ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿಸರ್ಗ ನಿರ್ಮಿತ ಹುಲಿತಾಳದ ಅಪೂರ್ವ ಶಿಲಾದೇಗುಲ

|
Google Oneindia Kannada News

ಮಡಿಕೇರಿ, ಡಿಸೆಂಬರ್ 15: ಕೊಡಗಿನ ನಿಸರ್ಗದೊಳಗೆ ಹಲವು ಐತಿಹ್ಯ, ವಿಸ್ಮಯಗಳು ಬೆರೆತಿವೆ. ಸಾಮಾನ್ಯವಾಗಿ ದೈವಿಕ ತಾಣಗಳೆಂದರೆ ಗುಡಿಗೋಪುರ, ದೇಗುಲಗಳು ನಮ್ಮ ಕಣ್ಣಮುಂದೆ ಬಂದು ನಿಲ್ಲುತ್ತವೆ. ಆದರೆ ಇಲ್ಲಿನ ಅರಣ್ಯಗಳ ಪ್ರಶಾಂತ ಸ್ಥಳಗಳಲ್ಲಿ ಗುಡಿಗೋಪುರಗಳಿಲ್ಲದೆ ನೈಸರ್ಗಿಕವಾಗಿಯೇ ನಿರ್ಮಾಣಗೊಂಡ ಹಲವು ದೇಗುಲಗಳಿದ್ದು, ಅವುಗಳಲ್ಲಿ ಹುಲಿತಾಳದ ಶಿಲಾದೇಗುಲವೂ ಒಂದಾಗಿದೆ.

ಮಡಿಕೇರಿಯಿಂದ ಸುಮಾರು ಹತ್ತು ಕಿ.ಮೀ. ದೂರಲ್ಲಿರುವ ಹುಲಿತಾಳವು ಬೆಟ್ಟಗಳ ನಡುವೆ ನಿರ್ಮಾಣಗೊಂಡ ತಾಣವಾಗಿದೆ. ಈ ಸ್ಥಳವು ಹಿಂದೆ ಬೆಟ್ಟಗುಡ್ಡ ಕಾಡುಗಳಿಂದ ಆವೃತವಾದ ತಾಣವಾಗಿತ್ತಾದರೂ, ಈಗ ಇಲ್ಲಿ ಜನವಸತಿಗಳು ಎದ್ದು ನಿಂತಿವೆ. ಇಲ್ಲಿನ ಬೆಟ್ಟಗಳ ಸಮತಟ್ಟು ಜಾಗದಲ್ಲಿ ಜನ ಮನೆಕಟ್ಟಿಕೊಂಡು, ಕಾಫಿ, ಏಲಕ್ಕಿ ತೋಟಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ ದೇವಾಲಯದ ಸುತ್ತಮುತ್ತ ಮಾತ್ರ ಕಾಡುಗಳು ಹಾಗೆಯೇ ಇವೆ.

ನಿಸರ್ಗದ ಸುಂದರ ಶಿಲಾದೇಗುಲ

ನಿಸರ್ಗದ ಸುಂದರ ಶಿಲಾದೇಗುಲ

ಇನ್ನು ಹೆಬ್ಬಂಡೆಗಳು ಒಂದಕ್ಕೊಂದು ಆಧಾರವಾಗಿ ನಿಂತು ಅದರ ನಡುವಿನ ಜಾಗದಲ್ಲಿ ದೇಗುಲ ನಿರ್ಮಾಣವಾಗಿದ್ದು, ಇದು ನಿಸರ್ಗ ನಿರ್ಮಿತ ದೇಗುಲವಾಗಿದೆ. ಈ ದೇಗುಲವನ್ನು ಸ್ಥಳೀಯರು ಬೊಟ್ಲಪ್ಪ ಎಂದು ಕರೆಯುತ್ತಾರೆ. ಈಶ್ವರ ಇಲ್ಲಿನ ಆರಾಧ್ಯ ದೈವನಾಗಿದ್ದು, ಸುತ್ತಮುತ್ತಲಿನವರ ಪಾಲಿಗೆ ಮಳೆ ದೇವರು ಕೂಡ ಹೌದು. ದೇಗುಲ ನೆಲೆ ನಿಂತ ಪರಿಸರವನ್ನು ನೋಡುವುದಾದರೆ ಮುಗಿಲೆತ್ತರಕ್ಕೆ ಬೆಳೆದು ನಿಂತ ಹೆಮ್ಮರಗಳನ್ನೊಳಗೊಂಡ ದಟ್ಟ ಕಾನನ. ಬೃಹದಾಗಿ ನಿಂತ ಹೆಬ್ಬಂಡೆಗಳು ಅವುಗಳ ನಡುವೆ ಜುಳು ಜುಳು ನಿನಾದಗೈಯ್ಯುತ್ತಾ ಹರಿಯುವ ನೀರ ಝರಿ, ಹಕ್ಕಿಗಳ ಚಿಲಿಪಿಲಿ ಇಷ್ಟನ್ನು ಹೊರತುಪಡಿಸಿದರೆ ಜನರ ಸದ್ದುಗದ್ದಲದಿಂದ ದೂರವಾಗಿ ಸದಾ ಪ್ರಶಾಂತವಾಗಿಯೇ ಈ ತಾಣ ಗಮನ ಸೆಳೆಯುತ್ತದೆ.

ಕೊಡಗಿನ ನಾಲ್ಕುನಾಡು ಅರಮನೆ ಕಾಮಗಾರಿಗೇಕೆ ಅಪಸ್ವರ?ಕೊಡಗಿನ ನಾಲ್ಕುನಾಡು ಅರಮನೆ ಕಾಮಗಾರಿಗೇಕೆ ಅಪಸ್ವರ?

ಹುಲಿತಾಳದತ್ತ ಹೋಗುವುದು ಹೇಗೆ?

ಹುಲಿತಾಳದತ್ತ ಹೋಗುವುದು ಹೇಗೆ?

ಒಂದು ವೇಳೆ ನೀವು ಸಾಹಸಿಗರಾಗಿ ಪ್ರಕೃತಿಯ ಚೆಲುವನ್ನು ಆಸ್ವಾದಿಸುವ ಹುಮ್ಮಸ್ಸುಳ್ಳವರಾಗಿದ್ದರೆ ಹುಲಿತಾಳದತ್ತ ಹೆಜ್ಜೆ ಹಾಕಬಹುದಾಗಿದೆ. ಇಲ್ಲಿಗೆ ತೆರಳಬೇಕೆಂದರೆ ಮಡಿಕೇರಿಯಿಂದ ಚೆಟ್ಟಳ್ಳಿ ಮಾರ್ಗವಾಗಿ ಹೊರಟರೆ ಸುಮಾರು ಎಂಟು ಕಿ.ಮೀ. ದೂರದಲ್ಲಿ ಕಡಗದಾಳು ಸಿಗುತ್ತದೆ. ಅಲ್ಲಿಂದ ಬಲಕ್ಕೆ ಕಗ್ಗೋಡ್ಲು ಕಡೆಗಿನ ರಸ್ತೆಯಲ್ಲಿ ಸ್ವಲ್ಪ ದೂರ ಸಾಗಿ ಮತ್ತೆ ಎಡಕ್ಕೆ ತಿರುಗಬೇಕು. ಹೀಗೆ ಸುಮಾರು ಎರಡು ಕಿ.ಮೀ.ನಷ್ಟು ಸಾಗಿದರೆ ಒಂದೆಡೆ ಕಾಫಿ ಏಲಕ್ಕಿ ತೋಟಗಳು, ಹಚ್ಚಹಸಿರಿನಿಂದ ಕಂಗೊಳಿಸುವ ನಿಸರ್ಗ ಒಂದಷ್ಟು ಪುಳಕಗೊಳಿಸುತ್ತದೆ. ಇದರ ನಡುವೆ ಸಾಗುತ್ತಾ ಹೋದರೆ ಹುಲಿತಾಳದ ಶಿಲಾದೇಗುಲವನ್ನು ತಲುಪಬಹುದಾಗಿದೆ.

ಮೂರು ಹೆಬ್ಬಂಡೆಗಳಿಂದ ಸೃಷ್ಠಿಯಾದ ದೇಗುಲ

ಮೂರು ಹೆಬ್ಬಂಡೆಗಳಿಂದ ಸೃಷ್ಠಿಯಾದ ದೇಗುಲ

ದೂರದಿಂದಲೇ ಕಾಣುವ ಹೆಬ್ಬಂಡೆಗಳ ಪ್ರವೇಶದ್ವಾರ ಸ್ವಾಗತಿಸಲೇನೋ ಎಂಬಂತೆ ಗೋಚರಿಸುತ್ತದೆ. ಅತ್ತ ನಡೆದರೆ ದೇವಾಲಯದಿಂದ ಹರಿದು ಬರುವ ಝರಿ ಅದರಾಚೆಯಿಂದ ಬೀಸಿ ಬರುವ ತಂಗಾಳಿ ಮೈಮನಕ್ಕೆ ಖುಷಿ ನೀಡುತ್ತದೆ. ಈ ದೇಗುಲವನ್ನು ನೋಡುವುದಾದರೆ ಇಲ್ಲಿ ವಿಶಾಲವಾದ ಮೂರು ಹೆಬ್ಬಂಡೆಗಳು ಸೇರಿ ಶೀಲಾದೇಗುಲ ಸೃಷ್ಟಿಯಾಗಿದ್ದು, ಇದೊಂದು ಪ್ರಕೃತಿಯ ವಿಸ್ಮಯ ಎಂದರೂ ತಪ್ಪಾಗಲಾರದು. ಗುಡ್ಡದ ಕಡೆಯಿಂದ ಹರಡಿ ಬಂದಿರುವ ವಿಶಾಲ ಹೆಬ್ಬಂಡೆ ಅದಕ್ಕೆ ಆಧಾರ ಎಂಬಂತೆ ಕೆಳಗೆ ಬದಿಯಿಂದ ತಾಕಿ ನಿಂತ ಎರಡು ಹೆಬ್ಬಂಡೆಗಳು. ಅವುಗಳ ನಡುವೆ ವಿಶಾಲ ಸ್ಥಳವಿದ್ದು ಅದು ದೇವಾಲಯದ ಪ್ರಾಂಗಣವೂ ಹೌದು. ದೇವಾಲಯದ ಪ್ರಾಂಗಣದ ಮುಂದೆ ವಿಶಾಲ ಬಂಡೆಯಿದೆ. ಅದರ ನಡುವೆ ಒಬ್ಬ ವ್ಯಕ್ತಿ ಮಾತ್ರ ತೂರಿಕೊಂಡು ಹೋಗುವಷ್ಟು ಸ್ಥಳವಿದ್ದು ಅದರೊಳಗೆ ನಡೆದರೆ ವಿಶಾಲ ಸ್ಥಳವಿದೆ. ಅದುವೇ ದೇಗುಲದ ಗರ್ಭಗುಡಿಯಾಗಿದೆ. ಇಲ್ಲಿ ಉದ್ಭವ ಲಿಂಗವಿದ್ದು, ಶಿವಪಾರ್ವತಿಯರ ಮೂರ್ತಿಯಿದ್ದು, ನಿತ್ಯಪೂಜೆ ನಡೆಯುತ್ತದೆ.

ಈ ದೇಗುಲದ ಹಿಂದೆ ರೋಚಕ ಕಥೆ

ಈ ದೇಗುಲದ ಹಿಂದೆ ರೋಚಕ ಕಥೆ

ಈ ಶಿಲಾ ದೇಗುಲ ಪತ್ತೆಯಾಗಿರುವ ಹಿಂದೆಯೂ ರೋಚಕತೆಯಿದೆ. ಹಿಂದೆ ಕೊಡಗನ್ನು ಆಳುತ್ತಿದ್ದ ರಾಜ ಬೇಟೆಯಾಡುವ ಸಲುವಾಗಿ ಈ ಸ್ಥಳಕ್ಕೆ ಬರುತ್ತಾನೆ. ದಟ್ಟ ಕಾಡುಗಳಿಂದ ಕೂಡಿದ ಸ್ಥಳದಲ್ಲಿ ಬೇಟೆಗಾಗಿ ಮುಂದೆ ಸಾಗುತ್ತಿರಬೇಕಾದರೆ ಅಚ್ಚರಿಯನ್ನು ಕಾಣುತ್ತಾನೆ. ಘರ್ಜಿಸುತ್ತಾ ಬಂದ ಹುಲಿಯೊಂದು ಈ ಶಿಲಾ ದೇಗುಲದ ಬಳಿ ಮಂಡಿಯೂರಿ ನಮಿಸಿ ಮುಂದೆ ಸಾಗುತ್ತದೆ. ಹುಲಿ ನಮಿಸಿದ ಸ್ಥಳದಲ್ಲಿ ಏನೋ ಮಹಿಮೆಯಿದೆ ಎಂಬುದು ರಾಜನಿಗೆ ಅರಿವಾಗುತ್ತದೆ. ಹುಲಿ ಹೊರಟು ಹೋದ ಬಳಿಕ ಬಂದು ನೋಡಿದ ರಾಜನಿಗೆ ಹೆಬ್ಬಂಡೆಗಳ ನಡುವೆ ಉದ್ಭವ ಲಿಂಗ ಕಾಣುತ್ತದೆ. ಕೂಡಲೇ ಇಲ್ಲಿನ ಮಹಿಮೆಯನ್ನು ಅರಿತು ಅರ್ಚಕರನ್ನು ನೇಮಿಸಿ ನಿತ್ಯವೂ ಪೂಜೆ ಮಾಡುವ ವ್ಯವಸ್ಥೆ ಮಾಡಿಸುತ್ತಾನೆ.

ಮಣ್ಣಿನ ಪ್ರಾಣಿಗಳ ಹರಕೆ ಅರ್ಪಣೆ

ಮಣ್ಣಿನ ಪ್ರಾಣಿಗಳ ಹರಕೆ ಅರ್ಪಣೆ

ಅಂದಿನಿಂದ ಇಂದಿನವರೆಗೂ ಇಲ್ಲಿಗೆ ಪೂಜಾ ಕೈಂಕರ್ಯಗಳು ನಡೆಯುತ್ತಲೇ ಬರುತ್ತದೆ. ಅಷ್ಟೇ ಅಲ್ಲ ಅವತ್ತು ನೇಮಕವಾದ ಅರ್ಚಕರ ತಲೆಮಾರು ಪೂಜಾ ಕೈಂಕರ್ಯಗಳನ್ನು ಮಾಡುತ್ತಾ ಬರುತ್ತಿದೆ. ಇಲ್ಲಿಗೆ ಸುತ್ತಮುತ್ತಲಿನ ಗ್ರಾಮಸ್ಥರು ತಮ್ಮ ಮನೆಗಳಲ್ಲಿ ಪ್ರಾಣಿಗಳ ಸಂತತಿ ವೃದ್ಧಿಯಾಗದಿದ್ದರೆ ಹರಕೆ ಮಾಡಿಕೊಂಡು ಮಣ್ಣಿನ ನಾಯಿ, ಹಸು ಮುಂತಾದವುಗಳನ್ನು ಅರ್ಪಿಸುತ್ತಾರೆ. ಇದಕ್ಕೆ ಸಾಕ್ಷಿಯಾಗಿ ಹಲವು ಮಣ್ಣಿನ ಪ್ರಾಣಿಗಳ ಮೂರ್ತಿಗಳನ್ನು ಕಾಣಬಹುದಾಗಿದೆ.

ಹುಲಿಯ ವಾಸ ಸ್ಥಾನವೇ ಹುಲಿತಾಳ

ಹುಲಿಯ ವಾಸ ಸ್ಥಾನವೇ ಹುಲಿತಾಳ

ಈ ತಾಣದಲ್ಲಿ ಹಿಂದೆ ಋಷಿ ಮುನಿಗಳು ತಪಸ್ಸು ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ದೇವಾಲಯದ ಎಡಬದಿಯ ಬಂಡೆಯ ತಳಭಾಗದಲ್ಲಿ ಗುಹೆಯೊಂದನ್ನು ಕಾಣಬಹುದಾಗಿದ್ದು, ಇದು ಹುಲಿಯ ವಾಸಸ್ಥಾನವೆಂಬ ನಂಬಿಕೆಯೂ ಇದೆ. ಬಹುಶಃ ಹಿಂದೆ ಹುಲಿಯ ವಾಸಸ್ಥಾನವಾಗಿದ್ದ ಹುಲಿತಾಣ ಕ್ರಮೇಣ ಹುಲಿತಾಳವಾಗಿರಬಹುದೇನೋ? ಇಲ್ಲಿನ ಈಶ್ವರನಿಗೆ ಪ್ರತಿನಿತ್ಯ ಪೂಜಾ ಕೈಂಕರ್ಯಗಳು ನಡೆಯುತ್ತವೆಯಾದರೂ ಶಿವರಾತ್ರಿ ಸಂದರ್ಭ ವಿಶೇಷ ಪೂಜೆಗಳು ನಡೆಯುತ್ತವೆ.

Recommended Video

ಹೀಗೆ ಮಾಡೋಕೆ ಕಾರಣ ಇದೆ! | BSF Soldiers Run 180 Kms | Oneindia Kannada
ಮೋಜು ಮಸ್ತಿಯ ಜಾಗ ಇದಲ್ಲ

ಮೋಜು ಮಸ್ತಿಯ ಜಾಗ ಇದಲ್ಲ

ಹಿಂದೆ ಮಳೆ ಬಾರದೆಯಿದ್ದಾಗ ಇಲ್ಲಿಗೆ ಗ್ರಾಮಸ್ಥರು ತೆರಳಿ ಪೂಜೆ ಸಲ್ಲಿಸಿದರೆ ಮಳೆ ಸುರಿಯುತ್ತಿತ್ತು ಎಂದು ಹಿರಿಯರು ಹೇಳುತ್ತಾರೆ. ಇವತ್ತಿಗೂ ಮುಂಗಾರು ಆರಂಭಕ್ಕೂ ಮುನ್ನ ಪೂಜೆ ಸಲ್ಲಿಸುವ ಪರಿಪಾಠವಿದೆ. ಕಳೆದ ಮಳೆಗಾಲದಲ್ಲಿ ಈ ವ್ಯಾಪ್ತಿಯಲ್ಲಿ ಭಾರಿ ಮಳೆಯಿಂದ ಗುಡ್ಡ ಕುಸಿತವಾಗಿ ಸ್ಥಳೀಯರು ಸಂಕಷ್ಟಕ್ಕೆ ಸಿಲುಕುವಂತಾಗಿರುವುದು ಬೇಸರದ ಸಂಗತಿಯಾಗಿದೆ. ಹುಲಿತಾಳ ಪ್ರಶಾಂತ ತಾಣವಾಗಿದ್ದು, ಇಲ್ಲಿಗೆ ತೆರಳುವವರು ಪ್ರಾಂಜಲ ಮನಸ್ಸಿನಿಂದ ತೆರಳಬೇಕು. ಮೋಜು ಮಸ್ತಿಯ ಜಾಗ ಇದಲ್ಲ ಎಂಬುದನ್ನು ಮರೆಯದಿರಿ. ಅಷ್ಟೇ ಅಲ್ಲದೆ ಇಲ್ಲಿಗೆ ಪ್ಲಾಸ್ಟಿಕ್, ಬಾಟಲಿ ಇನ್ನಿತರ ವಸ್ತುಗಳನ್ನು ತಂದು ಪರಿಸರವನ್ನು ಹಾಳು ಮಾಡದಿರಿ ಎಂಬುದು ಸ್ಥಳೀಯ ನಿವಾಸಿಗಳ ಮನವಿಯಾಗಿದೆ.

English summary
There are many naturally built temples, including Hulitaala rock temple in Kodagu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X