Get Updates
Get notified of breaking news, exclusive insights, and must-see stories!

ಕೊಡಗಿನಲ್ಲಿ ಜೇನುನೊಣಗಳಿಲ್ಲದೆ ಕಾಫಿ ಇಳುವರಿ ಕುಂಠಿತ: ಇದು ಹೇಗೆ ಸಾಧ್ಯ?

ಮಡಿಕೇರಿ, ಮಾರ್ಚ್ 19: ಕೊಡಗಿನ ಕಾಫಿ ಬೆಳೆಗಾರರಿಗೂ ಜೇನಿಗೂ ಅವಿನಾಭಾವ ಸಂಬಂಧವಿದೆ. ಹಿಂದಿನಿಂದಲೂ ಇಲ್ಲಿನ ಬೆಳೆಗಾರರು ಜೇನು ಸಾಕಣೆ ಮಾಡುತ್ತಾ ಬಂದಿದ್ದಾರೆ. ಒಂದೆರಡು ದಶಕಗಳ ಹಿಂದೆ ಮನೆಗೆ ಒಂದೋ ಎರಡೋ ಜೇನು ಪೆಟ್ಟಿಗೆಗಳಿರುತ್ತಿದ್ದವು. ಅದರಲ್ಲಿ ಜೇನು ಸಾಕಣೆ ಮಾಡಿ ತಮ್ಮ ಖರ್ಚಿಗೆ ಒಂದಷ್ಟು ಜೇನನ್ನು ಸಂಗ್ರಹಿಸಿಟ್ಟುಕೊಂಡು ಉಳಿದ ಜೇನನ್ನು ಮಾರಾಟ ಮಾಡುತ್ತಿದ್ದರು. ಅಷ್ಟೇ ಅಲ್ಲದೆ ಕಾಡು, ತೋಟಗಳ ಮರದ ಪೊಟರೆ, ಕಲ್ಲುಗಳ ಸಂಧುಗಳಲ್ಲಿ, ಹುತ್ತದಲ್ಲಿ ಹೀಗೆ ಎಲ್ಲೆಂದರಲ್ಲಿ ಜೇನುಗೂಡು ಕಟ್ಟಿಕೊಂಡು ಜೇನನ್ನು ಸಂಗ್ರಹಿಸುತ್ತಿದ್ದವು. ಯಥೇಚ್ಛವಾಗಿ ಜೇನುಹುಳುಗಳು ಇದ್ದುದರಿಂದ ಕಾಫಿ ಬೆಳೆಗಾರರಿಗೂ ಲಾಭವಾಗುತ್ತಿತ್ತು.

ಇಷ್ಟಕ್ಕೂ ಕಾಫಿ ಬೆಳೆಗಾರರಿಗೂ ಜೇನಿಗೂ ಏನು ಸಂಬಂಧ? ಜೇನುಗೂಡುಗಳು ಹೆಚ್ಚಾದಷ್ಟೂ ಕಾಫಿ ಬೆಳೆಗಾರರಿಗೆ ಏನು ಲಾಭ? ಎಂಬಿತ್ಯಾದಿ ಪ್ರಶ್ನೆಗಳು ಎಲ್ಲರ ಮನದಲ್ಲಿ ಮೂಡದಿರದು. ಆದರೆ ಈ ಬಗ್ಗೆ ಕಾಫಿ ಬೆಳೆಗಾರರೇ ತಮ್ಮ ಅನುಭವವನ್ನು ತೆರೆದಿಡುತ್ತಿದ್ದಾರೆ. ಅಷ್ಟೇ ಅಲ್ಲದೆ ಕಾಫಿ ಇಳುವರಿ ಹೆಚ್ಚಿಸುವಲ್ಲಿ ಜೇನುನೊಣಗಳ ಪಾತ್ರವೇನು ಎಂಬುದನ್ನು ಕೂಡ ತಮ್ಮದೇ ಅನುಭವದಲ್ಲಿ ವಿವರಿಸುವುದನ್ನು ನಾವು ಕಾಣಬಹುದಾಗಿದೆ. ಇವತ್ತೇನಾದರೂ ಜೇನು ಹುಳುಗಳು ಇಲ್ಲದೆ ಹೋದರೆ ಬಹುತೇಕ ಫಸಲು ಸಿಗುವುದೇ ಇಲ್ಲ. ಕಾರಣ ಹೂ ಬಿಟ್ಟು ಅದು ಕಾಯಿ ಆಗಬೇಕಾದರೆ ಪರಾಗಸ್ಪರ್ಶ ಕ್ರಿಯೆ ನಡೆಯಬೇಕು. ಇಲ್ಲಿ ಕೀಟಗಳ ಪಾತ್ರ ಹೆಚ್ಚಾಗಿರುತ್ತದೆ.

Impact of Bee Decline on Coffee Crop Yields in Kodagu Region

ಕೀಟಗಳ ಪೈಕಿ ಪರಾಗಸ್ಪರ್ಶಕ್ಕೆ ಹೆಚ್ಚು ಸಾಥ್ ನೀಡುವುದು ಜೇನು ನೊಣಗಳು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ.. ಈ ಜೇನು ನೊಣಗಳು ಒಂದು ಕ್ಷಣವೂ ವಿರಮಿಸದೆ ಒಂದು ಹೂವಿನಿಂದ ಇನ್ನೊಂದು ಹೂವಿಗೆ ಹಾರುತ್ತಾ ಮಕರಂದವನ್ನು ಸಂಗ್ರಹಿಸುತ್ತಿರುತ್ತವೆ. ಈ ಸಂದರ್ಭ ಹೂಗಳಲ್ಲಿ ಪರಾಗಸ್ಪರ್ಶ ಕ್ರಿಯೆಗಳು ಹೆಚ್ಚು ಹೆಚ್ಚಾಗಿ ನಡೆಯುತ್ತವೆ. ಅದರಲ್ಲೂ ಕಾಫಿ ಮಿಡಿಗಚ್ಚಬೇಕಾದರೆ ಪರಾಗಸ್ಪರ್ಶದ ಅವಶ್ಯಕತೆ ತುಸು ಹೆಚ್ಚಾಗಿಯೇ ಇದೆ. ಜತೆಗೆ ಹೂ ಬಿಟ್ಟು ಒಂದೇ ದಿನದಲ್ಲಿ ಬಾಡಿ ಹೋಗುವುದರಿಂದ ಈ ಸಮಯದಲ್ಲಿ ಪರಾಗಸ್ಪರ್ಶ ಆಗದೇ ಹೋದರೆ ಕೆಲವೊಮ್ಮೆ ಹೂ ಮಿಡಿಗಚ್ಛದೆ ಹೋಗಬಹುದು.

ಮೊದಲಿನಂತೆ ಜೇನುನೊಣಗಳ ಝೇಂಕಾರ ಕೇಳುತ್ತಿಲ್ಲ

ಇತ್ತೀಚೆಗಿನ ವರ್ಷಗಳಲ್ಲಿ ಕಾಫಿ ಬೆಳೆಗಾರರು ಕಾಫಿ ಗಿಡಗಳಲ್ಲಿ ಹೂ ಚೆನ್ನಾಗಿ ಅರಳಿತ್ತು. ಆದರೂ ಇಳುವರಿ ಹೆಚ್ಚು ಬರಲಿಲ್ಲ. ಕಳೆದ ವರ್ಷಕ್ಕಿಂತ ಕಡಿಮೆ ಫಸಲು ಸಿಕ್ಕಿತು ಎಂಬಿತ್ಯಾದಿ ಮಾತುಗಳನ್ನು ಆಡುತ್ತಿರುವುದು ಸಾಮಾನ್ಯವಾಗುತ್ತಿದೆ. ಇದಕ್ಕೆ ಕಾರಣಗಳನ್ನು ಹುಡುಕುತ್ತಾ ಹೋದರೆ ಮೊದಲಿಗೆ ಸಿಗುವ ಕಾರಣವೇ ಜೇನುನೊಣಗಳ ಸಂಖ್ಯೆ ಕ್ಷೀಣಿಸುತ್ತಿರುವುದಾಗಿದೆ.

Impact of Bee Decline on Coffee Crop Yields in Kodagu Region

ಮೊದಲೆಲ್ಲಾ ಈ ಸಮಯದಲ್ಲಿ ಕೊಡಗಿನ ತೋಟ, ಕಾಡುಗಳಲ್ಲಿ ನಡೆಯುತ್ತಿದ್ದರೆ ಜೇನು ನೊಣಗಳ ಝೇಂಕಾರ ಕಿವಿಗೆ ಇಂಪು ನೀಡುತ್ತಿತ್ತು. ಹೆಮ್ಮರಗಳಲ್ಲಿ ಹೆಜ್ಜೇನುಗಳು ಗೂಡು ಕಟ್ಟಿಕೊಂಡಿರುವ ದೃಶ್ಯಗಳು ಗೋಚರಿಸುತ್ತಿದ್ದವು. ಮನೆಗಳಲ್ಲಿದ್ದ ಜೇನುಪೆಟ್ಟಿಗೆಗಳಲ್ಲಿ ಲಗುಬಗೆಯಲ್ಲಿ ಮಕರಂದ ಸಂಗ್ರಹಿಸಿ ತರುವ ಜೇನುನೊಣಗಳು ಕಾಣಿಸುತ್ತಿದ್ದವು. ಸಂಜೆಯಾಗುತ್ತಿದ್ದಂತೆಯೇ ದೂರದ ಹೆಮ್ಮರಗಳಲ್ಲಿ ಬೀಡು ಬಿಟ್ಟಿದ್ದ ಹೆಜ್ಜೇನುಗಳು ಹೊರಹಾಕುತ್ತಿದ್ದ ಝೇಂಕಾರದ ಸದ್ದು ಕಿವಿಗೆ ನಾಟುತ್ತಿತ್ತು.

ಬೆಟ್ಟಗುಡ್ಡ, ಕಾಡು, ತೋಟಗಳಲ್ಲಿ ಎಲ್ಲೆಂದರಲ್ಲಿ ಹೂಗಳಲ್ಲಿ ಮಕರಂದ ಹೀರುವ ಜೇನು ನೊಣಗಳು ಕಾಣಿಸುತ್ತಿದ್ದವು. ಆದರೀಗ ಅಂತಹ ವಾತಾವರಣ ಕಾಣುವುದು ಅಪರೂಪವಾಗುತ್ತಿವೆ. ಮೊದಲಿನಂತೆ ಜೇನುನೊಣಗಳ ಝೇಂಕಾರ ಕ್ಷೀಣಿಸಿದೆ. ಹೆಮ್ಮರಗಳಲ್ಲಿ ಹೆಜ್ಜೇನುಗಳು ಕಾಣಿಸುತ್ತಿಲ್ಲ. ಹಿಂದಿನಿಂದಲೂ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಕೊಡಗಿನ ಮಳೆಗಾಳಿಯನ್ನು ಸಹಿಸದ ಜೇನುನೊಣಗಳು ಕುಟುಂಬ ಸಹಿತ ಹೊರಗಿನ ಪ್ರದೇಶಗಳಿಗೆ ಹಾರಿ ಹೋಗುತ್ತಿದ್ದವು. ಏಕೆಂದರೆ ಮಳೆ ಆರಂಭವಾದ ಬಳಿಕ ಇಲ್ಲಿ ಯಾವುದೇ ಹೂವುಗಳು ಸಿಗುತ್ತಿರಲಿಲ್ಲ. ಜತೆಗೆ ಮಳೆಗೆ ಹೊಂದಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಅವುಗಳೆಲ್ಲವೂ ದೂರದ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದವು. ಮತ್ತೆ ಮಳೆ ಕಡಿಮೆಯಾಗುತ್ತಿದ್ದಂತೆಯೇ ಬರುತ್ತಿದ್ದವು.

Take a Poll

ಹೂವಿನ ಪರಾಗಸ್ಪರ್ಶಕ್ಕೆ ಜೇನುನೊಣಗಳು ಬೇಕೇ ಬೇಕು

ಸಾಮಾನ್ಯವಾಗಿ ಡಿಸೆಂಬರ್, ಜನವರಿ ತಿಂಗಳಲ್ಲಿ ಕುಟುಂಬ ಸಹಿತ ಬಂದು ಸೂಕ್ತ ಸ್ಥಳಗಳಲ್ಲಿ ನೆಲೆಯೂರುತ್ತಿದ್ದವು. ಜನವರಿಯಿಂದ ಮಾರ್ಚ್, ಏಪ್ರಿಲ್ ತನಕ ವಿವಿಧ ಬಗೆಯ ಹೂಗಳು ಸಿಗುವುದರಿಂದ ಅದರಿಂದ ಮಕರಂದವನ್ನು ಹೀರಿ ತಂದು ಸಂಗ್ರಹಿಸಿಟ್ಟು ಮುಂಗಾರು ಆರಂಭವಾಗುತ್ತಿದ್ದಂತೆಯೇ ಜೇನನ್ನು ಉತ್ಪತ್ತಿ ಮಾಡುತ್ತಿದ್ದವು. ಆ ನಂತರ ಮಳೆ ಆರಂಭವಾಗುತ್ತಿದ್ದಂತೆಯೇ ತಾವು ಸಂಗ್ರಹಿಸಿಟ್ಟ ಜೇನನ್ನೆಲ್ಲ ಹೀರಿ ಪಲಾಯನ ಮಾಡುತ್ತಿದ್ದವು. ಇದು ಅವತ್ತಿನಿಂದ ಇವತ್ತಿನವರೆಗೆ ನಡೆಯುತ್ತಿರುವ ಪ್ರಕ್ರಿಯೆಯಾಗಿದೆ. ಆದರೆ ಎಲ್ಲೋ ಒಂದು ಕಡೆ ಜೇನುಹುಳುಗಳ ಸಂತತಿ ಕ್ಷೀಣಿಸುತ್ತಿದ್ದು ಪರಿಣಾಮ ಮೊದಲಿನಂತೆ ಜೇನು ನೊಣಗಳು ಕಾಣಲು ಸಿಗುತ್ತಿಲ್ಲ ಎಂಬುದು ಅಷ್ಟೇ ಸತ್ಯ.

ಇಷ್ಟರಲ್ಲಿಯೇ ಕಾಫಿತೋಟಗಳಲ್ಲಿ ಸ್ಪ್ರಿಂಕ್ಲರ್ ಮೂಲಕ ನೀರು ಹಾಯಿಸಿ ಕಾಫಿ ಹೂಅರಳುವಂತೆ ಮಾಡಿದರೆ, ಮತ್ತೆ ಕೆಲವು ಕಡೆಗಳಲ್ಲಿ ಮಳೆ ಸುರಿದ ಕಾರಣ ಹೂ ಅರಳುತ್ತಿದೆ. ಇನ್ನು ಕೆಲವು ಕಡೆ ಮಳೆ ಸುರಿಯದ ಕಾರಣ ನೀರು ಹಾಯಿಸಲು ಸಾಧ್ಯವಾಗದ ಕಾಫಿ ತೋಟಗಳಲ್ಲಿ ಮಳೆ ಬಂದ ಬಳಿಕ ಹೂ ಅರಳಲಿದೆ. ಕೆಲವೊಮ್ಮೆ ಒಮ್ಮೆಲೇ ಮಳೆ ಬರುವ ಕಾರಣ ಒಟ್ಟಿಗೆ ಕಾಫಿ ತೋಟಗಳಲ್ಲಿ ಹೂವು ಅರಳಿ ಬಿಡುತ್ತವೆ. ಈ ಸಂದರ್ಭ ಹೂಗಳಲ್ಲಿ ಪರಾಗಸ್ಪರ್ಶವಾಗಬೇಕಾದರೆ ಜೇನುನೊಣಗಳು ಹೂಗಳ ಮೇಲೆ ಹರಿದಾಡಿ ಮಕರಂದ ಸಂಗ್ರಹಿಸಲೇ ಬೇಕಾಗುತ್ತದೆ. ಒಂದು ದಿನದೊಳಗೆ ಅದು ನಡೆದಿಲ್ಲ ಎಂದರೆ ಮಿಡಿಗಚ್ಛಲು ಸಾಧ್ಯವಾಗುವುದಿಲ್ಲ. ಹೀಗಾಗಿಯೇ ಹೂ ಚೆನ್ನಾಗಿ ಅರಳಿದರೂ ಫಸಲು ಕೈಕೊಡುತ್ತಿದೆ ಎನ್ನುವುದು ಅನುಭವಿ ಬೆಳೆಗಾರರ ಮಾತಾಗಿದೆ.

ಜೇನುನೊಣಗಳ ಸಂತತಿ ಕ್ಷೀಣಿಸುತ್ತಿರುವುದು ಹೇಗೆ?

ಒಂದು ಕಾಲದಲ್ಲಿ ತಂಪಾಗಿದ್ದ ಕೊಡಗಿನಲ್ಲಿ ಈಗೀಗ ಉಷ್ಣತೆ ಹೆಚ್ಚುತ್ತಿದೆ. ಜತೆಗೆ ಕಾಡುಗಳು ನಾಶವಾಗಿವೆ. ಅದರಾಚೆಗೆ ಹೂ ಬಿಡುತ್ತಿದ್ದ ಕಾಡುಮರಗಳು ಕೂಡ ನಶಿಸಿವೆ. ಇದೆಲ್ಲದರ ನಡುವೆ ರಾಸಾಯನಿಕ ಬಳಕೆಯ ಕಾರಣದಿಂದ ಜೇನುನೊಣಗಳ ಸಂತತಿಯೂ ಕ್ಷೀಣಿಸುತ್ತಿದೆ. ಹೀಗಾಗಿ ಅವುಗಳ ರಕ್ಷಣೆ ಮತ್ತು ಜೇನು ಕೃಷಿಗೆ ಹೆಚ್ಚಿನ ಆದ್ಯತೆ ನೀಡುವ ಕೆಲಸವಾಗಬೇಕಾಗಿದೆ. ಜೇನುನೊಣಗಳ ಸಂತತಿ ಹೆಚ್ಚಾದಷ್ಟು ಅದರಿಂದ ಬೆಳೆಗಾರರಿಗೆ ಹೆಚ್ಚೆಚ್ಚು ಲಾಭವಾಗಲಿದೆ. ಈ ಸಂಬಂಧ ಸಂಬಂಧಿಸಿದವರು ಗಮನಹರಿಸಬೇಕಿದೆ. ಹಾಗೆಯೇ ಬೆಳೆಗಾರರು ಕೂಡ ಜೇನುನೊಣಗಳ ರಕ್ಷಣೆಗೆ ಮುಂದಾಗ ಬೇಕಾಗಿದೆ. ಇದೆಲ್ಲವೂ ಸಾಧ್ಯವಾದರೆ ಕಾಫಿ ಮಾತ್ರವಲ್ಲದೆ, ಇತರೆ ಫಸಲುಗಳಲ್ಲೂ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಾಗಬಹುದೇನೋ?

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+