ಕೊಡಗಿನ ಚಿಕ್ಲಿಹೊಳೆಯಲ್ಲಿ ಶಿವ ದೇಗುಲ ಪ್ರತ್ಯಕ್ಷ: ಜನರಲ್ಲಿ ಹೆಚ್ಚಾಯ್ತು ಆತಂಕ

ಮಡಿಕೇರಿ, ನವೆಂಬರ್‌ 30: ಕೊಡಗಿನ ಪುಟ್ಟ ಜಲಾಶಯ ಚಿಕ್ಲಿಹೊಳೆಯಲ್ಲಿ ಮುಳುಗಿ ಹೋಗಿದ್ದ ಶಿವದೇಗುಲ ಬೇಸಿಗೆ ಆರಂಭಕ್ಕೂ ಮುನ್ನವೇ ಗೋಚರವಾಗಿದೆ. ಇದು ಜನತೆಯನ್ನು ಆತಂಕಕ್ಕೆ ತಳ್ಳಿದ್ದು ಮುಂದೇನು ಎಂಬ ಚಿಂತೆಯಲ್ಲಿ ಕಾಲ ಕಳೆಯುವಂತೆ ಮಾಡಿದೆ. ಇದೊಂದು ರೀತಿಯಲ್ಲಿ ಮುಂದಿನ ಬರದ ಭೀಕರತೆಯನ್ನು ತೋರ್ಪಡಿಸಿದ್ದು, ಕಾವೇರಿ ತವರಿನಲ್ಲೇ ಬೇಸಿಗೆಯಲ್ಲಿ ನೀರಿಗಾಗಿ ಹಾಹಾಕಾರವುಂಟಾಗಬಹುದೆಂಬ ಮನ್ಸೂಚನೆಯನ್ನು ನೀಡಿದೆ.

ಈ ಬಾರಿ ಮುಂಗಾರು ಕೈಕೊಟ್ಟಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೂ ಚಿಕ್ಲಿಜೊಳೆ ಜಲಾಶಯ ಭರ್ತಿಯಾಗಿತ್ತು. ಆದರೀಗ ಬರಿದಾಗಿ ಜಲಾಶಯದೊಳಗೆ ಮುಳುಗಡೆಯಾಗಿದ್ದ ಶಿವನ ದೇಗುಲ ಪ್ರತ್ಯಕ್ಷವಾಗಿ ನೋಡುಗರ ಮನಸ್ಸೆಳೆಯುವುದರೊಂದಿಗೆ ಆತಂಕವನ್ನು ತಂದೊಡ್ಡಿದೆ.

Karnataka Drought: Visibility Of Shiva Temple In Chiklihole In Kodagu

ಕೊಡಗಿನಲ್ಲಿ ಸಮರ್ಪಕ ಮಳೆಯಾಗದ ಕಾರಣದಿಂದ ಕಾವೇರಿ ನದಿ ಧುಮ್ಮಿಕ್ಕಿ ಹರಿಯಲೇ ಇಲ್ಲ. ಇದರ ಪರಿಣಾಮ ಮಂಡ್ಯದ ಜೀವನಾಡಿ ಕೆಆರ್ ಎಸ್ ಜಲಾಶಯ ಭರ್ತಿಯಾಗಲಿಲ್ಲ. ಆದರೆ ಒಂದಷ್ಟು ಸುರಿದ ಮುಂಗಾರು ಮಳೆಗೆ ಕೊಡಗಿನಲ್ಲಿರುವ ಹಾರಂಗಿ ಮತ್ತು ಚಿಕ್ಲಿಹೊಳೆ ಜಲಾಶಯಗಳು ಭರ್ತಿಯಾಗಿದ್ದವು. ಆದರೆ ತಮಿಳುನಾಡಿಗೆ ನೀರು ಹರಿಸಬೇಕಾದ ಅನಿವಾರ್ಯತೆಯಿಂದಾಗಿ ಹಾರಂಗಿ ಜಲಾಶಯದಲ್ಲಿ ನೀರನ್ನು ಉಳಿಸಿಕೊಳ್ಳಲಾಗಲಿಲ್ಲ.

ಈ ನಡುವೆ ರೈತರ ಕೃಷಿಗೆಂದೇ ನಿರ್ಮಿಸಲಾದ ಚಿಕ್ಲಿಹೊಳೆ ಜಲಾಶಯಕ್ಕೆ ನೀರು ಹರಿದು ಬಂದಿದ್ದರಿಂದ ಜಲಾಶಯ ಭರ್ತಿಯಾಗಿತ್ತಲ್ಲದೆ, ಹೆಚ್ಚುವರಿ ನೀರು ಕೂಡ ಹರಿದು ಹೋಗಿತ್ತು. ಈ ಜಲಾಶಯವನ್ನು ನಂಬಿ ವಿರುಪಾಕ್ಷಪುರ, ರಸೂಲ್‌ ಪುರ, ರಂಗಸಮುದ್ರ, ಬೊಳ್ಳೂರು, ಬಸವನಹಳ್ಳಿ, ಚಿಕ್ಕಬೆಟ್ಟಗೇರಿ, ದೊಡ್ಡಬೆಟ್ಟಗೇರಿ, ಹೊಸಪಟ್ಟಣ ಮುಂತಾದ ಗ್ರಾಮಗಳ ರೈತರು ಜೀವನ ಮಾಡುತ್ತಿದ್ದಾರೆ. ಈ ಜಲಾಶಯದಿಂದ ನೀರು ಹರಿದು ಬಂದರೆ ನೆಮ್ಮದಿಯಾಗಿ ಭತ್ತ ಬೆಳೆಯುತ್ತಾರೆ. ಆದರೆ ಈ ಬಾರಿ ಅಂದುಕೊಂಡಂತೆ ಯಾವುದೂ ಆಗಿಲ್ಲ.

ಶಿವ ದೇಗುಲ ಪ್ರತ್ಯಕ್ಷವಾಗಿದ್ದು ಹೇಗೆ..?

ಸಾಮಾನ್ಯವಾಗಿ ಪ್ರತಿವರ್ಷವೂ ಈ ಜಲಾಶಯದಿಂದ ನೀರು ಹರಿಸಿದರೂ ಕೂಡ ಈ ವೇಳೆಗೆ ಒಂದಷ್ಟು ಇರುತ್ತಿತ್ತು. ನಡು ಬೇಸಿಗೆಯಲ್ಲಿ ಬರಿದಾಗುತ್ತಿತ್ತಾದರೂ ಮುಳುಗಡೆಯಾದ ಇಡೀ ದೇಗುಲ ಕಾಣುವಷ್ಟರ ಮಟ್ಟಿಗೆ ನೀರು ಖಾಲಿಯಾಗುತ್ತಿರಲಿಲ್ಲ. ಆದರೆ ಈ ವರ್ಷ ಜಲಾಶಯದ ನೀರು ಸಂಪೂರ್ಣ ಖಾಲಿಯಾಗಿ ದೇಗುಲ ಕಾಣಿಸಲಾರಂಭಿಸಿದೆ. ಇದನ್ನು ನೋಡಲೆಂದೇ ಜನ ಇತ್ತ ಮುಖ ಮಾಡಿದ್ದಾರೆ. ಆದರೆ ಬೇಸಿಗೆ ಆರಂಭದ ಮೊದಲೇ ಈ ರೀತಿಯಲ್ಲಿ ಜಲಾಶಯ ಬರಿದಾಗಿದ್ದನ್ನು ಇದುವರೆಗೆ ನೋಡದ ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

Karnataka Drought: Visibility Of Shiva Temple In Chiklihole In Kodagu

ಇದುವರೆಗೆ ಪ್ರವಾಸಿಗರು ಮಳೆಗಾಲದಲ್ಲಿ ಚಿಕ್ಲಿಹೊಳೆ ಜಲಾಶಯವನ್ನು ನೋಡಲು ಬರುತ್ತಿದ್ದರು. ಈ ಜಲಾಶಯ ಕಾಫಿ ತೋಟಗಳ ನಡುವಿನ ಎರಡು ಗುಡ್ಡಗಳ ನಡುವೆ ನಿರ್ಮಾಣವಾಗಿದ್ದು ಇಲ್ಲಿ ನೋಡ ತಕ್ಕ ಯಾವುದೇ ಉದ್ಯಾನ ಇಲ್ಲದಿದ್ದರೂ ಜಲಾಶಯ ಭರ್ತಿಯಾಗಿ ನೀರು ಅರ್ಧ ಚಂದ್ರಾಕೃತಿಯ ತೂಬಿನಲ್ಲಿ ಧುಮ್ಮಿಕ್ಕುವ ಚೇತೋಹಾರಿ ದೃಶ್ಯವನ್ನು ನೋಡಲು ಮತ್ತು ನಿಸರ್ಗ ರಮಣೀಯ ವಾತಾವರಣದಲ್ಲಿ ಕಾಲ ಕಳೆಯಲು ಪ್ರವಾಸಿಗರು ಬರುತ್ತಿದ್ದರು. ಇದೀಗ ಜಲಾಶಯದೊಳಗಿನ ದೇಗುಲ ನೀರು ಖಾಲಿಯಾದ ಪರಿಣಾಮ ಗೋಚರಿಸಿದ್ದು ಎಲ್ಲರನ್ನು ಆಶ್ಚರ್ಯಚಕಿತವಾಗಿಸಿದೆ.

ಒಂದೂವರೆ ಶತಮಾನದ ಹಿಂದಿನ ದೇಗುಲ

ಈಗ ಗೋಚರಿಸಿರುವ ದೇಗುಲದ ಬಗ್ಗೆ ಹೇಳುವುದಾದರೆ ಇದು ಸುಮಾರು ಒಂದೂವರೆ ಶತಮಾನದ ಹಿಂದೆ ನಿರ್ಮಿತವಾಗಿದ್ದಾಗಿದೆ. ದೇವಾಲಯವಿರುವ ಜಾಗವು ಮ್ಯಾಗ್‍ ಡೋರ್ ಎಂಬ ಕುಟುಂಬದಾಗಿತ್ತಂತೆ. ಈ ಕುಟುಂಬವು ಮೂಲತಃ ಕೇರಳದಿಂದ ಬಂದಿದ್ದು, ಇಲ್ಲಿ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿತ್ತು ಎನ್ನಲಾಗಿದ್ದು, ಹೀಗಿರಬೇಕಾದರೆ ಅವರಿಗೆ ಈ ಸ್ಥಳದಲ್ಲಿ ದೇವರ ಮಹಿಮೆಯಿರುವುದು ಗೋಚರಿಸಿತು. ಕೇರಳದಿಂದ ತಂತ್ರಿಗಳನ್ನು ಕರೆಯಿಸಿ ಶಿವನ ಲಿಂಗವನ್ನು ಪ್ರತಿಷ್ಠಾಪಿಸಿ ಊರವರ ಸಹಕಾರದಿಂದ ದೇವಾಲಯ ನಿರ್ಮಾಣ ಮಾಡಲಾಯಿತು.

ಇಲ್ಲಿ ಆದಿದೈವನಾದರೆ ಪಕ್ಕದಲ್ಲಿ ಗಣಪತಿ, ನಂದಿಯ ಗುಡಿ, ಮುಖಮಂಟಪ, ಪ್ರವೇಶ ದ್ವಾರ ಹೀಗೆ ದೇವಾಲಯವನ್ನು ಸುಸಜ್ಜಿತವಾಗಿ ನಿರ್ಮಿಸಲಾಗಿತ್ತು. ಇನ್ನು ದೇವರ ಪೂಜಾ ಕೈಂಕರ್ಯ ನೆರವೇರಿಸಲು ಅನುಕೂಲವಾಗುವಂತೆ ಅರ್ಚಕರನ್ನು ನೇಮಿಸಿ ದೇವಸ್ಥಾನದ ಪಕ್ಕದಲ್ಲಿಯೇ ಅವರಿಗೆ ವಾಸ್ತವ್ಯಕ್ಕೆ ಅನುಕೂಲ ಮಾಡಿಕೊಡಲಾಗಿತ್ತು. ದೇಗುಲದಲ್ಲಿ ನಿತ್ಯವೂ ಪೂಜಾ ಕೈಂಕರ್ಯವನ್ನು ನೆರವೇರಿಸಲಾಗುತ್ತಿತ್ತಾದರೂ ವರ್ಷಕ್ಕೊಮ್ಮೆ ಅದ‍್ಧೂರಿಯಾಗಿ ಜಾತ್ರೆ ನಡೆಯುತ್ತಿತ್ತು.. ಕೇರಳದ ಚಂಡೆ ಮದ್ದಳೆ ವಾದ್ಯಗಳೊಂದಿಗೆ ಸಡಗರ ಸಂಭ್ರಮದಿಂದ ಜಾತ್ರಾಮಹೋತ್ಸವ ನಡೆಯುತ್ತಿತ್ತು.

Karnataka Drought: Visibility Of Shiva Temple In Chiklihole In Kodagu

1982ರಲ್ಲಿ ಜಲಾಶಯದಲ್ಲಿ ಲೀನವಾದ ದೇಗುಲ

ಇದೆಲ್ಲವೂ ಹೆಚ್ಚು ದಿನ ಮುಂದುವರೆಯಲಿಲ್ಲ. 1978ರಲ್ಲಿ ಇಲ್ಲಿ ಹರಿಯುತ್ತಿದ್ದ ನದಿಗೆ ಅಡ್ಡಲಾಗಿ ಕಟ್ಟೆಯನ್ನು ಕಟ್ಟಿ ಕೃಷಿಗೆ ನೀರು ಒದಗಿಸುವ ಚಿಂತನೆ ಮಾಡಲಾಯಿತು. ಎರಡು ದಿಬ್ಬದ ನಡುವೆ ಕಟ್ಟೆ ಕಟ್ಟಿದರೆ ನೀರು ಸಂಗ್ರಹವಾಗುತ್ತದೆ ಇದರಿಂದ ಕೆಳಭಾಗದಲ್ಲಿರುವ ಗ್ರಾಮಗಳ ರೈತರಿಗೆ ಕೃಷಿಗೆ ಅನುಕೂಲವಾಗುತ್ತದೆ ಎಂಬ ಅಭಿಪ್ರಾಯ ಕೇಳಿ ಬಂದಿತು. ಅದರಂತೆ 1978ರಲ್ಲಿ ಶಂಕುಸ‍್ಥಾಪನೆ ನೆರವೇರಿಸಿ ಕಾಮಗಾರಿ ಆರಂಭಿಸಲಾಯಿತು.

1982ರ ವೇಳೆಗೆ ಜಲಾಶಯ ನಿರ್ಮಾಣ ಕಾರ್ಯಗೊಂಡಿತು. ಹೀಗಾಗಿ ಜಲಾಶಯದೊಳಗಿನ ಪ್ರದೇಶದಲ್ಲಿದ್ದ ಶಿವನ ದೇಗುಲ ನೀರಿನಲ್ಲಿ ಮುಳುಗಡೆಗೊಂಡಿತು. ಈ ವೇಳೆ ಇಲ್ಲಿದ್ದ ಶಿವಲಿಂಗ ಹಾಗೂ ದೇವರ ವಿಗ್ರಹಗಳನ್ನು ಬೇರೆಡೆಗೆ ಪ್ರತಿಷ್ಟಾಪಿಸಿ ದೇಗುಲ ನಿರ್ಮಿಸಲಾಯಿತು.

ಇದಾದ ಬಳಿಕ ಉತ್ತಮ ಮಳೆಯಾಗುತ್ತಿದ್ದರಿಂದ ನೀರಿನೊಳಗೆ ದೇವಾಲಯ ಲೀನವಾಯಿತು.

ನೀರು ಕಡಿಮೆಯಾದಾಗ ಪಾಳು ಬಿದ್ದ ದೇಗುಲದ ಗೋಪುರ ಕಾಣಿಸುತ್ತಿತ್ತಾದರೂ ಇವತ್ತಿನಂತೆ ದೇಗುಲ ಸಂಪೂರ್ಣವಾಗಿ ಕಾಣಿಸಿರಲಿಲ್ಲ. ಆದರೆ ಈ ಬಾರಿ ಶಿವನ ದೇಗುಲ, ಗಣಪತಿ ಗುಡಿ, ಮತ್ತು ನೀರಿನ ಬಾವಿ ಸೇರಿದಂತೆ ಇಡೀ ಪ್ರದೇಶ ಕಾಣಿಸುತ್ತಿದ್ದು, ಇದನ್ನು ನೋಡಲೆಂದೇ ಜನ ಬರುತ್ತಿದ್ದಾರೆ. ಹೀಗೆ ಬರುವವರು ಜಲಾಶಯದಲ್ಲಿ ನೀರು ಖಾಲಿಯಾಗಿರುವುದನ್ನು ನೋಡಿ ಮರುಗುತ್ತಿದ್ದಾರೆ. ಈಗಲೇ ಹೀಗಾದರೆ ಮುಂದೇನು ಎಂಬ ಪ್ರಶ್ನೆಯೊಂದಿಗೆ ಹಿಂತಿರುಗುತ್ತಿದ್ದಾರೆ.

ಇನ್ನು ಚಿಕ್ಲಿಜಲಾಶಯ ಮಡಿಕೇರಿ ಮತ್ತು ಕುಶಾಲನಗರದ ಮಾರ್ಗದ ನಡುವಿನ ಸುಂಟಿಕೊಪ್ಪ ಬಳಿಯಿದೆ. ಇಲ್ಲಿಗೆ ತೆರಳಲು ಯಾವುದೇ ಬಸ್ ಸೌಲಭ್ಯವಿಲ್ಲ. ಆದ್ದರಿಂದ ಸ್ವಂತ ವಾಹನಗಳಲ್ಲಿ ಅಥವಾ ಸುಂಟಿಕೊಪ್ಪದಿಂದ ಆಟೋ ಅಥವಾ ಜೀಪಿನಲ್ಲಿ ತೆರಳಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+