ನದಿ ತೀರದ ಜನರಿಗೆ ಕೊಡಗು ಜಿಲ್ಲಾಡಳಿತ ಎಚ್ಚರಿಕೆ ಸಂದೇಶ
ಮಡಿಕೇರಿ, ಆಗಸ್ಟ್ 13: ಕೊಡಗಿನಲ್ಲಿ ಆಶ್ಲೇಷ ಮಳೆಯ ಅಬ್ಬರ ಮುಂದುವರೆದಿದ್ದು ಕಾವೇರಿ, ಲಕ್ಷ್ಮಣತೀರ್ಥ ಸೇರಿದಂತೆ ಸಣ್ಣಪುಟ್ಟ ನದಿಗಳು ತುಂಬಿ ಹರಿಯತೊಡಗಿದ್ದು, ಹಾರಂಗಿ ಜಲಾಶಯದ ಒಳ ಹರಿವು ಹೆಚ್ಚಿದ ಪರಿಣಾಮ ನಾಲ್ಕು ಕ್ರೆಸ್ಟ್‌ಗೇಟ್‌ಗಳ ಮೂಲಕ ಸುಮಾರು 35ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದ್ದು, ನದಿ ಪಾತ್ರದ ಜನ ಎಚ್ಚರವಾಗಿರುವಂತೆ ಸೂಚಿಸಲಾಗಿದೆ.
ಇನ್ನೊಂದೆಡೆ ತಲಕಾವೇರಿ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಭಾಗಮಂಡಲ ಮತ್ತೆ ಜಲಾವೃತವಾಗುವ ಲಕ್ಷಣಗಳು ಕಂಡುಬಂದಿದ್ದು ಜಿಲ್ಲಾಡಳಿತದಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದ್ದು, ಅನಿವಾರ್ಯ ಪರಿಸ್ಥಿತಿಗಳಲ್ಲಿ ದೋಣಿ, ರ್ಯಾಫ್ಟ್‍ಗಳನ್ನು ಬಳಸಿಕೊಳ್ಳುವ ಸಲುವಾಗಿ ಸ್ಥಳದಲ್ಲಿ ವ್ಯವಸ್ಥೆ ಕೈಗೊಳ್ಳಲಾಗಿದೆ.
ಒಂದೆಡೆ ರಸ್ತೆ ಕುಸಿತವಾಗಿ ಭಯದ ವಾತಾವರಣ ಮಡಿಕೇರಿ ಸುಳ್ಯ ರಸ್ತೆಯಲ್ಲಿ ನಿರ್ಮಾಣವಾಗಿದ್ದರೆ, ಇದೇ ರಸ್ತೆಯ ಮದೆನಾಡು ಎಂಬಲ್ಲಿ ಗುಡ್ಡಕುಸಿದು ಬಿದ್ದು ರಸ್ತೆ ಸಂಚಾರಕ್ಕೆ ತೊಡಕಾಗಿದ್ದು ಮಣ್ಣನ್ನು ತೆರವುಗೊಳಿಸುವ ಕಾರ್ಯವೂ ನಡೆಯುತ್ತಿದೆ.

ಮಳೆಯ ಕಾರಣ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು ಜಿಲ್ಲೆಯ ಜನತೆ ಎಚ್ಚರವಾಗಿರುವಂತೆ ಜಿಲ್ಲಾಡಳಿತ ಒಂದಷ್ಟು ಸೂಚನೆ ನೀಡಿದ್ದು ಅದು ಹೀಗಿದೆ..
ನದಿ ತಟದಲ್ಲಿ ವಾಸವಾಗಿರುವವರು ಸದಾ ಜಾಗೃತರಾಗಿರಬೇಕು, ಸಾರ್ವಜನಿಕರು ಹಾಗೂ ಪ್ರವಾಸಿಗರು ಮರಗಳ ಕೆಳಗೆ ಮತ್ತು ಎತ್ತರವಾದ ಗುಡ್ಡ ಪ್ರದೇಶಗಳಲ್ಲಿ ನಿಲ್ಲಬಾರದು ಮತ್ತು ವಾಹನಗಳನ್ನು ನಿಲ್ಲಿಸಬಾರದು. ನದಿ ತೊರೆಗಳು ತುಂಬಿ ಸೇತುವೆ ಅಥವಾ ರಸ್ತೆಯ ಮೇಲೆ ನೀರು ಅಪಾಯಕಾರಿ ಮಟ್ಟದಲ್ಲಿ ಹರಿಯುತ್ತಿರುವಾಗ ಕಾಲ್ನಡಿಗೆ ಅಥವಾ ವಾಹನಗಳ ಮೂಲಕ ದಾಟಲು ಪ್ರಯತ್ನಿಸಬಾರದು. ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಸುರಕ್ಷತೆ ದೃಷ್ಟಿಯಿಂದ ನದಿ, ತೊರೆ, ಜಲಪಾತಗಳ ಮುಂತಾದವುಗಳ ಸಮೀಪ ತೆರಳದೆ ಸುರಕ್ಷಿತ ಸ್ಥಳಗಳಿಂದ ವೀಕ್ಷಿಸಬೇಕು.

ತುರ್ತು ಸಂದರ್ಭಗಳಲ್ಲಿ ಜಿಲ್ಲಾಡಳಿತದ 24x7 ಕಾರ್ಯನಿರತ ಟೋಲ್‍ಫ್ರೀ ಸಹಾಯವಾಣಿ (ಕಂಟ್ರೋಲ್ ರೂಂ) ಸಂಖ್ಯೆ 08272-221077ನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.

ಹಾರಂಗಿ ಜಲಾಶಯದಿಂದ ಸುಮಾರು 35ಸಾವಿರ ಕ್ಯೂಸೆಕ್ ನೀರು ಹರಿದು ಹೋಗುತ್ತಿರುವ ಕಾರಣ ತಗ್ಗು ಪ್ರದೇಶದಲ್ಲಿ ವಾಸಿಸುತ್ತಿರುವವರು ಎಚ್ಚರವಾಗಿರುವಂತೆ ಸೂಚಿಸಲಾಗಿದೆ. ಈಗಾಗಲೇ ಪ್ರವಾಹಕ್ಕೆ ಇಲ್ಲಿನ ಸೇತುವೆ ಜಲಾವೃತವಾಗಿದೆ. ಈ ನೀರು ಕಾವೇರಿ ನದಿಗೆ ಸೇರುವ ಕಾರಣ ಕೆಆರ್‍ಎಸ್‍ಗೆ ಅಧಿಕ ಪ್ರಮಾಣದಲ್ಲಿ ನೀರು ಹರಿದು ಹೋಗಲಿದೆ.












Click it and Unblock the Notifications