ರಾಜಕೀಯ ಬಿಡಲು ಸಿದ್ಧ, ಆದರೆ ವಕೀಲಿಕೆ ವೃತ್ತಿಯನ್ನಲ್ಲ: ಚಂದ್ರಮೌಳಿ
ಕರ್ನಾಟಕ ವಿಧಾನಸಭೆ ಚುನಾವಣೆಯ ತನ್ನ ಅಂತಿಮ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಪ್ರಕಟಿಸಿದೆ. ಅದರಲ್ಲಿನ ಪ್ರಮುಖ ಅಂಶ ಎಂದರೆ ಮಡಿಕೇರಿ ಕ್ಷೇತ್ರದ ಅಭ್ಯರ್ಥಿಯ ಬದಲಾವಣೆ. ಎಚ್.ಎಸ್. ಚಂದ್ರಮೌಳಿ ಅವರ ಬದಲು ಕೆ. ಚಂದ್ರಕಲಾ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಲು ತೀರ್ಮಾನಿಸಿದೆ.
ಚಂದ್ರಮೌಳಿ ಅವರ ಹೆಸರನ್ನು ಘೋಷಿಸಿದ ಬಳಿಕ ಮೆಹುಲ್ ಚೋಕ್ಸಿ ಅವರ ಪರ ವಾದ ಮಂಡಿಸಿದ ವಕೀಲ ಚಂದ್ರಮೌಳಿ ಅವರನ್ನು ಪಕ್ಷ ಆಯ್ಕೆ ಮಾಡಿದ್ದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಶ್ನೆಗಳನ್ನು ಎತ್ತಲಾಗಿತ್ತು. ಇದು ಗದ್ದಲ ಉಂಟುಮಾಡುತ್ತಿದ್ದಂತೆಯೇ ಪಕ್ಷದ ಹೈಕಮಾಂಡ್ ಅಭ್ಯರ್ಥಿಯನ್ನು ಬದಲಿಸಲು ತೀರ್ಮಾನಿಸಿತು.
ನಾನು ಸ್ವಂತ ಸಾಮರ್ಥ್ಯದಲ್ಲಿ ಗೀತಾಂಜಲಿ ಅವರ ಪರ ಹಾಜರಾಗಿದ್ದೇ ವಿನಾ, ಚೋಕ್ಸಿ ಅವರ ಪರವಲ್ಲ. ನಾನು ಚೋಕ್ಸಿ ಅವರ ಲಾಯರ್ ಎಂದು ಬಿಂಬಿಸಲಾಯಿತು. ಇದು ನನ್ನ ಕುರ್ಚಿಗೆ ಸಂಚಕಾರ ತಂದಿತು ಎಂದು ಚಂದ್ರಮೌಳಿ ಹೇಳಿದರು.

ಪಕ್ಷದ ಕುರಿತು ಅಸಮಾಧಾನ ಉಂಟಾಗಿದೆಯೇ ಎಂಬ ಪ್ರಶ್ನೆಗೆ ಚಂದ್ರಮೌಳಿ, ಪಕ್ಷದ ಮೇಲೆ ನನಗೆ ಅಸಮಾಧಾನವಿಲ್ಲ. ನನ್ನ ಅಭ್ಯರ್ಥಿತನದಿಂದ ಬಿಡುಗಡೆ ನೀಡುವಂತೆ ಕೋರಿ ಪಕ್ಷಕ್ಕೆ ನಾನೇ ಪತ್ರ ಬರೆದಿದ್ದೆ. ಪಕ್ಷಕ್ಕೆ ಯಾವುದೇ ಮುಜುಗರ ಉಂಟುಮಾಡಲು ನನಗೆ ಇಷ್ಟವಿಲ್ಲ. ನಾನು ಪಕ್ಷಕ್ಕಾಗಿ ದುಡಿಯುವುದನ್ನು ಮುಂದುವರಿಸುತ್ತೇನೆ ಎಂದು ತಿಳಿಸಿದರು.
ಮಡಿಕೇರಿಯಿಂದ ಟಿಕೆಟ್ ವಂಚಿತರಾದ ಕಾಂಗ್ರೆಸ್ ಮಾಧ್ಯಮ ಸಂಚಾಲಕ ಬ್ರಿಜೇಶ್ ಕಾಳಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಚಂದ್ರಮೌಳಿ, ಆ ಹೇಳಿಕೆಗಳ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರು.
ಆರೋಪಿ ಪರ ವಕಾಲತ್ತು ವಹಿಸಲು ನಿರಾಕರಿಸುವುದು ವಕೀಲರ ಕಾಯ್ದೆಗೆ ವಿರುದ್ಧ ಎಂಬುದು ಸುಪ್ರೀಂಕೋರ್ಟ್ ವಕೀಲರಾದ ಅವರಿಗೆ ತಿಳಿದಿರಬೇಕು. ಚೋಕ್ಸಿ ಅಥವಾ ಆ ಕುಟುಂಬದ ಯಾರಾದರೂ ಸದಸ್ಯ ತಮ್ಮನ್ನು ಸಂಪರ್ಕಿಸಿದರೆ ವಕಾಲತ್ತು ವಹಿಸಲು ಕಾಳಪ್ಪ ಅವರು ನಿರಾಕರಿಸುತ್ತಾರೆಯೇ ಎಂದು ಅವರನ್ನು ಕೇಳಲು ಬಯಸಿದ್ದೇನೆ ಎಂದರು.
ನನ್ನ ಮುಂದಿನ ಹಾದಿಯ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದು, ಭವಿಷ್ಯದ ಬಗ್ಗೆ ಗಮನ ಹರಿಸುತ್ತೇನೆ. ನನಗೆ ನನ್ನ ವಕೀಲಿಕೆ ವೃತ್ತಿ ಜೀವನ ಅತಿ ಮಹತ್ವದ್ದು. ನಾನು ರಾಜಕೀಯ ತ್ಯಜಿಸಲು ತಯಾರಿದ್ದೇನೆ, ಆದರೆ ನನ್ನ ವೃತ್ತಿಯನ್ನಲ್ಲ ಎಂದು ಸ್ಪಷ್ಟಪಡಿಸಿದರು.












Click it and Unblock the Notifications