ಭಾಗಮಂಡಲದಲ್ಲಿ ಶ್ರದ್ಧಾ ಭಕ್ತಿಯಿಂದ ನಡೆದ ಕಾವೇರಿ ಆರತಿ: ಏನಿದರ ವಿಶೇಷ
ಮಡಿಕೇರಿ, ನವೆಂಬರ್ 16: ಕೊಡಗು ಜಿಲ್ಲಾ ವಿಶ್ವ ಹಿಂದೂ ಪರಿಷತ್ ವತಿಯಿಂದ ನಿನ್ನೆ (ನವೆಂಬರ್ 15) ಸಂಜೆ ಭಾಗಮಂಡಲದ ಕಾವೇರಿ ಕನ್ನಿಕೆ ಹಾಗೂ ಸುಜೋತಿ ನದಿಗಳ ತ್ರಿವೇಣಿ ಸಂಗಮದಲ್ಲಿ ಕಾವೇರಿ ಆರತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಭಜನೆ, ವೇದಘೋಷದೊಂದಿಗೆ ಕಾವೇರಮ್ಮನಿಗೆ ಶೃದ್ಧಾ ಭಕ್ತಿಯಿಂದ ಆರತಿ ಬೆಳಗಲಾಯಿತು.
ನಿನ್ನೆ (ನವೆಂಬರ್ 15) ಶುಕ್ರವಾರ ಸಂಜೆ 5:30 ಗಂಟೆಗೆ ಆರಂಭವಾದ ಕಾವೇರಿ ಕನ್ನಿಕೆ ಹಾಗೂ ಸುಜೋತಿ ನದಿಗಳ ತ್ರಿವೇಣಿ ಸಂಗಮದ ಕಾವೇರಿ ಆರತಿ ಕಾರ್ಯಕ್ರಮ ರಾತ್ರಿ ಎಂಟು ಗಂಟೆಯವರೆಗೆ ಜರುಗಿತು. ಜೊತೆಗೆ ಕಾವೇರಮ್ಮನಿಗೆ ಕಲ್ಪೋತರ ಪೂಜೆ, ಅಷ್ಟೋತ್ತರ ಪೂಜೆ, ಮತ್ತು ಕುಂಕುಮಾರ್ಚನೆ ಅದ್ಧೂರಿಯಾಗಿ ನೆರವೇರಿತು. ಅಲ್ಲದೇ ಇದೇ ಸಂದರ್ಭದಲ್ಲಿ ಕಾವೇರಮ್ಮನಿಗೆ ಪುಷ್ಪ ಅಲಂಕಾರವನ್ನು ನೆರವೇರಿಸಲಾಯಿತು.

ಬೆಂಗಳೂರು ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ದುರ್ಗವಾಹಿನಿಯ ಅಸಂಖ್ಯ ಮಹಿಳೆಯರು, ಕಾವೇರಿ ಮಾತೆಗೆ ದೀಪ ಬೆಳಗಿಸಿ ಕಾವೇರಿ ನದಿಗೆ ಅರ್ಪಿಸಿದರು. ನಂತರ ಮಹಾ ಮಂಗಳಾರತಿ ಹಾಗೂ ಪ್ರಸಾದ ವಿತರಣೆ ನೆರವೇರಿತು. ಹುಣ್ಣಿಮೆಯ ಚಂದ್ರನ ಬೆಳಕಿನಲ್ಲಿ ಕಾವೇರಿ, ಕನ್ನಿಕೆ, ಸುಜೋತಿ ನದಿ ತಟದಲ್ಲಿ ಅಸಂಖ್ಯಾ ಭಕ್ತಾದಿಗಳ ಸೇರ್ಪಡೆಯೊಂದಿಗೆ ವಿಶ್ವ ಹಿಂದು ಪರಿಷತ್ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಜೇಷ್ಠ ಪ್ರಚಾರಕರಾದ ಶ್ರೀ ಸು.ರಾಮಣ್ಣ , ವಿಶ್ವ ಹಿಂದೂ ಪರಿಷತ್ ದಕ್ಷಿಣ ಪ್ರಾಂತದ ಸಹ ಕಾರ್ಯದರ್ಶಿಗಳಾದ ಶರಣ್ ಪಂಪ್ ವೆಲ್ ಭಾಗಿಯಾಗಿ ಈ ಕಾವೇರಿ ಆರತಿ ಕಾರ್ಯಕ್ರಮದ ಮಹತ್ವದ ಬಗ್ಗೆ ಮಾತನಾಡಿದರು.
ಈ ವೇಳೆ ಭಾಗಮಂಡಲ ತಕ್ಕ ಮುಖ್ಯಸ್ಥರಾದ ಬಲ್ಲಡ್ಕ ಅಪ್ಪಾಜಿ, ತಲಕಾವೇರಿ ಭಾಗಮಂಡಲದ ಪಾರುಪತ್ತೆಗಾರರಾದ ಮಹೇಶ್, ಭಾಗಮಂಡಲ ದೇವಾಲಯದ ಪ್ರಧಾನ ಅರ್ಚಕರಾದ ಹರೀಶ್ ಭಟ್, ಅರ್ಚಕ ವೃಂದ, ಹಾಗೂ ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿಶ್ವ ಹಿಂದೂ ಪರಿಷತ್ ಕೊಡಗು ಜಿಲ್ಲೆಯ ವಿವಿಧ ಘಟಕಗಳ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಮಡಿಕೇರಿ: ವಲಸೆ ಕುರಿಗಾಹಿಗಳಿಗೆ ಗುರುತಿನ ಚೀಟಿ ವಿತರಿಸುವ ಯೋಜನೆ
ಮಡಿಕೇರಿ: ಪ್ರಸಕ್ತ(2024-25) ಸಾಲಿನ ಆಯವ್ಯಯದಂತೆ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಹಾಗೂ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಯೋಗದೊಂದಿಗೆ ಸಂಚಾರಿ, ವಲಸೆ ಕುರಿಗಾಹಿಗಳಿಗೆ ಗುರುತಿನ ಚೀಟಿ ವಿತರಿಸುವ ಯೋಜನೆ ಅನುಷ್ಠಾನ ಮಾಡಬೇಕಿದೆ.
ಈ ಹಿನ್ನೆಲೆಯಲ್ಲಿ ಕನಿಷ್ಠ 20 ಕುರಿಗಳನ್ನು ಹೊಂದಿದ್ದು ಸಂಚಾರಿ, ವಲಸೆ ಹೋಗುವ ಕುರಿಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ. ಅದರಂತೆ ಸಂಚಾರಿ ವಲಸೆ ಕುರಿಗಾಹಿಗಳು ಗುರುತಿನ ಚೀಟಿ ಪಡೆಯಲು ತಮ್ಮ ವ್ಯಾಪ್ತಿಗೆ ಬರುವ ಸ್ಥಳೀಯ ಪಶು ವೈದ್ಯಾಧಿಕಾರಿಗಳಿಂದ ಮಾಹಿತಿಯೊಂದಿಗೆ ಅರ್ಜಿ ಪಡೆದು, ಭರ್ತಿ ಮಾಡಿದ ಅರ್ಜಿ ಹಾಗೂ ಅಗತ್ಯ ದಾಖಲೆಗಳೊಂದಿಗೆ ಕೊಡಗು ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಸಹಾಯಕ ನಿರ್ದೇಶಕರು (ಆಡಳಿತ), ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಅವರಿಗೆ ಸಲ್ಲಿಸಲು ಕೋರಿದೆ.
ಹೆಚ್ಚಿನ ಮಾಹಿತಿಗೆ ಕೊಡಗು ಜಿಲ್ಲೆಯ ಎಲ್ಲಾ ತಾಲೂಕುಗಳ ಸಹಾಯಕ ನಿರ್ದೇಶಕರು(ಆಡಳಿತ), ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಪಶು ಆಸ್ಪತ್ರೆ ಹಾಗೂ ಸಹಾಯಕ ನಿರ್ದೇಶಕರು, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿ., ಮೈಸೂರು ಅಥವಾ ದೂ.ಸಂ. 9845623137 ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.












Click it and Unblock the Notifications