ಒಂದೇ ತಿಂಗಳಲ್ಲಿ ನಾಲ್ಕನೇ ಬಾರಿ ವೈದ್ಯರ ಮೇಲೆ ಹಲ್ಲೆ: ಕೊಡಗಿನಲ್ಲಿ ಸೇವೆ ಸ್ಥಗಿತದ ಖಡಕ್ ಎಚ್ಚರಿಕೆ
ಮಡಿಕೇರಿ, ಡಿಸೆಂಬರ್ 27: ಕೊಡಗಿನಲ್ಲಿ ಕರ್ತವ್ಯ ನಿರತ ವೈದ್ಯಾಧಿಕಾರಿ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿದ್ದು ಕಾನೂನನ್ನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡು ಮುಂದೆ ಇಂತಹ ಪ್ರಕರಣ ನಡೆಯದಂತೆ ಎಚ್ಚರ ವಹಿಸದಿದ್ದಲ್ಲಿ ಜಿಲ್ಲೆಯಾದ್ಯಂತ ವೈದ್ಯಕೀಯ ಸೇವೆಯನ್ನು ಸ್ಥಗಿತಗೊಳಿಸುವ ಎಚ್ಚರಿಕೆಯನ್ನು ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘವು ನೀಡಿದೆ.
ಇಷ್ಟಕ್ಕೂ ಕೊಡಗಿನಲ್ಲಿ ಆಗಿದ್ದೇನು? ಅಂದರೆ ಡಿ.25ರಂದು ಮಧ್ಯಾಹ್ನ 1.50ರ ಸಮಯದಲ್ಲಿ ವಿರಾಜಪೇಟೆ ತಾಲೂಕಿನ ಬಾಳಲೆಯ ಪ್ರಾ.ಆ.ಕೇಂದ್ರಕ್ಕೆ ಹುಲಿ ದಾಳಿಗೊಳಗಾದ ರಾಜನ್ ಎಂಬುವರನ್ನು ಅವರ ಪತ್ನಿ ಲತಾ ಹಾಗೂ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರ ಮಗ ಕರೆದುಕೊಂಡು ಬಂದಿದ್ದರು. ಈ ವೇಳೆ ವೈದ್ಯರಾದ ಡಾ.ಆಕಾಶ್ ಗೌಡ ಅವರು 1.55ಕ್ಕೆ ಆಸ್ಪತ್ರೆಗೆ ಬಂದು ರೋಗಿಯನ್ನು ತಪಾಸಣೆ ಮಾಡಿದ್ದಾರೆ. ಈ ವೇಳೆ ಸ್ಥಳೀಯ ವ್ಯಕ್ತಿಯೊಬ್ಬ ಅದನ್ನು ಮೊಬೈಲ್‌ನಲ್ಲಿ ವಿಡೀಯೋ ಚಿತ್ರೀಕರಣ ಮಾಡುತ್ತಿದ್ದನಂತೆ.

ಈತ ಇಷ್ಟಕ್ಕೆ ಸುಮ್ಮನಾಗದೆ, ದೂರವಾಣಿ ಕರೆಗಳನ್ನು ಮಾಡುತ್ತಾ ಪದೇ, ಪದೇ ವೈದ್ಯರ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದನಂತೆ ಇದರಿಂದ ಕರ್ತವ್ಯಕ್ಕೆ ಅಡಚಣೆ ಆಗುತ್ತಿದ್ದರಿಂದ ವೈದ್ಯರು ರೋಗಿಗೆ ಚಿಕಿತ್ಸೆ ನೀಡುವಾಗ ವಿಡೀಯೋ ಚಿತ್ರೀಕರಣ ಮಾಡುವ ಹಾಗಿಲ್ಲ ಹಾಗೂ ಪೋನ್‌ನಲ್ಲಿ ಮಾತನಾಡುತ್ತಿದ್ದರೆ ಚಿಕಿತ್ಸೆ ನೀಡಲು ತೊಂದರೆಯಾಗುತ್ತದೆ. ಆದ್ದರಿಂದ ರೋಗಿಯನ್ನು ತಪಾಸಣೆ ನಡೆಸಿದ ನಂತರ ಮಾತನಾಡುವುದಾಗಿ ಹೇಳಿದ್ದಾರೆ. ವೈದ್ಯರ ಮಾತಿನಿಂದ ಕೋಪಗೊಂಡ ಆ ವ್ಯಕ್ತಿ ತನ್ನ ಸ್ನೇಹಿತರಿಗೆ ಕರೆ ಮಾಡಿ ಕೆಲವು ಸಾರ್ವಜನಿಕರನ್ನು ಕರೆಯಿಸಿ ಕೊಠಡಿಯ ಬಾಗಿಲುಗಳನ್ನು ಬಡಿದು ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ.
ಇಷ್ಟೇ ಅಲ್ಲದೆ, ಆಸ್ಪತ್ರೆ ವೈದ್ಯರಾದ ಡಾ. ಆಕಾಶ್ ಗೌಡ ಅವರ ಮೇಲೆ ಹಲ್ಲೆ ನಡೆಸಿದ್ದಲ್ಲದೆ,. ಸುಮಾರು 10 ಮಂದಿಯನ್ನು ಆಸ್ಪತ್ರೆಗೆ ಕರೆಯಿಸಿ ವೈದ್ಯರು ಹಾಗೂ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸುವಂತೆ ಪ್ರಚೋದನೆ ನೀಡಿರುತ್ತಾರೆ. ಹಾಗೆಯೇ ಆಸ್ಪತ್ರೆಯ ಕಿಟಕಿ, ಗಾಜು ಒಡೆದು ಆಸ್ಪತ್ರೆಗೆ ಹಾನಿ ಮಾಡಿರುತ್ತಾರೆ. ಹಾಗೂ ವೈದ್ಯರನ್ನು ಮತ್ತು ಇತರ ಸಿಬ್ಬಂದಿಯನ್ನು ಅವಾಚ್ಯ ಶಬ್ದದಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿರುತ್ತಾರೆ ಎಂಬುದು ವೈದ್ಯಕೀಯ ವರ್ಗದ ಆರೋಪವಾಗಿದೆ.

ಜಿಲ್ಲೆಯಲ್ಲಿ ಒಂದು ತಿಂಗಳಲ್ಲಿ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಗಳ ಮೇಲೆ ಹಲ್ಲೆಯಾಗುತ್ತಿರುವುದು ಇದು ನಾಲ್ಕನೇ ಘಟನೆ ಆಗಿದ್ದು, ಕೊಡಗು ಜಿಲ್ಲೆಯಲ್ಲಿ ವೈದ್ಯರ, ತಜ್ಞ ವೈದ್ಯರ ಮತ್ತು ಆರೋಗ್ಯ ಸಿಬ್ಬಂದಿಗಳ ಕೊರತೆ ಬಹಳಷ್ಟು ಇದ್ದು, 46 ತಜ್ಞ ವೈದ್ಯರಲ್ಲಿ 19 ಜನ ಮಾತ್ರ ಹಾಲಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಹೀಗಿರುವಾಗ ಜಿಲ್ಲೆಯಲ್ಲಿ ವೈದ್ಯರ, ತಜ್ಞ ವೈದ್ಯರ ಮತ್ತು ಆರೋಗ್ಯ ಸಿಬ್ಬಂದಿಗಳ ತೀವ್ರ ಕೊರೆತಯಿದ್ದರೂ ಉತ್ತಮ ಆರೋಗ್ಯ ಸೇವೆಯನ್ನು ನೀಡುತ್ತಿದ್ದು, ಜಿಲ್ಲೆಯಲ್ಲಿ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳು ಉತ್ತಮ ರೀತಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.
ವೈದ್ಯಕೀಯ ಸಿಬ್ಬಂದಿಗೆ ರಕ್ಷಣೆ ನೀಡಬೇಕು
ಇಂತಹ ಸಂದರ್ಭದಲ್ಲಿ ಹಲ್ಲೆ ಮಾಡುವಂತಹ ಘಟನೆಗಳು ಆಗಾಗ್ಗೆ ನಡೆಯುತ್ತಿರುವುದು ನವೈದ್ಯರು ಮತ್ತು ಸಿಬ್ಬಂದಿಗಳಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿದೆ. ಆದುದರಿಂದ ಜಿಲ್ಲಾಡಳಿತ ವೈದ್ಯರು ಹಾಗೂ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿರುವ ಕಿಡಿಗೇಡಿಗಳ ವಿರುದ್ಧ ಕರ್ನಾಟಕ ವೈದ್ಯೋಪಚಾರ ಸಿಬ್ಬಂದಿಯ ಮೇಲೆ ಹಿಂಸಚಾರ ಮತ್ತು ಆಸ್ಪತ್ರೆ, ನರ್ಸಿಂಗ್ ಹೋಮ್ ಗಳ ಆಸ್ತಿ-ಪಾಸ್ತಿಗೆ ಹಾನಿ ಮಾಡಿರುವುದನ್ನು ನಿಷೇಧಿಸಿದೆ. ಅದರಂತೆ ಸರ್ಕಾರದ ವಿಧೇಯಕ 2009ರಡಿಯಲ್ಲಿ ಪ್ರಕರಣ ದಾಖಲಿಸಿ ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಲು ಹಾಗೂ ವೈದ್ಯ ಹಾಗೂ ಆರೋಗ್ಯ ಸಿಬ್ಬಂದಿಗಳಿಗೆ ರಕ್ಷಣೆ ನೀಡಬೇಕು ಎಂಬ ಒತ್ತಾಯವನ್ನು ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಮಾಡಿದೆ.
ಒಂದು ವೇಳೆ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೆ, ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಕಿಡಿಗೇಡಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ಕೊಡಗು ಜಿಲ್ಲೆಯಾದ್ಯಂತ ಎಲ್ಲಾ ವೈದ್ಯರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಗಳು ಸೇವೆ ಸ್ಥಗಿತಗೊಳಿಸಿ ಮುಷ್ಕರ ನಡೆಸಲು ಸಂಘವು ತೀರ್ಮಾನಿಸಿದೆ ಎಂಬ ಎಚ್ಚರಿಕೆಯನ್ನು ನೀಡಿದೆ. ಈ ನಿಟ್ಟಿನಲ್ಲಿ ಸರ್ಕಾರ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications