್ತಮುತ್ತಲಿನ ಪ್ರದೇಶಗಳ ಬಗ್ಗೆ, ವಿಶೇಷವಾಗಿ ಜನದಟ್ಟಣೆಯ ಸ್ಥಳಗಳ ಬಗ್ಗೆ ತಿಳಿದಿರಲಿ.
* ವಿಶ್ವಾಸಾರ್ಹ ಟ್ಯಾಕ್ಸಿಗಳು ಅಥವಾ ರೈಡರ್ ಅಪ್ಲಿಕೇಶನ್‌ಗಳಂತಹ ನೋಂದಾಯಿತ ಸಾರಿಗೆ ಬಳಸಿ.
* ವಿದೇಶಿಗರು ಭಾರತೀಯ ರಾಯಭಾರ ಕಚೇರಿಯಲ್ಲಿ ಹೆಸರು ನೋಂದಾಯಿಸಿ.
* ತುರ್ತು ಸಂಪರ್ಕ ಸಂಖ್ಯೆಗಳನ್ನು ಇಟ್ಟುಕೊಂಡಿರಿ (ಸ್ಥಳೀಯ ತುರ್ತು ಸೇವೆಗಳು, ರಾಯಭಾರ ಕಚೇರಿ).
* ಸ್ಥಳೀಯ ಪದ್ಧತಿ, ಸಂಸ್ಕೃತಿ, ಸಂಪ್ರದಾಯಗಳನ್ನು ಗೌರವಿಸಿ.
* ದುಬಾರಿ ಆಭರಣಗಳು ಅಥವಾ ದೊಡ್ಡ ಪ್ರಮಾಣದ ನಗದು ಮುಂತಾದ ಬೆಲೆ ಬಾಳುವ ವಸ್ತುಗಳನ್ನು ಪ್ರದರ್ಶಿಸಬೇಡಿ.
* ಸರಿಯಾದ ತಯಾರಿ ಮತ್ತು ಸುರಕ್ಷತಾ ಕ್ರಮಗಳು ಇಲ್ಲದೇ ಅಪಾಯಕಾರಿ ಚಟುವಟಿಕೆಗಳಲ್ಲಿ ತೊಡಗಬೇಡಿ
* ಅಪರಿಚಿತರೊಂದಿಗೆ ಹೆಚ್ಚು ವೈಯಕ್ತಿಕ ಮಾಹಿತಿ ಹಂಚಿಕೊಳ್ಳಬೇಡಿ.
* ಸರ್ಕಾರದಿಂದ ಬರುವ ಸುರಕ್ಷತಾ ಸಲಹೆಗಳನ್ನು ನಿರ್ಲಕ್ಷಿಸಬೇಡಿ.
* ಎಲ್ಲರೂ ಇಂಗ್ಲೀಷ್ ಅಥವಾ ಹಿಂದಿ ಮಾತನಾಡುತ್ತಾರೆ ಎಂದು ಭಾವಿಸಬೇಡಿ.
* ಮೂಲ ನುಡಿಗಟ್ಟುಗಳನ್ನು ಕಲಿಯಿರಿ ಅಥವಾ ಅನುವಾದದ ಅಪ್ಲಿಕೇಶನ್‍ಗಳನ್ನು ಬಳಸಿರಿ
* ಆಹಾರದಿಂದ ಹರಡುವ ಕಾಯಿಲೆಗಳಂತಹ ಆರೋಗ್ಯ ಅಪಾಯಗಳನ್ನು ನಿರ್ಲಕ್ಷಿಸಬೇಡಿ. ಅಗತ್ಯವಿದ್ದರೆ ವೈದ್ಯಕೀಯ ಸಹಾಯ ಪಡೆಯಿರಿ.
* ಸಾರ್ವಜನಿಕ ವೈ-ಫೈ ಬಳಸಬೇಡಿ. ಸುರಕ್ಷಿತ ಇಂಟರ್ನೆಟ್ ಸಂಪರ್ಕಗಳಿಗಾಗಿ ವಿಪಿಎನ್ ಬಳಸಿ.
* ಸ್ಥಳೀಯ ರಾಜಕೀಯ ವಿವಾದಗಳು ಅಥವಾ ಪ್ರತಿಭಟನೆಗಳಲ್ಲಿ ಭಾಗಿಯಾಗಬೇಡಿ.
* ನಿಮ್ಮ ಪ್ರಯಾಣ ಸುರಕ್ಷಿತವಾಗಿರುವಂತೆ ನಿರ್ಜನ ಪ್ರದೇಶ, ಕಾಡು, ನೀರಿನ ಮೂಲಗಳಲ್ಲಿ ಜಾಗರೂಕರಾಗಿರಿ.












Click it and Unblock the Notifications